ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನೊಳಗೆ ಕಾಫಿ ಕಪ್ ಹಿಡಿದು ಸಿಗರೇಟು ಸೇದುತ್ತಾ ಕೈದಿಗಳ ಜತೆಗೆ ಕುಳಿತಿರುವ ನಟ ದರ್ಶನ್‌ನ (Actor Darshan) ಫೋಟೊಗಳು ವೈರಲ್ ಆಗಿವೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಬಂಧಿಯಾಗಿದೆ. ಜೈಲು ಸೇರಿದ 75 ದಿನಗಳ ನಂತರ ದರ್ಶನ್‌ನ ದರ್ಶನವಾಗಿದೆ.
ಜೈಲಿನ ಒಳಗೆ ದರ್ಶನ್ ಬಿಂದಾಸ್ ಆಗಿದ್ದಾರೆ. ಬ್ಯಾರಕ್‌ನಿಂದ ಹೊರಗೆ ಚೇರ್‌ನಲ್ಲಿ ಕುಳಿತಿರುವ ನಟ ದರ್ಶನ್ ಬಲಗೈನಲ್ಲಿ ಕಪ್, ಎಡಗೈನಲ್ಲಿ ಸಿಗರೇಟ್ ಸೇದುವ ಫೋಟೋ ವೈರಲ್ ಆಗಿದೆ. ದರ್ಶನ್ ಜತೆಗೆ ವಿಲ್ಸನ್ ಗಾರ್ಡನ್ ನಾಗ, ಎ11 ಆರೋಪಿ ದರ್ಶನ್ ಮ್ಯಾನೇಜರ್ ನಾಗರಾಜ್, ಕುಳ್ಳ ಸೀನಾ ಒಟ್ಟಾಗಿ ಕೂತು ಹರಟೆ ಹೊಡೆಯುತ್ತಿದ್ದಾರೆ.
ಮತ್ತೊಬ್ಬ ಕೈದಿ ವೇಲು ಎಂಬಾತ ಈ ಫೋಟೊ ತೆಗೆದಿದ್ದು, ತನ್ನ ಪತ್ನಿಗೆ ಕಳಿಸಿದ್ದಾನೆ. ಇದೀಗ ರೌಡಿಶೀಟರ್ ಜತೆಗೆ ಇರುವ ಫೋಟೋ ವೈರಲ್ ಆಗಿದ್ದು, ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದ್ಯಾ ಎಂಬ ಅನುಮಾನ ಮೂಡಿದೆ.
ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ಹಿನ್ನೆಲೆಯಲ್ಲಿ ರೇಣುಕಾ ಸ್ವಾಮಿ ಕುಟುಂಬಸ್ಥರ 5 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮೃತ ರೇಣುಕಾ ಸ್ವಾಮಿ ತಂದೆ ಶಿವನಗೌಡ ಮಾಧ್ಯಮದೊಂದಿಗೆ ಮಾತಾನಾಡಲಿದ್ದಾರೆ.
ಇದನ್ನೂ ಓದಿ: Physical Abuse : ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಕಾಮುಕನನ್ನು ಥಳಿಸಿದ ಸಾರ್ವಜನಿಕರು
ಕೈದಿಗಳ ಜತೆಗೆ ವಾಲಿಬಾಲ್ ಆಟ
ನಟ ದರ್ಶನ್ ಜೈಲಿನಲ್ಲಿ ಕಳೆದ 64 ದಿನದಿಂದ ಮಂಕಾಗಿ ಕಾಲ ಕಳೆಯುತ್ತಿದ್ದಾರೆ. ನಿಧಾನವಾಗಿ ಜೈಲಿನ ಪರಿಸರಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಬೇಜಾರು ಕಳೆಯೋದಕ್ಕೆ ವಾಲಿಬಾಲ್ ಆಟಕ್ಕೆ ಇಳಿದಿದ್ದಾರೆ. ಈಗಾಗಲೇ ಜೈಲೊಳಗಡೆ ಪುಸ್ತಕದ ಮೊರೆ ಹೋಗಿದ್ದು, ಜತೆಗೆ ಬೇಜಾರು ಕಳೆಯಲು ವಾಲಿಬಾಲ್ ಕೂಡ ಆಡುತ್ತಿದ್ದಾರೆ. ಜೈಲಿನ ಇತರೆ ಕೈದಿಗಳ ಜತೆ ಸೇರಿ ವಾಲಿಬಾಲ್ ಆಡುತ್ತಿದ್ದಾರೆ.
ಚಾರ್ಜ್‌ಶೀಟ್ ಸಲ್ಲಿಸಲು ತಯಾರಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರಿಂದ ತಯಾರಿ ನಡೆದಿದೆ. ಇಲ್ಲಿಯವರೆಗೆ ಸಾಕ್ಷ್ಯ ಕಲೆ ಹಾಕಿ,ಸ್ಥಳ ಮಹಜರು ನಡೆಸಿ,ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಬರೋಬ್ಬರಿ 52 ಸ್ಥಳ ಮಹಜರು,150 ಜನರ ಹೇಳಿಕೆ ದಾಖಲಿಸಿದ್ದಾರೆ. ಚಿತ್ರದುರ್ಗದ ಕಿಡ್ನ್ಯಾಪ್ ಜಾಗದಿಂದ ಹಿಡಿದು ಮೃತದೇಹ ಎಸೆದಿದ್ದ ಜಾಗದವರೆಗೆ ಮಹಜರ್ ಮಾಡಲಾಗಿದೆ.
ಪಟ್ಟಣಗೆರೆ ಶೆಡ್, ದರ್ಶನ್ ನಿವಾಸ, ಪವಿತ್ರಾ ಗೌಡ ನಿವಾಸ ಸೇರಿದಂತೆ ಸ್ಟೋನಿ ಬ್ರೂಕ್ ಪಬ್, ಮೃತ ದೇಹ ಎಸೆದ ಸತ್ವ ಅಪಾರ್ಟ್ ಮೆಂಟ್ ಎದುರಿನ ಕಾಲುವೆ ಸೇರಿದಂತೆ ಕೊಲೆಯ ನಂತರದ ಮಾತುಕತೆ ಜಾಗಗಳು ಸೇರಿ 52 ಕಡೆ ಸ್ಥಳ ಮಹಜರು ಮಾಡಲಾಗಿದೆ. ಪ್ರಕರಣದಲ್ಲಿ ಸಾಕ್ಷಿಯಾಗಿರುವ 150 ಜನರ ಹೇಳಿಕೆ ದಾಖಲಾಗಿದೆ.
ಘಟನೆ ಸಂಬಂಧಿಸಿದಂತೆ ಆರೋಪಿಗಳು ಎಲ್ಲೆಲ್ಲಿ ತೆರಳಿದ್ದರು. ಯಾರ್ಯಾರ ಸಂಪರ್ಕ ಮಾಡಿದ್ದರು? ಪೆಟ್ರೋಲ್ ಬಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಸಹಚರರ ಹೇಳಿಕೆ ಸೇರಿ ಒಟ್ಟಾರೆಯಾಗಿ ಬರೋಬ್ಬರಿ 150 ಕ್ಕೂ ಹೆಚ್ಚು ಜನರ ಹೇಳಿಕೆ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ