Site icon Vistara News

Movie Review | ಭಾವಗಳ ತೀವ್ರತೆ ನೋಡಲು ‘ಸಕುಟುಂಬ ಸಮೇತ’ ರಾಗಿ ಹೋಗಬಹುದು

ಸಕುಟುಂಬ ಸಮೇತ

ಚಿತ್ರ: ಸಕುಟುಂಬ ಸಮೇತ
ನಿರ್ದೇಶನ: ರಾಹುಲ್ ಪಿ.ಕೆ ಮತ್ತು ತಂಡ
ನಿರ್ಮಾಪಕ: ರಕ್ಷಿತ್ ಶೆಟ್ಟಿ
ಬ್ಯಾನರ್: ಪರಂವ್ಹಾ ಸ್ಟುಡಿಯೋಸ್
ಸಂಗೀತ: ಮಿಧುನ್ ಮುಕುಂದನ್
ಛಾಯಾಗ್ರಹಣ: ಕರ್ಮ್ ಚಾವ್ಲ ಹಾಗೂ ಸಂದೀಪ್ ವಲ್ಲೂರಿ
ತಾರಾಗಣ: ಭರತ್, ಸಿರಿ ರವಿಕುಮಾರ್, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಪುಷ್ಪ ಬೆಳವಾಡಿ, ರೇಖಾ ಕುಡ್ಲಿಗಿ ಹಾಗೂ ಜಯಲಕ್ಷ್ಮೀ ಪಾಟೀಲ್
ರೇಟಿಂಗ್: 3.5/5

ಗಾಢವಾದ ಮೌನ. ಸುದೀರ್ಘವಾದ ನಿಟ್ಟುಸಿರು. ಎದೆಯಲ್ಲಿ ಅವ್ಯಕ್ತ ತಳಮಳ. ಒದ್ದೆಯಾದ ಕಣ್ಣಂಚು. ಸಕುಟುಂಬ ಸಮೇತ ಸಿನಿಮಾ ನೋಡಿ ಮುಗಿದಾಗ ಈ ಭಾವಗಳು ಮೂಡುತ್ತವೆ. ಈ ಕಥೆ ನಮ್ಮ ಮನೆಯದೇ ಆಗಿರಬಹುದೇ? ಅಥವಾ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವುದೇ? ಎಂಬ ಪ್ರಶ್ನೆ ಮೂಡಿಸುವಷ್ಟು ಆಪ್ತವಾಗಿದೆ. ಎಲ್ಲೆಡೆ ಬಿಗ್ ಬಜೆಟ್, ಪ್ಯಾನ್ ಇಂಡಿಯಾ ಕ್ರೇಝ್ ಇರುವ ನಡುವೆ ಈ ರೀತಿಯ ಸಿಂಪಲ್ ಸಿಂಪಲ್ ಸಿನಿಮಾ ಸದ್ದಿಲ್ಲದೇ ಅದ್ಭುತವಾಗಿ ಮೂಡಿಬಂದಿದೆ.

ಮನೆಮನೆಯ ಸಿಂಪಲ್ ಕಥೆ !

ಈಗಿನ ಕಾಲಮಾನದಲ್ಲಿ ಲವ್ ಮ್ಯಾರೇಜ್ ಆಗುವುದಕ್ಕಿಂತ ಅರೇಂಜ್ ಮ್ಯಾರೇಜ್ ಆಗುವುದೇ ಕಷ್ಟ ಎಂಬ ವಾತಾವರಣದ ಸುತ್ತ ಈ ಕಥೆ ಸಾಗುತ್ತದೆ. ಲವ್ ಮ್ಯಾರೇಜ್ ಆಗುವವರು ಕಾಡಿ ಬೇಡಿ, ಮನೆಯವರನ್ನು ಒಪ್ಪಿಸಿ ಅಥವಾ ಮನೆಯವರನ್ನು ವಿರೋಧಿಸಿ ಮದುವೆ ಆಗುವ ಸಾಧ್ಯತೆಯಿರುತ್ತದೆ. ಆದರೆ ಅರೇಂಜ್ ಮ್ಯಾರೇಜ್ ವಿಷಯ ಹಾಗಲ್ಲ. ಒಬ್ಬರಿಗೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದರಿಂದ ಶುರುವಾಗಿ ಮನೆಯಲ್ಲಿ ಹೊಂದಾಣಿಕೆಯಾಗುತ್ತದೆಯೇ? ಎಂಬುವವರೆಗೆ ದೊಡ್ಡ ಪ್ರೊಸೆಸ್ ಇರುತ್ತದೆ. ಈ ಪ್ರೊಸೆಸ್ ಸುತ್ತಲೂ ಕಥೆ ಸಾಗುತ್ತದೆ. ಮನೆಯವರೆಲ್ಲರೂ ಒಟ್ಟಿಗೆ ಕುಳಿತು ನೋಡಬೇಕಾದ ಸಿನಿಮಾ ಇದು. ಚಿತ್ರದ ಸುಂದರವಾದ ಟ್ರೇಲರ್ ನೋಡಿದರೆ ಈ ನಂಬಿಕೆ ಬರುತ್ತದೆ.

ಒಂದು ಮನೆಯಲ್ಲಿ ನಡೆಯುವ ಸರಳವಾದ ಕಥೆ ಇದು. ಒಂದು ಮಿಡಲ್ ಕ್ಲಾಸ್ ಫ್ಯಾಮಿಲಿ ಹಾಗೂ ಸ್ವಲ್ಪ ಶ್ರೀಮಂತರ ನಡುವೆ ಸಂಬಂಧ ಬೆಸೆದಾಗ ಏನಾಗುತ್ತದೆ? ಹಾಗೂ ಮದುವೆಗೆ ಹುಡುಗಿ ಮಾನಸಿಕವಾಗಿ ಸಿದ್ಧವಿರದಿದ್ದಾಗ ಮದುವೆಯನ್ನು ಬೇಡ ಎಂದು ಹೇಳುವುದು ಎಷ್ಟು ಕಷ್ಟವಾಗುತ್ತದೆ? ಅದರಿಂದ ಕುಟುಂಬದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಈ ಅಂಶಗಳನ್ನು ಒಳಗೊಂಡಿರುವ ಸಿಂಪಲ್ ಕಥೆ. ನಿರ್ದೇಶಕ ರಾಹುಲ್ ಕೆ.ಪಿ. ಈ ಚಿತ್ರವನ್ನು ವಿಭಿನ್ನವಾಗಿ ನಿರ್ದೇಶಿಸಿ ಓಪನ್ ಎಂಡೆಡ್ ಆಗಿ ಬಿಟ್ಟಿದ್ದಾರೆ.

ಚಿತ್ರದಲ್ಲಿ ಗಮನಸೆಳೆಯುವ ಅಂಶಗಳು !

1. ಕಥೆಯನ್ನು ಕಟ್ಟಿದ ರೀತಿ ಮನಮುಟ್ಟುವಂತಿದೆ. ಮಲಯಾಳಂ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಅಂಶಗಳಿಗೂ ಮಹತ್ವವನ್ನು ನೀಡಿ ದೃಶ್ಯವನ್ನು ಶೂಟ್ ಮಾಡುತ್ತಾರೆ. ಅದೇ ರೀತಿ ಸಿನಿಮಾದಲ್ಲಿ ಕೂಡ ಒಂದು ಮನೆಯಲ್ಲಿ ನಡೆಯುವ, ಕಥೆಗೆ ಅನಿವಾರ್ಯವಿರುವ ಸಣ್ಣ ಸಣ್ಣ ಅಂಶಗಳನ್ನೂ ಸೊಗಾಸಗಿ ರೂಪಿಸಿದ್ದಾರೆ.

2. ಚಿತ್ರದ ನಾಯಕನ ಪಾತ್ರದಲ್ಲಿ ಭರತ್‌ ಹಾಗೂ ನಾಯಕಿ ಸಿರಿ ರವಿಕುಮಾರ್ ಎಲ್ಲಿಯೂ ಚ್ಯುತಿ ಬಾರದಂತೆ ಅಭಿನಯಿಸಿದ್ದಾರೆ. ಸಹಾಯಕ ಪಾತ್ರದಲ್ಲಿ ಅಭಿನಯಿಸಿದ ಕೃಷ್ಣ ಹೆಬ್ಬಾಳೆ, ಪುಷ್ಪ ಬೆಳವಾಡಿ, ರೇಖಾ ಕುಡ್ಲಿಗಿ, ಜಯಲಕ್ಷ್ಮೀ ಪಾಟೀಲ್ ತಮ್ಮ ಪಾತ್ರವನ್ನು ಗಟ್ಟಿಯಾಗಿ ಕಟ್ಟಿದ್ದಾರೆ.

3. ಇವರೆಲ್ಲರ ಅಭಿನಯದ್ದು ಒಂದು ತೂಕವಾದರೆ, ಅಚ್ಯುತ್ ಕುಮಾರ್ ಅವರ ಅಭಿನಯದ ತೂಕವೇ ಬೇರೆ. ಮಿಡಲ್ ಕ್ಲಾಸ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡು ಪ್ರತಿಯೊಂದು ಸನ್ನಿವೇಶವೂ ಅಚ್ಚುಮೂಡಿಸುವಂತೆ ಅಭಿನಯಿಸಿದ್ದಾರೆ. ಮನಸ್ಸಿಗೆ ಕಷ್ಟವಾಗುವ ವಿಷಯವನ್ನು ಮಾತಿನಲ್ಲಿ ವಿವರಿಸುವಾಗ ಅವರ ಧ್ವನಿಯಲ್ಲಿ ಉಂಟಾಗುವ ನಡುಕವೇ ಇದಕ್ಕೆ ಸಾಕ್ಷಿ.

4. ಚಿತ್ರದ ಹಾಡುಗಳು ಸುಮಧುರವಾಗಿವೆ. ಕಿವಿಗೆ ಹಿತ ಮೂಡಿಸುವಂತಹ ಸಂಗೀತ ನೀಡಿದ ಮಿಧುನ್ ಮುಕುಂದನ್ ನಿಜಕ್ಕೂ ಅಭಿನಂದನಾರ್ಹ.

5. ಒಂದೇ ಸೂರಿನಡಿಯಲ್ಲಿ ನಡೆಯುವ ಈ ಚಿತ್ರಕ್ಕೆ ಅದ್ಭುತವಾದ ಛಾಯಾಗ್ರಹಣ ಕೂಡ ಮಾಡಲಾಗಿದೆ. ಕರ್ಮ್ ಚಾವ್ಲ ಹಾಗೂ ಸಂದೀಪ್ ವಲ್ಲೂರಿ ಅವರು ಕ್ಯಾಮೆರಾ ಹಿಂದೆ ಅಚ್ಚುಕಟ್ಟಾದ ಕಾರ್ಯ ನಿರ್ವಹಿಸಿದ್ದಾರೆ.

6. ಚಿತ್ರದ ಸಹಜ ಸಂಭಾಷಣೆ ಆಪ್ತವಾಗಿದೆ. ಕೆಲವೊಂದು ದೃಶ್ಯಗಳು, ಕೆಲವು ಮಾತುಗಳು ಮೈ ರೋಮಾಂಚನಗೊಳಿಸುತ್ತವೆ. ಒಂದು ಕುಟುಂಬದಲ್ಲಿ ತಂದೆ-ತಾಯಿ ಪಡುವ ಕಷ್ಟ, ಮಾಡುವ ತ್ಯಾಗವನ್ನು ಮನಸ್ಸಿಗೆ ಕಾಡುವಂತೆ ಚಿತ್ರಿಸಿದ್ದಾರೆ. ಈ ಚಿತ್ರದಲ್ಲಿ ಮನಸ್ಸುಗಳ ತೊಳಲಾಟ ಹಾಗೂ ಭಾವನೆಗಳು ತೀವ್ರವಾಗಿ ಕಾಣುತ್ತವೆ.

ಯಾಕೆ ಈ ಸಿನಿಮಾ ನೋಡಬೇಕು?

1. ನೀವು ಅರೇಂಜ್ ಮ್ಯಾರೇಜ್ ಆಗಿದ್ದರೆ ಈ ಸಿನಿಮಾ ನೋಡಬೇಕು.
2. ನಿಮಗೆ ಮನೆಯಲ್ಲಿ ಮದುವೆಗೆ ಹುಡುಗ/ಹುಡುಗಿ ಹುಡುಕುತ್ತಿದ್ದರೆ ನೋಡಬೇಕು.
3. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನೋಡಬೇಕು.
4. ನಿಮಗೆ 20 ವರ್ಷ ವಯಸ್ಸು ದಾಟಿದ್ದರೆ ಹಾಗೂ ಮದುವೆ ಆಗುವ ಯೋಚನೆ ಇದ್ದರೆ ನೋಡಬೇಕು.
5. ನಿಮಗೆ ಒಳ್ಳೆಯ ಕನ್ನಡ ಸಿನಿಮಾ ನೋಡುವ ಅಭ್ಯಾಸವಿದ್ದರೆ ನೋಡಬೇಕು.
6. ಕೊನೆಯದಾಗಿ ನಿಮಗೆ ಸಿನಿಮಾ ನೋಡುವ ಅಭ್ಯಾಸ ಇಲ್ಲದಿದ್ದರೂ ನೋಡಬೇಕು.

ಚಿತ್ರ ಸೋತಿದ್ದು ಎಲ್ಲಿ?

ಇದು ಒಂದು ಅತ್ಯುತ್ತಮ ಸಿನಿಮಾ. ಆದರೆ, ಹೆಚ್ಚಿನವರಿಗೆ ಈ ಸಿನಿಮಾ ಬಿಡುಗಡೆಯಾಗಿರುವ ವಿಷಯ ತಲುಪಿಲ್ಲ. ಚಿತ್ರದ ಪ್ರಮೋಷನ್‌ನಲ್ಲಿ ಸೋತಿರಬಹುದು.

ಇದನ್ನೂ ಓದಿ: Movie Review | ಕಣ್ಣಾಮುಚ್ಚಾಲೆ ಆಟದಂತಿರುವ ʼ 21 ಅವರ‍್ಸ್‌ ʼ

Exit mobile version