ಕೆಜಿಎಫ್ ಚಾಪ್ಟರ್ 2 ಜಾಗತಿಕವಾಗಿ ಭರ್ಜರಿ ಹೆಸರು ಮಾಡಿದ ಸಿನಿಮಾ. ಚಾಪ್ಟರ್ 1ಕ್ಕಿಂತಲೂ ಈ ಭಾಗ ಹೆಸರುಮಾತಾಗಿದೆ. ಪ್ರಶಾಂತ್ ನೀಲ್ ನಿರ್ದೇಶಿಸಿರುವ ಈ ಫಿಲ್ಮ್‌ನಲ್ಲಿ ಯಶ್ ನಾಯಕ. ಏಪ್ರಿಲ್ 14ರಂದು ಬಿಡುಗಡೆಯಾದ ಸಿನಿಮಾದ್ದು ಬಾಕ್ಸ್ ಆಫೀಸ್‌ನಲ್ಲಿ ಕುದುರೆ ಓಟ. ಅದೆಷ್ಟೋ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಹಿಂದಿಕ್ಕಿರುವ ಕೆಜಿಎಫ್ ಚಾಪ್ಟರ್ 2 ಈ ವಾರ 50ನೇ ದಿನವನ್ನು ಪೂರ್ಣಗೊಳಿಸಲಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ 1235 ಕೋಟಿ ರೂಪಾಯಿ ದಾಟಿದೆ. ಇಷ್ಟೆಲ್ಲದರ ಮಧ್ಯೆ ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ (Shreenidhi Shetty) ಬಗ್ಗೆ ಒಂದು ಸುದ್ದಿ ಹರಡಿದೆ.
ಶ್ರೀನಿಧಿ ಶೆಟ್ಟಿ ಬೆಳ್ಳಿತೆರೆಗೆ ಕಾಲಿಟ್ಟಿದ್ದೇ ಕೆಜಿಎಫ್ ಸಿನಿಮಾ ಮೂಲಕ. ಮೊದಲ ಚಾಪ್ಟರ್ ಮತ್ತು 2ನೇ ಚಾಪ್ಟರ್‌ಗಳಿಗಾಗಿ ತಮ್ಮ ಜೀವನದ ಸುಮಾರು 5-6ವರ್ಷ ಮೀಸಲಿಟ್ಟಿದ್ದಾರೆ. ಅದಕ್ಕೇನೂ ಮೋಸ ಆಗಲಿಲ್ಲ. ಈ ಕೆಜಿಎಫ್ ಸಿನಿಮಾಗಳು ಶ್ರೀನಿಧಿ ಶೆಟ್ಟಿಗೆ ಭರ್ಜರಿ ಹೆಸರು, ಜನಪ್ರಿಯತೆ ತಂದುಕೊಟ್ಟಿವೆ. ಅಷ್ಟೇ ಅಲ್ಲ, ಹೆಚ್ಚೆಚ್ಚು ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತಿದೆ. ಆದರೆ ಶ್ರೀನಿಧಿ ಶೆಟ್ಟಿ ತಮ್ಮ ಸಂಭಾವನೆಯನ್ನು ಸಿಕ್ಕಾಪಟೆ ಹೆಚ್ಚಿಸಿಕೊಂಡಿದ್ದಾರೆ ಎಂಬುದೊಂದು ಗಾಸಿಪ್ ಕೂಡ ಹಬ್ಬಿದೆ. ಅಂದರೆ ಶ್ರೀನಿಧಿ ಶೆಟ್ಟಿಯವರು ಒಂದು ಸಿನಿಮಾಕ್ಕೆ 2 ಕೋಟಿ ರೂಪಾಯಿಯಷ್ಟು ಸಂಭಾವನೆ ಕೇಳುತ್ತಿದ್ದಾರಂತೆ !
ಇದನ್ನೂ ಓದಿ: ಧೂಮಪಾನ ವೈಭವೀಕರಣ: ಕೆಜಿಎಫ್-2 ಬಿಡುಗಡೆಗೆ ತಡೆ ಕೋರಿದ್ದ ಅರ್ಜಿ ವಜಾ
ಸದ್ಯ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಉದಯೋನ್ಮುಖ ನಾಯಕಿಯರಲ್ಲಿ ರಶ್ಮಿಕಾ ಮಂದಣ್ಣ ಹೆಸರು ಇದೆ. ರಶ್ಮಿಕಾ ಒಂದು ಸಿನಿಮಾಕ್ಕೆ 1.5 ಕೋಟಿ ರೂ.ದಿಂದ 2 ಕೋಟಿ ರೂ.ಕೇಳುತ್ತಾರೆ. ಈಗ ಶ್ರೀನಿಧಿ ಶೆಟ್ಟಿಯೂ ಅದೇ ರೇಂಜ್‌ನಲ್ಲೇ ಸಂಭಾವನೆಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗಂತ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಶ್ರೀನಿಧಿ ಶೆಟ್ಟಿಗೆ ತೆಲುಗು ಚಿತ್ರರಂಗದಿಂದ ಆಫರ್ ಬಂದಿದ್ದು, ನಿರ್ಮಾಪಕರೊಬ್ಬರ ಬಳಿ 2 ಕೋಟಿ ರೂ.ಕೇಳಿದ್ದಾರಂತೆ ಆದರೆ ನಿರ್ಮಾಪಕರು ಇಷ್ಟು ಹಣ ಹೆಚ್ಚಾಯಿತು ಎಂದು ಸದ್ಯಕ್ಕೆ ಕೈಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಸುದ್ದಿ ಹೊರಬಿದ್ದಾಗಿನಿಂದಲೂ ಎರಡೂ ವಿಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಶ್ರೀನಿಧಿ ಶೆಟ್ಟಿ ತುಂಬ ಹಾರ್ಡ್‌ವರ್ಕ್ ಮಾಡಿದ್ದಾರೆ. ಕೆಜಿಎಫ್ ಅಷ್ಟು ಪ್ರಸಿದ್ಧಿ ಪಡೆದಿದೆ. ಹೀಗಿರುವಾಗ 2 ಕೋಟಿ ಕೇಳೋದ್ರಲ್ಲಿ ತಪ್ಪೇನು ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಮತ್ತೊಂದಷ್ಟು ಮಂದಿ, ಮಾಡಿದ್ದು ಮೂರೇ ಸಿನಿಮಾ..ಅಷ್ಟಕ್ಕೇ ಇಷ್ಟು ಸಂಭಾವನೆ ಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ.
2016ರಲ್ಲಿ ಮಿಸ್ ಸೂಪರ್‌ನ್ಯಾಶನಲ್ ಸ್ಪರ್ಧೆಯಲ್ಲಿ ಗೆದ್ದಿರುವ ಶ್ರೀನಿಧಿ ಶೆಟ್ಟಿ, ಕೆಜಿಎಫ್ 1 ಮತ್ತು 2ನೇ ಚಾಪ್ಟರ್‌ಗಳ ಮಧ್ಯೆ ಕೋಬ್ರಾ ಎಂಬ ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಆಕ್ಷನ್-ಥ್ರಿಲ್ಲರ್ ಸಿನಿಮಾ ಆಗಿದ್ದು, ವಿಕ್ರಮ್ ನಾಯಕರಾಗಿದ್ದರೆ, ಆರ್. ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡಿದ್ದಾರೆ. ಎಸ್.ಎಸ್.ಲಲಿತ್ ಕುಮಾರ್ ನಿರ್ಮಾಣದ ಕೋಬ್ರಾ ಆಗಸ್ಟ್‌ನಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ: ಸಾವಿರದ ಸಾಧನೆ ಮಾಡಿದ ಕೆಜಿಎಫ್