Site icon Vistara News

Union Budget 2024: ಬಡವರಿಗೆ 3 ಕೋಟಿ ಹೆಚ್ಚುವರಿ ಮನೆ ಘೋಷಿಸಿದ ಕೇಂದ್ರ ಸರ್ಕಾರ

Union Budget 2024

Union Budget 2024

ನವದೆಹಲಿ: 3ನೇ ಎನ್‌ಡಿಎ ಸರ್ಕಾರದ ಮೊದಲ ಬಜೆಟ್‌ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಡವರಿಗೆ ವಿವಿಧ ಯೋಜನೆಗಳನ್ನು ಘೋಷಿಸಿದರು. ಈ ಪೈಕಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (Pradhan Mantri Awas Yojana) ಅಡಿ ಹೆಚ್ಚುವರಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ನಗರಗಳ ವಸತಿ ಯೋಜನೆಗೆ 2.2 ಲಕ್ಷ ಕೋಟಿ ರೂ.ಗಳ ಉತ್ತೇಜನವನ್ನು ಕೇಂದ್ರ ಘೋಷಿಸಿದೆ. 10 ಲಕ್ಷ ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಗರಗಳ 1 ಕೋಟಿ ಬಡ ಮತ್ತು ಮಧ್ಯಮ ವರ್ಗಗಳಿಗೆ ವಸತಿ ಸೌಕರ್ಯ ನೀಡಲಾಗುವುದು ಎಂದು ಸಚಿವೆ ಹೇಳಿದರು. ಜತೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಇನ್ನೂ 3 ಕೋಟಿ ಮನೆಗಳನ್ನು ನಿರ್ಮಿಸುವ ಮೂಲಕ ಯೋಜನೆಯನ್ನು ವಿಸ್ತರಿಸುವುದಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ.

2015ರ ಜೂನ್‌ನಲ್ಲಿ ಪ್ರಾರಂಭವಾದ ಈ ಯೋಜನೆಯು ಎಲ್ಲ ಅರ್ಹ ನಗರ ಫಲಾನುಭವಿಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಫೆಬ್ರವರಿಯಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ಪಿಎಂಎವೈಗೆ 80,671 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು. ಅದಕ್ಕೂ ಹಿಂದಿನ ಬಜೆಟ್‌ನಲ್ಲಿ 54,103 ಕೋಟಿ ರೂ. ಅನಿದಾನ ಒದಗಿಸಲಾಗಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಸತಿ ಕೊರತೆಯನ್ನು ನೀಗಿಸಲು ಈ ಅನುದಾನದ ವಿಸ್ತರಣೆ ನೆರವಾಗಲಿದೆ. ಕಳೆದ 10 ವರ್ಷಗಳಲ್ಲಿ 4.21 ಕೋಟಿ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.

1 ಕೋಟಿ ಮನೆಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್

ಒಂದು ಕೋಟಿ ಮನೆಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ (PM Surya Ghar Muft Bijli Yojana) ಅಡಿಯಲ್ಲಿ ಈ ಸೌಲಭ್ಯ ನೀಡಲಾಗುತ್ತದೆ. ಉಚಿತ ಸೌರ ವಿದ್ಯುತ್ ಯೋಜನೆಯ ಬಗ್ಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “1 ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯುನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲು ಅನುವು ಮಾಡಿಕೊಡಲು ಸೋಲಾರ್‌ ಫಲಕಗಳನ್ನು ಸ್ಥಾಪಿಸಲು ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗೆ ಉತ್ತೇಜನ ನೀಡಲಾಗುವುದುʼʼ ಎಂದು ಅವರು ತಿಳಿಸಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂಪಾಯಿ ಘೋಷಿಸಿದರು. ಮುಂದಿನ ವರ್ಷಗಳಲ್ಲಿ ದೇಶಾದ್ಯಂತ 10,000 ಜೈವಿಕ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್​ನಲ್ಲಿ ಭರವಸೆ ನೀಡಿದರು. ಮುಂದಿನ ಎರಡು ವರ್ಷಗಳಲ್ಲಿ, 1 ಕೋಟಿ ರೈತರನ್ನು ಬ್ರ್ಯಾಂಡಿಂಗ್ ಮತ್ತು ಪ್ರಮಾಣೀಕರಣ ನೀಡುವ ಮೂಲಕ ನೈಸರ್ಗಿಕ ಕೃಷಿಗೆ ಪ್ರೇರಣೆ ನೀಡಲಾಗುವುದು ಎಂದು ಅವರು ಬಜೆಟ್​ನಲ್ಲಿ ಹೇಳಿದರು. ತರಕಾರಿ ಬೆಳೆಗಳನ್ನು ಜೀವನಾಧಾರವಾಗಿ ಮಾಡಿಕೊಂಡಿರುವ ರೈತರಿಗೆ ಅನುಕೂಲಕ ಮಾಡಿಕೊಡುವ ನಿಟ್ಟಿನಲ್ಲಿ ತರಕಾರಿ ಉತ್ಪಾದನೆ ಮತ್ತು ಪೂರೈಕೆ ಸರಪಳಿ ನಿರ್ಮಿಸುವ ಯೋಜನೆ ಪ್ರಕಟಿಸಿದರು. 

ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್​​ನಲ್ಲಿ ಕೃಷಿ ಕ್ಷೇತ್ರಕ್ಕ ಭರ್ಜರಿ ಕೊಡುಗೆ; ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ

Exit mobile version