ಹೈದರಾಬಾದ್: ತೆಲುಗಿನ ಸೂಪರ್‌ಸ್ಟಾರ್, ನಟ ಮಹೇಶ್‌ಬಾಬು ಅವರ ತಂದೆ ಕೃಷ್ಣ ಅವರಿಗೆ ಸೋಮವಾರ ತೀವ್ರ ಹೃದಯಾಘಾತವಾಗಿದ್ದು, ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉಲ್ಭಣಗೊಂಡ ಹೃದಯದ ಸಮಸ್ಯೆಯ ಹಿನ್ನೆಲೆಯಲ್ಲಿ ಅವರನ್ನು ನಡುರಾತ್ರಿ 1.15ಕ್ಕೆ ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಬಹು ಅಂಗ ವೈಫಲ್ಯದಿಂದ ಮೃತಪಟ್ಟರು ಎಂದು ತಿಳಿದುಬಂದಿದೆ. ಪುತ್ರ ಮಹೇಶ್ ಬಾಬು ಸೇರಿದಂತೆ ಕುಟುಂಬದ ಸದಸ್ಯರು ಸ್ಥಳದಲ್ಲಿದ್ದಾರೆ.
ಕೃಷ್ಣ ಘಟ್ಟಮನೇನಿ (79) ಅವರು ತೆಲುಗಿನ ನಟ, ಸೂಪರ್‌ಸ್ಟಾರ್, ನಿರ್ದೇಶಕ ಹಾಗೂ ನಿರ್ಮಾಪಕ. 1965ರಲ್ಲಿ ತೇನೆ ಮನಸುಲು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ಮೋಸಗಲ್ಲಗು ಮೋಸಗಾಡು, ಅಲ್ಲೂರಿ ಸೀತಾರಾಮ ರಾಜು, ಗೂಢಚಾರಿ 116 ಮುಂತಾದ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ್ದರು. 350ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಗೆ ೨೦೦೯ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು.
ಚಿತ್ರರಂಗದ ಬಳಿಕ ರಾಜಕೀಯವನ್ನೂ ಪ್ರವೇಶಿಸಿದ್ದ ಕೃಷ್ಣ, 1980ರ ದಶಕದಲ್ಲಿ ಕಾಂಗ್ರೆಸ್‌ನಿಂದ ನಿಂತು ಸಂಸದರಾಗಿ ಆಯ್ಕೆಯಾಗಿದ್ದರು. ರಾಜೀವ್ ಗಾಂಧಿ ಹತ್ಯೆಯ ತರುವಾಯ ರಾಜಕೀಯವನ್ನು ತೊರೆದಿದ್ದರು.
ಅವರಿಗೆ ಮಹೇಶ್ ಬಾಬು, ಪದ್ಮಾವತಿ, ಮಂಜುಳಾ, ಪ್ರಿಯದರ್ಶಿನಿ ಎಂಬ ನಾಲ್ವರು ಮಕ್ಕಳಿದ್ದಾರೆ. ಅವರ ಪತ್ನಿ ಇಂದಿರಾ ದೇವಿ ಇದೇ ವರ್ಷ ಸೆಪ್ಟೆಂಬರ್‌ನಲ್ಲಿ, ಮೊದಲ ಮಗ ರಮೇಶ್ ಬಾಬು ಇದೇ ಜನವರಿಯಲ್ಲಿ ಮೃತಪಟ್ಟಿದ್ದರು.