Site icon Vistara News

Explainer: Johnny Depp Amber Heard- ಹಾಲಿವುಡ್‌ನ ಮುದ್ದಾದ ಜೋಡಿ ಅತಿದೊಡ್ಡ ವೈರಿಗಳಾದ ಕತೆ

Johnny Depp Amber Heard

ಖ್ಯಾತ ಹಾಲಿವುಡ್‌ ನಟ ಜಾನಿ ಡೆಪ್‌ ಮತ್ತು ಅವರ ಮಾಜಿ ಪತ್ನಿ ಆ್ಯಂಬರ್‌ ಹರ್ಡ್‌ ನಡುವಿನ ಬಹು ಚರ್ಚಿತ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಡೆಪ್‌ ಅವರಿಗೆ ಗೆಲುವಾಗಿದೆ. ತಾನೂ ಕೌಟುಂಬಿಕ ದೌರ್ಜನ್ಯ ಅನುಭವಿಸಿದ್ದಾಗಿ ಆ್ಯಂಬರ್‌ ಹರ್ಡ್‌ ಅವರು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ 2018ರಲ್ಲಿ ಬರೆದ ಲೇಖನದಿಂದ ಹುಟ್ಟಿದ ವಿವಾದ ಇದೀಗ ನಾಲ್ಕು ವರ್ಷಗಳ ಬಳಿಕ ಇತ್ಯರ್ಥ ಕಂಡಿದೆ. ವರ್ಜೀನಿಯಾದ ಫೈರ್‌ಫಾಕ್ಸ್‌ನಲ್ಲಿರುವ ನ್ಯಾಯಾಲಯ ಜಾನಿ ಡೆಪ್‌ಅವರಿಗೆ 15 ಮಿಲಿಯನ್‌ ಅಮೆರಿಕನ್‌ ಡಾಲರ್‌(ಸುಮಾರು 116 ಕೋಟಿ ರೂ.) ಪರಿಹಾರ ಧನ ನೀಡುವಂತೆ ಹರ್ಡ್‌ ಅವರಿಗೆ ಸೂಚಿಸಿದೆ. ಇದೇ ವೇಳೆ, ಪತ್ರಿಕೆಯಲ್ಲಿ ಬರೆದಿರುವ ವಿಚಾರಗಳೆಲ್ಲ ಸುಳ್ಳು ಎಂದು ಪ್ರತಿವಾದ ಮಾಡಿದ್ದನ್ನು ಪ್ರಶ್ನಿಸಿ ಆ್ಯಂಬರ್‌ ಹರ್ಡ್‌ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಹರ್ಡ್‌ಅವರಿಗೂ ಗೆಲುವಾಗಿದೆ. ಡೆಪ್‌ ಅವರು 2 ಮಿಲಿಯನ್‌ಅಮೆರಿಕನ್‌(15 ಕೋಟಿ ರೂ.) ಡಾಲರ್‌ ಪರಿಹಾರವನ್ನು ಹರ್ಡ್‌ಗೆ ನೀಡಬೇಕು ಎಂದು ಕೋರ್ಟ್‌ ಆದೇಶಿಸಿದೆ.

ಇವರ ನಡುವಿನ ಈ ವ್ಯಾಜ್ಯ ಹೇಗೆ ಆರಂಭವಾಯ್ತು? ಅದಕ್ಕೂ ಮೊದಲು, ಇವರು ಭೇಟಿಯಾದದ್ದು ಯಾವಾಗ, ಮದುವೆಯಾದದ್ದು ಎಂದು, ಬೇರೆಯಾದದ್ದು ಯಾಕೆ? ಅವರ ನಡುವೆ ಯಾಕೆ ಜಗಳ ನಡೀತಿತ್ತು?

ಯಾರು ಈ ಜಾನಿ ಡೆಪ್‌?

ಹಾಲಿವುಡ್‌ ನಟ ಜಾನ್‌ ಕ್ರಿಸ್ಟೋಫರ್‌ ಡೆಪ್‌ಗೆ ಈಗ 59 ವರ್ಷ. ಡೆಪ್‌ ನಟ ಮಾತ್ರವಲ್ಲ, ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕರೂ ಹೌದು. ʼನೈಟ್‌ಮೇರ್‌ ಆನ್‌ ಎಲ್ಮ್‌ ಸ್ಟ್ರೀಟ್‌ʼ ಎಂಬ ಹಾರರ್‌ ಸಿನಿಮಾದೊಂದಿಗೆ 1984ರಲ್ಲಿ ಅವರು ಚಿತ್ರರಂಗ ಪ್ರವೇಶಿಸಿದರು. 2012ರ ಹೊತ್ತಿಗೆ ಜಗತ್ತಿನ ಅತಿ ದೊಡ್ಡ ಸಿನಿಮಾ ತಾರೆಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಅವರನ್ನು ಗಿನ್ನೆಸ್‌ ದಾಖಲೆ ಗುರುತಿಸಿತ್ತು. ಒಟ್ಟಾರೆ 36 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇವರು ನಟಿಸಿರುವ ʼಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ʼ ಸೀರೀಸ್‌ ಜಗದ್ವಿಖ್ಯಾತವಾಗಿದೆ. ಬಾಕ್ಸಾಫೀಸ್‌ನಲ್ಲಿ ಸಾಕಷ್ಟು ಗಳಿಕೆ ಮಾಡಿದೆ. ಇದರಲ್ಲಿ ಡೆಪ್‌ ಮಾಡಿದ ಕಡಲುಗಳ್ಳ ಭೂತದ ಪಾತ್ರ ಮಕ್ಕಳಿಗೂ ಚಿರಪರಿಚಿತ.

ಯಾರೀಕೆ ಆಂಬರ್‌ ಹರ್ಡ್‌?

ಆ್ಯಂಬರ್‌ ಹರ್ಡ್‌ ಕೂಡಾ ಉತ್ತಮ ನಟಿ. ಈಕೆ ‘ಜಸ್ಟಿಸ್‌ ಲೀಗ್‌ʼ ಮತ್ತು ʼಗೋನ್‌ ಗರ್ಲ್‌ʼ ಫಿಲಂನ ಲೀಡ್‌ ಕ್ಯಾರೆಕ್ಟರ್‌ ಆಗಿ ಹೆಸರು ಮಾಡಿದವಳು. ರನ್‌ ಡೈರಿ, ಪೈನಾಪಲ್‌ ಎಕ್ಸ್‌ಪ್ರೆಸ್‌, ಝೋಂಬಿಲ್ಯಾಂಡ್‌, ಆಕ್ವಾಮ್ಯಾನ್ ಮೊದಲಾದ ಫಿಲಂಗಳಲ್ಲಿ ನಟಿಸಿದ್ದಾಳೆ. ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಇತಿಹಾಸವನ್ನೂ ಹೊಂದಿದ್ದಾಳೆ. ಸಿರಿಯಾದ ನಿರಾಶ್ರಿತರ ಪರವಾಗಿ ಕೆಲಸ ಮಾಡಿದ್ದಾಳೆ, ಮಾನವ ಹಕ್ಕುಗಳ ಸಂಘಟನೆಗಳಲ್ಲಿ ಸಕ್ರಿಯಳಾಗಿದ್ದಾಳೆ. ನಂತರ ಒಂದು ಹೆಣ್ಣು ಮಗುವನ್ನೂ ಸರೊಗಸಿ ಮೂಲಕ ಪಡೆದಿದ್ದಾಳೆ.

ಇವರಿಬ್ಬರೂ ಜೋಡಿ ಆಗೋಕೆ ಮುನ್ನವೇ ಹಲವಾರು ಡೇಟಿಂಗ್‌, ಪ್ರೇಮ ಪ್ರಕರಣಗಳು ಇವರ ಬದುಕಿನಲ್ಲಿ ನಡೆದಿದ್ದವು. ಲಾರಿ ಆನ್‌ ಅಲಿಸನ್‌ ಎಂಬ ಮೇಕ ಪ್‌ಕಲಾವಿದೆಯನ್ನು ಜಾನಿ ಡೆಪ್‌ ಮದುವೆಯಾಗಿ ಎರಡು ವರ್ಷದ ಬಳಿಕ ವಿಚ್ಛೇದನ ಪಡೆದಿದ್ದ. ನಂತರ ಮೂರ್ನಾಲ್ಕು ನಟಿಯರ ಜೊತೆ ಡೇಟಿಂಗ್‌, ಪ್ರಣಯ ಇತ್ಯಾದಿಗಳನ್ನು ನಡೆಸಿ ವೆನೆಸ್ಸಾ ಪ್ಯಾರಾಡಿಸ್‌ ಎಂಬ ನಟಿಯನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದ. 2012ರಲ್ಲಿ ಈಕೆಯಿಂದ ಡೈವೋರ್ಸ್‌ ಪಡೆದ. ಆ ಹೊತ್ತಿಗಾಗಲೇ ಅವನ ಬದುಕಿನಲ್ಲಿ ಆಂಬರ್‌ ಹರ್ಡ್‌ ಪ್ರವೇಶಿಸಿದ್ದಳು.

ಆ ನಟಿಗೆ ಹುಡುಗಿಯರ ಸಹವಾಸವೂ ಇತ್ತು!

ಅತ್ತ ಆಂಬರ್‌ ಹರ್ಡ್‌ಗೂ ಜಾನಿ ಡೆಪ್‌ ಮೊದಲ ಸಂಗಾತಿಯೇನಲ್ಲ. ಇಲ್ಲಿ ತಿಳಿಯಲೇಬೇಕಾದ ವಿಚಾರ ಅಂದರೆ, ಆಂಬರ್‌ ಹರ್ಡ್‌ ಬೈಸೆಕ್ಷುವಲ್‌ ವ್ಯಕ್ತಿ. ಅಂದರೆ ಗಂಡಿನ ಜೊತೆಗೂ ಹೆಣ್ಣಿನ ಜೊತೆಗೂ ಸಮಾನವಾಗಿ ದೈಹಿಕ ಸಂಬಂಧ ಹೊಂದುವ ವ್ಯಕ್ತಿಗಳು. ಆಂಬರ್‌ ಹರ್ಡ್‌, ತಾಸ್ಯಾ ವಾನ್‌ರೀ ಎಂಬ ಛಾಯಾಗ್ರಾಹಕಿಯ ಜೊತೆಗೆ ನಾಲ್ಕು ವರ್ಷ ಸಂಬಂಧ ಹೊಂದಿದ್ದಳು. ಡೆಪ್‌ ಜೊತೆಗೆ ವಿವಾಹ ವಿಚ್ಛೇದನ ಪಡೆದ ನಂತರವೂ ಕಾರಾ ಡೆಲೆವಿನೆ ಎಂಬ ನಟಿ ಹಾಗೂ ಮಾಡೆಲ್‌ ಜೊತೆಗೂ ದೈಹಿಕ ಸಂಬಂಧ ಹೊಂದಿದ್ದಳು. ಇವರಿಬ್ಬರ ನಡುವೆ ಆಕೆ ದಾಂಪತ್ಯ ನಡೆಸಿದ್ದು ಜಾನಿ ಡೆಪ್‌ನ ಜಿೊತೆಗೆ.

ಜಾನಿ ಡೆಪ್- ‌ಹರ್ಡ್‌ ಜೋಡಿಯಾದುದು ಹೇಗೆ?

ಜಾನಿ ಡೆಪ್‌ ಮತ್ತು ಆಂಬರ್‌ ಹರ್ಡ್‌ರ ರೊಮ್ಯಾನ್ಸ್‌ ಶುರುವಾದುದು 2009ರಲ್ಲಿ. ʼದಿ ರನ್‌ ಡೈರಿʼ ಇವರಿಬ್ಬರೂ ಜೊತೆಯಾಗಿ ನಟಿಸಿದರು. ಡೆಪ್‌ ನಾಯಕ, ಹರ್ಡ್‌ ನಾಯಕಿಯಾಗಿ ನಟಿಸಿದ ಈ ಫಿಲಂ ಶೂಟಿಂಗ್‌ ಸೆಟ್‌ನಿಂದಲೇ ಇವರ ರೊಮ್ಯಾನ್ಸ್‌ ಶುರುವಾಯಿತು. ಶವರ್‌ನಲ್ಲಿ ನಿಂತುಕೊಂಡು ಕಿಸ್‌ ಮಾಡುವ ಸೀನ್‌ ಅದರಲ್ಲಿತ್ತು. ಆಗಲೇ ಅವರಿಬ್ಬರಿಗೂ ಓಹೋ ನಮ್ಮಿಬ್ಬರ ನಡುವೆ ಏನೋ ಇದೆ ಅನ್ನಿಸಲು ಶುರುವಾದದ್ದು. ʼʼಹರ್ಡ್‌ ನನ್ನ ಬಗ್ಗೆ ಕಾಳಜಿ ವಹಿಸುತ್ತಾಳೆ, ಪ್ರೀತಿಸುತ್ತಾಳೆ. ಅವಳು ಸ್ಮಾರ್ಟ್‌, ಫನ್ನಿ, ಅರ್ಥ ಮಾಡಿಕೊಳ್ಳುತ್ತಾಳೆ. ನಮ್ಮಿಬ್ಬರ ನಡುವೆ ತುಂಬಾ ಸಂಗತಿಗಳು ಕಾಮನ್‌ ಆಗಿವೆ..ʼʼ ಎಂದೆಲ್ಲ ಆಕೆಯ ಬಗೆಗೆ ಡೆಪ್‌ ಮಾತನಾಡಿದರು. ಎರಡು ವರ್ಷ ಇವರ ನಡುವೆ ಡೇಟಿಂಗ್‌ ನಡೆಯಿತು. ಈ ನಡುವೆ ತಮ್ಮ ಹಳೆಯ ಸಂಗಾತಿಗಳಿಂದ ಅವರು ಡೈವೋರ್ಸ್‌ ಪಡೆದರು. 2014ರಲ್ಲಿ ಡೆಪ್-‌ಹರ್ಡ್‌ ಮದುವೆಯಾದರು. ಲಾಸ್‌ಏಂಜಲೀಸ್‌ನಲ್ಲಿ ಹಾಗೂ ನಂತರ ಜಾನಿ ಡೆಪ್‌ನ ಖಾಸಗಿ ದ್ವೀಪವೊಂದರಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮಗಳು ನಡೆದವು.

ಹಳಸಲು ಶುರುವಾದ ದಾಂಪತ್ಯ

ಆದರೆ ಆರಂಭದಿಂದಲೇ ಈ ದಾಂಪತ್ಯದಲ್ಲಿ ಅಪಶ್ರುತಿ ಆರಂಭವಾಗಿತ್ತು. ಮದುವೆಯಾದ ಮೊದಲ ದಿನದಿಂದಲೇ ಇದು ಅರವಿಗೆ ಬಂದಿತ್ತು. ಮದುವೆಯಾದ ಕೆಲವೇ ಗಂಟೆಗಳ ಬಳಿಕ ʼʼನಾನೀಗ ಆಕೆಗೆ ಮನಸ್ಸಿಗೆ ಬಂದಂತೆ ಹೊಡೆಯಬಹುದುʼʼ ಎಂದು ತನ್ನ ಆಪ್ತನೊಬ್ಬನ ಬಳಿ ಡೆಪ್‌ ಹೇಳಿದ್ದು ದಾಖಲಾಗಿತ್ತು.

ಮದುವೆ ಆಗಿ ಕೆಲವೇ ವಾರಗಳಲ್ಲಿ ಒಂದು ದಿನ, ಡೆಪ್‌ಕೈಯಲ್ಲಿದ್ದ ಒಂದು ಟ್ಯಾಟೂ ಬಗ್ಗೆ ಹರ್ಡ್‌ ಕ್ಯಾಶುಯಲ್ಲಾಗಿ ಪ್ರಶ್ನಿಸಿದಳು. ಆಗ ಕೋಪಗೊಂಡ ಡೆಪ್‌ ಮೊದಲ ಬಾರಿಗೆ ಆಕೆಯ ಕಪಾಲಕ್ಕೆ ಬಾರಿಸಿದ. ಹರ್ಡ್‌ಶಾಕ್‌ಗೆ ಒಳಗಾದಳು. ಅಂದಿನಿಂದಲೇ ಅವರಿಬ್ಬರ ಬದುಕಿನ ರೈಲಿನ ಹಳಿ ತಪ್ಪಿತು. 2016ರ ಮೇ ತಿಂಗಳಲ್ಲಿ ಹರ್ಡ್‌ ಪೊಲೀಸ್‌ ಠಾಣೆಗೆ ಧಾವಿಸಿ, ಡೆಪ್‌ ತನ್ನ ಮುಖಕ್ಕೆ ಫೋನ್‌ ಅನ್ನು ಎಸೆದದ್ದರಿಂದ ಉಂಟಾದ ಕಲೆಯನ್ನು ತೋರಿಸಿ, ಡೆಪ್‌ ವಿರುದ್ಧ ನಿರ್ಬಂಧ ಆರ್ಡರ್‌ ತೆಗೆದುಕೊಂಡಳು. ಇಬ್ಬರೂ ರಾಜಿ ಆಗೋಕೆ ಪ್ರಯತ್ನ ಮಾಡಿದರು. ಆದರೆ ಅವರ ಸಂಬಂಧ ಆಮೇಲೆ ಸರಿಯಾಗಲೇ ಇಲ್ಲ.

ಇನ್ನು ಮುಂದೆ ತಮ್ಮಿಂದ ಜೊತೆಯಾಗಿ ಬಾಳೋಕೆ ಸಾಧ್ಯವಿಲ್ಲ ಎಂದು 2017ರಲ್ಲಿ ಇಬ್ಬರೂ ಡೈವೋರ್ಸ್‌ ಫೈಲ್‌ ಮಾಡಿದರು. ಆಗಲೇ, ಇವರಿಬ್ಬರ ದಾಂಪತ್ಯದಲ್ಲಿ ನಡೆದ ಹೀನಾತಿಹೀನ ಜಗಳಗಳ ವಿವರಗಳು ಹೊರಬಿದ್ದದ್ದು. ಇಬ್ಬರೂ ಆಲ್ಕೋಹಾಲ್‌ ಸೇವಿಸಿ, ಡ್ರಗ್ಸ್‌ ಸೇವಿಸಿ ಮೈಮರೆತು ಬಂದು ಕಿತ್ತಾಡಿಕೊಳ್ಳುತ್ತಿದ್ದರು. ನನ್ನ ಕೆರಿಯರ್‌ ನಾಶ ಮಾಡಿದೆ ನೀನು ಎಂದು ಪರಸ್ಪರ ತಲೆಕೂದಲು ಹಿಡಿದು ಬಡಿದಾಡಿಕೊಳ್ಳುತ್ತಿದ್ದರು. ಜಾನಿ ಡೆಪ್‌ ಬಿಯರ್‌ ಬಾಟಲ್‌ಗಳಿಂದ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ. ನಿನಗೆ ಇನ್ಯಾರ ಜೊತೆಗೋ ಸಂಬಂಧ ಇದೆ ಎಂದು ಸಂಶಯಿಸಿ ಆಕೆಯ ತಲೆಕೂದಲು ಹಿಡಿದು ಕೀಳುತ್ತಿದ್ದ. ಮುಖಮೈಥುನ ಮಾಡುವಂತೆ ಬಲಾತ್ಕರಿಸುತ್ತಿದ್ದ. ಕುಡಿದು ಚಿತ್‌ ಆದಾಗ, ಕೊಕೇನ್‌ ಸೇವಿಸಿ ಹೈ ಆದಾಗ, ಮನೆಯ ಸಾಮಗ್ರಿಗಳನ್ನು ಮುರಿದುಹಾಕುತ್ತಿದ್ದ.

ಇದು ಹೇಸಿಗೆ ಹಾಸಿಗೆ ಜಗಳ!

ಹರ್ಡ್‌ ಕೂಡಾ ಸುಮ್ಮನಿರ್ತಾ ಇರಲಿಲ್ಲ. ಡೆಪ್‌ನ ಹಿಂಸೆ ತಾಳಿಕೊಳ್ಳಲಾಗದೆ ಹೋದಾಗ ಪ್ರತಿದಾಳಿ ನಡೆಸುತ್ತಾ ಇದ್ದಳು. ಡೆಪ್‌ ಮಲಗುವ ಹಾಸಿಗೆಯಲ್ಲಿ ಹರ್ಡ್‌ ಮಲ ವಿಸರ್ಜನೆ ಮಾಡಿದ್ದೂ ಇತ್ತು! ಅಂದರೆ ಇವರಿಬ್ಬರ ನಡುವೆ ಯಾವ ಪರಿ ದ್ವೇಷ ಇತ್ತು ಎಂದು ನೀವು ಊಹಿಸಬಹುದು. ಇಬ್ಬರೂ ಡ್ರಗ್ಸ್‌ ಸೇವಿಸಿದಾಗ ಮನುಷ್ಯರಂತೆ ವರ್ತಿಸುತ್ತಲೇ ಇರಲಿಲ್ಲ. ಬದಲಾಗಿ ಮೃಗಗಳಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕೊನೆಗೂ ಎಂಟು ದಶಲಕ್ಷ ಡಾಲರ್‌ ಕೊಟ್ಟು ಡೆಪ್‌, ಹರ್ಡ್‌ಗೆ ಡೈವೋರ್ಸ್‌ ನೀಡಿ ಸೆಟಲ್‌ ಮಾಡಿಕೊಂಡ.

ಮತ್ತೆ ಕಿತ್ತಾಟ ಶುರುವಾದದ್ದು ಹೇಗೆ?

ಇಲ್ಲಿಗೆ ಒಂದು ಹಂತದ ಜಗಳ ಮುಗಿದಿತ್ತು. ಆದರೆ 2018ರಲ್ಲಿ ಆಂಬರ್‌ ಹರ್ಡ್‌ ʼವಾಷಿಂಗ್ಟನ್‌ಪೋಸ್ಟ್‌ʼ ಪತ್ರಿಕೆಯಲ್ಲಿ ಒಂದು ಲೇಖನ ಬರೆದಳು. ಅದರಲ್ಲಿ ʼʼನಾನು ಮನೆಯೊಳಗಿನ ಹಿಂಸೆಯ ಸಂತ್ರಸ್ತೆʼʼ ಎಂದು ಬರೆದುಕೊಂಡಳು. ತಾನು ಕೌಟುಂಬಿಕ ದೌರ್ಜನ್ಯಕ್ಕೊಳಗಾದವರನ್ನು ಪ್ರತಿನಿಧಿಸುವ ವ್ಯಕ್ತಿ ಎಂಬಂತೆ ಬಿಂಬಿಸಿದ್ದಳು. ಆದರೆ, ಜಾನಿ ಡೆಪ್ ಹೆಸರನ್ನು ಅವಳು ಆ ಲೇಖನದಲ್ಲಿ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಆದರೆ, ಅದು ಜಾನಿ ಡೆಪ್ ವಿರುದ್ಧ ಆ್ಯಂಬರ್‌ ಹರ್ಡ್ ಮಾಡಿದ ಆರೋಪ ಎಂದು ಯಾರಿಗಾದರೂ ಅರ್ಥವಾಗುವಂತಿತ್ತು. ಈ ಲೇಖನದಿಂದ ರೊಚ್ಚಿಗೆದ್ದ ಜಾನಿ ಡೆಪ್ ತನ್ನ ಮಾಜಿ ಪತ್ನಿ ವಿರುದ್ಧ 50 ಮಿಲಿಯನ್ ಯುಎಸ್ ಡಾಲರ್ (ಸುಮಾರು 388 ಕೋಟಿ ರೂ) ಮಾನನಷ್ಟ ಮೊಕದ್ದಮೆ ಹಾಕಿದರು. ಇದಕ್ಕೆ ಬದಲಾಗಿ ಆಂಬರ್ ಹರ್ಡ್ ಕೂಡ 100 ಮಿಲಿಯನ್ ಡಾಲರ್ (ಸುಮಾರು 775 ಕೋಟಿ ರೂ) ಮಾನನಷ್ಟ ಕೇಸ್ ಹೂಡಿದಳು. ತಾನು ಮಾಡಿದ ಆರೋಪ ಸುಳ್ಳು ಎಂದು ಜಾನಿ ಡೆಪ್ ವಕೀಲರು ಹೇಳಿದ್ದರಿಂದ ತನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಹೇಳಿ ಆಕೆ ಈ ಮಾನನಷ್ಟಕ್ಕೆ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು.

ಆ್ಯಂಬರ್‌ ಹರ್ಡ್‌ ಅವರು ಲೇಖನದಲ್ಲಿ ಜಾನಿ ಡೆಪ್‌ ಅವರ ಹೆಸರನ್ನು ಉಲ್ಲೇಖಿಸಿಲ್ಲವಾದರೂ ನಂತರ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ತಾನು ಮದುವೆಗೆ ಮೊದಲು ಮತ್ತು ನಂತರ ಅನುಭವಿಸಿದ ಎಲ್ಲ ಸಂಕಟಗಳನ್ನು, ಆಗಿರುವ ಗಾಯಗಳನ್ನು ತೋರಿಸಿದ್ದರು. ಇದೆಲ್ಲವೂ ಫೇರ್‌ಫಾಕ್ಸ್‌ ನ್ಯಾಯಾಲಯದಲ್ಲಿ ನಡೆದ ಆರು ವಾರಗಳ ವಿಚಾರಣೆ ಲೈವ್‌ ಆಗಿ ಜನರ ಮುಂದೆ ಬಂದಿತ್ತು. ಇವರಿಬ್ಬರ ವಿಚಾರಣೆಯ ಸಂದರ್ಭದಲ್ಲಿ ಹೊರಬಂದ ಒಂದೊಂದು ಹಿಂಸೆ, ಕಿತ್ತಾಟದ ವಿವರಗಳೂ ಭೀಭತ್ಸವಾಗಿವೆ. ಆದರೆ, ನಿಜವಾಗಿ ಹಿಂಸೆ ನೀಡಿದ್ದು ಅವಳೇ, ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾಳೆ ಎಂದು ಡೆಪ್‌ ವಾದಿಸಿದ್ದರು.

ಪ್ರಕರಣದ ಪರಿಣಾಮ ಏನಾಯ್ತು?

ಈ ಪ್ರಕರಣದಲ್ಲಿ ಇಬ್ಬರಿಗೂ ಮಾನನಷ್ಟ ಆಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಆದರೆ ಅಂತಿಮವಾಗಿ ಜಾನಿ ಡೆಪ್‌ಗೆ ಹೆಚ್ಚು ಪರಿಹಾರವನ್ನು ನೀಡಿದೆ. ಜಾನಿ ಡೆಪ್‌ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ್ದಾರೆ. ನ್ಯಾಯಾಧೀಶರು ಆರು ವರ್ಷಗಳ ಬಳಿಕ ನನಗೆ ಮರು ಹುಟ್ಟು ನೀಡಿದ್ದಾರೆ ಎಂದು ಹೇಳಿದ್ದಾರೆ. ʻಮಾಧ್ಯಮದ ಮೂಲಕ ನನ್ನ ವಿರುದ್ಧ ಕ್ರಿಮಿನಲ್‌ ಆಪಾದನೆಗಳನ್ನು ಮಾಡಲಾಗಿತ್ತು. ತೀವ್ರತರವಾದ ನೋವು ತಂದ ಈ ಆರೋಪಗಳನ್ನು ನಾನು ಪ್ರಶ್ನೆ ಮಾಡಲೇಬೇಕಾಗಿತ್ತು. ಯಾಕೆಂದರೆ, ಇದು ನನ್ನ ಮೇಲೆ, ನನ್ನ ಮಕ್ಕಳ ಮೇಲೆ, ನನ್ನ ಬದುಕಿನ ಮೇಲೆ ದೊಡ್ಡ ಪರಿಣಾಮವನ್ನು ಬೀರಿತ್ತು. ಇದೀಗ ಪ್ರಕರಣದಲ್ಲಿ ಗೆಲುವು ಸಿಕ್ಕಿದ್ದು ನನಗೆ ನಿರಾಳತೆ ನೀಡಿದೆ,ʼʼ ಎಂದಿದ್ದಾರೆ.

ಇತ್ತ ಆ್ಯಂಬರ್‌ ಹರ್ಡ್‌ ಅವರು ತೀರ್ಪಿನ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ. ʻʻಶಬ್ದಗಳಲ್ಲಿ ವಿವರಿಸಲಾಗದಷ್ಟು ನಿರಾಸೆಯನ್ನು ಅನುಭವಿಸಿದ್ದೇನೆ. ನಾನು ನೀಡಿದ ಪರ್ವತದಷ್ಟು ದಾಖಲೆಗಳು ನನ್ನ ಗಂಡನ ಅಧಿಕಾರದ ದುರುಪಯೋಗ, ಪ್ರಭಾವದ ಮುಂದೆ ನಿಲ್ಲಲಿಲ್ಲ,ʼʼ ಎಂದಿದ್ದಾರೆ.

“ಈ ತೀರ್ಪು ಬೇರೆ ಮಹಿಳೆಯರಿಗೆ ಎಂಥ ಸಂದೇಶ ನೀಡುತ್ತದೆ ಎಂಬುದು ನೆನೆದು ಇನ್ನೂ ನಿರಾಶೆಯಾಗಿದೆ. ಇದು ಹಿನ್ನಡೆಯೇ. ಮಹಿಳೆ ವಿರುದ್ಧದ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕೋ ಬೇಡವೋ ಎಂಬ ಸಂದಿಗ್ಧತೆ ಎದುರಾಗಿದೆ” ಎಂದಿದ್ದಾರೆ 36 ವರ್ಷದ ಆಂಬರ್‌ಹರ್ಡ್.

ಎಲಾ! ಎಲಾನ್‌ ಮಸ್ಕ್‌ ಇಲ್ಲೂ ಇದ್ದಾನಲ್ಲ?

ಈ ನಡುವೆ ಇನ್ನೊಂದು ಅಸಹ್ಯಕರ ಸಂಗತಿ ಹೊರಬಿತ್ತು. ನಮ್ಮ ದಾಂಪತ್ಯ ನಡೆದಿದ್ದಾಗಲೇ ಕಾರಾ ಡೆವಿಯನೆ ಎಂಬ ಇನ್ನೊಬ್ಬ ನಟಿಯ ಜೊತೆಗೆ ಹಾಗೂ ಉದ್ಯಮಿ ಎಲಾನ್‌ ಮಸ್ಕ್‌ ಜೊತೆಗೆ ಆಂಬರ್‌ ಹರ್ಡ್‌ ತ್ರೀಸಮ್‌(ಅಂದರೆ ತ್ರಿಕೋನ ದೈಹಿಕ ಸಂಬಂಧ) ನಡೆಸಿದ್ದಳು ಎಂದು ಜಾನಿ ಡೆಪ್‌ ಆರೋಪಿಸಿದ್ದ. ಆದರೆ ಎಲಾನ್‌ ಮಸ್ಕ್‌ ಇದನ್ನು ಅಲ್ಲಗಳೆದಿದ್ದಾರೆ. ಜಾನಿ ಡೆಪ್‌ ಮತ್ತು ಆಂಬರ್‌ ಹರ್ಡ್ ನಡುವೆ ಡೈವೋರ್ಸ್‌‌ ಆದ ಬಳಿಕವೇ ನಾನು ಹರ್ಡ್‌ ಜೊತೆ ಸಾಂಗತ್ಯ ಬೆಳೆಸಿದ್ದೆ. ಆದ್ದರಿಂದ ಇವರ ದಾಂಪತ್ಯ ವಿಚ್ಛೇದನಕ್ಕೂ ನನಗೂ ಸಂಬಂಧವಿಲ್ಲ. ಇನ್ನು ಕಾರಾ ಡೇವಿಯನೆ ನನಗೆ ಗೆಳತಿ ಮಾತ್ರ, ಆಕೆಯ ಜೊತೆಗೆ ದೈಹಿಕ ಸಂಬಂಧ ನನಗಿಲ್ಲ ಎಂದು ಎಲಾನ್‌ ಮಸ್ಕ್‌ ಸ್ಪಷ್ಟನೆ ನೀಡಿದರು. ಅಂತೂ ಇವರಿಬ್ಬರ ನಡುವಿನ ಕಲಹದಲ್ಲಿ ಇನ್ನೂ ಹಲವರು ಬೆತ್ತಲಾಗಿದ್ದು ಸತ್ಯ.

ಇವರಿಬ್ಬರ ಮಾನನಷ್ಟ ಮೊಕದ್ದಮೆ ಪ್ರಕರಣದಿಂದಾಗಿ ಇಬ್ಬರೂ ತಮ್ಮ ಕೆರಿಯರ್‌ನಲ್ಲಿ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ದೊಡ್ಡ ಪ್ರಾಜೆಕ್ಟ್‌ಗಳು ಡೆಪ್‌ ಹಾಗೂ ಹರ್ಡ್‌ ಅವರ ಕೈತಪ್ಪಿವೆ. ಇವರು ಪರಸ್ಪರರನ್ನು ದೌರ್ಜನ್ಯ ಮಾಡಿಕೊಂಡ ಪರಿ ಲೋಕಕ್ಕೆ ತಿಳಿಯಿತು. ಇನ್ನೂ ಹಲವಾರು ಸೆಲೆಬ್ರಿಟಿ ದಾಂಪತ್ಯಗಳೂ ಹೀಗೇ ಇರಬಹುದು ಅಂತ ಊಹಿಸಿಕೊಳ್ಳುವುದಕ್ಕೂ ಇದು ಕಾರಣವಾಗಿದೆ. ಕೈಯಲ್ಲಿ ನಿಭಾಯಿಸಲಿಕ್ಕಾಗದಂಥ ಜನಪ್ರಿಯತೆ, ಹಣ, ಡ್ರಗ್ಸ್‌, ಆಲ್ಕೋಹಾಲ್‌, ಸ್ವೇಚ್ಛಾಚಾರದ ಸಂಬಂಧಗಳು- ಎಲ್ಲವೂ ಸೇರಿದಾಗ ಸೃಷ್ಟಿಯಾಗೋದೇ ಜಾನಿ ಡೆಪ್-‌ಆಂಬರ್‌ ಹರ್ಡ್‌ ಪ್ರಕರಣ.

Exit mobile version