Site icon Vistara News

HD Kumaraswamy : ರಾಮ ಮಂದಿರ ರಾಜಕೀಯವಾದರೆ ಉಚಿತ ಗ್ಯಾರಂಟಿ ರಾಜಕೀಯ ಅಲ್ವಾ? ; HDK ಪ್ರಶ್ನೆ

HD Kumaraswamy Rama Mandir

ಬೆಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದಲ್ಲಿ ರಾಮ ಮಂದಿರ (Rama Mandir) ಕಟ್ಟಿದ್ದು ಜನರ ದೇಣಿಗೆಯ ಹಣದಿಂದ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಐದು ಗ್ಯಾರಂಟಿಗಳನ್ನು (Congress Guarantee) ಅನುಷ್ಠಾನಕ್ಕೆ ತಂದಿದ್ದು ಜನರ ತೆರಿಗೆ ಹಣದಿಂದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಅಯೋಧ್ಯೆ ವಿಚಾರದಲ್ಲಿ ಮೋದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ಇವರು ಗ್ಯಾರಂಟಿಗಳ ವಿಷಯದಲ್ಲಿ ಮಾಡಿದ್ದೇನು? ರಾಜಕೀಯವನ್ನೇ ಮಾಡಿದರು, ಅಲ್ಲವೇ? ಎಂದರು.

ʻʻನಾನು ಕೂಡ ಹಿಂದೆ ಮಂದಿರಕ್ಕೆ ಹಣ ಸಂಗ್ರಹ ಮಾಡಿರುವ ಬಗ್ಗೆ ಲೆಕ್ಕ ಕೇಳಿದ್ದೇನೆ. ರಾಮನ ಬಗ್ಗೆ ನಂಬಿಕೆ ಇರಿಸಿಕೊಂಡಿರುವ ಕುಟುಂಬಗಳು ದೇಣಿಗೆ ಕೊಟ್ಟಿದ್ದಾರೆ. ಇವರು ರಾಜ್ಯದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಬೇಕಾದರೆ, ಅವುಗಳನ್ನು ಜಾರಿ ಮಾಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಕರೆಸಿ ಕಾರ್ಯಕ್ರಮ ಮಾಡಬಹುದಾ? ಅವರಿಗೂ ರಾಜ್ಯಕ್ಕೂ ಏನು ಸಂಬಂಧ? ಗ್ಯಾರಂಟಿಗಳ ಹಣ ಕಾಂಗ್ರೆಸ್ ಪಕ್ಷದ ಖಜಾನೆಯದ್ದಾ? ಅದು ಜನರ ತೆರಿಗೆ ಹಣ. ಜನರ ದುಡ್ಡಿನಲ್ಲಿ ಇವರು ರಾಜಕೀಯ ಮಾಡಬಹುದಾದರೆ, ಮೋದಿ ಅವರು ಮಾಡಬಾರದಾʼʼ ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.

ಮೋದಿ ಮತ್ತೆ ಪ್ರಧಾನಿ ಆದರೆ ಸರ್ವಾಧಿಕಾರಿ ಆಡಳಿತ ಬರುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಅವರ ಹತಾಶೆಯನ್ನು ಸೂಚಿಸುತ್ತದೆ. ಬಹುಶಃ ಖರ್ಗೆ ಅವರಿಗೆ ಕನಸಿನಲ್ಲಿ ಅಂಬೇಡ್ಕರ್ ಅವರು ಬಂದು ಹೇಳಿರಬೇಕು ಎಂದ ಕುಮಾರಸ್ವಾಮಿ ಅವರು ಟಾಂಗ್ ನೀಡಿದರು.

ಇದನ್ನೂ ಓದಿ : Hanuman Flag : ನೀನೇ ಗಾಂಡು, ನೀನು Seedless: ಸಿ.ಟಿ ರವಿ, ಶಾಸಕ ನರೇಂದ್ರ ಸ್ವಾಮಿ ಮಧ್ಯೆ ಅವಾಚ್ಯ ವಾರ್‌

ತಾಕತ್ ಇದ್ದರೆ ಕಾಂತರಾಜು ವರದಿ ಸ್ವೀಕರಿಸಿ: ಸಿಎಂಗೆ ಸವಾಲ್‌

ಬೆಂಗಳೂರು: ಶೋಷಿತರ ಜಾಗೃತಿ ಸಮಾವೇಶ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈವರೆಗೆ ಮೀಸಲು ಸೌಲಭ್ಯವನ್ನು ಯಾರೆಲ್ಲಾ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು.

2ಎ ಮೀಸಲು ವ್ಯಾಪ್ತಿಯಲ್ಲಿ ಸುಮಾರು 108 ಉಪ ಜಾತಿಗಳು ಇವೆ. ಆದರೆ, ಮೀಸಲಾತಿ ಸೌಲಭ್ಯದ ಸಿಂಹಪಾಲು ಯಾರ ಪಾಲಾಗಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ಆಮೇಲೆ ಕಾಂತರಾಜು ವರದಿ, ಇನ್ನೊಂದು ವರದಿಯ ಬಗ್ಗೆ ಮಾತನಾಡಿ ಎಂದು ಸಿದ್ದರಾಮಯ್ಯ ಅವರಿಗೆ ಪಂಥಾಹ್ವಾನ ನೀಡಿದರು.

ಕಾಂತರಾಜು ವರದಿ ಹಿಡಿದುಕೊಂಡು ಪ್ರತಿದಿನ ಭಾಷಣ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಬೊಮ್ಮಾಯಿ, ಯಡಿಯೂರಪ್ಪ ಈ ವರದಿಯನ್ನು ಸ್ವೀಕಾರ ಮಾಡಲಿಲ್ಲ ಎಂದುಹೇಳಿಕೊಂಡು ತಿರುಗುತ್ತಿದ್ದಾರೆ. ಈಗ ನೀವು ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು. ಯಾಕೆ ಆ ವರದಿಯನ್ನು ಸ್ವೀಕಾರ ಮಾಡಿ ಜಾರಿ ಮಾಡಲಿಲ್ಲ. ಯಾರು ಅಡ್ಡ ಇದಾರೆ ನಿಮಗೆ. ತಾಕತ್ತು ಇದ್ದರೆ ಆ ಕಾಂತರಾಜು ವರದಿ ಸ್ವೀಕರಿಸಿ ಜಾರಿ ಮಾಡಿ ಎಂದು ಕುಮಾರಸ್ವಾಮಿ ಅವರು ಸಿಎಂಗೆ ನೇರ ಸವಾಲು ಹಾಕಿದರು.

Exit mobile version