ಚಿತ್ರ: 21 ಅವರ‍್ಸ್
ನಿರ್ದೇಶನ: ಜಯಶಂಕರ್ ಪಂಡಿತ್
ನಿರ್ಮಾಪಕ: ಬಾಲಕೃಷ್ಣ, ಸುನೀಲ್ ರಾಮೇ ಗೌಡ, ಮಹಾದೇವ್ ಪ್ರವೀಣ್, ಅಭಿಷೇಕ್ ತುಮಕೂರ್
ಬ್ಯಾನರ್: ಅಹಂ ಕಾನ್ಸೆಪ್ಟಂ
ಸಂಗೀತ: ರುಪರ್ಟ್ ಫರ್ನಾಂಡಿಸ್
ಛಾಯಗ್ರಹಣ: ಎಸ್. ತಿರ‍್ರು
ತಾರಾಗಣ: ಡಾಲಿ ಧನಂಜಯ್, ದುರ್ಗಾ ಕೃಷ್ಣ, ರಾಹುಲ್ ಮಾಧವ್, ಸುದೇವ್ ನಾಯರ್, ದಿನೇಶ್ ಬಾಬು ಇತರರು
ರೇಟಿಂಗ್: 3/5
21 ಅವರ‍್ಸ್ ಸಸ್ಪೆನಸ್/ಥ್ರಿಲ್ಲರ್ ಜಾನರ್ ಸಿನಿಮಾ. ಸಸ್ಪೆನ್ಸ್ ಸಿನಿಮಾ ಮಾಡುವಾಗ ಎರಡು ವಿಷಯ ಮುಖ್ಯವಾಗಿ ಗಮನದಿಲ್ಲಡಬೇಕಾಗಿತ್ತದೆ. 1. ಸಿನಿಮಾದಲ್ಲಿ ಕೊನೆವರೆಗೂ ಕುತೂಹಲವನ್ನು ಕಾಪಾಡಬೇಕು. 2. ಸಸ್ಪೆನ್ಸ್ ಕಾಪಾಡಿಕೊಳ್ಳುವ ಧಾವಂತದಲ್ಲಿ ಚಿತ್ರ ಬೋರ್ ಆಗಬಾರದು. ಈ ಎರಡು ವಿಷಯವನ್ನೂ ನಿರ್ದೇಶಕ ಮನದಲ್ಲಿಟ್ಟುಕೊಂಡು ಕತೆಯನ್ನು ಹೆಣೆದಿರುವುದು 21 ಅವರ‍್ಸ್ ಚಿತ್ರದಲ್ಲಿ ಕಾಣುತ್ತದೆ.
ಗಮನ ಸೆಳೆಯುವ ಕಥೆ!
ಚಿತ್ರವು ಮಾಧುರಿ ಎಂಬ ಹುಡುಗಿ ನಾಪತ್ತೆ ಆದ ದೃಶ್ಯದಿಂದ ಆರಂಭವಾತ್ತದೆ. ರೋಚಕವಾಗಿ ಆರಂಭವಾಗುವ ಸಿನಿಮಾ ಆ ಹುಡುಗಿಯನ್ನು ಪತ್ತೆ ಮಾಡುವ ಸುತ್ತ ಕಥೆ ಸಾಗುತ್ತದೆ. 21 ಗಂಟೆಗಳಲ್ಲಿ ನಡೆಯುವ ಒಂದು ರೋಚಕ ಪತ್ತದಾರಿ ಕಥೆ ಇದಾಗಿದೆ. ಮಾಧುರಿ ನಾಪತ್ತೆ ಆಗಿದ್ದು ಹೇಗೆ? ಎಲ್ಲಿ ಹೋಗುತ್ತಾಳೆ? ಅವಳು ನಾಪತ್ತೆ ಆಗಲು ಕಾರಣ ಯಾರು? ಈ ಬಗ್ಗೆ ಒಬ್ಬ ಪೊಲೀಸ್ ಅಧಿಕಾರಿ ತನಿಖೆ ನಡೆಸುತ್ತಾರೆ.
ಸರಳವಾದ ಕಥೆಯಂತೆ ಕಂಡರೂ ಚಿತ್ರವು ಸಾಗುವ ರೀತಿಯಿಂದಾಗಿ ಅಲುಗಾಡದಂತೆ ಕುಳಿತು ನೋಡುವಂತೆ ಮಾಡಿದೆ. ನಿರ್ದೇಶಕ ಜಯಶಂಕರ್ ಪಂಡಿತ್ ಹಂತ ಹಂತಕ್ಕೂ ಒಂದು ತಿರುವು ನೀಡಿ ಪ್ರೇಕ್ಷಕರ ಕುತೂಹಲ ಕೆರಳಿಸಿದ್ದಾರೆ. ಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಈ ಹಿಂದೆ ಟ್ರೇಲರ್ ಬಿಡುಗಡೆಯಾದಾಗ ಒಳ್ಳೆಯ ಸಸ್ಪೆನ್ಸ್ ಸಿನಿಮಾ ಎಂಬ ಭರವಸೆ ಮೂಡಿಸಿತ್ತು.
ಪರದೆ ಮೇಲೆ ಮೆರೆದ ಡಾಲಿ!
ಡಾಲಿ ಧನಂಜಯ್ ಇತ್ತೀಚೆಗೆ ಅನೇಕ ವಿಭಿನ್ನ ಪಾತ್ರಗಳ ಸಿನಿಮಾ ಮಾಡುತ್ತಿರುವುದ ಗಮನಾರ್ಹ. ಈ ಸಿನಿಮಾದಲ್ಲಿ ಕೂಡ ಡಾಲಿ ಧನಂಜಯ್ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ತನಿಖೆ ನಡೆಸುವ ಶ್ರೀಕಾಂತ್ ಪಾತ್ರದಲ್ಲಿ ಧನಂಜಯ್ ಅಭಿನಯ ಗಮನ ಸೆಳೆಯುತ್ತದೆ. ಒಬ್ಬ ವಿಕೆಡ್ ಪೊಲೀಸ್ ಅಧಿಕಾರಿಯ ರೀತಿಯಲ್ಲಿ ಅಭಿನಯಿಸಿದ್ದಾರೆ. ಅವರ ಡೈಲಾಗ್ ಶೈಲಿ, ಕೆಲವೊಮ್ಮೆ ರಾಕ್ಷಸನಂತೆ ಹಾಗೂ ಕೆಲವೊಮ್ಮೆ ತೋರುವ ಕುಹಕ ನಗು ರೋಮಾಂಚನಗೊಳಿಸುತ್ತದೆ.
ಹೀರೊ ಹಾಗೂ ವಿಲ್ಲನ್ ಮಿಶ್ರಿತವಾದ ಅವರ ಪಾತ್ರದ ಅಭಿನಯ ಈ ಚಿತ್ರದ ಸಿಗ್ನೇಚರ್.
ಮಾಧುರಿ ಪಾತ್ರದಲ್ಲಿ ಕಾಣಿಸಿಕೊಂಡ ದುರ್ಗಾ ಕೃಷ್ಣ ಅವರ ಅಭಿನಯ ಹಾಗೂ ರೆಂಜಿತ್ ಮೆನನ್ ಪಾತ್ರದಲ್ಲಿ ಕಾಣಿಸಿಕೊಂಡ ಸುದೇವ್ ನಾಯರ್ ಅವರ ಅಭಿನಯ ಸಾಮಾನ್ಯ. ಈ ಇಬ್ಬರ ಅಭಿನಯಕ್ಕೆ ಹೋಲಿಸಿದರೆ ರಾಹುಲ್ ಮಾಧವ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಈ ಚಿತ್ರದಲ್ಲಿ ವಿಶೇಷ ಲವ್ ಸ್ಟೋರಿ ಹಾಗೂ ಡಿಸ್ಟರ್ಬ್ ಮಾಡುವ ರೀತಿಯಲ್ಲಿ ಹಾಡುಗಳು ಇಲ್ಲಿಲ್ಲ. ಈ ಸಿನಿಮಾದ ಹಿನ್ನೆಲೆ ಸಂಗೀತ ಅತ್ಯತ್ತಮಾಗಿದೆ. ರುಪೆರ್ಟ್ ಫರ್ನಾಂಡಿಸ್ ನೀಡಿದ ಸಂಗೀತ ಸಿನಿಮಾದ ಶ್ರೀಮಂತಿಕೆ.
ಸಿನಿಮಾದಲ್ಲಿ ಕಾಣುವ ದೋಷಗಳು!
ಅನೇಕ ಗುಣಾತ್ಮಕ ವಿಷಯಗಳನ್ನು ಒಳಗೊಂಡಿರುವ ಸಿನಿಮಾದಲ್ಲಿ ಕೆಲವು ದೋಷಗಳು ಕಾಣುತ್ತವೆ.
- ಮೊದಲಾರ್ಧದಲ್ಲಿ ಒಂದು ಹಿತವಾದ ಪೇಸ್‌ನಲ್ಲಿ ಸಾಗಿ, ಒಳ್ಳೆಯ ಕುತೂಹಲ ಮೂಡಿಸಿದ ಕಥೆ, ಎರಡನೇ ಭಾಗದಲ್ಲಿ ಕೆಲವು ಗಡಿಬಿಡಿಯಲ್ಲಿ ಸಾಗಿದಂತೆ ತೋರುತ್ತದೆ.
- ಚಿತ್ರದಲ್ಲಿ ಭಾಷೆಯ ತೊಡಕು ಕಾಣುತ್ತದೆ. ಮೊದಲಾರ್ಧದಲ್ಲಿ ಬಹುತೇಕ ಪಾತ್ರಗಳು ಮಲಯಾಳಂ ಮಿಶ್ರಿತ ಕನ್ನಡ ಮಾತನಾಡುವುದರಿಂದ ಸ್ಪಷ್ಟತೆ ಕಳೆದುಕೊಂಡಿದೆ. ಅಲ್ಲದೆ, ಚಿತ್ರದುದ್ದಕ್ಕೂ ಇಂಗ್ಲಿಷ್ ಭಾಷೆಯ ಬಳಕೆ ಪ್ರಮುಖವಾಗಿದ್ದು ಪ್ರೇಕ್ಷಕನಿಗೆ ಅಷ್ಟಾಗಿ ಕನೆಕ್ಟ್ ಆಗುವುದಿಲ್ಲ.
- ಡಾಲಿ ಧನಂಜಯ್ ಹೊರತು ಪಡಿಸಿ ಉಳಿದವರ ಅಭಿನಯ ಸಾಮಾನ್ಯ. ಈ ಚಿತ್ರದಲ್ಲಿ ʼವಾವ್ʼ ಎನ್ನಿಸುವ ದೃಶ್ಯವಾಗಲಿ ಅಥವಾ ಚಿತ್ರ ಮುಗಿದಮೇಲೂ ನೆನಪಿನಲ್ಲಿ ಉಳಿಯುಂತಹ ದೃಶ್ಯವಾಗಲಿ ಇಲ್ಲ.
ಈ ಚಿತ್ರವು ನಿರ್ದೇಶಕ ಜಯಶಂಕರ್ ಪಂಡಿತ್ ಅವರ ಅದ್ಭುತ ಪ್ರಯೋಗ. ಮುಂದೆಯೂ ಅವರಿಂದ ಈ ರೀತಿ ವಿಶೇಷ ಸಿನಿಮಾಗಳನ್ನು ನಿರೀಕ್ಷಿಸಬಹುದು. ಚಿತ್ರದ ಪ್ರಮೋಷನ್ ಮಾಡುವಲ್ಲಿಯೂ ಚಿತ್ರತಂಡ ಗೆದ್ದಿಲ್ಲ. ಅನೇಕರಿಗೆ ಈ ಸಿನಿಮಾದ ಬಗ್ಗೆ ತಿಳಿದಿಲ್ಲ. ಎಷ್ಟೇ ಅದ್ಭುತ ಸಿನಿಮಾ ಮಾಡಿದರೂ ಒಂದು ಮಟ್ಟದ ಪ್ರಮೋಷನ್ ಮಾಡದಿದ್ದರೆ ಚಿತ್ರವು ಯಶಸ್ವಿಯಾಗಲು ವಿಫಲವಾಗುತ್ತದೆ.
ಸಿನಿಮಾ ನೋಡುವವರಿಗೆ ಒಂದು ಕಿವಿಮಾತು: ಚಿತ್ರಕ್ಕೆ u/a ಪ್ರಮಾಣ ಪತ್ರ ನೀಡಲಾಗಿದ್ದರೂ, ತೀರಾ ಸಣ್ಣ ವಯಸ್ಸಿನ ಮಕ್ಕಳನ್ನು ಕರೆದುಕೊಂಡು ಹೋಗದಿರುವುದು ಉತ್ತಮ.
ಇದನ್ನೂ ಓದಿ: Movie Review |ಸಿಂಪಲ್ಲಾಗಿಲ್ಲʼಅವತಾರ ಪುರುಷʼ