ಬೆಂಗಳೂರು: ಇದು ಒಂದು ಉಗುರಿನ ಕಥೆ. ಆ ಒಂದು ಪ್ರತಿಷ್ಠಿತ ಟೈಟಲನ್ನು ಗೆದ್ದುಕೊಂಡೇ ಬರುತ್ತೇನೆ ಎಂದು ಬಂದ ಆ ಯುವಕ ಕೃತಕ ಸೆರೆಮನೆಯನ್ನು ಸೇರಿದ್ದ. ಇನ್ನು 100 ದಿನಗಳ ಕಾಲ ಬಂಧಿಯಾಗಿರುತ್ತೇನೆ, ಬಳಿಕ ಗೆದ್ದು ಹೊರಗೆಬರುತ್ತೇನೆ ಎಂದು ಅಮ್ಮನಿಗೆ ಹೇಳಿಬಂದಿದ್ದ. ಆದರೆ, ಈಗ ಆತ ನಿಜವಾದ ಸೆರೆ ಮನೆಗೆ ಹೋಗಬೇಕಾದ ಪ್ರಸಂಗ ಬಂದಿದೆ. ಇದಕ್ಕೆ ಕಾರಣವಾಗಿದ್ದು ಹುಲಿಯ ಉಗುರು.
ಹೌದು, ಇದು ಬಿಗ್ ಬಾಸ್ ಸೀಸನ್ 10 (BBK Season 10) ಸ್ಪರ್ಧಿಯಾಗಿ ಗಮನ ಸೆಳೆದ ವರ್ತೂರಿನ ಕೃಷಿಕ ವರ್ತೂರು ಸಂತೋಷ್ (Varthur Santhosh Arrest) ಅವರು ಎದುರಿಸಿದ ಕಥೆ ವ್ಯಥೆ. ಹಳ್ಳಿಕಾರ್ (Hallikar cows) ತಳಿಯ ಗೋವುಗಳ ರಕ್ಷಣೆಗೆ ಹೆಸರಾಗಿದ್ದ ಶ್ರೀಮಂತ ಕೃಷಿಕ ಸಂತೋಷ್. ಅರಮನೆಯಂಥ ಮನೆ, ಮೈತುಂಬ ಆಭರಣ, ಹತ್ತಾರು ಎಕರೆ ಕೃಷಿ ಜಮೀನು, ಚಿನ್ನದ ಬೆಳೆ, ಅಪಾರ್ಟ್‌ಮೆಂಟ್‌ಗಳು ಇದು ಸಂತೋಷ್ ಆಸ್ತಿಯಾಗಿತ್ತು.
ಆಕರ್ಷಕ ಹೋರಿಗಳು, ಪಿಟ್ ಬುಲ್ ನಾಯಿ, ಮನೆಯಲ್ಲೇ ಸ್ವಿಮ್ಮಿಂಗ್ ಪೂಲ್, ಓಡಾಡಲು ಐಷಾರಾಮಿ ಕಾರನ್ನು ಹೊಂದಿದ್ದ ಸಂತೋಷ್ ಅವರು ರೈತನೊಬ್ಬ ಹೀಗೂ ಇರಬಹುದಾ ಎಂಬ ಅಚ್ಚರಿಯನ್ನು ಹುಟ್ಟು ಹಾಕಿತ್ತು. ಕೇವಲ ನಾಲ್ಕು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡ ವರ್ತೂರು ಸಂತೋಷ್ ತಮ್ಮ ಸ್ವಸಾಮರ್ಥ್ಯದಿಂದಲೇ ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ್ದಾರೆ.
ಅವರು ತಾತನ ಕಾಲದಿಂದಲೇ ಶ್ರೀಮಂತರು. ಊರಿನಲ್ಲಿ ಇವರ ಅಜ್ಜ ಹುಲಿ ಥರ ಇದ್ದವರು. ದೊಡ್ಡ ಪ್ರಮಾಣದ ಆಸ್ತಿಯೂ ಇತ್ತು. ಕಲರ್ಸ್ ಟೀವಿಯಲ್ಲಿ ಪ್ರಸಾರ ಆರಂಭಿಸಿರುವ ಬೃಂದಾವನ ಸೀರಿಯಲ್‌ನಲ್ಲಿ ಬರುವ ಕೂಡುಕುಟುಂಬದ ಹಾಗೆ ದೊಡ್ಡ ಫ್ಯಾಮಿಲಿ. ಆದರೆ, ಯಾವಾಗ ತಂದೆ ತೀರಿಕೊಂಡರೋ ಬಳಿಕ ಒಂದಿಷ್ಟು ಅನಾಥ ಭಾವ ಕಾಡಿತ್ತು. ಜಮೀನುಗಳೆಲ್ಲ ಪಾಲಾದವು. ಅವರವರ ತಲೆಗೆ ಅವರವರ ಕೈ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆಗ ಅಮ್ಮನ ಪಕ್ಕ ನಿಂತು ನಾನು ಎಲ್ಲವನ್ನೂ ಸಂಭಾಳಿಸುತ್ತೇನೆ ಎಂದು ಎದೆಯುಬ್ಬಿಸಿ ನಿಂತಿದ್ದು ಸಣ್ಣ ವಯಸ್ಸಿನಲ್ಲಿದ್ದ ಸಂತೋಷ್. ಹೇಳಿದಂತೆ ಅವರು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದರು.
ಅಮ್ಮ ಮಂಜುಳಾ ಅವರ ಪ್ರೀತಿಯ ಮಗನಾಗಿ ಬೆಳೆದ ಸಂತೋಷ್ ಬಿಗ್ ಬಾಸ್ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದರು. ಆಗಲೇ ಅವರ ಕೈಯಲ್ಲಿದ್ದ ಚಿನ್ನದ ಉಂಗುರ, ಉಗುರಿನ ಚೈನು ಗಮನ ಸೆಳೆದಿತ್ತು. ಮನೆಯೊಳಗೆ ಬಂದಾದ ಮೇಲೆ ಅದು ಒರಿಜಿನಲ್ ಹುಲಿಯದ್ದೇ ಎಂದು ಹೇಳಿದ್ದರು ಸಂತೋಷ್. ತುಂಬ ಶ್ರೀಮಂತ ಕೃಷಿಕನೆಂಬ ಕಾರಣಕ್ಕಾಗಿ ಸ್ಪರ್ಧಿಗಳು ಯಾರೂ ಅವರ ಹುಲಿಯುಗುರಿನ ಪೆಂಡೆಂಟ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಅದರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ಕಣ್ಣು ಬಿದ್ದಿತ್ತು.
ಕಳೆದ ಕೆಲವು ದಿನಗಳಿಂದ ಅವರು ಬಿಗ್ ಬಾಸ್ ಮನೆಯನ್ನು ಸಂಪರ್ಕಿಸಿ ಸಂತೋಷ್ ಬಗ್ಗೆ ವಿಚಾರಿಸಿದ್ದರು. ಆದರೆ, ಬಿಗ್ ಬಾಸ್ ಮನೆ ಅಧಿಕಾರಿಗಳನ್ನು ಒಳಗೆ ಬಿಟ್ಟುಕೊಂಡಿರಲಿಲ್ಲ. ಆದರೆ, ಭಾನುವಾರ ಅವರು ಬಲವಂತವಾಗಿ ಸಂತೋಷ್ ಅವರನ್ನು ಹೊರಗೆ ಕರೆಸಿಕೊಂಡು ಹುಲಿಯ ಉಗುರಿನ ಬಗ್ಗೆ ವಿಚಾರಣೆ ನಡೆಸಿದರು. ಆಗ ಅದು ಒರಿಜಿನಲ್ ಎನ್ನುವುದು ಸ್ಪಷ್ಟವಾಯಿತು. ಆದರೆ, ಅದು ಎಲ್ಲಿಂದ ಬಂತು, ಯಾರು ಕೊಟ್ಟರು ಎನ್ನುವ ವಿಚಾರವನ್ನು ಸಂತೋಷ್ ಹೇಳಿಲ್ಲ. ಖರೀದಿ ಮಾಡಿದ್ದೇನೆ ಎಂದಷ್ಟೇ ಹೇಳಿದ್ದಾರೆ.
ಈಗ ಅರಣ್ಯಾಧಿಕಾರಿಗಳು ಸಂತೋಷ್‌ನನ್ನು ಬಂಧಿಸಿದ್ದಾರೆ. ಕೋರ್ಟ್‌ಗೆ ಹಾಜರುಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಅಂದರೆ ಬಿಗ್ ಬಾಸ್ ಎಂಬ ಕೃತಕ ಸೆರೆಮನೆಯಿಂದ ಅವರೀಗ ನಿಜವಾದ ಜೈಲಿನ ಒಳಗೆ ಪ್ರವೇಶಿಸಿದ್ದಾರೆ.
ಅದು ಹುಲಿಯುಗುರು ಎಂದು ಗೊತ್ತಿರಲಿಲ್ಲ ಅಂತಾರೆ ಅಮ್ಮ
ಈ ನಡುವೆ ಸಂತೋಷ್ ಅವರ ಅಮ್ಮ ಮಂಜುಳಾ ಅವರು ಅದು ಹುಲಿಯುಗುರು ಎಂದು ನನಗೂ ಗೊತ್ತಿರಲಿಲ್ಲ. ಗೊತ್ತಿದ್ದರೆ ಬಿಡುತ್ತಿರಲಿಲ್ಲ ಅನ್ನುತ್ತಾರೆ. ಸಂತೋಷ್‌ಗೂ ಗೊತ್ತಿರಲಿಕ್ಕಿಲ್ಲ ಎನ್ನುವುದು ಅವರ ನಂಬಿಕೆ. ನಿಜವೆಂದರೆ ಈ ಹುಲಿಯುಗುರಿಗೆ ಚೈನು ಮಾಡಿಸಿಕೊಟ್ಟಿದ್ದು ಅಮ್ಮನೇ!
ಅಂದ ಹಾಗೆ, ಬೆಳೆಯುತ್ತಿರುವ ಮಗನ ಶ್ರೇಯೋಭಿವೃದ್ಧಿಯನ್ನು ಕಂಡು ಯಾರೋ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನುವುದು ಅಮ್ಮನ ಮನದ ಮಾತು. ಈ ದೊಡ್ಡ ಸಂಕಷ್ಟದಿಂದ ಪಾರಾಗಿ ಬರುತ್ತಾನೆ ಎನ್ನುವುದು ಅವರ ನಂಬಿಕೆ.
ವಕೀಲರು ಮತ್ತು ಪರಿಸರವಾದಿಗಳ ಪ್ರಕಾರ, ಈಗ ಹಾಕಿರುವ ಪ್ರಕರಣ ಅಷ್ಟೇನೂ ಬಲವಾದುದಲ್ಲ. ಇದರಲ್ಲಿ ಜಾಮೀನು ಸಿಗುತ್ತದೆ. ಬುಧವಾರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಇದು ಸೀರಿಯಸ್ ಕೇಸ್. ಆರೋಪ ಸಾಬೀತಾದರೆ ಮೂರರಿಂದು ಏಳು ವರ್ಷಗಳ ಶಿಕ್ಷೆ ವಿಧಿಸಲು ಅವಕಾಶವಿದೆ. ಹಾಗಿದ್ದರೆ ಮುಂದೇನಾಗುತ್ತದೆ ಎಂದು ಕಾದು ನೋಡಬೇಕು.