ಮೈಸೂರು: ಕಾವೇರಿ ಚಳವಳಿಗೆ (Cauvery Protest) ಕನ್ನಡ ಚಿತ್ರರಂಗದ ಸ್ಟಾರ್‌ಗಳು (Stars of Kannada Industry) ಬರ್ತಿಲ್ಲ ಎಂಬ ಜನಾಕ್ರೋಶದ ಬಗ್ಗೆ ಮೌನ ಮುರಿದ ನಟ ದರ್ಶನ್ (Actor Darshan), ಜೈಲರ್ ಚಿತ್ರದ (Jailer Cinema) ವಿತರಕರ ವಿರುದ್ಧ ಆಕ್ರೋಶದಿಂದ ಮಾತನಾಡಿದ್ದಾರೆ. ಜನ ನಮ್ಮನ್ನು ಮಾತ್ರಾ ಯಾಕೆ ಕೇಳ್ತಾರೆ, ನಾವು ಮಾತ್ರಾ ಕಾಣೋದಾ? ಅವರು ಕಾಣಲ್ವಾ ಎಂದು ಕೇಳಿದ್ದಾರೆ.
ʻʻದರ್ಶನ್, ಸುದೀಪ್ , ಶಿವಣ್ಣ, ಯಶ್, ಅಭಿ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ಬೇರೆ ತಮಿಳು ಚಿತ್ರದಲ್ಲಿ ಕೋಟಿ ಕೋಟಿ ಮಾಡಿದವನು ಕಾಣ್ತಿಲ್ವ?ʼʼ ಎಂದು ಬನ್ನೂರಿನಲ್ಲಿ ನಟ ದರ್ಶನ್ ಹೇಳಿದರು. ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ಗಂಗಾ ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ನೈಸರ್ಗಿಕ ಕೃಷಿಕರಿಗೆ 100 ಹಳ್ಳಿಕಾರ್ ತಳಿಯ ಗೋದಾನ ಸಮಾರಂಭದಲ್ಲಿ ದರ್ಶನ್ ಮಾತನಾಡಿದರು.
“ಇತ್ತೀಚೆಗೆ ತಮಿಳು ಸಿನಿಮಾ ಬಿಡುಗಡೆಯಾಯಿತು. ಆ ಸಿನಿಮಾವನ್ನು ಕನ್ನಡದ ವಿತರಕರೊಬ್ಬರು ಕರ್ನಾಟಕ ಹಂಚಿಕೆಗೆ 6 ಕೋಟಿ ರೂ. ಖರೀದಿ ಮಾಡಿದರು (ಜೈಲರ್ ಸಿನಿಮಾ ವಿತರಣೆ ಮಾಡಿದ್ದು ಜಯಣ್ಣ). ಆದರೆ ಅವರು 36-37 ಕೋಟಿ ರೂ. ಸಂಪಾದಿಸಿದರು. ಕನ್ನಡದವರು ತಮಿಳು ಸಿನಿಮಾಗೆ 37 ಕೋಟಿ ರೂ. ಕೊಂಡೊಯ್ಯಲು ಬಿಟ್ಟು ಈಗ ಕನ್ನಡ ಕಲಾವಿದರನ್ನು ಮಾತ್ರ ಹೋರಾಟಕ್ಕೆ ಕರೆಯೋದು ಯಾವ ನ್ಯಾಯ?ʼʼ ಎಂದು ಪ್ರಶ್ನಿಸಿದರು.
ರಜನೀಕಾಂತ್ ಬಗ್ಗೆ ಮಾತನಾಡಲ್ಲ ಎಂದ ದರ್ಶನ್
ʻʻ6 ಕೋಟಿ ರೂ. ಹಾಕಿ 36 ಕೋಟಿ ರೂ. ಮಾಡ್ದ. ಅವನಿಗೆ ಯಾಕೆ ಕೇಳಲ್ಲ? ನಾವು ಮಾತ್ರ ನಿಮಗೆ ಕಾಣೋದ? ನಿಮಗೆ ಪ್ರಶ್ನೆ ಕೇಳ್ತಾ ಇದ್ದೀನಿ ಹೇಳಿʼʼ ಎಂದು ದರ್ಶನ್ ಹೇಳಿದರು. ʻʻಆ ಸಿನಿಮಾ ದೊಡ್ಡ ಕಲಾವಿದರದು. ಅವರ ಬಗ್ಗೆ ನಾನೇನೂ ಮಾತನಾಡಲ್ಲʼʼ ಎಂದರು.
ʻʻಕಾಂಟ್ರೊವರ್ಸಿ ಬಗ್ಗೆ ಮೊದಲು ಮಾತನಾಡುತ್ತೇನೆʼʼ ಎಂದೇ ಮಾತು ಶುರು ಮಾಡಿದ ಅವರು, ʻʻದರ್ಶನ್ ಮಾತು ಹರಿತವಾಗಿರುತ್ತೆ. ಕೆಟ್ಟದಾಗಿ ಮಾತನಾಡ್ತಾರೆ. ಮಾನ ಮರ್ಯಾದೆ ಇಲ್ಲ ಅವನಿಗೆ ಅಂತಾರೆ. ಆದರೆ ನನ್ನ ಮಾತು ಸತ್ಯವಾಗಿಯೇ ಇರುತ್ತದೆʼʼ ಎಂದರು.
ʻʻಕಾವೇರಿ ಹೋರಾಟ ಬಂದಾಗಲೆಲ್ಲ ದರ್ಶನ್, ಸುದೀಪ್, ಶಿವಣ್ಣ, ಯಶ್ ಮತ್ತೊಬ್ಬರು ಮಾತ್ರ ಕಾಣಿಸೋದಾ?
ತಮಿಳು ಸಿನಿಮಾಕ್ಕೆ 37 ಕೋಟಿ ರೂ. ಕೊಟ್ರಲ್ಲಾ ಅವರನ್ನು ಹೋರಾಟಕ್ಕೆ ಕರೆಯಿರಿ. ಕನ್ನಡಿಗರು ಕನ್ನಡ ಸಿನಿಮಾನೆ ನೋಡಲ್ಲ. ತಮಿಳು ಸಿನಿಮಾಗೆ 37 ಕೋಟಿ ಕೊಡ್ತೀರಿ. ಇಷ್ಟೆಲ್ಲ ಹಣ ಕನ್ನಡಿಗರು ಸಿನಿಮಾ ನೋಡಿದ್ರಿಂದ ತಾನೆ ಬಂದಿದ್ದು. ಕನ್ನಡಿಗರು ಸಿನಿಮಾ ಮಾಡಿದ್ರೆ ಅದನ್ನ ನೀವು ನೋಡಲ್ಲ. ನೀವು ಬೇರೆ ಭಾಷೆಗೆ ತೋರಿಸುವ ಪ್ರೀತಿ ನಮ್ಮ ಸಿನಿಮಾಗೂ ತೋರಿಸಿ. ಆ ಮೇಲೆ ಕನ್ನಡ ಕಲಾವಿದರನ್ನು ಕರೆಯಿರಿʼʼ ಎಂದು ದರ್ಶನ್ ಆಕ್ರೋಶದಿಂದ ಹೇಳಿದರು.
ʻʻನಾನು ಮಾಡಿರುವ ಸಿನಿಮಾವನ್ನು ಆ ಬಾಷೆಯವರು ನೋಡೋದೆ ಇಲ್ಲ.. ನನ್ನ ಸಿನಿಮಾ ಕನ್ನಡ ಭಾಷೆಗೆ ಮಾತ್ರ ಸೀಮಿತವಾಗಿದೆ. ನಾನು ಹುಟ್ಟು ರೈತ, ಈಗಲೂ ಕೃಷಿ ಮಾಡ್ತಿದ್ದೇನೆ. ಕಾವೇರಿ ನೀರು ಬಳಸಿಯೇ ಬೆಳೆ ಕೂಡ ಬೆಳೆಯುವೆʼʼ ಎಂದು ತಮ್ಮ ಕೃಷಿ ಹಿನ್ನೆಲೆ ಹೇಳಿಕೊಂಡರು.
ಸರ್ಕಾರದ ಮೇಲೂ ಗುಡುಗಿದ ದರ್ಶನ್
ʻʻಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವಿದೆ. ಆದೇಶ ಆಗುವವರೆಗೆ ನಮ್ಮವರು ಏನು ಮಾಡ್ತಿದ್ರು? ಹೋರಾಟಕ್ಕೆ ಧುಮುಕಿರುವವರು ಬಡ ಕೂಲಿ ಕಾರ್ಮಿಕರುʼʼ ಎಂದು ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡರು ದರ್ಶನ್.
ನಟ ದರ್ಶನ್‌ಗೆ ಬಂಡೂರು ಕುರಿ ಗಿಫ್ಟ್
ಕಾರ್ಯಕ್ರಮದಲ್ಲಿ ಉದ್ಯಮಿ ಮಹೇಂದ್ರ ಸಿಂಗ್ ಕಾಳಪ್ಪ ಅವರು ದರ್ಶನ್‌ಗೆ ಬನ್ನೂರು ಕುರಿ ಗಿಫ್ಟ್ ನೀಡಿದರು.
ʻʻಮಹೇಂದ್ರ ಸಿಂಗ್ ಕಾಳಪ್ಪ ರಾಜಸ್ಥಾನದಲ್ಲಿ ಹುಟ್ಟಿ ಬೆಳೆದವರು. ಬನ್ನೂರಿಗೆ ಬಂದು ತುಂಬಾ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ತಾನೊಬ್ಬ ಕನ್ನಡಿಗ ಅನ್ನೋದನ್ನು ಹೆಮ್ಮಯಿಂದ ಹೇಳ್ತಾರೆ. ರಾಜಸ್ಥಾನ ಮೂಲದ ಈ ವ್ಯಕ್ತಿಯ ಅಭಿಮಾನ ನೋಡಿ ನನಗೂ ಖುಷಿಯಾಗುತ್ತೆʼʼ ಎಂದರು ಹೇಳಿದರು ದರ್ಶನ್.
ʻʻಹಳ್ಳಿಕಾರ್ ತಳಿಯ ಹಸುಗಳನ್ನು ಉಳಿಸಿ ಬೆಳೆಸಬೇಕು. ಈ ಹಳ್ಳಿಕಾರ್ ತಳಿಗಳು ಕನ್ನಡಿಗರದ್ದು ಅಂತ ಹೆಮ್ಮೆಯಿಂದ ಹೇಳಬಹುದು. ಉಚಿತವಾಗಿ ಕೊಟ್ಟರೆಂದು ಉದಾಸೀನ ಮಾಡಬೇಡಿ. ನಮ್ಮದೇ ನೆಲದ ಈ ತಳಿಯನ್ನು ನಾವೆಲ್ಲರೂ ಸೇರಿ ಸಂರಕ್ಷಿಸಬೇಕುʼʼ ಎಂದು ದರ್ಶನ್ ನುಡಿದರು.