ಬೆಂಗಳೂರು: ಜೋರಾಗಿ ಸುರಿದ ಮಳೆ ಒಂದು ಘಳಿಗೆಯಲ್ಲಿ ನಿಂತು ಮೌನವಾಗುತ್ತದೆ. ಕದಡಿದ ನೀರು ಸ್ವಲ್ಪ ಸಮಯ ಹಾಗೇ ಬಿಟ್ಟರೆ ತಣ್ಣಗೆ ಶಾಂತವಾಗುತ್ತದೆ. ಆಗೆಲ್ಲ ಒಂದು ಮೌನ ಕಾಡುತ್ತದೆ. ಮನಸ್ಸಿನ ಒಂದು ಭಾರ ಇಳಿದಾಗ ಕಾಡುವ ಮೌನವೇ 777 ಚಾರ್ಲಿ ಸಿನಿಮಾ. ಎಲ್ಲೆಡೆ ಸದ್ದುಗದ್ದಲ, ವೈಲೆನ್ಸ್ ತುಂಬಿರುವ ಸಿನಿಮಾಗಳು ಪ್ಯಾನ್ ಇಂಡಿಯಾ ವ್ಯಾಪಿಸುತ್ತಿರುವುದರ ನಡುವೆ ʼಚಾರ್ಲಿʼಯ ಮೌನ ಇಡೀ ದೇಶವನ್ನೇ ಆವರಿಸಿದೆ.
ಚಿತ್ರ: 777 ಚಾರ್ಲಿ
ನಿರ್ದೇಶನ: ಕಿರಣ್‌ರಾಜ್
ನಿರ್ಮಾಣ: ಪರಂವಾಃ ಸ್ಟುಡಿಯೋಸ್
ನಿರ್ಮಾಪಕ: ರಕ್ಷಿತ್ ಶೆಟ್ಟಿ, ಜಿ.ಎಸ್ ಗುಪ್ತಾ
ಸಂಗೀತ: ನೊಬಿನ ಪೌಲ್
ಛಾಯಾಗ್ರಹಣ: ಅರವಿಂದ್
ತಾರಾಗಣ: ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಅಭಿಜಿತ್ ಮಹೇಶ್, ಭಾರ್ಗವಿ ನಾರಾಯಣ್, ಬಾಬ್ಬಿ ಸಿಂಹ
ರೇಟಿಂಗ್: 4/5
ಧರ್ಮನ ಜರ್ನಿಗೆ ಜತೆಯಾದ ಚಾರ್ಲಿ
ನಾನು. ನನ್ನ ಕೆಲಸ. ನನ್ನ ಮನೆ. ಮತ್ತೆ ಗಲಾಟೆ. ಪ್ರಪಂಚದಲ್ಲಿ ಇವಿಷ್ಟು ಬಿಟ್ಟರೆ ಬೇರೆ ಏನೂ ಇಲ್ಲವೆಂಬಂತೆ ಬದುಕುತ್ತಿರುವ ವ್ಯಕ್ತಿ ಧರ್ಮ. ಆತನ ವ್ಯಕ್ತಿತ್ವದ ಒಂದು ಪರಿಚಯ ನೀಡುವುದಾದರೆ ಆತನ ಬಳಿ ಯಾರೇ ಸಹಾಯ ಕೇಳಿಕೊಂಡು ಬಂದರೂ ಆತ ಹಾಗೇ ಕಳುಹಿಸುವುದಿಲ್ಲ. ಕ್ಯಾಕರಿಸಿ ಉಗ್ದೇ ಕಳ್ಸೋದು. ಇದು ಆತನ ಬಗ್ಗೆ ಆತನೇ ಮಾಡಿಕೊಂಡ ಪರಿಚಯ. ಸದಾ ಕಾಲ ಕೆಂಡದಂತೆ ಕಾದಿರುವ ವ್ಯಕ್ತಿತ್ವ ಅವನದ್ದು. ಅವನ ಸುತ್ತಲಿನ ವಾತಾವರಣ ಖುಷಿಯಿಂದಿದ್ದರೂ ಆತ ನಗುವುದಿಲ್ಲ. ಅವನ ಮನಸ್ಸಿನಲ್ಲಿ ಬೆಟ್ಟದಷ್ಟು ನೋವಿದ್ದರೂ ಆತ ಅಳುವುದಿಲ್ಲ. ಅದಕ್ಕೆ ಕಾರಣ ಅವನ ಜೀವನದಲ್ಲಿ ನಡೆದ ಒಂದು ಕಹಿ ಘಟನೆ. ಒಂದು ಘಟನೆ ಮನುಷ್ಯನನ್ನು ಹೇಗೆ ಬೇಕಾದರೂ ಬದಲಾಯಿಸಬಹುದು ಎಂಬುದಕ್ಕೆ ಧರ್ಮನ ಬದುಕು ಉದಾಹರಣೆ.
ಇಂತಹ ರಫ್ ವ್ಯಕ್ತಿ ಧರ್ಮನ ಬದುಕಿನಲ್ಲಿ ಚಾರ್ಲಿ ನಗು ತುಂಬುತ್ತದೆ. ಭಾವನೆಗಳನ್ನು ಮರೆತಿದ್ದ ಧರ್ಮನ ಮನಸ್ಸಿಗೆ ಭಾವ ತುಂಬುತ್ತದೆ. ಪ್ರೀತಿ ಎಂದರೆ ಹಾಗೇ ಅಲ್ಲವೇ? ಅದು ಎಲ್ಲಿ? ಯಾವಾಗ? ಹೇಗೆ ದಕ್ಕುತ್ತದೆ ಎಂದು ಹೇಳಲಸಾಧ್ಯ. ಮನುಷ್ಯನ ಪ್ರೀತಿ ಮಾತ್ರವಲ್ಲ, ಪ್ರಾಣಿಗಳ ಸಾಂಗತ್ಯವೂ ಅದೇ ರೀತಿ. ನೀವು ನಿಜಕ್ಕೂ ಅದೃಷ್ಟವಂತರಾಗಿದ್ದರೆ ನಿಮ್ಮ ಬಾಳಿನಲ್ಲಿಯೂ ಒಂದು ನಾಯಿ ಆಗಮಿಸುತ್ತದೆ. ನಿಮ್ಮ ಬದುಕನ್ನು ಸುಂದರವಾಗಿಸುತ್ತದೆ. ಇದನ್ನು ತೋರಿಸಿಕೊಟ್ಟಿದ್ದು ಚಾರ್ಲಿ. ಯಾವುದೋ ಒಂದು ಹಂತದಲ್ಲಿ ಧರ್ಮನ ಬದುಕಿಗೆ ಬರುವ ಚಾರ್ಲಿ ಆತನನ್ನು ನಗಿಸುತ್ತದೆ, ಕುಣಿಸುತ್ತದೆ, ನೋಯಿಸುತ್ತದೆ, ಕಣ್ಣೀರು ತರಿಸುತ್ತದೆ, ಭಾವನೆಗಳನ್ನು ಆತನಲ್ಲಿ ತುಂಬುತ್ತದೆ. ಮನಸೆಳೆಯುವಂತಹ ಮುದ್ದಾದ ಪಾತ್ರ ಚಾರ್ಲಿ. ಈಗಾಗಲೇ ಟ್ರೈಲರ್ ನೋಡಿದವರಿಗೆ ಚಾರ್ಲಿಯ ಮೇಲೆ ಪ್ರೀತಿ ಹುಟ್ಟಿರುವುದಂತೂ ಖಚಿತ.
ಇವರಿಬ್ಬರ ಒಂದು ಅಡ್ವೆಂಚರ್ ಪಯಣವೇ ಈ ಸಿನಿಮಾ. ಈ ಪಯಣದಲ್ಲಿ ಧರ್ಮ ಬದಲಾದ ರೀತಿ, ಚಾರ್ಲಿ ಆತನನ್ನು ಪ್ರೀತಿಸುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಮನುಷ್ಯನ ಪ್ರೀತಿಗಿಂತಲೂ ಒಂದು ಪ್ರಾಣಿಯ ಪ್ರೀತಿ ಹೇಗೆ ಶ್ರೇಷ್ಠವಾದದ್ದು ಎಂದು ನಿರ್ದೇಶಕ ಕಿರಣ್‌ರಾಜ್ ಅದ್ಭುತವಾಗಿ ನಿರೂಪಿಸಿದ್ದಾರೆ.
ಪ್ರತಿ ದಿನ ಇಡ್ಲಿ ನೀಡುವ ಅಜ್ಜಿ ಹಾಗೂ ಧರ್ಮನ ನಡುವಿನ ಅವ್ಯಕ್ತ ಬಾಂಧವ್ಯ, ಚಾರ್ಲಿ ಹಾಗೂ ಧರ್ಮನ ಜರ್ನಿಗೆ ಸಾಕ್ಷಿಯಾದ ಜನರ ಅಕ್ಕರೆ, ಎಲ್ಲವೂ ನೆನಪಪಿನಲ್ಲಿ ಉಳಿಯುವಂತೆ ಕಿರಣ್‌ರಾಜ್ ಚಿತ್ರಿಸಿದ್ದಾರೆ.
ಇವರಿಬ್ಬರ ಜರ್ನಿಗೆ ನೀವು ಯಾಕೆ ಸಾಕ್ಷಿಯಾಗಬೇಕು?
ಇದು ಧರ್ಮನ ಕಥೆ. ಚಾರ್ಲಿ ಎಂಬ ಮುದ್ದಾದ ನಾಯಿ ಈ ಕಥೆಯ ಆತ್ಮ. ಆದರೆ, ಇದು ಯಾವುದೋ ಒಂದು ಸನ್ನಿವೇಶದಲ್ಲಿ ನಿಮ್ಮದೇ ಕಥೆಯಾಗಿ ಕಾಣುತ್ತದೆ. ನಿಮ್ಮಲ್ಲಿ ಒಬ್ಬ ಧರ್ಮನಿರಬಹುದು, ನಿಮ್ಮ ಬಾಳಿಗೆ ಒಂದು ಚಾರ್ಲಿ ಪ್ರವೇಶಿಸಬಹುದು ಎಂಬಷ್ಟು ಆಪ್ತವಾಗಿರುವ ಪಯಣ ಇವರದ್ದು.
ಧರ್ಮನ ಪಾತ್ರವನ್ನು ಧರಿಸಿದ ರಕ್ಷಿತ್ ಶೆಟ್ಟಿ ಅವರ ಅಭಿನಯ ಶ್ಲಾಘನೀಯ. ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಅಭಿಜಿತ್ ಮಹೇಶ್, ಭಾರ್ಗವಿ ನಾರಾಯಣ್, ಬಾಬ್ಬಿ ಸಿಂಹ ಅವರ ಅಭಿನಯ ಚಿತ್ರವನ್ನು ಜೀವಂತವಾಗಿರಿಸಿದೆ. ಪುಟ್ಟ ಹುಡುಗಿ ಶಾರ್ವರಿಯ ಮುದ್ದಾದ ನಟನೆ ಮನದಲ್ಲಿ ಅಚ್ಚಾಗಿ ಉಳಿಯುತ್ತದೆ.
ಕ್ಯಾಮೆರಾ ಹಿಂದೆ ಅರವಿಂದ ಕಶ್ಯಪ್ ಮೋಡಿ ಮಾಡಿದರೆ, ಸಂಗೀತದಲ್ಲಿ ನೊಬಿನ್ ಪೌಲ್ ಒಂದು ಮ್ಯಾಜಿಕ್ ಮಾಡಿದ್ದಾರೆ. ಹಾಡುಗಳು ಆಗಾಗ ಗುನುಗುತ್ತಿರಬೇಕು ಅನ್ನಿಸುತ್ತದೆ.
ಈ ಸಿನಿಮಾ ನಗು ಮತ್ತು ಅಳುವಿನ ಸಮ್ಮಿಲನ. ಮೊದಲಾರ್ಧದಲ್ಲಿ ತಮಾಷೆಯ ಮಾತುಗಳು ಮನಃಪೂರ್ತಿಯಾಗಿ ನಗಿಸುತ್ತದೆ. ದ್ವಿತೀಯಾರ್ಧದಲ್ಲಿ ಅಷ್ಟೇ ತೀವ್ರವಾದ ಭಾವನೆಗಳು ತುಂಬಿಕೊಂಡಿವೆ. ಉತ್ತಮ ಸಂಭಾಷಣೆ ಚಿತ್ರದ ಶಕ್ತಿ. ಒಂದಿಷ್ಟು ಕೌಂಟರ್ ಡೈಲಾಗ್ಸ್ ಹಾಗೂ ಫಿಲಾಸಾಫಿಕಲ್ ಟಚ್ ಇರುವ ಮಾತುಕತೆ ಇಲ್ಲಿದೆ.
ಈ ಚಿತ್ರವನ್ನು ಅನುಭವಿಸುವುದು ಹೇಗೆ?
ಚಾರ್ಲಿ ಒಂದು ಸಿನಿಮಾ ಎನ್ನುವುದಕ್ಕಿಂತ ಇದೊಂದು ಎಮೊಷನ್. ಎರಡೂವರೆ ಗಂಟೆ ನಿಮ್ಮನ್ನು ಚಾರ್ಲಿ ತನ್ನ ಪ್ರಪಂಚದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಕೆಲವು ಸನ್ನಿವೇಶಗಳಲ್ಲಿ ಲಾಜಿಕ್ ಮಿಸ್ ಆಗಿದೆ, ಕೆಲವು ಹಾಡುಗಳು ಕೇವಲ ಇಂಗ್ಲಿಷ್ ಇರುವುದರಿಂದ ಹಿಡಿಸುವುದಿಲ್ಲ, ಚಿತ್ರ ಮುಗಿದ ಮೇಲೆ ಮನಸ್ಸಿನಲ್ಲಿ ಉಳಿಯುವಂತಹ ಸಂಗತಿ ಇದರಲ್ಲಿ ಇಲ್ಲ ಎಂಬ ಟೀಕೆಯಿಂದ ದೂರ ನಿಂತು ಚಿತ್ರವನ್ನು ನೋಡಿ ಆನಂದಿಸಬೇಕು. ಈ ಚೌಕಟ್ಟಿನಲ್ಲಿ ನೋಡಿದರೆ ಚಿತ್ರದ ಸ್ವಾರಸ್ಯ ಸತ್ತುಹೋಗುತ್ತದೆ. ಈ ಸಿನಿಮಾ ಅವುಗಳನ್ನು ಮೀರಿದ್ದು. ಇದೊಂದು ವಿಸ್ಮಯಕಾರಿ ಪಯಣ.
ಸಿನಿಮಾದ ಅಂತ್ಯದಲ್ಲಿ ಮನದಲ್ಲಿ ಉಳಿಯುವುದು ಒಂದು ಗಾಢವಾದ ಮೌನ. ಒಂದು ಹನಿ ಕಣ್ಣೀರು. ಆಳವಾದ ತಳಮಳ.
ಇದನ್ನೂ ಓದಿ: Movie Review: Vikram | ತೆರೆಯ ಮೇಲೆ ಘಟಾನುಘಟಿಗಳ ತ್ರಿವಿಕ್ರಮ, ಕ್ಷಣ ಕ್ಷಣವೂ ರೋಚಕ