Site icon Vistara News

BBK Season 10 : ವರ್ತೂರು ಸಂತೋಷ್‌ ಅರೆಸ್ಟ್‌ ಉಳಿದ ಸ್ಪರ್ಧಿಗಳಿಗೆ ಇನ್ನೂ ಗೊತ್ತೇ ಇಲ್ಲ!

Big Boss Varthur santhosh arrest

ಬೆಂಗಳೂರು: ವರ್ತೂರು ಸಂತೋಷ್‌ ಅರೆಸ್ಟ್‌ (Varthuru Santhosh Arrest) ಆಗಿದ್ದು ಇನ್ನೂ ಬಿಗ್‌ ಬಾಸ್‌ (Big boss season 10) ಮನೆಯ ಉಳಿದ ಸ್ಪರ್ಧಿಗಳಿಗೆ ಇನ್ನೂ ಗೊತ್ತಾಗಿಲ್ವಾ? ಒಂದು ಮೂಲದ ಪ್ರಕಾರ ಇನ್ನೂ ಗೊತ್ತಾಗಿಲ್ಲ!

ಹುಲಿ ಉಗುರಿನ (Tiger Pawl) ಲಾಕೆಟ್‌ ಧರಿಸಿದ್ದನ್ನು ಟಿವಿ ಶೋ ಮೂಲಕವೇ ಗಮನಿಸಿದ ಅರಣ್ಯಾಧಿಕಾರಿಗಳು ಭಾನುವಾರ ರಾತ್ರಿ ಬಿಗ್‌ ಬಾಸ್‌ ಮನೆಯಿಂದಲೇ ಸಂತೋಷ್‌ನನ್ನು ಅರೆಸ್ಟ್‌ ಮಾಡಿದ್ದಾರೆ. ಬಿಗ್‌ ಬಾಸ್‌ನ ಇತರ ಸ್ಪರ್ಧಿಗಳಿಗೆ ಯಾವುದೇ ಸಂಶಯ ಬಾರದಂತೆ ಸಂತೋಷ್‌ ಅವರನ್ನು ಹೊರಗೆ ಕರೆಸಿಕೊಂಡು ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.

ನಿಜವೆಂದರೆ, ಅರಣ್ಯಾಧಿಕಾರಿಗಳು ಕಳೆದ ನಾಲ್ಕು ದಿನಗಳ ಹಿಂದೆಯೇ ಬಿಗ್‌ ಬಾಸ್‌ ಟೀಮ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಟೀಮ್‌ ಇದನ್ನು ನಿರ್ಲಕ್ಷ್ಯ ಮಾಡಿತ್ತು. ಇದರಿಂದ ಭಾನುವಾರ ಸಂಜೆ 5.30ರ ಹೊತ್ತಿಗೆ ಬಿಗ್‌ ಬಾಸ್‌ ಮನೆಯ ಬಳಿ ತಂಡ ತೆರಳಿದೆ. ಆಗಲೂ ಅವರು ಸಂತೋಷ್‌ ವಿಚಾರಣೆಗೆ ಅವಕಾಶ ಕೊಟ್ಟಿಲ್ಲ. ರಾತ್ರಿ 9.30ರವರೆಗೆ ಕಾಯಿಸಿ ಬಳಿಕ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ ಸಂತೋಷ್‌ ಅವರನ್ನು ಹೊರಗೆ ಕರೆತಂದು ಬಿಡಲಾಗಿದೆ.

ಇದೊಂದು ಕ್ರಿಮಿನಲ್ ಪ್ರಕರಣ. ನೀವು ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಹಾಗಿಲ್ಲ ಎಂದ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ ಸಂತೋಷ್‌ ಅವರನ್ನು ಹೊರಗೆ ಕರೆತರಲಾಗಿತ್ತು. ಪ್ರಾಥಮಿಕ ವಿಚಾರಣೆಯ ಬಳಿಕ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದರು.

ಭಾನುವಾರ ಸಂಜೆ ಇತರ ಸ್ಪರ್ಧಿಗಳೊಂದಿಗೆ ಇದ್ದ ವರ್ತೂರು ಸಂತೋಷ್‌

ಮನೆಯ ಸದಸ್ಯರಿಗೆ ಇನ್ನೂ ವಿಷಯ ಗೊತ್ತಿಲ್ಲ!

ಹಾಗಂತ ಸಂತೋಷ್‌ ಅವರನ್ನು ಯಾಕೆ ಮನೆಯಿಂದ ಹೊರಗೆ ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿಯನ್ನು ಇನ್ನೂ ಮನೆಯ ಒಳಗಿರುವ ಸ್ಪರ್ಧಿಗಳಿಗೆ ನೀಡಲಾಗಿಲ್ಲ. ಬಿಗ್‌ ಬಾಸ್‌ ಆಟದಲ್ಲಿ ಕೆಲವೊಮ್ಮೆ ಸದಸ್ಯರನ್ನು ಈ ರೀತಿಯಾಗಿ ಕಳೆದುಕೊಳ್ಳುವುದು ಇದೆ. ಅದೂ ಒಂದು ಟಾಸ್ಕ್‌ ಎಂಬಂತೆ ನಡೆದುಹೋಗುತ್ತದೆ. ಈ ಹಿಂದಿನ ಸೀಸನ್‌ಗಳಲ್ಲಿ ಸ್ಪರ್ಧಿಗಳನ್ನು ಹೊರತಂದು ಸೀಕ್ರೆಟ್‌ ರೂಮ್‌ಗಳಲ್ಲಿ ಇಟ್ಟು ಮತ್ತೆ ಒಳಗೆ ಕಳುಹಿಸಿದ್ದು ಇದೆ. ಇಲ್ಲಿ ಕೂಡಾ ಸಂತೋಷ್‌ ಅವರನ್ನು ಕರೆಸಿಕೊಂಡಾಗ ಇಂಥಹುದೇ ಒಂದು ಟಾಸ್ಕ್‌ ಇರಬಹುದು ಎಂದು ಒಳಗಿನವರು ಭಾವಿಸಿರುವ ಸಾಧ್ಯತೆಗಳು ಇವೆ.

ಈ ಹಿಂದೆ ಕೊರೊನಾ, ಅಂಬರೀಷ್‌ ನಿಧನದ ಸುದ್ದಿ ಹೇಳಿರಲೇ ಇಲ್ಲ!

ಈ ಹಿಂದೆ 2020ರಲ್ಲಿ ಬಿಗ್‌ ಬಾಸ್‌ ನಡೆಯುತ್ತಿದ್ದಾಗ ಒಮ್ಮಿಂದೊಮ್ಮೆಗೇ ಕೊರೊನಾ ಅಪ್ಪಳಿಸಿತ್ತು. ಆದರೆ ಈ ಯಾವ ಸಂಗತಿಗಳೂ ಒಳಗಿದ್ದವರಿಗೆ ಗೊತ್ತಿರಲಿಲ್ಲ. ಕೊನೆಗೆ ಸರ್ಕಾರ ಲಾಕ್‌ಡೌನ್‌ ಘೋಷಿಸಿದಾಗ ಅವರಿಗೆ ಮಾಹಿತಿ ನೀಡಲಾಯಿತು, ಮನೆಗೆ ಕಳುಹಿಸಲಾಯಿತು. ಅದಕ್ಕಿಂತ ಮೊದಲು ಅಂಬರೀಷ್‌ ನಿಧನದ ಸುದ್ದಿ ಕೂಡಾ ತುಂಬ ತಡವಾಗಿ ಅವರಿಗೆ ತಲುಪಿತ್ತು.

ಈ ಬಾರಿಯೂ ಸಂತೋಷ್‌ ಅರೆಸ್ಟ್‌ ಸುದ್ದಿಯನ್ನು ಹೇಳದೆ ಇರುವ ಸಾಧ್ಯತೆಯೂ ಇದೆ. ಸಂತೋಷ್‌ ಅವರು ಬಂಧನಕ್ಕೆ ಒಳಗಾಗಿದ್ದರೂ ಅವರ ಜಾಮೀನು ಅರ್ಜಿಯ ವಿಚಾರಣೆ ಬುಧವಾರ (ಅಕ್ಟೋಬರ್ 25)‌ ನಡೆಯಲಿದೆ. ಒಂದೊಮ್ಮೆ ಆಗ ಜಾಮೀನು ಸಿಕ್ಕಿದರೆ ಅವರು ಮರಳಿ ಬಿಗ್‌ ಬಾಸ್‌ ಮನೆ ಸೇರುವ ಸಾಧ್ಯತೆಗಳಿವೆ. ಆಗ ಹೊರಗೆ ನಡೆದ ಘಟನೆಯನ್ನು ರಿವೀಲ್‌ ಮಾಡುವ ಸಾಧ್ಯತೆಗಳಿವೆ.

Exit mobile version