ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK Season 10) ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ (Varthur santhosh arrest) ಅವರನ್ನು ಹುಲಿಯುಗುರು (Nail of Tiger) ಹೊಂದಿದ ಲಾಕೆಟ್ ಧರಿಸಿದ್ದ ಕಾರಣಕ್ಕಾಗಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಅವರ ಭವಿಷ್ಯ ತೀರ್ಮಾನವಾಗಲಿದೆ. ಹಾಗಿದ್ದರೆ, ಹುಲಿಯುಗುರು ಧರಿಸುವುದು ಅಪರಾಧವಾ? ಹೌದಾಗಿದ್ದರೆ ಅದಕ್ಕೆ ಏನು ಶಿಕ್ಷೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
1972ರ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ (Wild life -Protection- Act 1972) ಅಡಿ ವನ್ಯ ಜೀವಿಗಳ ಮೂಳೆಯನ್ನು ಧರಿಸುವುದು ಅಥವಾ ಚರ್ಮವನ್ನು ಬಳಸುವುದು ಅಪರಾಧ. ಈ ಕಾಯಿದೆಯಡಿ ಹುಲಿಯನ್ನು ಷೆಡ್ಯೂಲ್ 1ರಡಿ ಅಳಿವಿನಂಚಿನ ಪ್ರಾಣಿಗಳು ಎಂದು ಗುರುತಿಸಲಾಗಿದೆ. ಹೀಗಾಗಿ ಹುಲಿಯ ಉಗುರು, ಚರ್ಮ ಅಥವಾ ಮೂಳೆ ಧರಿಸುವುದು ಅಪರಾಧ. ಪ್ರಕರಣದಲ್ಲಿ ಹುಲಿ ಉಗುರು ಧರಿಸಿರುವುದು ಸಾಬೀತಾದರೆ 3 ವರ್ಷದಿಂದ 7 ವರ್ಷದವರಗೆ ಶಿಕ್ಷೆ ವಿಧಿಸಲು ಅವಕಾಶವಿದೆ.
ಏನೇನು ಅಂಶಗಳನ್ನು ಗಮನಿಸಲಾಗುತ್ತದೆ?
ಹುಲಿಯ ಉಗುರನ್ನು ಧರಿಸಿದ ವ್ಯಕ್ತಿಗೆ ಅದು ಎಲ್ಲಿಂದ ಸಿಕ್ಕಿದೆ? ಅದು ಯಾವುದಾದರೂ ಹುಲಿಯನ್ನು ತಾವೇ ಕೊಂದು ಸಂಗ್ರಹಿಸಿದ ಹಲ್ಲೇ? ಅಥವಾ ಕೊಲೆ ಮಾಡಿದವರು ಯಾರು ಎನ್ನುವುದನ್ನು ಗಮನಿಸಲಾಗುತ್ತದೆ.
ಲಾಕೆಟ್ ಖರೀದಿಸಿದ್ದು ಎಂದರೆ ಲಾಕೆಟ್ ಮಾಡಿದವರಿಗೆ ಯಾವ ಮೂಲದಿಂದ ಸಿಕ್ಕಿದೆ ಎನ್ನುವುದನ್ನು ಪೊಲೀಸರು ಪರಿಶೀಲಿಸುತ್ತಾರೆ.
ಆರೋಪ ಹೊಂದಿರುವ ವ್ಯಕ್ತಿಗೆ ಬೇಟೆಯ ಹಿನ್ನೆಲೆ ಇದೆಯಾ? ಬೇಟೆಗಾರರ ಜತೆ ಸಂಬಂಧವಿದೆಯೇ ಎನ್ನುವುದನ್ನು ಪರಿಶೀಲನೆ ಮಾಡುತ್ತಾರೆ. ಹಿಂದೆ ಸತ್ತು ಸಿಕ್ಕಿದ ಹುಲಿಗಳಲ್ಲಿ ಚರ್ಮ ಅಥವಾ ಹಲ್ಲು, ಉಗುರುಗಳು ನಾಪತ್ತೆಯಾದ ಬಗ್ಗೆ ಹಿನ್ನೆಲೆ ಇದ್ದರೆ ಅದಕ್ಕೂ ಇದಕ್ಕೂ ಸಂಬಂಧವಿದೆಯಾ ಎಂದು ಪರಿಶೀಲಿಸಲಾಗುತ್ತದೆ.
ಏನೇನು ಕಾನೂನು ಪ್ರಕ್ರಿಯೆ?
ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದು ಪ್ರಾಥಮಿಕ ಪ್ರಕ್ರಿಯೆ. ನ್ಯಾಯಾಲಯ ವ್ಯಕ್ತಿಗೆ ಜಾಮೀನು ಕೊಡಬಹುದು, ಇಲ್ಲವೇ ತನಿಖೆಗೆ ಅವಶ್ಯಕತೆ ಇದೆ, ಸಾಕ್ಷಿ ನಾಶದ ಅಪಾಯವಿದೆ ಎಂದಾದರೆ ಅವರನ್ನು ನ್ಯಾಯಾಂಗಬಂಧನಕ್ಕೆ ಇಲ್ಲವೇ ಪೊಲೀಸರ ವಶಕ್ಕೆ ಒಪ್ಪಿಸಬಹುದು.
ಮುಂದಿನ ಹಂತದಲ್ಲಿ ಪ್ರಾಥಮಿಕ ತನಿಖೆಯ ನಂತರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಬಳಿಕ ಸಾಕ್ಷಿಗಳನ್ನು ಒದಗಿಸಬೇಕಾಗುತ್ತದೆ.
ವರ್ತೂರು ಸಂತೋಷ್ ಅವರು ತಮಗೆ ಈ ಉಗುರು ಸಿಕ್ಕಿದ್ದು ಎಲ್ಲಿಂದ ಎಂಬ ವಿಚಾರದಲ್ಲಿ ಎಲ್ಲವನ್ನೂ ಸತ್ಯವಾಗಿಯೇ ಹೇಳಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ತುಂಬ ಕಷ್ಟಕರ. ಯಾಕೆಂದರೆ, ಹೇಳಿದ ಒಂದೊಂದು ಮಾತಿಗೂ ಸಾಕ್ಷ್ಯ ಬೇಕಾಗುತ್ತದೆ.
ಇದನ್ನೂ ಓದಿ: varthur santhosh arrest : ನಾಯಿಗೆ ಹೊಡ್ದಂಗ್ ಹೊಡೀತಾರೆ; ಅರೆಸ್ಟ್ ಆಗೋ ಮುನ್ನ ಭವಿಷ್ಯ ಹೇಳಿದ್ದ ಸಂತೋಷ್
ಹುಲಿಯ ಉಗುರಿನ ಲಾಕೆಟ್ ಎಷ್ಟು ವರ್ಷದಿಂದ ಧರಿಸಿದ್ದೀರಿ? ಹುಲಿಯ ಉಗುರು ನಿಮಗೆ ಸಿಕ್ಕಿದ್ದು ಹೇಗೆ? ಹುಲಿಯ ಉಗುರು ಮಾರಾಟ ಮಾಡಿದ್ಯಾರು? ಎನ್ನುವ ಸ್ಪಷ್ಟ ಮಾಹಿತಿ ನೀಡಬೇಕಾಗುತ್ತದೆ.
ಇದರ ಜತೆಗೆ ನಿಜಕ್ಕೂ ಅವರು ಧರಿಸಿದ್ದು ಹುಲಿಯ ಉಗುರೇನಾ ಎಂಬ ಬಗ್ಗೆ ಪ್ರಾಥಮಿಕ ತನಿಖೆ ನಡೆದೇ ನಡೆಯುತ್ತದೆ. ಸಂತೋಷ್ ಪ್ರಕರಣದಲ್ಲಿ ಅದು ನಡೆದು ಹುಲಿಯ ಉಗುರು ಎನ್ನುವುದು ಸಾಬೀತಾಗಿದೆ ಎನ್ನಲಾಗಿದೆ.