ಪ್ರಮುಖ ಸುದ್ದಿ
Movie Review | 777 ಚಾರ್ಲಿ ಪ್ರೀತಿಯ ಜರ್ನಿಯಲ್ಲಿ ನಗುವಿದೆ, ಕಣ್ಣೀರಿದೆ, ಮೌನವೂ ಇದೆ!
777 ಚಾರ್ಲಿ ಪ್ರಪಂಚಕ್ಕೆ ಒಮ್ಮೆ ಹೋಗಿ ಬಂದರೆ ಹತ್ತಾರು ಸಂಗತಿಗಳು ಕಾಡುತ್ತವೆ. ಆದರೆ ಅದಾವುದರ ಬಗ್ಗೆಯೂ ಮಾತನಾಡಲು ಆಗುವುದಿಲ್ಲ. ಒಂದು ಗಾಢ ಮೌನ ಮಾತ್ರ ಉಳಿದಿರುತ್ತದೆ.
ಬೆಂಗಳೂರು: ಜೋರಾಗಿ ಸುರಿದ ಮಳೆ ಒಂದು ಘಳಿಗೆಯಲ್ಲಿ ನಿಂತು ಮೌನವಾಗುತ್ತದೆ. ಕದಡಿದ ನೀರು ಸ್ವಲ್ಪ ಸಮಯ ಹಾಗೇ ಬಿಟ್ಟರೆ ತಣ್ಣಗೆ ಶಾಂತವಾಗುತ್ತದೆ. ಆಗೆಲ್ಲ ಒಂದು ಮೌನ ಕಾಡುತ್ತದೆ. ಮನಸ್ಸಿನ ಒಂದು ಭಾರ ಇಳಿದಾಗ ಕಾಡುವ ಮೌನವೇ 777 ಚಾರ್ಲಿ ಸಿನಿಮಾ. ಎಲ್ಲೆಡೆ ಸದ್ದುಗದ್ದಲ, ವೈಲೆನ್ಸ್ ತುಂಬಿರುವ ಸಿನಿಮಾಗಳು ಪ್ಯಾನ್ ಇಂಡಿಯಾ ವ್ಯಾಪಿಸುತ್ತಿರುವುದರ ನಡುವೆ ʼಚಾರ್ಲಿʼಯ ಮೌನ ಇಡೀ ದೇಶವನ್ನೇ ಆವರಿಸಿದೆ.
ಚಿತ್ರ: 777 ಚಾರ್ಲಿ
ನಿರ್ದೇಶನ: ಕಿರಣ್‌ರಾಜ್
ನಿರ್ಮಾಣ: ಪರಂವಾಃ ಸ್ಟುಡಿಯೋಸ್
ನಿರ್ಮಾಪಕ: ರಕ್ಷಿತ್ ಶೆಟ್ಟಿ, ಜಿ.ಎಸ್ ಗುಪ್ತಾ
ಸಂಗೀತ: ನೊಬಿನ ಪೌಲ್
ಛಾಯಾಗ್ರಹಣ: ಅರವಿಂದ್
ತಾರಾಗಣ: ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಅಭಿಜಿತ್ ಮಹೇಶ್, ಭಾರ್ಗವಿ ನಾರಾಯಣ್, ಬಾಬ್ಬಿ ಸಿಂಹ
ರೇಟಿಂಗ್: 4/5
ಧರ್ಮನ ಜರ್ನಿಗೆ ಜತೆಯಾದ ಚಾರ್ಲಿ
ನಾನು. ನನ್ನ ಕೆಲಸ. ನನ್ನ ಮನೆ. ಮತ್ತೆ ಗಲಾಟೆ. ಪ್ರಪಂಚದಲ್ಲಿ ಇವಿಷ್ಟು ಬಿಟ್ಟರೆ ಬೇರೆ ಏನೂ ಇಲ್ಲವೆಂಬಂತೆ ಬದುಕುತ್ತಿರುವ ವ್ಯಕ್ತಿ ಧರ್ಮ. ಆತನ ವ್ಯಕ್ತಿತ್ವದ ಒಂದು ಪರಿಚಯ ನೀಡುವುದಾದರೆ ಆತನ ಬಳಿ ಯಾರೇ ಸಹಾಯ ಕೇಳಿಕೊಂಡು ಬಂದರೂ ಆತ ಹಾಗೇ ಕಳುಹಿಸುವುದಿಲ್ಲ. ಕ್ಯಾಕರಿಸಿ ಉಗ್ದೇ ಕಳ್ಸೋದು. ಇದು ಆತನ ಬಗ್ಗೆ ಆತನೇ ಮಾಡಿಕೊಂಡ ಪರಿಚಯ. ಸದಾ ಕಾಲ ಕೆಂಡದಂತೆ ಕಾದಿರುವ ವ್ಯಕ್ತಿತ್ವ ಅವನದ್ದು. ಅವನ ಸುತ್ತಲಿನ ವಾತಾವರಣ ಖುಷಿಯಿಂದಿದ್ದರೂ ಆತ ನಗುವುದಿಲ್ಲ. ಅವನ ಮನಸ್ಸಿನಲ್ಲಿ ಬೆಟ್ಟದಷ್ಟು ನೋವಿದ್ದರೂ ಆತ ಅಳುವುದಿಲ್ಲ. ಅದಕ್ಕೆ ಕಾರಣ ಅವನ ಜೀವನದಲ್ಲಿ ನಡೆದ ಒಂದು ಕಹಿ ಘಟನೆ. ಒಂದು ಘಟನೆ ಮನುಷ್ಯನನ್ನು ಹೇಗೆ ಬೇಕಾದರೂ ಬದಲಾಯಿಸಬಹುದು ಎಂಬುದಕ್ಕೆ ಧರ್ಮನ ಬದುಕು ಉದಾಹರಣೆ.
ಇಂತಹ ರಫ್ ವ್ಯಕ್ತಿ ಧರ್ಮನ ಬದುಕಿನಲ್ಲಿ ಚಾರ್ಲಿ ನಗು ತುಂಬುತ್ತದೆ. ಭಾವನೆಗಳನ್ನು ಮರೆತಿದ್ದ ಧರ್ಮನ ಮನಸ್ಸಿಗೆ ಭಾವ ತುಂಬುತ್ತದೆ. ಪ್ರೀತಿ ಎಂದರೆ ಹಾಗೇ ಅಲ್ಲವೇ? ಅದು ಎಲ್ಲಿ? ಯಾವಾಗ? ಹೇಗೆ ದಕ್ಕುತ್ತದೆ ಎಂದು ಹೇಳಲಸಾಧ್ಯ. ಮನುಷ್ಯನ ಪ್ರೀತಿ ಮಾತ್ರವಲ್ಲ, ಪ್ರಾಣಿಗಳ ಸಾಂಗತ್ಯವೂ ಅದೇ ರೀತಿ. ನೀವು ನಿಜಕ್ಕೂ ಅದೃಷ್ಟವಂತರಾಗಿದ್ದರೆ ನಿಮ್ಮ ಬಾಳಿನಲ್ಲಿಯೂ ಒಂದು ನಾಯಿ ಆಗಮಿಸುತ್ತದೆ. ನಿಮ್ಮ ಬದುಕನ್ನು ಸುಂದರವಾಗಿಸುತ್ತದೆ. ಇದನ್ನು ತೋರಿಸಿಕೊಟ್ಟಿದ್ದು ಚಾರ್ಲಿ. ಯಾವುದೋ ಒಂದು ಹಂತದಲ್ಲಿ ಧರ್ಮನ ಬದುಕಿಗೆ ಬರುವ ಚಾರ್ಲಿ ಆತನನ್ನು ನಗಿಸುತ್ತದೆ, ಕುಣಿಸುತ್ತದೆ, ನೋಯಿಸುತ್ತದೆ, ಕಣ್ಣೀರು ತರಿಸುತ್ತದೆ, ಭಾವನೆಗಳನ್ನು ಆತನಲ್ಲಿ ತುಂಬುತ್ತದೆ. ಮನಸೆಳೆಯುವಂತಹ ಮುದ್ದಾದ ಪಾತ್ರ ಚಾರ್ಲಿ. ಈಗಾಗಲೇ ಟ್ರೈಲರ್ ನೋಡಿದವರಿಗೆ ಚಾರ್ಲಿಯ ಮೇಲೆ ಪ್ರೀತಿ ಹುಟ್ಟಿರುವುದಂತೂ ಖಚಿತ.
ಇವರಿಬ್ಬರ ಒಂದು ಅಡ್ವೆಂಚರ್ ಪಯಣವೇ ಈ ಸಿನಿಮಾ. ಈ ಪಯಣದಲ್ಲಿ ಧರ್ಮ ಬದಲಾದ ರೀತಿ, ಚಾರ್ಲಿ ಆತನನ್ನು ಪ್ರೀತಿಸುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಮನುಷ್ಯನ ಪ್ರೀತಿಗಿಂತಲೂ ಒಂದು ಪ್ರಾಣಿಯ ಪ್ರೀತಿ ಹೇಗೆ ಶ್ರೇಷ್ಠವಾದದ್ದು ಎಂದು ನಿರ್ದೇಶಕ ಕಿರಣ್‌ರಾಜ್ ಅದ್ಭುತವಾಗಿ ನಿರೂಪಿಸಿದ್ದಾರೆ.
ಪ್ರತಿ ದಿನ ಇಡ್ಲಿ ನೀಡುವ ಅಜ್ಜಿ ಹಾಗೂ ಧರ್ಮನ ನಡುವಿನ ಅವ್ಯಕ್ತ ಬಾಂಧವ್ಯ, ಚಾರ್ಲಿ ಹಾಗೂ ಧರ್ಮನ ಜರ್ನಿಗೆ ಸಾಕ್ಷಿಯಾದ ಜನರ ಅಕ್ಕರೆ, ಎಲ್ಲವೂ ನೆನಪಪಿನಲ್ಲಿ ಉಳಿಯುವಂತೆ ಕಿರಣ್‌ರಾಜ್ ಚಿತ್ರಿಸಿದ್ದಾರೆ.
ಇವರಿಬ್ಬರ ಜರ್ನಿಗೆ ನೀವು ಯಾಕೆ ಸಾಕ್ಷಿಯಾಗಬೇಕು?
ಇದು ಧರ್ಮನ ಕಥೆ. ಚಾರ್ಲಿ ಎಂಬ ಮುದ್ದಾದ ನಾಯಿ ಈ ಕಥೆಯ ಆತ್ಮ. ಆದರೆ, ಇದು ಯಾವುದೋ ಒಂದು ಸನ್ನಿವೇಶದಲ್ಲಿ ನಿಮ್ಮದೇ ಕಥೆಯಾಗಿ ಕಾಣುತ್ತದೆ. ನಿಮ್ಮಲ್ಲಿ ಒಬ್ಬ ಧರ್ಮನಿರಬಹುದು, ನಿಮ್ಮ ಬಾಳಿಗೆ ಒಂದು ಚಾರ್ಲಿ ಪ್ರವೇಶಿಸಬಹುದು ಎಂಬಷ್ಟು ಆಪ್ತವಾಗಿರುವ ಪಯಣ ಇವರದ್ದು.
ಧರ್ಮನ ಪಾತ್ರವನ್ನು ಧರಿಸಿದ ರಕ್ಷಿತ್ ಶೆಟ್ಟಿ ಅವರ ಅಭಿನಯ ಶ್ಲಾಘನೀಯ. ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಅಭಿಜಿತ್ ಮಹೇಶ್, ಭಾರ್ಗವಿ ನಾರಾಯಣ್, ಬಾಬ್ಬಿ ಸಿಂಹ ಅವರ ಅಭಿನಯ ಚಿತ್ರವನ್ನು ಜೀವಂತವಾಗಿರಿಸಿದೆ. ಪುಟ್ಟ ಹುಡುಗಿ ಶಾರ್ವರಿಯ ಮುದ್ದಾದ ನಟನೆ ಮನದಲ್ಲಿ ಅಚ್ಚಾಗಿ ಉಳಿಯುತ್ತದೆ.
ಕ್ಯಾಮೆರಾ ಹಿಂದೆ ಅರವಿಂದ ಕಶ್ಯಪ್ ಮೋಡಿ ಮಾಡಿದರೆ, ಸಂಗೀತದಲ್ಲಿ ನೊಬಿನ್ ಪೌಲ್ ಒಂದು ಮ್ಯಾಜಿಕ್ ಮಾಡಿದ್ದಾರೆ. ಹಾಡುಗಳು ಆಗಾಗ ಗುನುಗುತ್ತಿರಬೇಕು ಅನ್ನಿಸುತ್ತದೆ.
ಈ ಸಿನಿಮಾ ನಗು ಮತ್ತು ಅಳುವಿನ ಸಮ್ಮಿಲನ. ಮೊದಲಾರ್ಧದಲ್ಲಿ ತಮಾಷೆಯ ಮಾತುಗಳು ಮನಃಪೂರ್ತಿಯಾಗಿ ನಗಿಸುತ್ತದೆ. ದ್ವಿತೀಯಾರ್ಧದಲ್ಲಿ ಅಷ್ಟೇ ತೀವ್ರವಾದ ಭಾವನೆಗಳು ತುಂಬಿಕೊಂಡಿವೆ. ಉತ್ತಮ ಸಂಭಾಷಣೆ ಚಿತ್ರದ ಶಕ್ತಿ. ಒಂದಿಷ್ಟು ಕೌಂಟರ್ ಡೈಲಾಗ್ಸ್ ಹಾಗೂ ಫಿಲಾಸಾಫಿಕಲ್ ಟಚ್ ಇರುವ ಮಾತುಕತೆ ಇಲ್ಲಿದೆ.
ಈ ಚಿತ್ರವನ್ನು ಅನುಭವಿಸುವುದು ಹೇಗೆ?
ಚಾರ್ಲಿ ಒಂದು ಸಿನಿಮಾ ಎನ್ನುವುದಕ್ಕಿಂತ ಇದೊಂದು ಎಮೊಷನ್. ಎರಡೂವರೆ ಗಂಟೆ ನಿಮ್ಮನ್ನು ಚಾರ್ಲಿ ತನ್ನ ಪ್ರಪಂಚದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಕೆಲವು ಸನ್ನಿವೇಶಗಳಲ್ಲಿ ಲಾಜಿಕ್ ಮಿಸ್ ಆಗಿದೆ, ಕೆಲವು ಹಾಡುಗಳು ಕೇವಲ ಇಂಗ್ಲಿಷ್ ಇರುವುದರಿಂದ ಹಿಡಿಸುವುದಿಲ್ಲ, ಚಿತ್ರ ಮುಗಿದ ಮೇಲೆ ಮನಸ್ಸಿನಲ್ಲಿ ಉಳಿಯುವಂತಹ ಸಂಗತಿ ಇದರಲ್ಲಿ ಇಲ್ಲ ಎಂಬ ಟೀಕೆಯಿಂದ ದೂರ ನಿಂತು ಚಿತ್ರವನ್ನು ನೋಡಿ ಆನಂದಿಸಬೇಕು. ಈ ಚೌಕಟ್ಟಿನಲ್ಲಿ ನೋಡಿದರೆ ಚಿತ್ರದ ಸ್ವಾರಸ್ಯ ಸತ್ತುಹೋಗುತ್ತದೆ. ಈ ಸಿನಿಮಾ ಅವುಗಳನ್ನು ಮೀರಿದ್ದು. ಇದೊಂದು ವಿಸ್ಮಯಕಾರಿ ಪಯಣ.
ಸಿನಿಮಾದ ಅಂತ್ಯದಲ್ಲಿ ಮನದಲ್ಲಿ ಉಳಿಯುವುದು ಒಂದು ಗಾಢವಾದ ಮೌನ. ಒಂದು ಹನಿ ಕಣ್ಣೀರು. ಆಳವಾದ ತಳಮಳ.
ಇದನ್ನೂ ಓದಿ: Movie Review: Vikram | ತೆರೆಯ ಮೇಲೆ ಘಟಾನುಘಟಿಗಳ ತ್ರಿವಿಕ್ರಮ, ಕ್ಷಣ ಕ್ಷಣವೂ ರೋಚಕ
ದೇಶ
ಜಿಮೇಲ್ ಓಪನ್ ಆಗ್ಲಿಲ್ಲ, ಅದ್ಕೆ ಜೈಲಿನಿಂದ ಬಿಡಲಿಲ್ಲ! ಹೈಕೋರ್ಟ್ ಬೇಲ್ ನೀಡಿದ್ರೂ 3 ವರ್ಷ ಜೈಲಿನಲ್ಲೇ ಉಳಿದ ಯುವಕ!
Gujarat High Court: ಗುಜರಾತ್ ಹೈಕೋರ್ಟ್ ಜಾಮೀನು ನೀಡಿದರೂ ಜೈಲು ಅಧಿಕಾರಿಗಳು ಆರೋಪಿಯನ್ನು ಮೂರು ವರ್ಷಗಳ ಕಾಲ ಜೈಲಿನಲ್ಲಿ ಉಳಿಸಿಕೊಂಡಿದ್ದೇಕೆ?
ಅಹಮದಾಬಾದ್: ಜಾಮೀನು ನೀಡಿದರೂ 3 ವರ್ಷಗಳಿಂದ ಜೈಲಿನಿಂದ ಬಿಡುಗಡೆಯಾಗದ 27 ವರ್ಷದ ಯುವಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗುಜರಾತ್ ಹೈಕೋರ್ಟ್(Gujarat High Court), ಗುಜರಾತ್ ರಾಜ್ಯ ಸರ್ಕಾರಕ್ಕೆ (Gujarat State Government) ಬುಧವಾರ ಆದೇಶಿಸಿದೆ. 2020ರಲ್ಲಿ ಗುಜರಾತ್ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಜೈಲು ಅಧಿಕಾರಿಗಳ (Jail Officials) ನಿರ್ಲಕ್ಷ್ಯದಿಂದಾಗಿ ಯುವಕ ಆಲ್ಮೋಸ್ಟ್ 3 ವರ್ಷಗಳವರೆಗೆ ಜೈಲಿನಲ್ಲಿ ಕೊಳೆಯುವಂತಾಯಿತು. ಅಲ್ಲದೇ, ಜೈಲು ಅಧಿಕಾರಿಗಳು ಕೊಟ್ಟಿರುವ ಕಾರಣ ಕೂಡ ವಿಚಿತ್ರವಾಗಿದೆ. ಜಿಮೇಲ್ ತೆರೆಯಲು (Gmail) ಸಾಧ್ಯವಾಗದ್ದಕ್ಕೆ ಜೈಲಿನಿಂದ ಬಿಡುಗಡೆ ಸಾಧ್ಯವಾಗಿಲ್ಲ ಎಂದು ಸಬೂಬು ಹೇಳಿರುವುದು ಅಪಹಾಸ್ಯಕ್ಕೆ ಕಾರಣವಾಗಿದೆ.
ಜಾಮೀನು ಆದೇಶವನ್ನು 2020ರ ಸೆಪ್ಟೆಂಬರ್ 29ರಂದು ನೀಡಲಾಯಿತು. ಆದರೆ ನಿನ್ನೆ, 2023ರ ಸೆಪ್ಟೆಂಬರ್ 21ರಂದು ಅಂತಿಮವಾಗಿ ಅಪರಾಧಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ ಮತ್ತು ಎಂಆರ್ ಮೆಂಗ್ಡೆ ಅವರ ಪೀಠವು 35 ಪುಟಗಳ ಆದೇಶದಲ್ಲಿ ತಿಳಿಸಿದೆ. ಕಾರಾಗೃಹ ಅನುಭವಿಸುತ್ತಿದ್ದ 27 ವರ್ಷದ ಚಂದನ್‌ಜಿ ಠಾಕೂರ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಪೀಠವು ಈ ಆದೇಶವನ್ನು ನೀಡಿದೆ.
ಜೈಲು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೈಕೋರ್ಟ್ ಆದೇಶದ ಹೊರತಾಗಿಯೂ ಜೈಲಿನಲ್ಲಿಯೇ ಉಳಿದಿರುವ ಅರ್ಜಿದಾರರ ದುರವಸ್ಥೆಯನ್ನು ಪರಿಗಣಿಸಿ, ಸುಮಾರು ಮೂರು ವರ್ಷಗಳ ಕಾಲ ಅಕ್ರಮವಾಗಿ ಜೈಲಿನಲ್ಲಿದ್ದಕ್ಕಾಗಿ ಪರಿಹಾರವನ್ನು ನೀಡಲು ನಾವು ಒಲವು ತೋರಿದ್ದೇವೆ. ಅರ್ಜಿದಾರರನ್ನು ಸಾಮಾನ್ಯ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಈ ನ್ಯಾಯಾಲಯವು ಸೆಪ್ಟೆಂಬರ್ 2020 ರ ಜಾಮೀನು ಆದೇಶದ ಬಗ್ಗೆ ಹೈಕೋರ್ಟ್‌ನ ನೋಂದಾವಣೆ ಜೈಲು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಜೈಲು ಅಧಿಕಾರಿಗಳಿಗೆ ಆದೇಶದ ಇ-ಮೇಲ್ ಬಂದಿಲ್ಲ ಎಂಬುದು ನಿಜವಲ್ಲ.ಅವರು ಇ-ಮೇಲ್ ಸ್ವೀಕರಿಸಿದ್ದರೂ, ಅಟ್ಯಾಚ್‌ಮೆಂಟ್ ಓಪನ್ ಮಾಡಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ಹೇಳಿದೆ.
ಈ ಸುದ್ದಿಯನ್ನೂ ಓದಿ: Congress Guarantee : ಗೃಹಲಕ್ಷ್ಮಿ, ಗೃಹಜ್ಯೋತಿ ಜಾಹೀರಾತಿನಲ್ಲಿ ಸಿಎಂ, ಡಿಸಿಎಂ ಫೋಟೊ ಬಳಕೆ ಪ್ರಶ್ನಿಸಿದ ಅರ್ಜಿ ವಜಾ
ಜಾಮೀನು ಆದೇಶವನ್ನು ಒಳಗೊಂಡಿರುವ ಇಮೇಲ್ ಅನ್ನು ಮೆಹ್ಸಾನಾದ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಆದೇಶದ ಸರಿಯಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಯಾವುದೇ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿಲ್ಲ. ದುರದೃಷ್ಟವಶಾತ್, ನಿನ್ನೆಯವರೆಗೆ ಈ ವಿಷಯದ ಬಗ್ಗೆ ಯಾರೂ ತಲೆಯೇ ಕೆಡಿಸಿಕೊಂಡಿಲ್ಲ. ಆದ್ದರಿಂದ, ನ್ಯಾಯದ ಹಿತದೃಷ್ಟಿಯಿಂದ ಮತ್ತು ಜೈಲು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಜಿದಾರರು ಜೈಲಿನಲ್ಲಿ ಉಳಿಯುಂತಾಯಿತು. ಹಾಗಾಗಿ ಅವರಿಗೆ 1 ಲಕ್ಷ ರೂ. ಪರಿಹಾರವನ್ನು ನೀಡುವಂತೆ ರಾಜ್ಯಕ್ಕೆ ನಿರ್ದೇಶಿಸುತ್ತಿದ್ದೇವೆ. ಲಕ್ಷ. 14 ದಿನಗಳ ಅವಧಿಯೊಳಗೆ ಪಾವತಿಸಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಜೈಲು ದಾಖಲೆಗಳ ಪ್ರಕಾರ, ಅರ್ಜಿದಾರರು ಈಗಾಗಲೇ ಐದು ವರ್ಷಗಳಿಗಿಂತ ಹೆಚ್ಚು ಅವಧಿಯನ್ನು ಜೈಲಿನಲ್ಲಿ ಕಳೆದಿದ್ದಾರೆ.
ದೇಶ
Flipkart, Amazon Sale: ಹಬ್ಬದ ಸೀಸನ್ ಆನ್‌ಲೈನ್ ಖರೀದಿ, ಕ್ರೆಡಿಟ್ ಕಾರ್ಡ್‌ದಾರರು ತಿಳಿದುಕೊಳ್ಳಬೇಕಾದ ಸಂಗತಿಗಳು
Flipkart, Amazon Sale: ಫ್ಲಿಪ್‌ಕಾರ್ಟ್, ಅಮೆಜಾನ್ ಸೇರಿದಂತೆ ಆನ್‌ಲೈನ್ ಶಾಪಿಂಗ್ ಜಾಲತಾಣಗಳು ಬೃಹತ್ ಸೇಲ್ ಆರಂಭಿಸಲಿವೆ. ಈ ವೇಳೆ, ಕ್ರೆಡಿಟ್ ಕಾರ್ಡ್ ಲಾಭದಾಯಕವಾಗಿ ಬಳಸುವುದು ಹೇಗೆ?
ಭಾರತದಲ್ಲೀಗ ಈಗ ಹಬ್ಬಗಳ ಸಮಯ(Festive Season in India). ಹಾಗಾಗಿ, ಭರ್ಜರಿ ಸೇಲ್‌ಗಳ ಭರಾಟೆ ಇದ್ದೆ ಇರುತ್ತದೆ. ಈ ರೇಸ್‌ನಲ್ಲಿ ಆನ್‌ಲೈನ್ ಕಾಮರ್ಸ್ ತಾಣಗಳು ಕೂಡ ಹಿಂದೆ ಬಿದ್ದಿಲ್ಲ. ಫ್ಲಿಪ್‌ಕಾರ್ಟ್ (Flipkart), ಅಮೆಜಾನ್‌ನಂತ (Amazon) ದೈತ್ಯ ಆನ್‌ಲೈನ್ ಮಾರಾಟ ಕಂಪನಿಗಳು ಈ ಹಬ್ಬದ ಸಂದರ್ಭದಲ್ಲಿ ಸೇಲ್ಸ್ ಆರಂಭಿಸುತ್ತವೆ. ಈ ಹಬ್ಬದ ಸಮಯದಲ್ಲಿ ಭಾರತೀಯ ಕುಟುಂಬಗಳು ಸಾಕಷ್ಟು ಹಣವನ್ನು ಖರೀದಿಯ ಮೇಲೆ ವೆಚ್ಚ ಮಾಡುತ್ತವೆ. ಹಾಗಿದ್ದರೆ, ನೀವು ಆನ್‌ಲೈನ್ ಖರೀದಿಗೆ ಕ್ರೆಡಿಟ್ ಕಾರ್ಡ್‌ಗಳನ್ನು (Credit Cards) ಬಳಸುತ್ತಿದ್ದರೆ, ಒಂಚೂರು ಜಾಣ ತೋರಿಸಿದ್ರೆ ಸಾಕಷ್ಟು ಹಣವನ್ನು ಉಳಿತಾಯ (Save Money) ಮಾಡಬಹುದು. ಹೇಗೆ ವೆಚ್ಚ ಉಳಿತಾಯ ಮಾಡಬಹುದು ಎಂದು ನೋಡೋಣ ಬನ್ನಿ(Flipkart, Amazon Sale).
ಸೂಕ್ತ ಕಾರ್ಡ್ ಬಳಕೆ ಮಾಡಿ
ಆನ್‌ಲೈನ್ ಖರೀದಿಯ ಸಮಯದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮೊಟ್ಟ ಮೊದಲ ವಿಷಯ ಏನೆಂದರೆ, ನೀವು ಸರಿಯಾದ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ಮೊದಲು, ನೀವು ಅದರ ಎಲ್ಲಾ ಸೇವೆಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಪರಿಶೀಲಿಸಬೇಕು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮಗೆ ಸೂಕ್ತವಾದ ಯಾವುದೇ ಕ್ರೆಡಿಟ್ ಮಿತಿಯನ್ನು ನೀವು ತೆಗೆದುಕೊಳ್ಳಬಹುದು. ಇದಲ್ಲದೆ, ಹಲವಾರು ಕಂಪನಿಗಳು ವಿವಿಧ ರೀತಿಯ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ಹಾಗಾಗಿ, ಕಾರ್ಡ್ ಪಡೆಯುವಾಗ ನಿಮ್ಮ ಅಗತ್ಯಗಳನ್ನು ಪೂರೈಸು ಕಾರ್ಡ್ ಪಡೆದುಕೊಳ್ಳಿ.
ಕ್ರೆಡಿಟ್ ಕಾರ್ಡ್ ಕೆಟಗರಿ ತಿಳಿದಿರಲಿ
ಕ್ರೆಡಿಟ್ ಕಾರ್ಡ್ ಬ್ಯಾಂಕ್‌ಗಳು ಅನೇಕ ವಿಧಗಳಲ್ಲಿ ಗ್ರಾಹಕರಿಗೆ ಆಫರ್‌ಗಳನ್ನು ನೀಡುತ್ತವೆ. ಹಾಗಾಗಿ, ಅವರ ಕ್ರೆಡಿಟ್ ಕಾರ್ಡ್‌ಗಳನ್ನು ಆಯ್ಕೆ ಮಾಡುವ ಮುನ್ನ ಅವುಗಳ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಮಹತ್ವವಾಗುತ್ತದೆ. ನಿರ್ದಿಷ್ಟ ಕೆಟಗರಿಯ ಕೊಡುಗೆಗಳ ಪ್ರಕಾರ ಒಬ್ಬ ಕಾರ್ಡ್ ಹೋಲ್ಡರ್ ಶಾಪಿಂಗ್ ಮಾಡಿದರೆ, ನಂತರ ಆತನಿಗೆ ಕ್ಯಾಶ್‌ಬ್ಯಾಕ್, ರಿಯಾಯಿತಿಗಳು ಅಥವಾ ಪ್ರಯೋಜನಗಳು ದೊರೆಯುತ್ತವೆ. ಈ ಬಗ್ಗೆ ಗಮನಹರಿಸಬೇಕು.
ಕ್ರೆಡಿಟ್ ಕಾರ್ಡ್ ಬಳಕೆ ಎಷ್ಟು?
ಕ್ರೆಡಿಟ್ ಕಾರ್ಡ್ ಪಡೆಯುವಾಗ ನೀವು ಎಷ್ಟು ಬಾರಿ ಕ್ರೆಡಿಟ್ ಕಾರ್ಡ್ ಬಳಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಂಡರೆ ಉತ್ತಮ. ಒಂದು ವೇಳೆ ಅಗತ್ಯವೇ ಇಲ್ಲದಿದ್ದರೆ ಸುಮ್ಮನೆ ಕ್ರೆಡಿಟ್ ಕಾರ್ಡ್ ಪಡೆದುಕೊಂಡರೆ ಲಾಭವಿಲ್ಲ. ಅದು ನಿಮ್ಮ ಮೇಲೆ ಹಣಕಾಸಿನ ಹೊರೆಯಾಗುತ್ತದೆ. ದೈನಂದಿನ ವಹಿವಾಟುಗಳಿಗೆ ನೀವು ಕ್ರೆಡಿಟ್ ಕಾರ್ಡ್‌ಗಳನ್ನು ನಿಯಮಿತವಾಗಿ ಬಳಸಬೇಕಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಆಹಾರ ಅಥವಾ ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು. ಇದರೊಂದಿಗೆ, ಭವಿಷ್ಯದಲ್ಲಿ ಯಾವುದೇ ವಸ್ತುವಿನ ಬೆಲೆಯನ್ನು ಕಡಿಮೆ ಮಾಡಲು ಮತ್ತಷ್ಟು ಬಳಸಬಹುದಾದ ಕ್ರೆಡಿಟ್ ಕಾರ್ಡ್ ಬಹುಮಾನಗಳು ಅಥವಾ ಬೋನಸ್ ಅಂಕಗಳನ್ನು ಪಡೆಯಬಹುದು.
ಚೆಕ್ ಸೈನ್‌ಅಪ್ ಲಾಭಗಳು
ಹಲವಾರು ಬ್ಯಾಂಕುಗಳು ಮತ್ತು ಕಂಪನಿಗಳು ಸಹ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸೈನ್ ಅಪ್ ಬೋನಸ್ ಮತ್ತು ವೆಲ್‌ಕಮ್ ಬೆನ್‌ಫಿಟ್ಸ್ ನೀಡುತ್ತವೆ. ಹಲವಾರು ಇತರ ಕಾರ್ಡ್ ವಿತರಕರು ಹೊಸ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಬಹುಮಾನಗಳು, ಕೂಪನ್‌ಗಳು ಮತ್ತು ರಿಯಾಯಿತಿಗಳನ್ನು ಸಹ ನೀಡುತ್ತಾರೆ. ಹಾಗಾಗಿ ಕಾರ್ಡ್ ಖರೀದಿಸುವ ಮುನ್ನ ಈ ರೀತಿಯ ಆಫರ್ಸ್, ಬೆನ್ಫಿಟ್ಸ್ ಇದೆಯಾ ಅಂತ ಚೆಕ್ ಮಾಡುವುದು ಉತ್ತಮ ನಡೆಯಾಗುತ್ತದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ Money Guide | ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ಸುರಕ್ಷತೆಗೆ ಆರ್‌ಬಿಐ ಟೋಕನ್ ಶೀಘ್ರ, ಏನಿದು?
ಕ್ರೆಡಿಟ್ ಕಾರ್ಡ್ಸ್‌ನ ವಿಶಿಷ್ಟ ಬೆನೆಫಿಟ್ಸ್
ಎಲ್ಲಾ ಕ್ರೆಡಿಟ್ ಕಾರ್ಡ್‌ಗಳು ವಿಶಿಷ್ಟ ಪ್ರಯೋಜನದ ರಚನೆಯನ್ನು ಹೊಂದಿವೆ. ಕಾರ್ಡ್ ಮಲಕ ವಹಿವಾಟುಗಳನ್ನು ನಡೆಸಿದಾಗ ಕ್ಯಾಶ್‌ಬ್ಯಾಕ್, ವ್ಯಾಪಾರಿ ಮಳಿಗೆಗಳಲ್ಲಿ ರಿಯಾಯಿತಿಗಳು, ಪಾಲುದಾರ ವ್ಯಾಪಾರಿಗಳಲ್ಲಿ ವೇಗವರ್ಧಿತ ರಿವಾರ್ಡ್ ಪಾಯಿಂಟ್‌ಗಳು, ಇಂಧನ ಸರ್ಚಾರ್ಜ್ ಮನ್ನಾ ಮತ್ತು ಇನ್ನೂ ಹೆಚ್ಚಿನ ಲಾಭಗಳು ದೊರೆಯುತ್ತವೆ. ಹಾಗಾಗಿ, ಕಾರ್ಡ್ ಅನ್ನು ಬಳಸುವ ಮೊದಲು ಅದರ ಸಂಪೂರ್ಣ ಪ್ರಯೋಜನದ ರಚನೆಯನ್ನು ನೀವು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕೆಲವೊಮ್ಮೆ ನಷ್ಟವಾಗುವ ಸಾಧ್ಯತೆಗಳಿರುತ್ತವೆ.
ಕ್ರಿಕೆಟ್
ಕೊಹ್ಲಿಗೆ ಹೆದರಿಯೇ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ 24 ವರ್ಷದ ನವೀನ್ ಉಲ್ ಹಕ್
ಅಫಘಾನಿಸ್ತಾನ ಕ್ರಿಕೆಟ್ ತಂಡದ ಯುವ ವೇಗಿ ನವೀನ್ ಉಲ್ ಹಕ್(Naveen-ul-Haq) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.(Naveen-ul-Haq retirement) ಏಕದಿನ ವಿಶ್ವಕಪ್ ಟೂರ್ನಿಯ(World Cup) ಬಳಿಕ ಅವರು ನಿವೃತ್ತಿಯಾಗಲಿದ್ದಾರೆ.
ಕಾಬುಲ್: 16ನೇ ಆವೃತ್ತಿಯ ಐಪಿಎಲ್ ವೇಳೆ ವಿರಾಟ್ ಕೊಹ್ಲಿ(Naveen-ul-Haq and virat kohli) ಜತೆ ಕಿರಿಕ್ ಮಾಡಿದ್ದ ಅಫಘಾನಿಸ್ತಾನ ಕ್ರಿಕೆಟ್ ತಂಡದ ಯುವ ವೇಗಿ ನವೀನ್ ಉಲ್ ಹಕ್(Naveen-ul-Haq) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.(Naveen-ul-Haq retirement) ಏಕದಿನ ವಿಶ್ವಕಪ್ ಟೂರ್ನಿಯ(World Cup) ಬಳಿಕ ಅವರು ನಿವೃತ್ತಿಯಾಗಲಿದ್ದಾರೆ.
24 ವರ್ಷದ ವೇಗಿ ನವೀನ್ ಉಲ್ ಹಕ್ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಟಿ20 ಕ್ರಿಕೆಟ್ ಕಡೆ ಹೆಚ್ಚಿನ ಗಮನ ನೀಡುವ ಸಲುವಾಗಿ ಅವರು ಏಕದಿನ ಕ್ರಿಕೆಟ್ಗೆ ಗುಡ್ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ನವೀನ್ ಉಲ್ ಹಕ್ ನಿವೃತ್ತಿ ಘೋಷಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಕಿಂಗ್ ಕೊಹ್ಲಿಯ ಭಯದಿಂದಲೇ ನಿವೃತ್ತಿ ಪಡೆದಿರುವುದಾಗಿ ಟ್ರೋಲ್ ಮಾಡಿದ್ದಾರೆ.
ಎರಡು ವರ್ಷಗಳ ಬಳಿಕ ಅವಕಾಶ
ನವೀನ್ ಉಲ್ ಹಕ್ ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಎರಡು ವರ್ಷಗಳ ಬಳಿಕ ಅಫಘಾನಿಸ್ತಾನ ತಂಡದಲ್ಲಿ ಅವಕಾಶ ಪಡೆದರು. 2021ರಲ್ಲಿ ಕೊನೆಯ ಬಾರಿಗೆ ಅಫ್ಘಾನ್ ಪರ ಅವರು ಏಕದಿನ ಕ್ರಿಕೆಟ್ ಪಂದ್ಯ ಆಡಿದ್ದರು. ಈ ಬಾರಿಯ ಐಪಿಎಲ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಕಾರಣ ಅವರಿಗೆ ಮತ್ತೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಭಾರತದ ಪಿಚ್ನಲ್ಲಿ ಅವರು ಹಿಡಿತ ಸಾಧಿಸಿರುವುದೇ ತಂಡದಲ್ಲಿ ಸ್ಥಾನ ಪಡೆಯಲು ಪ್ರಮುಖ ಕಾರಣ. ಒಟ್ಟು 7 ಏಕದಿನ ಪಂದ್ಯ ಆಡಿರುವ ಅವರು 14 ವಿಕೆಟ್ ಮತ್ತು 21 ರನ್ ಗಳಿಸಿದ್ದಾರೆ 44ಕ್ಕೆ 4 ವಿಕೆಟ್ ಕೆಡವಿದ್ದು ಅವರ ಶ್ರೇಷ್ಠ ವೈಯಕ್ತಿ ಸಾಧನೆಯಾಗಿದೆ.
ಇದನ್ನೂ ಓದಿ IPL 2023: ಕೊಹ್ಲಿ ಬಳಿ ಕ್ಷಮೆ ಕೇಳಿದರೇ ನವೀನ್ ಉಲ್ ಹಕ್? ಟ್ವೀಟ್ನಲ್ಲಿ ಏನಿದೆ?
ಐಪಿಎಲ್ ವೇಳೆ ಕೊಹ್ಲಿ ಜತೆ ಕಿರಿಕ್
ಮೇ 1ರಂದು ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ಮತ್ತು ನವೀನ್ ಉಲ್-ಹಕ್ ಮಧ್ಯೆ ಮೈದಾನದಲ್ಲಿಯೇ ಕಿರಿಕ್ ಆಗಿತ್ತು. ಬಳಿಕ ಪಂದ್ಯ ಮುಗಿದ ಬಳಿಕ ಗಂಭೀರ್ ಅವರು ಇದೇ ವಿಚಾರವಾಗಿ ಕೊಹ್ಲಿ ಜತೆ ವಾಗ್ವಾದ ನಡೆಸಿದ್ದರು. ಈ ಘಟನೆ ನಡೆದ ಬಳಿಕ ನವೀನ್ ಅವರು ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ಸೋತ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕಿ ಪರೋಕ್ಷವಾಗಿ ಟ್ರೋಲ್ ಮಾಡಿದ್ದರು. ಇಲ್ಲಿಂದ ಆರಂಭಗೊಂಡ ಈ ಸಮರವನ್ನು ಮುಂದೆ ವಿರಾಟ್ ಅಭಿಮಾನಿಗಳು ಮುಂದುವರಿಸಿದ್ದರು.
ಏಷ್ಯಾಕಪ್ನಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಮುಖಾಮುಖಿ ಆಗುವುದನ್ನು ಕೊಹ್ಲಿ(naveen ul haq and virat kohli) ಅಭಿಮಾನಿಗಳು ಬಾರಿ ನಿರೀಕ್ಷೆ ಮಾಡಿದ್ದರು. ಆದರೆ ಅವರು ನವೀನ್ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿಯ ಅಭಿಮಾನಿಗಳು ಬೇಸರಗೊಂಡಿದ್ದರು. ನವೀನ್ಗೆ ಕೊಹ್ಲಿ ಸರಿಯಾಗಿ ದಂಡಿಸಬೇಕು, ಆ ಬಳಿಕ ಅವರನ್ನು ಟ್ರೋಲ್ ಮಾಡಬೇಕು ಎಂದು ಕೊಹ್ಲಿ ಅಭಿಮಾನಿಗಳು ಕಾದು ಕುಳಿತ್ತಿದ್ದರು. ಆದರೆ ಅವರು ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ವಿಶ್ವಕಪ್ನಲ್ಲಿ ಅವರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕೊಹ್ಲಿ ಅಭಿಮಾನಿಗಳು ಅಫಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಕಾದು ಕುಳಿತಿದ್ದಾರೆ.
ಕರ್ನಾಟಕ
VISTARA TOP 10 NEWS : ಎಲ್ಲರ ಕಣ್ಣು ಶುಕ್ರವಾರದ ಕರ್ನಾಟಕ ಬಂದ್‌ನತ್ತ, ಇಸ್ರೋ ಚಿತ್ತ ಮಾತ್ರ ಶುಕ್ರನತ್ತ!
VISTARA TOP 10 NEWS: ಕರ್ನಾಟಕ ಬಂದ್‌ಗೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಇತ್ತ ಇಸ್ರೋ ಮಂಗಳದತ್ತ ಹೊರಡಲು ಸಜ್ಜಾಗಿದೆ. ಹೀಗೆ ದಿನದ ಪ್ರಮುಖ ಸುದ್ದಿಗಳ ಸಾರವೇ ವಿಸ್ತಾರ ಟಾಪ್ 10 ನ್ಯೂಸ್
1.ಕಾವೇರಿ ಉಳಿವಿಗಾಗಿ ಸಿಡಿದೆದ್ದ ಬಿಜೆಪಿ, ಜೆಡಿಎಸ್; ವಿಧಾನಸೌಧದ ಮುಂದೆ ದೋಸ್ತಿಗಳ ಪ್ರತಿಭಟನೆ
ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಬಿಜೆಪಿ – ಜೆಡಿಎಸ್ ನಾಯಕರು (BJP JDS leaders) ಜಂಟಿಯಾಗಿ ಬುಧವಾರ (ಸೆಪ್ಟೆಂಬರ್ 27) ಅಖಾಡಕ್ಕೆ ಇಳಿದಿದ್ದು, ರಾಜ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಡಿಎಂಕೆ ಏಜೆಂಟರಂತೆ ವರ್ತಿಸುತ್ತಿದೆ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2 ಬೆಂಗಳೂರು ಬಂದ್ ಬಳಿಕ ಶುಕ್ರವಾರದ ಕರ್ನಾಟಕ ಬಂದ್‌ಗೆ ಸಿದ್ಧತೆ: ಏನಿರುತ್ತೆ? ಏನಿರಲ್ಲ?
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ, ಕೆಲವು ಬೆಂಬಲ ಕೊಡುವುದಿಲ್ಲ ಎಂದಿವೆ. ಹಾಗಿದ್ದರೆ ಹೇಗಿರುತ್ತದೆ ಬಂದ್? ಯಾರೆಲ್ಲ ಬೆಂಬಲ ನೀಡಿದ್ದಾರೆ? ಇಲ್ಲಿದೆ ವಿವರ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಕರ್ನಾಟಕ ಬಂದ್ ದಿನವೇ ಪ್ರಾಧಿಕಾರದ ಸಭೆ-ಕಾವೇರಿ ಹೋರಾಟಕ್ಕೆ ನಂಜಾವಧೂತ, ಸುತ್ತೂರು ಶ್ರೀ ಎಂಟ್ರಿ
ಕರ್ನಾಟಕ ಬಂದ್ ನಡೆಯಲಿರುವ ಸೆ. 29ರಂದೇ ಕಾವೇರಿ ಪ್ರಾಧಿಕಾರದ ಸಭೆಯೂ ನಡೆಯಲಿದೆ. ಈ ಬಾರಿ ಏನಾಗಲಿದೆ ಎಂಬ ಕುತೂಹಲವಿದೆ. ಈ ನಡುವೆ ಇಬ್ಬರು ಸ್ವಾಮೀಜಿಗಳು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಬಿಜೆಪಿ ದೋಸ್ತಿಯಿಂದ ಜಾತ್ಯತೀತ ನಿಲುವು ಬದಲಾಗಲ್ಲ ಎಂದ ಎಚ್.ಡಿ. ದೇವೇಗೌಡ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನಿಂದ ಪಕ್ಷಕ್ಕಾದ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ದು ಯಾರು ಎಂಬ ಬಗ್ಗೆಯೂ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ. ಇದೇವೇಳೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ಜಾತ್ಯತೀತ ನಿಲುವು ಬದಲಾಗುವುದಿಲ್ಲ ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಲೋಕಸಮರ ಮುನ್ನ ಬಿಜೆಪಿ ರಥಯಾತ್ರೆ; 2.5 ಲಕ್ಷ ಗ್ರಾಮಗಳಲ್ಲಿ ಪ್ರಚಾರದ ರಣತಂತ್ರ
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲು ಬಿಜೆಪಿಯು ರಣತಂತ್ರ ರೂಪಿಸಿದೆ. ಗ್ರಾಮೀಣ ಸಂವಾದ ಯಾತ್ರೆ ಮೂಲಕ ಗ್ರಾಮೀಣ ಭಾಗದ ಜನರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ. 2.5 ಲಕ್ಷ ಗ್ರಾಮ ತಲುಪುವ ಯಾತ್ರೆ ಮಾಹಿತಿ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಭಾರತದಲ್ಲಿ ಶುರುವಾಯ್ತು ಆಪರೇಷನ್ ಖಲಿಸ್ತಾನ್- ಒಂದೇ ದಿನ ದೇಶದ 50 ಕಡೆ ಎನ್‌ಐಎ ದಾಳಿ
ಖಲಿಸ್ತಾನ್ ಉಗ್ರರು (Khalistani Terrorist) ಹಾಗೂ ಗ್ಯಾಂಗ್‌ಸ್ಟರ್‌ಗಳ (gangsters) ನಡುವಿನ ಲಿಂಕ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಆರು ರಾಜ್ಯಗಳ 50 ಸ್ಥಳಗಳಲ್ಲಿ ಬೃಹತ್ ಪ್ರಮಾಣದ ದಾಳಿ ನಡೆಸಿದೆ. ಇದು ಖಲಿಸ್ತಾನಿಗಳ ವಿರುದ್ಧದ ದೊಡ್ಡ ಆಪರೇಷನ್ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಸತ್ತು ಹೋಯ್ತಾ ಮಾನವೀಯತೆ?; ಅತ್ಯಾಚಾರಕ್ಕೀಡಾದ ಬಾಲಕಿ ಕಣ್ಣೀರಿಟ್ಟು ಅಡ್ಡಾಡಿದ್ರೂ ಕರಗದ ಮನಸ್ಸು
ಮಧ್ಯಪ್ರದೇಶದಲ್ಲಿ (Madhya Pradesh) 12 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಲೈಂಗಿಕ ದೌರ್ಜನ್ಯದ ಬಳಿಕ ಬಾಲಕಿಯು ಸಹಾಯಕ್ಕಾಗಿ ಅಂಗಲಾಚಿಕೊಂಡು ಮನೆ ಮನೆಗೆ ಹೋದರೂ ಯಾರೂ ಸಹಾಯ ಮಾಡದಿರುವುದು ಜನರ ಮನಸ್ಥಿತಿಗೂ ಕನ್ನಡಿ ಹಿಡಿದಂತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಇಸ್ರೋಗೆ ಶುರುವಾಯ್ತು ಶುಕ್ರದೆಸೆ- ಚಂದ್ರ, ಸೂರ್ಯನ ಬಳಿಕ ಶುಕ್ರಯಾನಕ್ಕೆ ಭಾರತ ಸಿದ್ಧತೆ
ಚಂದ್ರಯಾನ 3 ಮಿಷನ್ (Chandrayaan 3) ಯಶಸ್ಸಿನ ಬಳಿಕ ಜಾಗತಿಕವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗೌರವ ನೂರ್ಮಡಿಯಾಗಿದೆ. ಆದಿತ್ಯ ಮಿಷನ್ ಬೆನ್ನಲ್ಲೇ ಇಸ್ರೋ ಗಮನ ಈಗ ಶುಕ್ರನ (Venus Misssion) ಮೇಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9.- ಇರಾಕ್ ಅಗ್ನಿಅವಘಡದಲ್ಲಿ ವಧು, ವರ ಸೇರಿ 114ಕ್ಕೂ ಹೆಚ್ಚುಮಂದಿ ಸಜೀವ ದಹನ
ಇರಾಕ್‌ನ ನಿನೆವೆಹ್ ಪ್ರಾಂತ್ಯದ ಹಮ್ದನಿಯಾ ಪ್ರದೇಶದಲ್ಲಿರುವ ಮದುವೆ ಹಾಲ್‌ನಲ್ಲಿ (Wedding Hall) ಭೀಕರ ಅಗ್ನಿ ದುರಂತ (Iraq Fire Accident) ಸಂಭವಿಸಿದ್ದು, 114 ಜನ ಮೃತಪಟ್ಟಿದ್ದಾರೆ. ದುರಂತದಲ್ಲಿ ಮದುಮಕ್ಕಳು ಕೂಡ ಮೃತಪಟ್ಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. 101 ಕೋಟಿ ರೂ. ಮೌಲ್ಯದ ಷೇರು ಹೊಂದಿರುವ ಈ ವ್ಯಕ್ತಿ ಹೇಗೆ ಜೀವನ ಸಾಗಿಸುತ್ತಿದ್ದಾರೆ ನೋಡಿ!
ಒಂದು ದೊಡ್ಡ ಚಡ್ಡಿ ಧರಿಸಿ, ಮೇಲುಮೈಯಲ್ಲಿ ಇನ್ಯಾವ ದಿರಸನ್ನೂ ಧರಿಸದೆ ಅತ್ಯಂತ ಸರಳವಾಗಿ ನಗುತ್ತಿರುವ ಈ ಹಿರಿಯ ನಾಗರಿಕರ ಆಸ್ತಿ ಮೌಲ್ಯ ಎಷ್ಟು ಎಂದು ತಿಳಿದರೆ ನೀವು ನಿಜಕ್ಕೂ ಬೆಚ್ಚಿ ಬೀಳಬಹುದು. ಹೌದು, ಇವರೇ ಹೇಳಿಕೊಳ್ಳುವಂತೆ, ಇವರ ಬಳಿ 101 ಕೋಟಿ ರೂ. ಮೌಲ್ಯದ ಷೇರುಗಳಿವೆ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
-
ಪ್ರಮುಖ ಸುದ್ದಿ19 hours ago
Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!
-
ಪ್ರಮುಖ ಸುದ್ದಿ9 hours ago
German Shepherd: ಸೀಕ್ರೆಟ್ ಸರ್ವಿಸ್ ಏಜೆಂಟ್ನಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ‘ಕಮಾಂಡರ್’!
-
ವಿದೇಶ10 hours ago
Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.
-
ಕ್ರೈಂ14 hours ago
ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!
-
ಕರ್ನಾಟಕ10 hours ago
Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು
-
ಪ್ರಮುಖ ಸುದ್ದಿ22 hours ago
Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!
-
ದೇಶ11 hours ago
Venus Mission: ಇಸ್ರೋಗೆ ‘ಶುಕ್ರ’ದೆಸೆ; ಚಂದ್ರ, ಸೂರ್ಯನ ಬಳಿಕ ಶುಕ್ರನತ್ತ ಚಿತ್ತ; ಉಡಾವಣೆ ಯಾವಾಗ?
-
ಕ್ರಿಕೆಟ್10 hours ago
IND vs AUS: ಅಂತಿಮ ಪಂದ್ಯದಲ್ಲಿ ತಿರುಗಿ ಬಿದ್ದ ಆಸೀಸ್; ಭಾರತಕ್ಕೆ ಬೃಹತ್ ಮೊತ್ತದ ಗುರಿ