Site icon Vistara News

Movie Review: Vikram | ತೆರೆಯ ಮೇಲೆ ಘಟಾನುಘಟಿಗಳ ತ್ರಿವಿಕ್ರಮ, ಕ್ಷಣ ಕ್ಷಣವೂ ರೋಚಕ

Movie review: Vikram

Movie Review: Vikram
ಚಿತ್ರ: ವಿಕ್ರಂ(ತಮಿಳು)
ನಿರ್ದೇಶನ: ಲೋಕೇಶ್‌ ಕನಕರಾಜ್
ನಿರ್ಮಾಪಕರು: ಕಮಲ ಹಾಸನ್, ಮಹೇಂದ್ರನ್
ಸಂಗೀತ: ಅನಿರುದ್ಧ್ ರವಿಚಂದ್ರನ್
ಛಾಯಾಗ್ರಹಣ: ಗಿರೀಶ್‌ ಗಂಗಾಧರನ್
ತಾರಾಗಣ: ಕಮಲ ಹಾಸನ್‌, ವಿಜಯ್‌ ಸೇತುಪತಿ, ಸೂರ್ಯ, ಫಹಾದ್ ಫಾಸಿಲ್‌, ಕಾಳಿದಾಸ್‌ ಜಯರಾಮ್‌, ಗಾಯತ್ರಿ
ರೇಟಿಂಗ್:‌ 3.5/5

ಮಲ್ಟಿಸ್ಟಾರರ್‌ ಮೂವಿ ಎಂದರೆ ಅದರ ಮೇಲಿನ ನಿರೀಕ್ಷೆಯ ಲೆವೆಲ್‌ ಜಾಸ್ತಿನೇ ಇರುತ್ತದೆ. ಅದರಲ್ಲೂ ಕಮಲ ಹಾಸನ್‌, ಫಹಾದ್‌ ಫಾಸಿಲ್‌ ಹಾಗೂ ವಿಜಯ್‌ ಸೇತುಪತಿಯಂತಹ ಘಟಾನುಘಟಿಗಳನ್ನು ಒಟ್ಟಿಗೇ ನೋಡುವ ಖುಷಿಯೇ ಬೇರೆ. ವಿಕ್ರಮ್‌ ಸಿನಿಮಾದಲ್ಲಿ ಈ ಮೂವರ ನಟನೆಗೆ ಎಂಥವರೂ ಫಿದಾ ಆಗುವುದು ಖಂಡಿತ!

1984ರಲ್ಲಿ ಕಮಲ್ ಹಾಸ‌ನ್ ಅಭಿನಯಿಸಿದ ವಿಕ್ರಮ್‌ ಎನ್ನುವ ಸಿನಿಮಾದ ಶೀರ್ಷಿಕೆಯನ್ನೇ ಈ ಚಿತ್ರಕ್ಕೂ ಇಡಲಾಗಿದೆ. ಆ ಚಿತ್ರದಲ್ಲಿ ಕಮಲ ಹಾಸನ್ ಒಬ್ಬ ಸೀಕ್ರೆಟ್‌ ಏಜೆಂಟ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.‌ 2022ರ ಈ ಸಿನಿಮಾದಲ್ಲಿ ಅವರು ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವುದನ್ನು ತೆರೆಯ ಮೇಲೆಯೇ ನೋಡಿದರೆ ಚೆಂದ.

ಯಾರು ಈ ವಿಕ್ರಮ್?‌ ಏನು ಕಥೆ?

ವಿಕ್ರಮ್‌ ಸಿನಿಮಾದ ಓಪನಿಂಗ್‌ ಭಯಂಕರ! ಆರಂಭದಲ್ಲೇ ಒಂದು ಶಾಕ್‌ ನೀಡಲಾಗಿದೆ. ಆ ಶಾಕ್‌, ಆ ಸಸ್ಪೆನ್ಸ್ ನ್ನು ಸಿನಿಮಾದುದ್ದಕ್ಕೂ ಕಾಪಾಡಿಕೊಳ್ಳಲಾಗಿದೆ. ಒಂದು ಇಂಟರೆಸ್ಟಿಂಗ್‌ ಸಸ್ಪೆನ್ಸ್‌ ಕತೆ ಇದರದ್ದು. ಒಂದು ಹುಡುಕಾಟದ, ಒಂದು ಅನ್ಯಾಯದ ವಿರುದ್ಧದ ಜರ್ನಿ. ಈ ಜರ್ನಿಯಲ್ಲಿ ಒಳ್ಳೆಯವರು ಯಾರು? ಯಾರು ಕೆಟ್ಟವರು? ಬಿಸಿನೆಸ್‌ ಯಾವುದು? ಯಾವುದರಿಂದ ಸಮಾಜದ ಮೇಲೆ ಪರಿಣಾಮ ಆಗುತ್ತಿದೆ? ಈ ಎಲ್ಲಾ ಅಂಶಗಳನ್ನಿಟ್ಟುಕೊಂಡು ನಿರ್ದೇಶಕ ಲೋಕೇಶ್‌ ಕನಕರಾಜ್ ಕಥೆಯನ್ನು ಹೆಣೆದಿದ್ದಾರೆ.

ಆರಂಭದಲ್ಲಿ ವಿಕ್ರಮ್‌ ಯಾರು? ಎಂಬ ಪ್ರಶ್ನೆಯನ್ನು ಹುಟ್ಟಿಸಿ, ರೋಚಕ ತಿರುವುಗಳೊಂದಿಗೆ ಮುಂದುವರಿಸಿ ಮಧ್ಯಂತರದ ಅವಧಿಯಲ್ಲಿ ಈ ಪ್ರಶ್ನೆಗೆ ಉತ್ತರ ನೀಡಲಾಗಿದೆ. ರೌಡಿಸಂ ಆಧಾರಿತ ಚಿತ್ರಗಳು ಇತ್ತೀಚೆಗೆ ಬಹಳಷ್ಟು ಸದ್ದು ಮಾಡುತ್ತಿದ್ದು, ವಿಕ್ರಮ್‌ ಅವುಗಳ ನಡುವೆಯೇ ಸ್ವಲ್ಪ ಬೇರೆಯಾಗಿ ನಿಲ್ಲುತ್ತದೆ.

ಚಿತ್ರದಲ್ಲಿ ಗಮನ ಸೆಳೆಯುವ ಪ್ರಮುಖ ಅಂಶಗಳು:

  1. ಈ ಚಿತ್ರಕ್ಕೆ ಸಂಗೀತ ನೀಡಿದ ಅನಿರುದ್ಧ್ ರವಿಚಂದ್ರನ್‌ಗೆ ಹಾಗೂ ಛಾಯಾಗ್ರಾಹಕ ಗಿರೀಶ್‌ ಗಂಗಾಧರನ್‌ಗೆ ಮೊದಲು ಸೆಲ್ಯೂಟ್‌ ಹೇಳಲೇಬೇಕು. ಮ್ಯೂಸಿಕ್‌ ಹಾಗೂ ಮೇಕಿಂಗ್‌ ಈ ಚಿತ್ರದ ಹೈಲೈಟ್ಸ್.‌ ಒಂದೊಂದು ಫ್ರೇಮ್‌ ನ್ನು ಕೂಡ ಅದ್ಭುತವಾಗಿ ಚಿತ್ರಿಸಿದ್ದಾರೆ. ಮುಂದಿನ ದೃಶ್ಯ ಏನಾಗುತ್ತದೆ ಎಂದು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವಲ್ಲಿ ಛಾಯಾಗ್ರಾಹಕ, ಸಂಕಲನಕಾರ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಒಂದೊಂದು ಪಾತ್ರದ ಎಂಟ್ರಿಯಿಂದ ಆರಂಭಗೊಂಡು ಚಿತ್ರದ ಅಂತ್ಯದವರೆಗೂ ಅನಿರುದ್ಧ್‌ ನೀಡಿರುವ ಸಂಗೀತ ಮೈ ರೋಮಾಂಚನಗೊಳಿಸುತ್ತದೆ.‌ ಅನಿರುದ್ಧ್‌ ವಿಭಿನ್ನ ಬಗೆಯ ಸಂಗೀತವನ್ನು ಪ್ರತಿಯೊಂದು ಸಿನಿಮಾಗೆ ನೀಡುತ್ತಿದ್ದಾರೆ ಹಾಗೂ ಭಾರತದ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗುವ ಭರವಸೆ ಮೂಡಿಸಿದ್ದಾರೆ.
  2. ಮೂವರು ದಿಗ್ಗಜರು ಒಂದೇ ಪರದೆಯಲ್ಲಿ ಮೆರೆದಿರುವ ರೀತಿಯನ್ನು ನಿಜಕ್ಕೂ ಮೆಚ್ಚಲೇಬೆಕು. ಕಣ್ಣಲ್ಲೇ ಎದುರಾಳಿಯನ್ನು ಹೆದರಿಸುವಂತಹ ಉಲಗ ನಯಗನ್ (ಕಮಲ ಹಾಸನ್)‌ ನಟನೆ ಮನಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಫಹಾದ್‌ ಫಾಸಿಲ್‌ ಹಾಗೂ ವಿಜಯ್‌ ಸೇತುಪತಿ ಇಬ್ಬರೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಟನೆಯ ಮೂಲಕ ಛಾಪು ಮೂಡಿಸಿದ್ದಾರೆ.
    ಉಳಿದವರೂ ರೋಷ, ಆಕ್ರೋಷವನ್ನು ವ್ಯಕ್ತ ಪಡಿಸುವಂತಹ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
  3. ಒಂದು ಅದ್ಭುತ ಕಥೆಯನ್ನು ಇದರಲ್ಲಿ ಹೇಳಲಾಗಿದೆ. ಕಥೆಯನ್ನು ಹಂತ ಹಂತಗಳಲ್ಲಿ ರೋಚಕ ತಿರುವುಗಳೊಂದಿಗೆ ರೂಪಿಸಲಾಗಿದೆ. ಅದಕ್ಕೆ ತಕ್ಕಂತೆ ಸೂಕ್ತವಾದ ಸಂಭಾಷಣೆ ಇಲ್ಲಿದೆ. ವಾಟ್‌ ಈಸ್‌ ಪ್ಲಾನ್‌ ಬಿ? ಎಂಬ ಪ್ರಶ್ನೆಗೆ ಕಮಲ ಹಾಸನ್‌ ʼಪ್ಲಾನ್‌ ಬಿ ಈಸ್‌ ಟು ಮೇಕ್‌ ಪ್ಲಾನ್‌ ಎ ವರ್ಕ್ʼ ಎಂಬ ಪಂಚಿಂಗ್‌ ಡೈಲಾಗ್ಸ್‌ ಕೂಡ ಇದೆ.

ಯಾರ ದೊಡ್ಡಮ್ಮ ಹೆಚ್ಚು ಸೌಂಡ್‌ ಮಾಡಿದ್ದು?

ಕೆಜಿಎಫ್‌ ಸಿನಿಮಾದಲ್ಲಿ ರಾಕಿಭಾಯ್‌ ಒಂದು ಪೊಲೀಸ್‌ ಸ್ಟೇಷನ್‌ನ್ನೇ ಸುಟ್ಟು ಹಾಕಿದ್ದ. ಅದಕ್ಕೆ ಬಳಸಿದ್ದ ಗನ್‌ ಹೆಸರು ʼದೊಡ್ಡಮ್ಮʼ. ಅಲ್ಲಿ ರಾಕಿಭಾಯ್‌ ಕೈಯ್ಯಲ್ಲಿದ್ದ ʼದೊಡ್ಡಮ್ಮʼ ವಿಕ್ರಮ್‌ ಸಿನಿಮಾದಲ್ಲಿ ಕಮಲ ಹಾಸನ್‌ ಕೈಯಲ್ಲೂ ಇದೆ. ಕೆಜಿಫ್‌ನಲ್ಲಿ ಹೊಸ ಗನ್‌, ಆದರೆ ಇಲ್ಲಿ ಹಳತು. ಸೂಕ್ಷ್ಮವಾಗಿ ಗಮನಿಸಿದರೆ ಹಳೇ ʼದೊಡ್ಡಮ್ಮʼನ ಕೂಗೇ ಹೆಚ್ಚಿದ್ದಂತೆ ಕಾಣುತ್ತದೆ.

ವಿಕ್ರಂ ಪಾರ್ಟ್‌ 2?

Suriya in Vikram

ವಿಕ್ರಂ ಚಿತ್ರದ ಅಂತ್ಯದಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಆ ಪ್ರಶ್ನೆಗಳಿಗೆ ಉತ್ತರವಾಗಿ ಎರಡನೇ ಪಾರ್ಟ್‌ ಬರಬಹುದು.

ಈ ಚಿತ್ರದಲ್ಲಿ ಮತ್ತೊಂದು ಮುಖ್ಯವಾದ ವಿಷಯ ಎಂದರೆ ನಟ ಸೂರ್ಯ. ವಿಕ್ರಂ ಚಿತ್ರತಂಡದವರು ಈ ಸಿನಿಮಾದಲ್ಲಿ ನಟ ಸೂರ್ಯ ಕೂಡ ಅಭಿನಯಿಸುತ್ತಿರುವ ಬಗ್ಗೆ ಇತ್ತೀಚೆಗಷ್ಟೇ ಹೇಳಿದ್ದರು. ಅವರ ಎಂಟ್ರಿ ಮಾತ್ರ ಭಯಂಕರ! ಒಂದು ಮುಖ್ಯ ಪಾತ್ರದಲ್ಲಿ ಸೂರ್ಯ ಅಭಿನಯಿಸಿದ್ದಾರೆ. ಮುಂಬರಲಿರುವ ಎರಡನೇ ಪಾರ್ಟ್‌ನಲ್ಲಿ ಸೂರ್ಯ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಸ್ಪಷ್ಟವಾಗಿದೆ. ಈ ಚಿತ್ರವು ಪ್ರೇಕ್ಷಕರನ್ನು ಪಾರ್ಟ್‌ 2 ನೋಡಲು ಕುತೂಹಲ ಮೂಡಿಸುವಲ್ಲಿ ಗೆದ್ದಿದೆ. ಅಭಿಮಾನಿಗಳ ನಿರೀಕ್ಷೆಯನ್ನು ಮುಟ್ಟಿದ, ಜನರು ಮೆಚ್ಚುವ ಸಿನಿಮಾ ಇದು.‌

ಇದನ್ನೂ ಓದಿ: Review: ಇನ್ನೂ ಬೆಸ್ಟ್‌ ಆಗಬಹುದಿತ್ತು ʼಬೀಸ್ಟ್‌ʼ

Exit mobile version