Site icon Vistara News

Laila Khan: ಮಲತಂದೆಯಿಂದಲೇ ಹತ್ಯೆಯಾದ ಜಗ್ಗೇಶ್‌ ಚಿತ್ರದ ನಾಯಕಿ; 13 ವರ್ಷಗಳ ಬಳಿಕ ತೀರ್ಪು ಪ್ರಕಟ

Laila Khan

Laila Khan

ಮುಂಬೈ: ಜಗ್ಗೇಶ್‌ ಅಭಿನಯದ ಕನ್ನಡದ ʼಮೇಕಪ್‌ʼ ಸೇರಿದಂತೆ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಲೈಲಾ ಖಾನ್ (Laila Khan) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಸೆಷನ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಮಲತಂದೆ ಪರ್ವೀನ್ ತಾಕ್ (Parvez Tak) ದೋಷಿ ಎಂದು ಪ್ರಕಟಿಸಿದೆ. ಘಟನೆ ನಡೆದು ಸುಮಾರು 13 ವರ್ಷಗಳ ಬಳಿಕ ಈ ತೀರ್ಪು ಹೊರಬಿದ್ದಿದೆ.

2011ರ ಫೆಬ್ರವರಿಯಲ್ಲಿ ಮುಂಬೈಯ ಇಗ್ತಪುರಿಯಲ್ಲಿರುವ ಬಂಗಲೆಯಲ್ಲಿ ನಟಿ ಲೈಲಾ ಖಾನ್ ಹಾಗೂ ಆಕೆಯ ತಾಯಿ ಸೆಲೀನಾ ಹಾಗೂ ನಾಲ್ವರು ಒಡಹುಟ್ಟಿದವರು ಸೇರಿ ಒಟ್ಟು 6 ಮಂದಿಯನ್ನು ಪರ್ವೀನ್ ತಾಕ್ ಬರ್ಬರವಾಗಿ ಹತ್ಯೆ ಮಾಡಿದ್ದ. ಅಚ್ಚರಿ ಎಂದರೆ ಪರ್ವೀನ್ ತಾಕ್ ಲೈಲಾ ಖಾನ್‌ ತಾಯಿ ಸೆಲೀನಾ ಅವರ ಮೂರನೇ ಪತಿ.

ಸೆಲೀನಾ ಹೆಸರಿನಲ್ಲಿರುವ ಭೂಮಿಗೆ ಸಂಬಂಧಿಸಿದಂತೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಮೊದಲು ಪರ್ವೀನ್ ತಾಕ್ ಪತ್ನಿ ಸೆಲೀನಾ ಅವರನ್ನು ಕೊಲೆ ಮಾಡಿದ್ದ. ಬಳಿಕ ಮನೆಯಲ್ಲಿದ್ದ ಲೈಲಾ ಖಾನ್‌ ಹಾಗೂ ಆಕೆಯ ನಾಲ್ವರು ಒಡಹುಟ್ಟಿದವರ ಹತ್ಯೆ ಮಾಡಿ ಪರಾರಿಯಾಗಿದ್ದ. 2012ರಲ್ಲಿ ಆತನನ್ನು ಬಂಧಿಸಲಾಗಿತ್ತು. ಮೇ 14ರಂದು ಕೋರ್ಟ್‌ ಶಿಕ್ಷೆ ಪ್ರಕಟಿಸಲಿದೆ.

ಘಟನೆಯ ವಿವರ

2011ರಲ್ಲಿ ಲೈಲಾ ಖಾನ್‌, ಆಕೆಯ ತಾಯಿ ಸೆಲೀನಾ ಮತ್ತು ಲೈಲಾ ಖಾನ್‌ ಒಡಹುಟ್ಟಿದವರಾದ ಆಮಿನಾ, ಅವಳಿಗಳಾದ ಝಾರ ಮತ್ತು ಇಮ್ರಾನ್‌, ಕಸಿನ್‌ ರೇಷ್ಮಾ ನಾಪತ್ತೆಯಾಗಿದ್ದಾರೆಂದು ಲೈಲಾ ಖಾನ್‌ ತಂದೆ ನಾದಿರ್‌ ಪಟೇಲ್‌ ಪೊಲೀಸರಿಗೆ ದೂರು ನೀಡಿದ್ದರು.

ಅದರಂತೆ ತನಿಖೆ ಆರಂಭವಾಗಿತ್ತು. ತನಿಖೆ ಭಾಗವಾಗಿ ನಾಸಿಕ್ ಬಳಿಯ ಇಗ್ತಪುರಿಯಲ್ಲಿರುವ ಕುಟುಂಬದ ತೋಟದ ಮನೆ ಪರಿಶೀಲಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ಆ ಬಂಗಲೆ ಬೆಂಕಿಯಲ್ಲಿ ಭಾಗಶಃ ಹಾನಿಯಾಗಿತ್ತು. ಅಲ್ಲದೆ ಲೈಲಾ ಖಾನ್‌ ಅವರ ಮೊಬೈಲ್‌ ನಾಪತ್ತೆಯಾಗುವ ವೇಳೆ ನಾಸಿಕ್‌ನಲ್ಲೇ ಇತ್ತು ಎನ್ನುವುದು ಕಂಡು ಬಂದಿತ್ತು. ಇದೇ ವೇಳೆ ಲೈಲಾ ಖಾನ್‌ಗೆ ಸೇರಿದ ವಾಹನ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿತ್ತು. ಪರ್ವೀನ್ ತಾಕ್ ಮೂಲತಃ ಕಾಶ್ಮೀರದವನು. ಹೀಗಾಗಿ ಪೊಲೀಸರಿಗೆ ಆತನ ಮೇಲೆ ಸಂಶಯ ಬಲವಾಗಿತ್ತು. ಬಳಿಕ ಆತನನ್ನು ಬಂಧಿಸಲಾಯಿತು. ಈ ವೇಳೆ ಆತ ಆಸ್ತಿ ವಿಚಾರದಲ್ಲಿ ಕೊಲೆ ಮಾಡಿರುವ ಸಂಗತಿ ಹೊರ ಬಿದ್ದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸೆಲೀನಾ ಅವರ ಇಬ್ಬರು ಮಾಜಿ ಪತಿಯರು ಸೇರಿದಂತೆ ಸುಮಾರು 40 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.

ಲೈಲಾ ಖಾನ್‌ ಮೊದಲ ಬಾರಿಗೆ 2002ರಲ್ಲಿ ತೆರೆಕಂಡ ಜಗ್ಗೇಶ್‌ ಅಭಿನಯದ ʼಮೇಕಪ್‌ʼ ಕನ್ನಡ ಸಿನಿಮಾದಲ್ಲಿ ಲೈಲಾ ಪಟೇಲ್‌ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಅಷ್ಟೇನೂ ಸದ್ದು ಮಾಡಿರಲಿಲ್ಲ. ಬಳಿಕ ಲೈಲಾ 2008ರಲ್ಲಿ ರಾಜೇಶ್‌ ಖನ್ನಾ ನಟನೆಯ ʼವಫಾ: ಎ ಡೆಡ್ಲಿ ಲವ್‌ ಸ್ಟೋರಿʼ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಇದು ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಆದರೆ ಲೈಲಾಗೆ ಒಂದಷ್ಟು ಜನಪ್ರಿಯತೆ ತಂಡುಕೊಟ್ಟಿತ್ತು. ಲೈಲಾ ಬಾಂಗ್ಲಾ ದೇಶ ಮೂಲದ ಮುನೀರ್‌ ಖಾನ್‌ ಎನ್ನುವವನನ್ನು ವರಿಸಿದ್ದರು.

ಇದನ್ನೂ ಓದಿ: Roopa Iyer: ನಿರ್ದೇಶಕಿ ರೂಪಾ ಅಯ್ಯರ್‌ಗೂ ಆನ್‌ಲೈನ್‌ ಕಳ್ಳರ ಕಾಟ; ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ 30 ಲಕ್ಷ ರೂ.ಗೆ ಬೇಡಿಕೆ

Exit mobile version