ಮುಂಬೈ: ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಿವಾಸದ ಎದುರು ಗುಂಡಿನ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರನೇ ಆರೋಪಿಯನ್ನು ಹರಿಯಾಣದಲ್ಲಿ ಬಂಧಿಸಲಾಗಿದೆ. ತನಿಖೆ ನಡೆಸುತ್ತಿರುವ ಮುಂಬೈ ಕ್ರೈಂ ಬ್ರ್ಯಾಂಚ್ ಹರಿಯಾಣದ ಫತೇಹಾಬಾದ್ನಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯನಾದ ಆರನೇ ಆರೋಪಿಯನ್ನು ಬಂಧಿಸಿದೆ. ಬಂಧಿತ ಆರೋಪಿಯನ್ನು 37 ವರ್ಷದ ಹರ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ʼʼಹರ್ಪಾಲ್ ಸಿಂಗ್ನನ್ನು ಆತನ ಊರಾದ ಫತೇಹಾಬಾದ್ನಿಂದ ಬಂಧಿಸಲಾಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್ನ ಅಧಿಕಾರಿಗಳ ತಂಡ ಸೋಮವಾರ ರಾತ್ರಿ ಆಗಮಿಸಿದ ಆತನನ್ನು ವಶಕ್ಕೆ ಪಡೆದುಕೊಂಡಿದೆʼʼ ಎಂದು ಮೂಲಗಳು ತಿಳಿಸಿವೆ. ಹರ್ಪಾಲ್ ಸಿಂಗ್ನನ್ನು ಮಂಗಳವಾರ ಬೆಳಿಗ್ಗೆ ಮುಂಬೈಗೆ ಕರೆತರಲಾಗಿದ್ದು, ನಂತರ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ 6 ಮಂದಿಯನ್ನು ಬಂಧಿಸಿದಂತಾಗಿದೆ.
ಈ ಹಿಂದೆ ಆರಂಭದಲ್ಲಿ ಪೊಲೀಸರು ಪಂಜಾಬ್ ಮೂಲದ ಇಬ್ಬರನ್ನು ಬಂಧಿಸಿದ್ದರು. ಬಳಿಕ ಗುಜರಾತ್ನಿಂದ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ರಾಜಸ್ಥಾನದ ಓರ್ವ ಬಲೆಗೆ ಬಿದ್ದಿದ್ದ.
Salman Khan residence firing case | Mumbai Crime Branch arrested the sixth accused, Harpal Singh (37) in this case from Fatehabad, Haryana. The accused Harpal Singh had financed the fifth accused Mohammad Rafiq Chaudhary arrested in this case and had also given instructions to…
— ANI (@ANI) May 14, 2024
ಏನಿದು ಪ್ರಕರಣ?
ಎಪ್ರಿಲ್ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬೈಕ್ನಲ್ಲಿ ಬಂದು ದಾಳಿ ನಡೆಸಿದ್ದ ಶೂಟರ್ಗಳಾದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳನ್ನು ಬಳಿಕ ಅರೆಸ್ಟ್ ಮಾಡಲಾಗಿತ್ತು. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದರು.
ಈ ಮಧ್ಯೆ ಗುಂಡಿನ ದಾಳಿ ನಡೆಸಿದ್ದ ಶೂಟರ್ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಅನೂಜ್ ಥಾಪನ್ ಕೆಲವು ದಿನಗಳ ಹಿಂದೆ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ. ಅನುಜ್ ಥಾಪನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆತನ ಕುಟುಂಬ ಇದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಲಾಕಪ್ನಲ್ಲಿ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರೆ ಆತನ ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು.
ಕಾರಣವೇನು?
ಹಲವು ವರ್ಷಗಳ ಹಿಂದಿನ ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಅವರನ್ನು ಕೊಲ್ಲುವುದಾಗಿ 2018 ರಲ್ಲಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್ನ ಬಿಷ್ಣೋಯ್ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಎಬಿಪಿ ನ್ಯೂಸ್ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿ. ಸಲ್ಮಾನ್ ಅವರು ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆʼʼ ಎಂದು ಹೇಳಿದ್ದ.
ಇದನ್ನೂ ಓದಿ: Salman Khan : ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ; ಪಂಜಾಬ್ನಲ್ಲಿ ಗನ್ ಕೊಟ್ಟವರಿಬ್ಬರ ಬಂಧನ