ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. 5 ತಿಂಗಳ ಬಳಿಕ ನಟ ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ನೀಡಿ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಿಂದ ಆದೇಶ ಹೊರಡಿದೆ. ಇನ್ನು ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕಿಲ್ಲ. ಬದಲಾಗಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶ ನೀಡಿದೆ.
ಬೆನ್ನುಹುರಿ ಚಿಕಿತ್ಸೆಗೆ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಅಂಗೀಕಾರವಾಗಿದೆ. ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವಾರದಲ್ಲಿ ಯಾವ ರೀತಿಯ ಚಿಕಿತ್ಸೆ ಎಂಬ ವರದಿಯನ್ನು ನೀಡಬೇಕು. ದರ್ಶನ್ ತನ್ನ ಪಾಸ್‌ಪೋರ್ಟ್ ಸರಂಡರ್ ಮಾಡಬೇಕೆಂದು ನ್ಯಾ . ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆದೇಶಿಸಿದೆ.
ಏನಿದು ಕೊಲೆ ಕೇಸ್?
ಜೂನ್ 9ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸಂಬಂಧ ಜೂನ್ 11ರಂದು ಮೈಸೂರಿನಲ್ಲಿ ಎ2 ದರ್ಶನ್ ಅರೆಸ್ಟ್ ಆಗಿದ್ದರು. ಜೂನ್ 22ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಜೂ.22ರಂದು ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಅಲ್ಲಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಶಿಫ್ಟ್ ಮಾಡಲಾಗಿತ್ತು. ಆ.29ರಂದು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದ ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ.
ಪವಿತ್ರಾಗೌಡ ಖುಷಿ
ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಖುಷಿ ಆಗಿದ್ದಾರೆ. ತನ್ನಿಂದಾಗಿ ದರ್ಶನ್ ಜೈಲು ಸೇರಿದ ಎಂಬ ಬೇಸರವಿತ್ತು. ದರ್ಶನ್‌ಗೆ ಜಾಮೀನು ಸಿಕ್ಕಿದೆ ಎಂದು ಪವಿತ್ರಾ ಖುಷಿಯಾಗಿದ್ದು, ತನಗೂ ಬೇಲ್ ಸಿಗುತ್ತೆಂಬ ವಿಶ್ವಾಸದಲ್ಲಿದ್ದಾರೆ.