Site icon Vistara News

Ram Mandir: ಅಯೋಧ್ಯೆ ರಾಮ ಮಂದಿರದೊಳಗೆ ಎರಡನೇ ದಿನವೇ ಹನುಮಾನ್‌ ಪ್ರವೇಶ!

hanuma

hanuma

ಅಯೋಧ್ಯೆ: ಹನುಮಂತ ಭಗವಾನ್‌ ಶ್ರೀರಾಮನ ನಿಷ್ಠಾವಂತ ಭಕ್ತ. ರಾಮ ಇರುವಲ್ಲಿ ಹನುಮಂತ ಇದ್ದೇ ಇರುತ್ತಾನೆ ಎನ್ನುವುದು ನಂಬಿಕೆ. ಈ ನಂಬಿಕೆ ನಿಜವಾಗಿಸುವಂತೆ ಅಯೋಧ್ಯೆ ರಾಮ ಮಂದಿರದೊಳಗೆ (Ram Mandir) ಕೋತಿಯೊಂದು ಪ್ರವೇಶಿಸಿ, ರಾಮನನ್ನು ಕಣ್ತುಂಬಿಕೊಂಡು ಮರಳಿದೆ. ಸದ್ಯ ಈ ವಿಚಾರ ರಾಮ ಭಕ್ತರನ್ನು ಪುಳಕಿತಗೊಳಿಸಿದೆ. ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ (Viral News).

ಪೋಸ್ಟ್‌ನಲ್ಲಿ ಏನಿದೆ?

ಮಂಗಳವಾರ (ಜನವರಿ 23) ಸಂಜೆ ಗರ್ಭಗುಡಿಗೆ ಪ್ರವೇಶಿಸಿದ ಕೋತಿ ಭಗವಾನ್ ರಾಮನ ಉತ್ಸವ ವಿಗ್ರಹದ ಬಳಿ ತೆರಳಿತ್ತು ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ತಿಳಿಸಿದೆ. ದಕ್ಷಿಣ ದ್ವಾರದ ಮೂಲಕ ಈ ಕೋತಿ ಗರ್ಭಗುಡಿಯನ್ನು ಪ್ರವೇಶಿಸಿ ರಾಮ ಲಲ್ಲಾ ವಿಗ್ರಹದ ಬಳಿ ಹೋಗಿದೆ ಎಂದು ಹೇಳಿದೆ. ಇದನ್ನು ನೋಡಿದ ಭದ್ರತಾ ಸಿಬ್ಬಂದಿ, ಕೋತಿ ವಿಗ್ರಹವನ್ನು ನೆಲದ ಮೇಲೆ ಬೀಳಿಸಬಹುದು ಎಂಬ ಆತಂಕದಿಂದ ಅದರ ಕಡೆಗೆ ಧಾವಿಸಿದ್ದರು. ಆದರೆ ಹಾಗೇನು ನಡೆಯಲಿಲ್ಲ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ʼʼಪೊಲೀಸರು ಕೋತಿಯ ಕಡೆಗೆ ಓಡುತ್ತಿದ್ದಂತೆ ಅದು ಶಾಂತವಾಗಿ ಉತ್ತರ ದ್ವಾರದ ಕಡೆಗೆ ತೆರಳಿತು. ಆ ಗೇಟ್ ಮುಚ್ಚಿದ್ದರಿಂದ ಪೂರ್ವದ ಕಡೆಗೆ ಚಲಿಸಿತು ಮತ್ತು ಜನಸಮೂಹದ ನಡುವೆ ಹಾದುಹೋಯಿತು. ಯಾರಿಗೂ ಯಾವುದೇ ತೊಂದರೆ ನೀಡಲಿಲ್ಲʼʼ ಎಂದು ಟ್ರಸ್ಟ್‌ ಬರೆದುಕೊಂಡಿದೆ. ರಾಮನನ್ನು ನೋಡಲು ಸ್ವತಃ ಹನುಮಾನ್ ಬಂದಂತೆ ಎನಿಸಿತು ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಈ ವಿಚಾರ ಭಕ್ತರಲ್ಲಿ ಸಂಚಲನ ಮೂಡಿಸಿದೆ. ಹನುಮಂತನ ಸಂಕೇತವಾದ ಕೋತಿಗಳು ಅಯೋಧ್ಯೆಯಲ್ಲಿ ಎಲ್ಲೆಂದರಲ್ಲಿ ನೆಲೆಸಿವೆ.

ಲಕ್ಷಾಂತರ ಮಂದಿ ಭೇಟಿ

ಸಾರ್ವಜನಿಕರ ಭೇಟಿಗೆ ಮುಕ್ತವಾದ ಬಳಿಕ ಅಯೋಧ್ಯೆ ರಾಮ ಮಂದಿರಕ್ಕೆ ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ. ಜನಸಂದಣಿಯನ್ನು ನಿರ್ವಹಿಸಲು ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಸ್ವತಃ ಯೋಗಿ ಆದಿತ್ಯನಾಥ್‌ ಅಯೋಧ್ಯೆ ರಾಮ ಮಂದಿರಕ್ಕೆ ಆಗಮಿಸಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದರು. ಅವರು ವೈಮಾನಿಕ ಸಮೀಕ್ಷೆಯನ್ನು ಸಹ ಮಾಡಿದ್ದರು. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, “ಇಂದು ಶ್ರೀ ಅಯೋಧ್ಯೆ ಧಾಮ್‌ನಲ್ಲಿರುವ ಶ್ರೀ ರಾಮ್ ಜನ್ಮಭೂಮಿ ದೇವಾಲಯ ಸಂಕೀರ್ಣದ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಈ ಸಂದರ್ಭದಲ್ಲಿ ಭಗವಾನ್ ಶ್ರೀ ರಾಮ್‌ಲಲ್ಲಾ ದೇವರ ಸುಲಭ ಮತ್ತು ಅನುಕೂಲಕರ ದರ್ಶನವನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಅಲ್ಲದೆ ಎಲ್ಲ ವ್ಯವಸ್ಥೆಗಳನ್ನು ಸುಗಮವಾಗಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: ರಾಜಸ್ಥಾನ ಶಿಲ್ಪಿಯ ವಿಗ್ರಹ ಆಯ್ಕೆಯಾಗಿದ್ದರೆ ಬಾಲಕ ರಾಮ ಹೀಗಿರುತ್ತಿದ್ದ ನೋಡಿ…

ಮಂಗಳವಾರ ಭಕ್ತರ ನೂಕು ನುಗ್ಗಲು ಸಂಭವಿಸಿ ಗೊಂದಲ ಏರ್ಪಟ್ಟಿತ್ತು. ಮಧ್ಯಾಹ್ನ ಎರಡನೇ ಅವಧಿಯ ದರ್ಶನದ ವೇಳೆ ನೂಕುನುಗ್ಗಲು, ತಳ್ಳಾಟ ಹಾಗೂ ಕಾಲ್ತುಳಿತ ಉಂಟಾಗಿದ್ದು, ಇದರಿಂದ ಕೆಲ ಭಕ್ತರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಮರ್ಪಕ ವ್ಯವಸ್ಥೆ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version