Site icon Vistara News

Amrita Pandey: ಭೋಜ್‌ಪುರಿ ಜನಪ್ರಿಯ ನಟಿ ಅಮೃತಾ ಪಾಂಡೆ ಆತ್ಮಹತ್ಯೆ; ಸಾವಿಗೆ ಮುನ್ನ ಬರೆದ ವಾಟ್ಸಾಪ್ ಸ್ಟೇಟಸ್‌ನಲ್ಲಿ ಏನಿದೆ?

Amrita Pandey

Amrita Pandey

ಪಟ್ನಾ: ಭೋಜ್‌ಪುರಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ ಅಮೃತಾ ಪಾಂಡೆ (Amrita Pandey) ಶನಿವಾರ ಬಿಹಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಗಲ್ಪುರದ ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವ ಪತ್ತೆಯಾಗಿದೆ. ಜೋಗ್ಸರ್ ಪೊಲೀಸ್ ಠಾಣೆ ವ್ಯಾಪ್ತಿಯ ದಿವ್ಯಧರ್ಮ ಅಪಾರ್ಟ್‌ಮೆಂಟ್‌ನಲ್ಲಿ ಸೀಲಿಂಗ್‌ ಫ್ಯಾನ್‌ಗೆ ಕಟ್ಟಿದ ಸೀರೆಯಲ್ಲಿ ನೇಣು ಬಿಗಿದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ ಎಂದು ಮೂಲಗಳು ಹೇಳಿವೆ. ಆದರೆ ಆತ್ಮಹತ್ಯೆಗೆ ಮುನ್ನ ಅವರು ವಾಟ್ಸಾಪ್‌ನ ಸ್ಟೇಟಸ್‌ನಲ್ಲಿ ಕೆಲವೊಂದು ವಿಚಾರಗಳನ್ನು ತಿಳಿಸಿದ್ದರು ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ಅಮೃತಾ ಪಾಂಡೆ ಅವರು ತಮ್ಮ ಪತಿಯೊಂದಿಗೆ ಮುಂಬೈಯಲ್ಲಿ ವಾಸವಾಗಿದ್ದಾರೆ. ಕೆಲವು ದಿನಗಳ ಹಿಂದೆ ಸಂಬಂಧಿಕರೊಬ್ಬರು ವಿವಾಹ ಸಮಾರಂಭದಲ್ಲಿ ಭಾಗಿಯಾಗಲು ಅವರು ಬಿಹಾರದ ಭಾಗಲ್ಪುರಕ್ಕೆ ಆಗಮಿಸಿದ್ದರು. ಬಳಿಕ ಕೆಲವು ದಿನ ಇಲ್ಲಿಯೇ ಉಳಿಯಲು ನಿರ್ಧರಿಸಿದ್ದರು. ಶನಿವಾರ ತಡರಾತ್ರಿಯವರೆಗೆ ಎಚ್ಚರವಾಗಿದ್ದ ಅವರು ತನ್ನ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ರಹಸ್ಯ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದರು. ಸದ್ಯ ಅಧಿಕಾರಿಗಳು ಇದರ ಸುತ್ತ ತನಿಖೆ ನಡೆಸಲು ಮುಂದಾಗಿದ್ದಾರೆ.

ಸ್ಟೇಟಸ್‌ನಲ್ಲಿ ಏನಿತ್ತು?

ಸ್ಟೇಟಸ್‌ನಲ್ಲಿ ಅವರು ಏನು ಬರೆದಿದ್ದರು ಎನ್ನುವ ವಿಚಾರವೇ ಸದ್ಯ ಕುತೂಹಲ ಕೆರಳಿಸಿದೆ. ಅದರಲ್ಲಿ ಅವರು, ‘ಅವಳ ಜೀವನ 2 ದೋಣಿಗಳಲ್ಲಿ ಸಾಗುತ್ತಿದೆ. ನನ್ನ ಜೀವನವನ್ನು ಕೊನೆಗೊಳಿಸುವ ಮೂಲಕ ನಾನು ಅವಳ ದಾರಿಯನ್ನು ಸುಗಮಗೊಳಿಸುತ್ತೇನೆʼ ಎಂದು ಬರೆದುಕೊಂಡಿದ್ದರು. ಹೀಗಾಗಿ ಅಮೃತಾ ಪಾಂಡೆ ಅವರ ಸ್ಟೇಟಸ್‌ ಹಲವು ಅನುಮಾನಕ್ಕೆ ಕಾರಣವಾಗಿದೆ. ಪತಿಯ ಇನ್ನೊಂದು ಸಂಬಂಧದಿಂದ ಮನನೊಂದು ಅಮೃತಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಮಾತೂ ಕೇಳಿ ಬಂದಿದೆ.

ಜನಪ್ರಿಯ ನಟಿ

ಅಮೃತಾ ಪಾಂಡೆ ಭೋಜ್‌ಪುರಿ ಚಿತ್ರಗಳಲ್ಲದೆ ಹಲವು ಹಿಂದಿ ಸಿನಿಮಾ, ವೆಬ್‌ಸೀರಿಸ್‌, ಕಿರುತೆರೆ ಶೋಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲಿ ಕೆಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಮೃತಾ ನಟನೆಯ ಹಾರರ್ ವೆಬ್ ಸೀರಿಸ್‌ ‘ಪ್ರತಿಶೋದ’ದ ಮೊದಲ ಸಂಚಿಕೆ ಇತ್ತೀಚೆಗೆ ಬಿಡುಗಡೆಯಾಗಿದೆ.

ಖಿನ್ನತೆ ಕಾರಣ?

ಕುಟುಂಬದ ಮೂಲಗಳ ಪ್ರಕಾರ ಅಮೃತಾ ತಮ್ಮ ವೃತ್ತಿ ಜೀವನದ ಬಗ್ಗೆ ಚಿಂತಿತರಾಗಿದ್ದರು ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ. ಅಮೃತಾ ಅವರು 2022ರಲ್ಲಿ ಛತ್ತೀಸ್‌ಗಢದ ಬಿಲಾಸ್‌ಪುರ ಮೂಲದ ಪ್ರಸ್ತುತ ಮುಂಬೈಯಲ್ಲಿ ವಾಸವಾಗಿರುವ ಚಂದ್ರಮಣಿ ಜಂಗದ್ ಅವರನ್ನು ವಿವಾಹವಾಗಿದ್ದರು. ಚಂದ್ರಮಣಿ ಮುಂಬೈಯಲ್ಲಿ ಅನಿಮೇಷನ್ ಎಂಜಿನಿಯರ್ ಆಗಿದ್ದಾರೆ. ಈ ದಂಪತಿಗೆ ಇನ್ನೂ ಮಕ್ಕಳಾಗಿರಲಿಲ್ಲ.

ಇದನ್ನೂ ಓದಿ: Brijesh Tripathi: ಭೋಜ್‌ಪುರಿ ಜನಪ್ರಿಯ ನಟ ಬ್ರಿಜೇಶ್ ತ್ರಿಪಾಠಿ ಇನ್ನಿಲ್ಲ

ಮೊದಲು ನೋಡಿದ್ದು ಸಹೋದರಿ

ಅಮೃತಾ ಅವರ ಮೃತದೇಹವನ್ನು ಮೊದಲು ನೋಡಿದ್ದು ಸಹೋದರಿ ಎಂದು ಪೊಲೀಸರು ತಿಳಿಸಿದ್ದಾರೆ. ಸಹೋದರಿ ಅಪರಾಹ್ನ 3.30ರ ಸುಮಾರಿಗೆ ಅಮೃತಾ ಅವರ ಕೋಣೆಗೆ ಹೋಗಿದ್ದರು. ಈ ವೇಳೆ ಅಮೃತಾ ಅವರ ದೇಹ ನೇತಾಡಿಕೊಂಡಿತ್ತು. ಕೂಡಲೇ ಸೀರೆಯನ್ನು ಕತ್ತರಿಸಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Exit mobile version