ಚೆನ್ನೈ: ತಮಿಳು ಚಿತ್ರ ನಟ ದಳಪತಿ ವಿಜಯ್ (Thalapathy Vijay) ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಪಕ್ಷಕ್ಕೆ ʼತಮಿಳ ವೆಟ್ರಿ ಕಳಗಂʼ (Tamizha Vetri Kazhagam) ಎಂಬ ಹೆಸರನ್ನು ಘೋಷಿಸಿದ್ದಾರೆ.
ಹಿಂದಿನ ಕೆಲವು ದಿನಗಳಿಂದಲೇ ತಮಿಳಿನ ಜನಪ್ರಿಯ ನಟ ವಿಜಯ್ ತಮಿಳುನಾಡಿನಲ್ಲಿ ತಮ್ಮದೇ ರಾಜಕೀಯ ಪಕ್ಷ ಆರಂಭಿಸುವ ಪ್ರಕ್ರಿಯೆ ಆರಂಭಿಸಿದ್ದರು. ವಿಜಯ್ ಸ್ವತಃ ಪಕ್ಷದ ಅಧ್ಯಕ್ಷರಾಗಿದ್ದಾರೆ. “ನಾವು ಭಾರತೀಯ ಚುನಾವಣಾ ಆಯೋಗದಲ್ಲಿ ಪಕ್ಷವನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ತಂಡದ ಪ್ರಮುಖ ಸದಸ್ಯರೊಬ್ಬರು ಇತ್ತೀಚೆಗೆ ತಿಳಿಸಿದ್ದರು. ಇದೀಗ ಸ್ವತಃ ವಿಜಯ್ ಅವರೇ ಪಕ್ಷದ ಹೆಸರನ್ನು ಬಹಿರಂಗಪಡಿಸಿದ್ದಾರೆ.
Tamil Nadu | Actor Vijay enters politics, announces the name of his party – Tamilaga Vetri Kazham pic.twitter.com/m1yMdNPK6x
— ANI (@ANI) February 2, 2024
ನೋಂದಣಿಗೆ ಮುನ್ನ ನಡೆದ ಸಭೆಯಲ್ಲಿ ಪಕ್ಷದ ಸಾಮಾನ್ಯ ಮಂಡಳಿಯ ಸುಮಾರು 200 ಸದಸ್ಯರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯನ್ನೂ ನೇಮಿಸಲಾಗಿದೆ ಮತ್ತು ಕೇಂದ್ರ ಕಾರ್ಯಕಾರಿ ಸಮಿತಿಯನ್ನು ಸಹ ರಚಿಸಲಾಗಿದೆ. ಪಕ್ಷದ ಹೆಸರು ಮತ್ತು ನೋಂದಣಿಯನ್ನು ಅಂತಿಮಗೊಳಿಸಲು ಮತ್ತು ಚುನಾವಣಾ ರಾಜಕೀಯಕ್ಕೆ ಧುಮುಕಲು ವಿಜಯ್ ಅವರಿಗೆ ಪರಿಷತ್ತು ಅಧಿಕಾರ ನೀಡಿತ್ತು.
ಒಂದು ಮೂಲದ ಪ್ರಕಾರ ತಮಿಳುನಾಡಿನಲ್ಲಿ 2026ರ ರಾಜ್ಯ ಚುನಾವಣೆಯಲ್ಲಿ ವಿಜಯ್ ಅವರು ಕಣಕ್ಕೆ ಇಳಿಯಲಿದ್ದಾರೆ. ತಮಿಳು ಚಿತ್ರರಂಗದ ಮುಂದಿನ ರಜನಿಕಾಂತ್ ಎಂದೇ ವಿಜಯ್ ಕರೆಸಿಕೊಳ್ಳುತ್ತಾರೆ. 68 ಚಿತ್ರಗಳಲ್ಲಿ ನಟಿಸಿರುವ ವಿಜಯ್ ಒಂದು ದಶಕದಿಂದ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಆಹಾರದ ಉಚಿತ ವಿತರಣೆ, ಶೈಕ್ಷಣಿಕ ವಿದ್ಯಾರ್ಥಿವೇತನಗಳು, ಗ್ರಂಥಾಲಯಗಳು, ಸಂಜೆಯ ತರಗತಿಗಳು, ಕಾನೂನು ಸಹಾಯ ಸೇರಿದಂತೆ ಹಲವಾರು ಚಾರಿಟಿ ಮತ್ತು ಕಲ್ಯಾಣ ಉಪಕ್ರಮಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ಅವರು ಪಬ್ಲಿಕ್ ಪರೀಕ್ಷೆಗಳಲ್ಲಿ ಟಾಪರ್ ಆದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಕ್ಷೇತ್ರವಾರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆಗ ಅವರು ವಿದ್ಯಾರ್ಥಿಗಳಿಗೆ “ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಅವರಂತಹ ನಾಯಕರ ಬಗ್ಗೆ ಓದಿ, ಒಳ್ಳೆಯದನ್ನು ತೆಗೆದುಕೊಳ್ಳಿ ಮತ್ತು ಉಳಿದವನ್ನು ಬಿಡಿ” ಎಂದು ಸಲಹೆ ನೀಡಿದ್ದರು.
ವಿಜಯ್ ಅವರ ತಂದೆ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಚಂದ್ರಶೇಖರ್. ವಿಜಯ್ ಅವರ ಚಲನಚಿತ್ರಗಳು ಸಾಮಾನ್ಯವಾಗಿ ಸೂಕ್ಷ್ಮ ಮತ್ತು ಪ್ರಮುಖ ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಸ್ಪರ್ಶಿಸುತ್ತವೆ. ರಾಜ್ಯದಲ್ಲಿ ಭಾರಿ ಅಭಿಮಾನಿ ಬಳಗ ವಿಜಯ್‌ಗೆ ಇದೆ. ವಿಜಯ್ ಅವರ ಕೆಲವು ಚಲನಚಿತ್ರಗಳು ಸರ್ಕಾರಗಳನ್ನು ಹಾಗೂ ರಾಜಕಾರಣಿಗಳು ವಿಡಂಬಿಸಿದ್ದು, ವಿವಾದಕ್ಕೆ ಗುರಿಯಾಗಿವೆ.
ಇದನ್ನೂ ಓದಿ: Poonam Pandey: ಪೂನಂ ಪಾಂಡೆ ಸತ್ತಿರುವುದು ಸುಳ್ಳು?ಪೋಸ್ಟ್‌ನಲ್ಲಿ ಏನಿದೆ?