Site icon Vistara News

Ram Gopal Varma: ದಿಢೀರ್‌ ರಾಜಕೀಯಕ್ಕೆ ಧುಮುಕಿದ ಆರ್‌ಜಿವಿ; ಪೀಠಂಪುರಂನಲ್ಲಿ ಪವನ್ ಕಲ್ಯಾಣ್ ವಿರುದ್ಧ ಸ್ಪರ್ಧೆ?

rgv pk

rgv pk

ಹೈದರಾಬಾದ್‌: ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಟಾಲಿವುಡ್‌ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ (Ram Gopal Varma) ಧಿಡೀರ್‌ ಆಗಿ ರಾಜಕೀಯಕ್ಕೆ ಧುಮುಕಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಅವರು, ಪಿಠಾಪುರಂನಿಂದ (Pithapuram) ಸ್ಪರ್ಧಿಸುವುದಾಗಿ ಗುರುವಾರ ಘೋಷಿಸಿದ್ದಾರೆ. ಇತ್ತ ಜನ ಸೇನಾ ಪಕ್ಷದ (Jana Sena Party) ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಈ ವರ್ಷ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Andhra Pradesh assembly election) ಪೀಠಂಪುರಂ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಈ ವಿಚಾರ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಈ ವರ್ಷ ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಜತೆಗೆ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ʼʼಧಿಡೀರ್‌ ನಿರ್ಧಾರ. ನಾನು ಪೀಠಂಪುರಂ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಲು ಹರ್ಷಿಸುತ್ತೇನೆʼʼ ಎಂದು ರಾಮ್‌ ಗೋಪಾಲ್‌ ವರ್ಮಾ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ತಿಳಿಸಿದ್ದಾರೆ. ಆದರೆ ಯಾವ ಪಕ್ಷದಿಂದ ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಪೀಠಂಪುರಂ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪವನ್‌ ಕಲ್ಯಾಣ್‌ ಘೋಷಿಸಿದ ಕೆಲವೇ ಹೊತ್ತಿನಲ್ಲಿ ಆರ್‌ಜಿವಿ ಕೂಡ ತಮ್ಮ ಧಿಡೀರ್‌ ರಾಜಕೀಯ ಪ್ರವೇಶವನ್ನು ಪ್ರಕಟಿಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ.

ರಾಮ್‌ ಗೂಪಾಲ್‌ ವರ್ಮಾ ಹಿಂದಿನಿಂದಲೂ ಪವನ್‌ ಕಲ್ಯಾಣ್‌ ಅವರನ್ನು ಟೀಕಿಸುತ್ತಲೇ ಬಂದಿದ್ದಾರೆ. ಇದೀಗ ನೇರವಾಗಿ ರಾಜಕೀಯ ಅಖಾಡಕ್ಕೆ ಇಳಿದಿರುವುದು ಕುತೂಹಲ ಮೂಡಿಸಿದೆ. 2019ರಲ್ಲಿ, ಪವನ್ ಕಲ್ಯಾಣ್ ಗಜುವಾಕ ಮತ್ತು ಭೀಮಾವರಂ ಎರಡು ಸ್ಥಾನಗಳಿಂದ ಸ್ಪರ್ಧಿಸಿದ್ದು, ವೈಎಸ್‌ಆರ್‌ಸಿ ಅಭ್ಯರ್ಥಿಗಳ ವಿರುದ್ಧ ಪರಾಭವಗೊಂಡಿದ್ದರು. ಪೀಠಂಪುರಂ ವಿಧಾನಸಭಾ ಕ್ಷೇತ್ರವು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿದೆ ಮತ್ತು ಪ್ರಸ್ತುತ ವೈಎಸ್ಆರ್ ಕಾಂಗ್ರೆಸ್ ಪಕ್ಷದ ದೊರಾಬಾಬು ಪೆಂಡೆಮ್ ಶಾಸಕರಾಗಿದ್ದಾರೆ.

ಸದ್ಯ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆಂಧ್ರ ಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರ ಮತ್ತು ಒಟ್ಟು 175 ವಿಧಾನಸಭಾ ಕ್ಷೇತ್ರಗಳಿವೆ. ವಿಧಾನಸಭಾ ಚುನಾವಣೆಯಲ್ಲಿ ಪವನ್‌ ಕಲ್ಯಾಣ್ ಅವರ ಜನಸೇನಾ ಪಕ್ಷವು ಒಟ್ಟು 175 ಸ್ಥಾನಗಳ ಪೈಕಿ 21 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಟಿಡಿಪಿ 144 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಕಡೆ ಸ್ಪರ್ಧಿಸಲಿದೆ. ಟಿಡಿಪಿ 17 ಕ್ಷೇತ್ರ ಮತ್ತು ಜನಸೇನಾ ಪಕ್ಷವು 2 ಕಡೆ ಕಣಕ್ಕಿಳಿಯಲಿದೆ.

ಇದನ್ನೂ ಓದಿ: Lok Sabha Election 2024: ಪಂಜಾಬ್‌ನಲ್ಲೂ ಕಾಂಗ್ರೆಸ್‌ಗೆ ಶಾಕ್‌; ಬಿಜೆಪಿ ಸೇರಿದ ಪಟಿಯಾಲ ಸಂಸದೆ ಪ್ರಣೀತ್​ ಕೌರ್

ಸೀಟು ಹಂಚಿಕೆಯ ಬಳಿಕ ಪವನ್‌ ಕಲ್ಯಾಣ್‌, “ನರೇಂದ್ರ ಮೋದಿ 10 ವರ್ಷಗಳಿಂದ ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಮತ್ತು ಟಿಡಿಪಿ ಮತ್ತು ಜೆಎಸ್‌ಪಿ ಜತೆಗೆ ಹೆಜ್ಜೆ ಹಾಕುವುದರಿಂದ ಆಂಧ್ರಪ್ರದೇಶದ ಜನರ ಆಶೋತ್ತರಗಳನ್ನು ತಲುಪಲು ಸಹಾಯ ಮಾಡುತ್ತದೆ. ಬಿಜೆಪಿ ಮತ್ತು ಟಿಡಿಪಿ ನಡುವಿನ ಸಂಬಂಧ ಹಳೆಯದು. 1996ರಲ್ಲಿ ಟಿಡಿಪಿ ಎನ್‌ಡಿಎಗೆ ಸೇರ್ಪಡೆಗೊಂಡಿತ್ತು. 2014ರಲ್ಲಿ ಟಿಡಿಪಿ ಮತ್ತು ಬಿಜೆಪಿ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದವುʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version