ಬೆಂಗಳೂರು: ಚಿತ್ರ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು (Manada kadalu Film) ಸಿನಿಮಾ ಚಿತ್ರಿಕರಣದ ವೇಳೆ ಅವಘಡವೊಂದು ಸಂಭವಿಸಿತ್ತು. ಮೂವತ್ತು ಅಡಿ ಎತ್ತರದಿಂದ ಬಿದ್ದು ಲೈಟ್ ಮ್ಯಾನ್ (Light man) ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲ ಬಳಿಯ ಅಡಕಮಾರನಹಳ್ಳಿಯಲ್ಲಿ ನಡೆದಿತ್ತು.
ಲೈಟ್ ಮ್ಯಾನ್ ಮೋಹನ್ ಕುಮಾರ್ ಮೃತ ದುರ್ದೈವಿ. ಕಳೆದ ಸೆ. 3ರ ಸಂಜೆ ಶೂಟಿಂಗ್ ಸೆಟ್‌ನಲ್ಲಿ ಲೈಟ್ ಬಿಚ್ಚುವಾಗ ಆಯಾ ತಪ್ಪಿ ಮೋಹನ್ ಕುಮಾರ್ ಕೆಳಗೆ ಬಿದ್ದಿದ್ದರು. ಕೆಳಗೆ ಬಿದ್ದ ರಭಸಕ್ಕೆ ಮೋಹನ್ ಕುಮಾರ್ ತಲೆಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವವಾಗಿತ್ತು. ಅಲ್ಲಿದ್ದವರು ಕೂಡಲೇ ಮೋಹನ್ ಕುಮಾರ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಇದನ್ನೂ ಓದಿ: Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜು; ಕ್ರೈಂ ಥ್ರಿಲ್ಲರ್ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣ
ಆದರೆ ಗೊರಗುಂಟೆಪಾಳ್ಯ ಖಾಸಗಿ ಆಸ್ಪತ್ರೆಯಲ್ಲಿ ಮೋಹನ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್, ಅಡಕಮಾರನಹಳ್ಳಿಯ ಕೃಷ್ಣಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ A4 ಎಂದು ಯೋಗರಾಜ್ ಭಟ್ ವಿರುದ್ಧ ಕೇಸ್ ದಾಖಲಾಗಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಚಿತ್ರವನ್ನು ಅಡಕಮಾರನಹಳ್ಳಿಯ ಗೋಡೌನ್‌ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. 30 ಅಡಿ ಎತ್ತರದ ಅಲ್ಯೂಮಿನಿಯಂ ರೋಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುವ ವೇಳೆ ಅವಘಡ ಸಂಭವಿಸಿದೆ. ಮೃತನ ಸಹೋದರ ಶಿವರಾಜ್ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ