Site icon Vistara News

BBK Season 10 : ಬಿಗ್‌ ಬಾಸ್‌ ಸೆಟ್‌ಗೆ ಪೊಲೀಸರ ಎಂಟ್ರಿ; ತನಿಷಾ, ಡ್ರೋನ್‌ ಪ್ರತಾಪ್‌ ವಿಚಾರಣೆ

Tanisha Kuppanda Drone pratap SC ST Case

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK Season 10) ಸೆಟ್‌ಗೆ ಎರಡನೇ ಬಾರಿ ಪೊಲೀಸರು ಎಂಟ್ರಿ (Police Entry) ಕೊಟ್ಟಿದ್ದಾರೆ. ವರ್ತೂರು ಸಂತೋಷ್‌ ಅವರ ಹುಲಿಯುಗುರು ಪ್ರಕರಣಕ್ಕೆ ಸಂಬಂಧಿಸಿ ಮೊದಲ ಬಾರಿ ಅರಣ್ಯಾಧಿಕಾರಿಗಳು ಸೆಟ್‌ಗೆ ಭೇಟಿ ನೀಡಿದರೆ ಈ ಬಾರಿ ಸ್ಪರ್ಧಿ ತನಿಷಾ ಕುಪ್ಪಂಡ (Tanisha Kuppanda) ಅವರು ಅವಹೇಳನಕಾರಿ ಪದ ಆಡಿದ್ದಾರೆ ಎಂಬ ಆಪಾದನೆಗೆ ಸಂಬಂಧಿಸಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಅವರ ಜತೆಗೆ ಮತ್ತೊಬ್ಬ ಸ್ಪರ್ಧಿ ಡ್ರೋನ್‌ ಪ್ರತಾಪ್‌ (Drone Pratap) ಅವರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ತನಿಷಾ ಕುಪ್ಪಂದ ಅವರು ಬಿಗ್‌ ಬಾಸ್‌ ಮನೆಯಲ್ಲಿ ವಡ್ಡನ ತರ ಆಡಬೇಡ ಎಂದು ಹೇಳಿದ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಕೆಲವೊಂದು ಜಾತಿವಾಚಕ ಶಬ್ದಗಳನ್ನು ನಿಷೇಧಾತ್ಮಕವಾಗಿ ಬಳಸದಂತೆ ಸೂಚಿಸಲಾಗಿದೆ. ಅವುಗಳನ್ನು ವಡ್ಡ ಎನ್ನುವ ಪದವೂ ಸೇರಿದೆ. ಈ ಶಬ್ದದ ನಿಷೇಧಾತ್ಮಕ ಬಳಕೆ ಮೂಲಕ ಬೋವಿ ಜನಾಂಗವನ್ನು ಅಪಮಾನಿಸಲಾಗಿದೆ ಎಂದು ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಎಂಬುವವರು ದೂರು ನೀಡಿದ್ದಾರೆ.

ವಿವಾದಿತ ಪದ ಇರುವ ಪ್ರೋಮೋ ಇದು

ಬೆಂಗಳೂರಿನ ಕುಂಬಳಗೋಡು ಪೊಲೀಸ್‌ ಠಾಣೆಯಲ್ಲಿ ಪಿ. ಪದ್ಮಾ ಅವರು ದಾಖಲಿಸಿರುವ ದೂರಿನಲ್ಲಿ “ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ತನಿಷಾ ಕುಪ್ಪಂಡ ಅವರು ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ. ಈ ಮೂಲಕ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ಅವರನ್ನು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು, ಅವರು ಮತ್ತು ಬಿಗ್‌ ಬಾಸ್‌ ಮುಖ್ಯಸ್ಥರು ಕ್ಷಮೆ ಯಾಚಿಸಬೇಕುʼʼ ಎಂದು ಆಗ್ರಹಿಸಲಾಗಿದೆ.

ಈ ದೂರನ್ನು ಆಧರಿಸಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಮಾಗಡಿ ಡಿವೈಎಸ್ಪಿ ಪ್ರವೀಣ್, ಕುಂಬಳಗೋಡು ಇನ್ಸ್ ಪೆಕ್ಟರ್ ಶಿವಾರೆಡ್ಡಿ ನೇತೃತ್ವದ ತಂಡ ರಾಜರಾಜೇಶ್ವರಿ ನಗರದ ಹೊರವಲಯದಲ್ಲಿರುವ ಬಿಗ್‌ ಬಾಸ್‌ ಸೆಟ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ತನಿಷಾ ಕುಪ್ಪಂಡ ಮತ್ತು ಡ್ರೋನ್‌ ಪ್ರತಾಪ್‌ ಅವರಿಬ್ಬರನ್ನೂ ವಿಚಾರಣೆ ನಡೆಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ತನಿಷಾ ಅವರ ಧ್ವನಿಯ ಸ್ಯಾಂಪಲ್ ಸಂಗ್ರಹ ಮಾಡಿದ್ದಾರೆ. ಪ್ರೋಮೋದಲ್ಲಿರುವ ಧ್ವನಿಗೂ ದೂರುದಾರರು ನೀಡಿರುವ ಧ್ವನಿ‌ಗೂ ಸಂಬಂಧವಿದೆಯಾ ಎಂದು ಪರಿಶೀಲನೆ ನಡೆಸಿದ್ದಾರೆ. ಸಂಭಾಷಣೆ ಕುರಿತಂತೆ ಪ್ರತಾಪ್ ಅವರನ್ನೂ ವಿಚಾರಣೆ ನಡೆಸಿದ್ದಾರೆ.

ಪದ ಬಳಕೆ ಆಗಿದ್ದೆಲ್ಲಿ?

‘ಇದು ಗೊಂಬೆ ಆಟವಯ್ಯ’ ಎಂಬ ಟಾಸ್ಕ್‌ನ ಬಳಿಕ ಗಂಧದ ಗುಡಿ ಟೀಮ್‌ನಲ್ಲಿ ನಡೆದ ವಾಗ್ಯುದ್ಧದ ವೇಳೆ ಈ ಪದ ಬಳಕೆಯಾಗಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಸ್ಪರ್ಧಿಗಳು ತಮ್ಮ ಎದುರಾಳಿ ಸ್ಪರ್ಧಿಗಳು ಭಾವನೆ ವ್ಯಕ್ತಪಡಿಸುವ ಹಾಗೆ ಮಾಡಬೇಕಿತ್ತು. ಈ ಟಾಸ್ಕ್‌ನ ಉಸ್ತುವಾರಿಯನ್ನು ಡ್ರೋನ್‌ ಪ್ರತಾಪ್ ವಹಿಸಿದ್ದರು. ಪ್ರತಾಪ್ ಅವರು ಎದುರಾಳಿ ತಂಡದ ತಪ್ಪುಗಳನ್ನು ಸರಿಯಾಗಿ ಟಿಪ್ಪಣಿ ಮಾಡಿಕೊಂಡಿಲ್ಲ ಎಂಬ ಬಗ್ಗೆ ತಂಡದಲ್ಲಿ ಜಗಳವಾಗಿತ್ತು. ವರ್ತೂರು ಸಂತೋಷ್, ಸಂಗೀತಾ, ತನಿಷಾ, ಮೈಕಲ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಜಗಳ ನಡೆದಿದ್ದು ಅದರ ನಡುವೆ ವಡ್ಡ ಎಂಬ ಪದ ಬಳಕೆಯಾಗಿದೆ. ತನಿಷಾ ಅವರು ಪ್ರತಾಪ್‌ಗೆ ವಡ್ಡನ ತರ ಆಡಬೇಡ ಎಂದು ಹೇಳಿದ್ದಾರೆ. ಹೀಗೆ ಜಾತಿವಾಚಕ ಪದವನ್ನು ನಿಷೇಧಾತ್ಮಕವಾಗಿ ಬಳಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: BBK Season 10: ಬಿಗ್‌ ಬಾಸ್‌ನ ಮತ್ತೊಬ್ಬ ಸ್ಪರ್ಧಿ ಮೇಲೆ ಎಫ್‌ಐಆರ್! ಅರೆಸ್ಟ್‌ ಆಗ್ತಾರಾ ತನಿಷಾ ಕುಪ್ಪಂಡ?

ಬೋವಿ ಸಮಾಜದ ಅಧ್ಯಕ್ಷೆ ಪದ್ಮಾ ಅವರು ಹೇಳುವುದೇನು?

ʻʻಅನೇಕ ಸೆಲೆಬ್ರಿಟಿಗಳು ಈ ರೀತಿ ಶಬ್ದ ಬಳಕೆ ಮಾಡಿದ್ದಾರೆ. ಕಳೆದ ಬಾರಿ ಸಿಹಿಕಹಿ ಚಂದ್ರು ಅವರೂ ಕೂಡ ಬಳಸಿದ್ದರು. ನಂತರ ಅವರು ಕ್ಷಮೆ ಕೇಳಿದರು. ನಮ್ಮ ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ ತನಿಷಾ ಅವರು ಕ್ಷಮೆ ಕೇಳಬೇಕು ಹಾಗು ಅವರಾಗಿಯೇ ಬಿಗ್‌ ಬಾಸ್‌ನಿಂದ ಹೊರ ಬರಬೇಕು. ಖಾಸಗಿ ಚಾನಲ್ ನ ಮ್ಯಾನೇಜ್ಮೆಂಟ್ ಕೂಡ ಕ್ಷಮೆ ಹೇಳಬೇಕು. ಇಂಥ ಅವಹೇಳನ ಮಾಡುವ ಶಬ್ದ ಬಳಕೆ ಮಾಡಬೇಡಿ ಅಂತ ಹೇಳಬೇಕುʼʼ ಎಂದಿರುವ ಪದ್ಮಾ ಅವರು, ಪೊಲೀಸರು ಸರಿಯಾಗಿ ತನಿಖೆ ಮಾಡದೆ ಇದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ತನಿಷಾ ಕುಪ್ಪಂಡ ಮೇಲೆ ಇನ್ನೊಂದು ಕೇಸು ದಾಖಲು

ತನಿಷಾ ಕುಪ್ಪಂಡ ಅವರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ. ಬಹುಜನ ಸಮಾಜ ಸಂಘಟನೆ ವತಿಯಿಂದ ದೂರು ದಾಖಲಾಗಿದೆ.

Exit mobile version