ತಿರುಪತಿ: ಜೂನ್ 9ರಂದು ಸಪ್ತಪದಿ ತುಳಿದ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಜೋಡಿ ಮರುದಿನ ತಮ್ಮಿಷ್ಟದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದರು. ಈ ವೇಳೆ ನಡೆದ ಒಂದು ಅಚಾತುರ್ಯದಿಂದ ಅವರು ತುಂಬಾ ಕಿರಿಕಿರಿ ಅನುಭವಿಸುವಂತಾಗಿದೆ. ಈ ಎಡವಟ್ಟಿಗೆ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ನೋಟಿಸ್ ಕೂಡಾ ಜಾರಿ ಮಾಡಿದೆ. ನಯನತಾರಾ ಅವರ ಪತಿ ವಿಘ್ನೇಶ್ ಅವರು ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ಏನಿದು ಎಡವಟ್ಟು?
ಶುಕ್ರವಾರ ನಯನತಾರಾ ಮತ್ತು ವಿಘ್ನೇಶ್ ತಿಮ್ಮಪ್ಪನ ಸನ್ನಿಧಿಗೆ ಆಗಮಿಸಿದ್ದರು. ಹಳದಿ ಸೀರೆ ಧರಿಸಿದ್ದ ನಯನತಾರಾ ಹಸಿರು ಹರಳಿನ ನೆಕ್ಲೆಸ್ ಹಾಗೂ ಜುಮ್ಕಿ ಧರಿಸಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ವಿಘ್ನೇಶ್ ಕೂಡ ರೇಷ್ಮೆ ಪಂಚೆ, ಶರ್ಟ್ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದರು. ಈ ಮುದ್ದಾದ ಜೋಡಿಗಳು ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಹೊರಗೆ ಫೋಟೊಶೂಟ್ ಮಾಡಿಸಿಕೊಂಡಿದ್ದರು.
ಫೋಟೊ ಶೂಟ್ ಸಂದರ್ಭದಲ್ಲಿ ನಟಿ ನಯನತಾರಾ ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿ ಓಡಾಡಿದ್ದರು. ಅಷ್ಟೇ ಅಲ್ಲ, ಅವರ ಜತೆಗಿದ್ದವರು ಕೂಡಾ ಶೂ ಹಾಗೂ ಚಪ್ಪಲಿ ಧರಿಸಿ ಓಡಾಟ ಮಾಡಿದ್ದರು. ಇದರಿಂದಾಗಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬ ಆಕ್ರೋಶ ಭುಗಿಲೆದ್ದಿತ್ತು. ಅಲ್ಲದೆ ಚಪ್ಪಲಿ ಧರಿಸಿ ಓಡಾಡಿದ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇಷ್ಟೇ ಅಲ್ಲದೆ ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ಫೋಟೊಶೂಟ್ ಮಾಡಿಸಿದ್ದಕ್ಕಾಗಿ ದೇವಸ್ಥಾನ ಆಡಳಿತ ಮಂಡಳಿ ಕೂಡ ಲೀಗಲ್ ನೋಟಿಸ್ ಜಾರಿ ಮಾಡಿತ್ತು. ಇದಾದ ಬಳಿಕ ನವಜೋಡಿ ದೇವಸ್ಥಾನ ಆಡಳಿತ ಮಂಡಳಿಗೆ ಕ್ಷಮೆಯಾಚಿಸಿ ಪತ್ರ ಬರೆದಿದೆ.
ಇನ್ನು ಪತ್ನಿಯ ಪರವಾಗಿ ವಿಘ್ನೇಶ್ ಕೂಡ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ. ಪತ್ರದಲ್ಲಿ ʻʻಮದುವೆಯ ನಂತರ ಮನೆಗೆ ಹೋಗುವ ಬದಲು ದೇವರ ಆಶೀರ್ವಾದ ಪಡೆಯಲು ನಾವು ತಿರುಪತಿಗೆ ಬಂದೆವು. ಅದರ ನೆನಪಿಗಾಗಿ ದೇವಸ್ಥಾನದ ಹೊರಗೆ ಫೋಟೊ ತೆಗೆದುಕೊಳ್ಳಲು ಬಯಸಿದೆವು. ಆದರೆ, ಹೆಚ್ಚು ನೂಕುನುಗ್ಗಲು ಇದ್ದಿದ್ದರಿಂದ ನಾವು ಅಲ್ಲಿಂದ ಹೊರಬಂದೆವು. ನಂತರ ಕಡಿಮೆ ಜನಸಂದಣಿ ಇದ್ದಾಗ ಮತ್ತೆ ಬಂದು ಫೋಟೊ ತೆಗೆದುಕೊಂಡೆವು. ಆ ಗಡಿಬಿಡಿಯಲ್ಲಿ ನಾವು ಚಪ್ಪಲಿ ಧರಿಸಿದ್ದೇವೆ ಎಂಬುದು ತಿಳಿಯಲಿಲ್ಲ. ನಮ್ಮಿಂದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದರೆ ಕ್ಷಮೆ ಕೇಳುತ್ತೇವೆ. ದೇವರಿಗೆ ಅಗೌರವ ತೋರುವ ಉದ್ದೇಶ ನಮ್ಮದಲ್ಲʼ ಎಂದು ವಿಘ್ನೇಶ್ ಸ್ಪಷ್ಟನೆ ನೀಡಿದ್ದಾರೆ. ಸದ್ಯ ವಿಘ್ನೇಶ್ ಬರೆದ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದನು ಓದಿ| Nayanathara Marriage | ಪತಿ ವಿಘ್ನೇಶ್‌ಗೆ ನಯನತಾರಾ ಉಡುಗೊರೆ ನೀಡಿದ ದುಬಾರಿ ಬಂಗಲೆಯ ಬೆಲೆ ಎಷ್ಟು ಗೊತ್ತಾ?
ಇದನ್ನು ಓದಿ | Nayantara Marriage : ತಿಮ್ಮಪ್ಪನ ದೇಗುಲದಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್