ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್(Actor Darshan) ಗ್ಯಾಂಗ್ ಜೈಲುಪಾಲಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪೊಲೀಸರು ಶುರು ಮಾಡಿದ್ದಾರೆ. ಈ ಮಧ್ಯೆ ಪೊಲೀಸರ ಬಳಿ ದರ್ಶನ್ ಆಪ್ತೆ ಪವಿತ್ರಾಗೌಡ ಲಾಕ್ ಆಗಿದ್ದೆ ರೋಚಕವಾಗಿದೆ.
ದರ್ಶನ್ ಬಂಧನಕ್ಕೆ ಹೊರಟಿದ್ದ ವೇಳೆಯೇ ಪೊಲೀಸರು ಪವಿತ್ರಾಗೂ ಬಲೆ ಬೀಸಿದ್ದರು. ಜೂನ್ 11ರ ಬೆಳಗ್ಗೆ ದರ್ಶನ್ ಬಂಧಿಸಲು ಮೈಸೂರಿಗೆ ತೆರಳಿದ್ದಾಗ, ಈ ವೇಳೆ ಎರಡು ತಂಡ ರಚಿಸಿ ಪವಿತ್ರಾ ಗೌಡಗೂ ಬಲೆ ಬೀಸಿದ್ದರು. ಆದರೆ ಪೊಲೀಸರ ಎರಡೂ ತಂಡಕ್ಕೂ ಚಾಲಾಕಿ ಪವಿತ್ರಾ ಸಿಕ್ಕಿರಲಿಲ್ಲ.
ಹೀಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಪೊಲೀಸರು ಮೈಸೂರಿನಲ್ಲೇ ದರ್ಶನ್ ಮೂಲಕವೇ ಪವಿತ್ರಾಳನ್ನು ಸಂಪರ್ಕಿಸಿದ್ದರು. ದರ್ಶನ್ ಫೋನ್‌ನಿಂದಲೇ ಪವಿತ್ರಾಗೌಡಗೆ ಫೋನ್ ಮಾಡಿಸಿ ಎಲ್ಲೂ ಹೋಗದಂತೆ ಸೂಚನೆ ನೀಡಲಾಗಿತ್ತು. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗು ಎಂದು ದರ್ಶನ್ ಪವಿತ್ರಾಗೆ ಹೇಳಿದ್ದರು. ಹೀಗಾಗಿ ದರ್ಶನ್ ಮಾತಿನಂತೆ ಪೊಲೀಸ್ ಠಾಣೆಗೆ ಪವಿತ್ರಾ ಹಾಜರಾಗಿದ್ದರು. ಪವಿತ್ರಾ ಕಾಮಾಕ್ಷಿಪಾಳ್ಯ ಠಾಣೆಯ ಬದಲು ಆರ್ ಆರ್ ನಗರ ಠಾಣೆಗೆ ಹಾಜರಾಗಿದ್ದಳು. ತದನಂತರ ಕಾಮಾಕ್ಷಿಪಾಳ್ಯ ಪೊಲೀಸರು ಕರೆತಂದು ಬಂಧಿಸಿದ್ದರು.
ಇದನ್ನೂ ಓದಿ:Actor Darshan: ದರ್ಶನ್‌ಗೆ ಸದ್ಯಕ್ಕಿಲ್ಲ ಮನೆಯೂಟದ ಭಾಗ್ಯ; ಅರ್ಜಿ ವಿಚಾರಣೆ ಸೆ.5ಕ್ಕೆ ಮುಂದೂಡಿದ ಹೈಕೋರ್ಟ್
ಠಾಣೆಗೆ ಬಂದ ಕೂಡಲೇ ಪೊಲೀಸರ ಮುಂದೆ ದರ್ಶನ್ ಹೇಳಿದ್ದೇನು?
ಮೈಸೂರಿನಲ್ಲಿ ಬಂಧಿಸಿ ದರ್ಶನ್‌ನನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಠಾಣೆಗೆ ಬರುತ್ತಿದ್ದಂತೇ ದರ್ಶನ್ ಹೇಳಿದ ಮೊದಲ ಮಾತೇನು ಗೊತ್ತಾ? ನನ್ನ ಜತೆ ಇದ್ದ ಈ ಹುಡುಗರಿಂದ ನಾನು ಹಾಳಾದೆ ಎಂದಿದ್ದರಂತೆ. ಹುಡುಗರನ್ನು ನಂಬಿ ನಾನು ಕೆಟ್ಟೆ ಎಂದು ಹೇಳಿಕೊಂಡಿದ್ದರಂತೆ.
ಚಾರ್ಜ್‌ಶೀಟ್ ಸಲ್ಲಿಸಲು ತಯಾರಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರಿಂದ ತಯಾರಿ ನಡೆದಿದೆ. ಇಲ್ಲಿಯವರೆಗೆ ಸಾಕ್ಷ್ಯ ಕಲೆ ಹಾಕಿ,ಸ್ಥಳ ಮಹಜರು ನಡೆಸಿ,ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಬರೋಬ್ಬರಿ 52 ಸ್ಥಳ ಮಹಜರು,150 ಜನರ ಹೇಳಿಕೆ ದಾಖಲಿಸಿದ್ದಾರೆ. ಚಿತ್ರದುರ್ಗದ ಕಿಡ್ನ್ಯಾಪ್ ಜಾಗದಿಂದ ಹಿಡಿದು ಮೃತದೇಹ ಎಸೆದಿದ್ದ ಜಾಗದವರೆಗೆ ಮಹಜರ್ ಮಾಡಲಾಗಿದೆ.
ಪಟ್ಟಣಗೆರೆ ಶೆಡ್, ದರ್ಶನ್ ನಿವಾಸ, ಪವಿತ್ರಾ ಗೌಡ ನಿವಾಸ ಸೇರಿದಂತೆ ಸ್ಟೋನಿ ಬ್ರೂಕ್ ಪಬ್, ಮೃತ ದೇಹ ಎಸೆದ ಸತ್ವ ಅಪಾರ್ಟ್ ಮೆಂಟ್ ಎದುರಿನ ಕಾಲುವೆ ಸೇರಿದಂತೆ ಕೊಲೆಯ ನಂತರದ ಮಾತುಕತೆ ಜಾಗಗಳು ಸೇರಿ 52 ಕಡೆ ಸ್ಥಳ ಮಹಜರು ಮಾಡಲಾಗಿದೆ. ಪ್ರಕರಣದಲ್ಲಿ ಸಾಕ್ಷಿಯಾಗಿರುವ 150 ಜನರ ಹೇಳಿಕೆ ದಾಖಲಾಗಿದೆ.
ಘಟನೆ ಸಂಬಂಧಿಸಿದಂತೆ ಆರೋಪಿಗಳು ಎಲ್ಲೆಲ್ಲಿ ತೆರಳಿದ್ದರು. ಯಾರ್ಯಾರ ಸಂಪರ್ಕ ಮಾಡಿದ್ದರು? ಪೆಟ್ರೋಲ್ ಬಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಸಹಚರರ ಹೇಳಿಕೆ ಸೇರಿ ಒಟ್ಟಾರೆಯಾಗಿ ಬರೋಬ್ಬರಿ 150 ಕ್ಕೂ ಹೆಚ್ಚು ಜನರ ಹೇಳಿಕೆ ದಾಖಲಾಗಿದೆ.
ಪುಸ್ತಕದ ಮೊರೆ ಹೋದ ದರ್ಶನ್
ನಟ ದರ್ಶನ್ ಜೈಲಿನಲ್ಲಿ ಕಳೆದ 64 ದಿನದಿಂದ ಮಂಕಾಗಿ ಕಾಲ ಕಳೆಯುತ್ತಿದ್ದಾರೆ. ನಿಧಾನವಾಗಿ ಜೈಲಿನ ಪರಿಸರಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಬೇಜಾರು ಕಳೆಯೋದಕ್ಕೆ ವಾಲಿಬಾಲ್ ಆಟಕ್ಕೆ ಇಳಿದಿದ್ದಾರೆ. ಈಗಾಗಲೇ ಜೈಲೊಳಗಡೆ ಪುಸ್ತಕದ ಮೊರೆ ಹೋಗಿದ್ದು, ಜತೆಗೆ ಬೇಜಾರು ಕಳೆಯಲು ವಾಲಿಬಾಲ್ ಕೂಡ ಆಡುತ್ತಿದ್ದಾರೆ. ಜೈಲಿನ ಇತರೆ ಖೈದಿಗಳ ಜತೆ ಸೇರಿ ವಾಲಿಬಾಲ್ ಆಡುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ