Site icon Vistara News

ಸಿಗರೇಟ್‌ ಸೇದುತ್ತಿರುವ ಕಾಳಿ ಪೋಸ್ಟರ್‌! ನಿರ್ಮಾಪಕಿ ವಿರುದ್ಧ ದೂರು ದಾಖಲು

ಮುಂಬಯಿ: ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ದೇಶನದ ಸಾಕ್ಷ್ಯಚಿತ್ರದ ಪೋಸ್ಟರ್ ವಿರುದ್ಧ ಎಲ್ಲೆಡೆ ಆಕ್ರೋಶ ಶುರುವಾಗಿದೆ. ಲೀನಾ ಅವರು ಇತ್ತೀಚೆಗೆ ತಮ್ಮ ಮುಂಬರುವ ಸಾಕ್ಷ್ಯಚಿತ್ರದ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟರ್‌ನಲ್ಲಿ ಮಹಿಳೆಯೊಬ್ಬರು ಹಿಂದೂ ದೇವತೆಯ ವೇಷವನ್ನು ಧರಿಸಿದ್ದಾರೆ, ಫೋಟೊದಲ್ಲಿ ಕಾಳಿ ಮಾತೆಯ ವೇಷಧಾರಿ ಸಿಗರೇಟು ಸೇದುತ್ತಿರುವ ದೃಶ್ಯವಿದೆ.

ಇದು ಹಿಂದೂ ಸಮುದಾಯ ಹಾಗೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಲೀನಾ ವಿರುದ್ಧ ಹಿಂದೂ ಸಂಘಟಕರು ದೂರು ದಾಖಲು ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ LGBT ಸಮುದಾಯದ ಧ್ವಜವನ್ನು ಬಳಸಿರುವುದು ಕೂಡ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಪೋಸ್ಟರ್ ಹಿಂಪಡೆಯುವಂತೆ ಹಿಂದೂ ಸಂಘಟನೆಗಳ ಪ್ರಮುಖರು ಒತ್ತಾಯಿಸಿದ್ದಾರೆ. ‘ಅರೆಸ್ಟ್ ಲೀನಾಮಣಿಮೇಕಲೈ’ ಎಂಬ ಹ್ಯಾಶ್‌ಟ್ಯಾಗ್ ಕೂಡ ಸದ್ಯ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ತಮಗೆ ಬರುತ್ತಿರುವ ನಕಾರಾತ್ಮಕ ಸಂದೇಶಗಳಿಗೆ ಪ್ರತಿಕ್ರಿಯಿಸಿರುವ ಲೀನಾ ‘ದ್ವೇಷಕ್ಕಿಂತ ಪ್ರೀತಿ ಆಯ್ಕೆ ಮಾಡಿಕೊಳ್ಳಿʼ ಎಂದು ಕೇಳಿಕೊಂಡಿದ್ದಾರೆ.

“”ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯ ನಡೆಸಿದ್ದ ಶಿಬಿರಕ್ಕೆ ಕೆನಡಾದ್ಯಂತದ ಕೆಲವು ಅತ್ಯುತ್ತಮ ಸಿನಿಮಾ ವಿದ್ಯಾರ್ಥಿಗಳನ್ನು ಕರೆಯಲಾಗಿತ್ತು. ಆ ಶಿಬಿರದಲ್ಲಿ ನಾನೂ ಭಾಗವಹಿಸಿದ್ದೆ. ಅದಕ್ಕಾಗಿ ನಾನು ಆಯ್ಕೆ ಮಾಡಿದ ಚಿತ್ರ- ಕಾಳಿ. ದೇವಿ ಕಾಳಿ ಪಾತ್ರದಲ್ಲಿ ನಾನೇ ನಟಿಸಿದ್ದೇನೆ, ನಿರ್ದೇಶನ ಮಾಡಿದ್ದೇನೆ ಮತ್ತು ನಿರ್ಮಿಸಿದ್ದೇನೆʼʼ ಎಂದು ಲೀನಾ ತಿಳಿಸಿದ್ದಾರೆ.

“”ಟೊರೊಂಟೊದ ಬೀದಿಗಳಲ್ಲಿ ಒಂದು ಇಳಿ ಸಂಜೆ ಕಾಳಿ ಮಾತೆ ಓಡಾಡುವ ಕುರಿತಾದ ಚಿತ್ರವನ್ನು ನಿರ್ಮಿಸಿದ್ದೇನೆ. ಈ ಅದ್ಭುತ ಸಿನಿಮಾ ನೋಡಿದ ಮೇಲೆ`ಲೀನಾ ಮಣಿಮೇಕಲೈ ಅರೆಸ್ಟ್ ಮಾಡಿಸಿ ಎಂದು ಹ್ಯಾಷ್ ಟ್ಯಾಗ್ ಹಾಕಬೇಡಿ, ಲವ್ ಯೂ ಲೀನಾ ಮಣಿಮೇಕಲೈ ಎಂಬ ಹ್ಯಾಷ್ ಟ್ಯಾಗ್ ಪೋಸ್ಟ್ ಮಾಡಿ. ಹಲವಾರು ಜನಾಂಗೀಯ ಭಿನ್ನಾಭಿಪ್ರಾಯಗಳ ನಡುವೆ ದ್ವೇಷದ ಬದಲು ಪ್ರೀತಿಯನ್ನು ಆರಿಸಿಕೊಳ್ಳುವ ಬಗ್ಗೆ ಈ ಕಾಳಿ ಮಾತನಾಡುತ್ತಾಳೆ” ಎಂದು ತಮ್ಮ ವಿರುದ್ಧ ದ್ವನಿ ಎತ್ತಿದವರಿಗೆ ಲೀನಾ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ಕೇಸ್‌

Exit mobile version