Site icon Vistara News

BBK Season 10: ಎರಡು ವರ್ಷಗಳ ಹಿಂದೆಯೇ ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ವಿವಾಹ! ಸಹೋದರ ಹೇಳಿದ್ದೇನು?

santhosh

santhosh

ಬೆಂಗಳೂರು: ವರ್ತೂರು ಸಂತೋಷ್‌ ಕಾರಣದಿಂದ ಕನ್ನಡ ಬಿಗ್‌ ಬಾಸ್‌ ಸೀಸನ್‌ 10(BBK Season 10) ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಬಿಗ್‌ ಬಾಸ್‌ ಮನೆಯಿಂದಲೇ ಬಂಧನಕ್ಕೆ ಒಳಗಾಗಿದ್ದ ಅವರು ಬಳಿಕ ಸ್ಪರ್ಧೆ ಮುಂದುವರಿಸಿದ್ದರು. ಬಳಿಕ ಶೋ ಬಿಟ್ಟು ಮಧ್ಯದಿಂದಲೇ ಹೊರ ಹೋಗುವುದಾಗಿ ಹೇಳಿ ಸುದ್ದಿಯಾಗಿದ್ದರು. ಅವರಿಗೆ 2 ವರ್ಷಗಳ ಹಿಂದೆಯೇ ಮದುವೆಯಾಗಿದೆ ಎನ್ನುವ ವಿಚಾರ ಇದೀಗ ಮುನ್ನಲೆಗೆ ಬಂದಿದೆ.

ಈಗಾಗಲೇ ಮದುವೆಯಾಗಿರುವ ವರ್ತೂರು ಸಂತೋಷ್ ಅವರಿಗೆ ಹೆಣ್ಣು ಮಗುವಿದೆ ಎನ್ನುವ ವಿಚಾರವೇ ಚರ್ಚೆಯಾಗುತ್ತಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವರ್ತೂರು ಸಂತೋಷ್ ಅವರದ್ದು ಎನ್ನಲಾದ ಮದುವೆಯ ಫೋಟೊ, ವಿಡಿಯೊ ಹರಿದಾಡುತ್ತಿದೆ.

2 ವರ್ಷಗಳ ಹಿಂದೆಯೇ ವರ್ತೂರು ಸಂತೋಷ್ ಅವರಿಗೆ ಮದುವೆ ಆಗಿದೆ. ಎಸ್‌.ಜಯಶ್ರೀ ಎಂಬುವರನ್ನ ವರ್ತೂರು ಸಂತೋಷ್ ವರಿಸಿದ್ದಾರೆ. ಅವರಿಗೆ ಮಗುವೂ ಇದೆ. ಬಳಿಕ ಮನಸ್ತಾಪ ಎದುರಾಗಿ ಪತಿ-ಪತ್ನಿ ದೂರವಾಗಿದ್ದಾರೆ ಎನ್ನಲಾಗುತ್ತಿದೆ.

ಸಹೋದರ ಹೇಳಿದ್ದೇನು?

ಇದೀಗ ಸಂತೋಷ್ ಸಹೋದರ ಈ ಬಗ್ಗೆ ಮಾತನಾಡಿದ್ದು, ಸಂತೋಷ್ ಅವರಿಗೆ ಮದುವೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮದುವೆಯಾಗಿ ಸುಮಾರು ಎರಡು ವರ್ಷ ಆಗಿದೆ ಎಂದ ವರ್ತೂರು ಸಹೋದರ ಮಧು ಹೇಳಿದ್ದಾರೆ. ಜಯಶ್ರೀ ಗರ್ಭಿಣಿಯಾಗಿದ್ದಾಗಲೇ ತವರಿಗೆ ತೆರಳಿದ್ದಾರೆ. ತವರು ಮನೆಯವರೇ ಅವರನ್ನು ವಾಪಸ್ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ತನಿಷಾ ಜತೆ ಆತ್ಮೀಯತೆ

ಸದ್ಯ ಬಿಗ್‌ ಬಾಸ್‌ ಮನೆಯೊಳಗೆ ವರ್ತೂರು ಸಂತೋಷ್‌ ತಮ್ಮ ಸ್ಪರ್ಧಿ ತನಿಷಾ ಕುಪ್ಪಂಡ ಜತೆ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ಇಬ್ಬರ ಮಧ್ಯೆ ಗೆಳತನಕ್ಕಿಂತ ವಿಶೇಷವಾದುದು ಏನೋ ಇದೆ ಎಂದು ಇತರ ಸ್ಪರ್ಧಿಗಳು ರೇಗಿಸುತ್ತಿದ್ದಾರೆ. ಜತೆಗೆ ವೀಕ್ಷಕರಿಗೂ ಅದೇ ರೀತಿಯ ಅನುಮಾನವೂ ಮೂಡುತ್ತಿದೆ. ಇದೆಲ್ಲದರ ಮಧ್ಯೆ ಮದುವೆ ವಿಚಾರವೂ ಸದ್ದು ಮಾಡತೊಡಗಿದೆ.

ಮದುವೆಯ ಬಗ್ಗೆ ಹೇಳಿದ್ದ ರಕ್ಷಕ್‌

ಈ ಮಧ್ಯೆ ಎಲಿಮಿನೇಟ್‌ ಆಗಿ ಹೊರ ಬಂದ ರಕ್ಷಕ್‌ ಅವರ ಮಾತು ಕೂಡ ಅನುಮಾನ, ಗೊಂದಲ ಹೆಚ್ಚಿಸಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಕ್ಷಕ್‌,  ʼʼಹೊರಗಡೆ ವರ್ತೂರು ಸಂತೋಷ್ ಅವರಿಗಾಗಿ ಹುಡುಗಿಯೊಬ್ಬರು ಕಾಯುತ್ತಿದ್ದಾರೆ. ‘ಬಿಗ್ ಬಾಸ್‌’ ಮನೆಯಿಂದ ಹೊರಗೆ ಬಂದಮೇಲೆ ವರ್ತೂರು ಸಂತೋಷ್ ಜತೆ ಅವರ ನಿಶ್ಚಿತಾರ್ಥ ನಡೆಯಲಿದೆ. ತಮಾಷೆಗಾಗಿ ವರ್ತೂರು ಸಂತೋಷ್ ಮತ್ತು ತನಿಷಾ ಅವರನ್ನ ರೇಗಿಸುತ್ತಿದ್ವಿ. ವರ್ತೂರು ಸಂತೋಷ್ – ತನಿಷಾ ಮಧ್ಯೆ ಏನೂ ಇಲ್ಲ’’ ಎಂದಿದ್ದರು. ಆದರೆ ಆ ಹುಡುಗಿ ಯಾರು ಎಂಬುದನ್ನು ಅವರು ಬಹಿರಂಗ ಪಡಿಸಿರಲಿಲ್ಲ.

ಇದನ್ನೂ ಓದಿ: BBK Season 10: ಬಿಗ್‌ಬಾಸ್‌ ಮನೆಯಲ್ಲಿ ಉಳಿಯಲು ನಿರ್ಧರಿಸಿದ ವರ್ತೂರು; ತೀರ್ಮಾನ ಬದಲಾಗಿದ್ದು ಹೇಗೆ?

ಸ್ಪರ್ಧೆ ಮುಂದುವರಿಸಲು ಒಪ್ಪಿದ ವರ್ತೂರು ಸಂತೋಷ್‌

ಇತ್ತೀಚೆಗೆ ವರ್ತೂರು ಸಂತೋಷ್‌ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗುವುದಾಗಿ ಹೇಳಿದ್ದರು. ಹುಲಿ ಉಗುರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಅವರು, ʻʻಮನೆಯಲ್ಲಿ ಇರಲು ಕಷ್ಟವಾಗುತ್ತಿದೆ. ಹೊರಗಡೆ ಒಂದು ಘಟನೆ ನಡೆಯಿತು. ನಾನು ಆ ಗುಂಗಿನಿಂದ ಹೊರಗೆ ಬಂದು ಆಡಬೇಕು ಅಂದರೂ ಕೂಡ ನನಗೆ ಆಗುತ್ತಿಲ್ಲ. ನಾನು ಹೊರ ಹೋಗಲು ಇಷ್ಟ ಪಡುತ್ತೇನೆʼʼ ಎಂದು ಹೇಳಿದ್ದರು. ಆದರೆ ಸುದೀಪ್‌ ಇದಕ್ಕೆ ಅವಕಾಶ ನೀಡಿರಲಿಲ್ಲ. ಸಹ ಸ್ಪರ್ಧಿಗಳು ಆಟ ಮುಂದುವರಿಸುವಂತೆ ಆಗ್ರಹಿಸಿದ್ದರು. ಅಲ್ಲದೆ ವರ್ತೂರು ಅವರ ತಾಯಿ ಸ್ವತಃ ಬಿಗ್‌ ಬಾಸ್‌ ಮನೆಗೆ ಬಂದು ಮಗನ ಮನವೊಲಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version