Site icon Vistara News

BBK Season 10 : ಬಿಗ್‌ ಬಾಸ್‌ ಮನೆಗೆ ಬೆಂಕಿ ಹಚ್ಚಿದ ಸಿಗರೇಟ್‌ ಕಿಡಿ; ಇಬ್ಬರಿಂದಾಗಿ ಎಲ್ಲರಿಗೂ ಶಿಕ್ಷೆ!

Vinay Gowda Michael Cigarette big boss

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ದೊಡ್ಮನೆಯಲ್ಲಿ ಬೆಂಕಿ ಹತ್ತಿಕೊಂಡಿದೆ. ಸ್ನೇಕ್‌ ಶ್ಯಾಮ್‌ ಮತ್ತು ಗೌರೀಶ್‌ ಅಕ್ಕಿ ಅವರ ನಿರ್ಗಮನದ ಬಳಿಕ ಈಗ 15 ಮಂದಿ ಮನೆಯೊಳಗೆ ಉಳಿದಿದ್ದಾರೆ. ಹಾಗೆ ಮೂರನೇ ವಾರ ಆರಂಭವಾಗುತ್ತಿದ್ದಂತೆಯೇ ಹುಟ್ಟಿಕೊಂಡ ಕಿಡಿ ಬೆಂಕಿಯಾಗಿದೆ. ಈ ಕಿಡಿ ಹಚ್ಚಿದ್ದು ಒಂದು ಸಿಗರೇಟು! (Cigarette Spark)

ಬಿಗ್‌ ಬಾಸ್‌ ಮನೆಯಲ್ಲಿ ರೂಲ್ಸ್‌ (Big Boss rules) ಪಾಲನೆ ಕಡ್ಡಾಯ. ಅದು ಪಾಲನೆಯಾಗದೆ ಇದ್ದಾಗ ಅದಕ್ಕೆ ಸೂಕ್ತ ಶಿಕ್ಷೆಯನ್ನು, ಸೂಕ್ತ ಕಾರಣಗಳೊಂದಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ತಪ್ಪು ಮಾಡಿದವರಿಗೆ, ತಪ್ಪು ಮಾಡಿದ ತಂಡಕ್ಕೆ ಈ ಶಿಕ್ಷೆ ಕೊಡಲಾಗುತ್ತದೆ. ಆದರೆ, ಈ ಬಾರಿ ತಪ್ಪು ಮಾಡಿದ್ಯಾರೋ? ಶಿಕ್ಷೆ ಯಾರಿಗೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದುವೇ ಕಿಡಿ ಬೆಂಕಿಯಾಗಲು ಕಾರಣ.

ಬಿಗ್‌ ಬಾಸ್‌ ಮನೆಯಲ್ಲಿ ಆರಂಭಿಕ ವರ್ಷಗಳಲ್ಲಿ ಸಿಗರೇಟು ಸೇವನೆ ನಿಷಿದ್ಧವಾಗಿತ್ತು. ಎಷ್ಟೇ ಅಭ್ಯಾಸವಿದ್ದರೂ ಮನೆಯೊಳಗೆ ಬಂದ ಮೇಲೆ ಬಿಡಬೇಕಾಗಿತ್ತು, ಹೀಗಾಗಿ ಕೆಲವರ ಪಾಲಿಗೆ ಅದು ರಿಫಾರ್ಮ್‌ ಸೆಂಟರ್‌ ಆಗಿಯೂ ಕೆಲಸ ಮಾಡಿತ್ತು. ಆದರೆ, ಮುಂದೆ ಸ್ಪರ್ಧೆಗೆ ಬರುವಾಗಲೇ ಸಿಗರೇಟಿಗೆ ಅವಕಾಶ ಕೊಡಲೇಬೇಕು ಎಂದು ಸ್ಪರ್ಧಿಗಳೇ ಷರತ್ತು ವಿಧಿಸಿದ್ದರಿಂದ ಅದಕ್ಕೆ ಸ್ಮೋಕಿಂಗ್‌ ರೂಮ್‌ನ ಅವಕಾಶ ಮಾಡಿಕೊಡಲಾಗಿದೆ.

ಈ ಬಾರಿ ಸ್ಮೋಕಿಂಗ್‌ ರೂಮ್‌ನಲ್ಲಿ ಒಮ್ಮೆಗೆ ಒಬ್ಬರು ಮಾತ್ರ ಸಿಗರೇಟು ಸೇವನೆ ಮಾಡಬಹುದು ಎಂಬ ನಿಯಮ ಜಾರಿ ಮಾಡಲಾಗಿದೆ. ಆದರೆ, ಈ ನಿಯಮವನ್ನು ಆರಂಭದಿಂದಲೂ ಉಲ್ಲಂಘಿಸಲಾಗುತ್ತಿತ್ತು. ಪದೇಪದೆ ಎಚ್ಚರಿಸಿದರೂ ಅದನ್ನು ಮೀರುತ್ತಿದ್ದುದನ್ನು ಕಂಡ ಬಿಗ್‌ ಬಾಸ್‌ ದೊಡ್ಡ ಶಿಕ್ಷೆಯನ್ನೇ ನೀಡಲು ಮುಂದಾದರು.

ವಿನಯ್‌ ಮೈಕೆಲ್‌ ಜತೆಯಾಗಿ ಸಿಗರೇಟು ಸೇದುತ್ತಿರುವುದು.

ವಿನಯ್ ಗೌಡ (Vinay gowda) ಮತ್ತು ಮೈಕೆಲ್ (Michael Ajay) ಒಂದೇ ಬಾರಿಗೆ ಕೋಣೆಗೆ ಹೋಗಿ ಸಿಗರೇಟು ಸೇದಿದ್ದನ್ನು ವಿಡಿಯೊ ಸಹಿತ ಬಯಲು ಮಾಡಿದ ಬಿಗ್‌ ಬಾಸ್‌ ಇದೀಗ ಸ್ಮೋಕಿಂಗ್‌ ರೂಮನ್ನೇ ಬಂದ್‌ ಮಾಡಿದ್ದಾರೆ.

ಗೊತ್ತಿಲ್ಲದೆ ಅಲ್ಲ ವಿನಯ್‌, ಗೊತ್ತಿದ್ದೇ ಉಲ್ಲಂಘನೆ ಮಾಡಿದ್ದೀರಿ

ಈ ರೀತಿ ಬಿಗ್‌ ಬಾಸ್‌ ಆಕ್ರೋಶಿತರಾಗಿದ್ದನ್ನು ಗಮನಿಸಿದ ವಿನಯ್‌ ಗೌಡ ಮತ್ತು ಮೈಕೆಲ್‌ ಇಬ್ಬರೂ ತಪ್ಪಾಯಿತು, ಕ್ಷಮಿಸಿ ಎಂದು ಕೇಳಿಕೊಂಡರು. ‘ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪಾಗಿದೆ, ಕ್ಷಮೆ ಕೇಳುತ್ತೇನೆ. ನಾನು ಇಲ್ಲಿ ಇರುವವರೆಗೂ ಸಿಗರೇಟ್ ಸೇದುವುದಿಲ್ಲ’ ಎಂದು ವಿನಯ್ ಗೌಡ ಕೇಳಿಕೊಂಡರು. ಆಗ ಬಿಗ್‌ ಬಾಸ್‌ ಸಿಟ್ಟಿಗೆದ್ದು, ‘ಗೊತ್ತಿಲ್ಲದೇ ಅಲ್ಲ ವಿನಯ್ ಗೊತ್ತಿದ್ದೂ, ಗೊತ್ತಿದ್ದೂ ತಪ್ಪು ಮಾಡಿದ್ದೀರಿ. ನಾವು ಎಚ್ಚರಿಕೆ ನೀಡಿದ ಮೇಲೆಯೂ ತಪ್ಪು ಮಾಡಿದ್ದೀರಿ’ ಎಂದು‌ ಹೇಳಿದರು.

ಅವರಿಬ್ಬರನ್ನು ಬಿಟ್ಟು ಉಳಿದವರಿಗೆ ಶಿಕ್ಷೆ ಕೊಟ್ಟ ಬಿಗ್‌ಬಾಸ್‌

ಹೀಗೆ ನಿಯಮ ಉಲ್ಲಂಘಿಸಿದ್ದಕ್ಕೆ ಅವರಿಬ್ಬರಿಗೆ ಶಿಕ್ಷೆ ಸಿಗಬಹುದು ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಆದರೆ, ಬಿಗ್‌ ಬಾಸ್‌ ಇದನ್ನು ಉಲ್ಟಾ ಮಾಡಿ ಅವರಿಬ್ಬರನ್ನು ಬಿಟ್ಟು ಉಳಿದ ಎಲ್ಲ 13 ಸ್ಪರ್ಧಿಗಳಿಗೆ ಶಿಕ್ಷೆಯನ್ನು ನೀಡಿದರು. ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಬರೆದಿರುವ ಭಾರವಾದ ಚೀಲವೊಂದನ್ನು ಬೆನ್ನ ಮೇಲೆ ಹೊತ್ತುಕೊಂಡೇ ಓಡಾಡುವ ಶಿಕ್ಷೆ ಇದು. ಶೌಚಾಲಯ ಬಳಸುವಾಗ ಹೊರತುಪಡಿಸಿ (ಮಲಗುವಾಗಲೂ) ಎಲ್ಲಾ ಹೊತ್ತಿನಲ್ಲೂ ಇದನ್ನು ಬೆನ್ನಿಗೆ ಹಾಕಿಕೊಂಡಿರಬೇಕು ಎಂದು ಬಿಗ್‌ ಬಾಸ್‌ ಎಚ್ಚರಿಕೆ ನೀಡಿದ್ದಾರೆ.

ಎಲ್ಲರೂ ಯಾಕೆ ಶಿಕ್ಷೆ ಅನುಭವಿಸಬೇಕು ಎಂಬುದಕ್ಕೆ ಬಿಗ್‌ ಬಾಸ್‌ ಸಮರ್ಥನೆ ನೀಡಿದ್ದಾರೆ. ಅದೇನೆಂದರೆ, ನಿಯಮ ಪಾಲನೆ ಎಲ್ಲರ ಕರ್ತವ್ಯ. ಯಾರಾದರೂ ತಪ್ಪು ಮಾಡಿದ್ದಾರೆ, ರೂಲ್ಸ್‌ ಮುರಿಯುತ್ತಿದ್ದಾರೆ ಎನ್ನುವುದು ತಿಳಿದ ಕೂಡಲೇ ಎಚ್ಚರಿಸಬೇಕು. ಆದರೆ, ನೀವೆಲ್ಲರೂ ಗಮನಿಸಿಯೂ ಸುಮ್ಮನಿದ್ದೀರಿ. ಹೀಗಾಗಿ ಶಿಕ್ಷೆ ನಿಮಗೂ ಅನ್ವಯಿಸುತ್ತದೆ ಎಂದು ಎಚ್ಚರಿಸಿದರು.

ವಿನಯ್‌ ಗೌಡ, ಮೈಕೆಲ್‌ ಮೇಲೆ ಮನೆ ಮಂದಿಗೆ ಆಕ್ರೋಶ

ಈ ಪ್ರಕರಣ ವಿನಯ್‌ ಗೌಡ ಮತ್ತು ಮೈಕೆಲ್‌ ಮೇಲೆ ಮನೆಯ ಹಲವರು ಸಿಟ್ಟುಗೊಳ್ಳುವಂತಾಗಿದೆ. ತನಿಷಾ ಕುಪ್ಪಂಡ ಅವರಂತೂ ಬೆನ್ನ ಮೇಲೆ ಭಾರ ಹೊತ್ತುಕೊಂಡು ಬಂದವರೇ ನೇರವಾಗಿ ಬಂದು ಥ್ಯಾಂಕ್ಯೂ ವಿನಯ್‌, ಥ್ಯಾಂಕ್ಯೂ ಮೈಕೆಲ್‌ ಎಂದರು. ಇದು ವಿನಯ್‌ ಅವರನ್ನು ಕೆರಳಿಸಿತು. ಆದರೆ, ತನಿಷಾ ಇದಕ್ಕೆ ಸೊಪ್ಪು ಹಾಕಲಿಲ್ಲ. ಹೇಳಬೇಕು ಅನಿಸಿತು ಹೇಳಿದೆ ಎಂದರು.

ಇತ್ತ ಡ್ರೋನ್‌ ಪ್ರತಾಪ್‌ ಕೂಡಾ ಶೌಚಾಲಯದಲ್ಲಿ ಕೌಂಟರ್‌ ಕೊಟ್ಟರು. ಒಂದು ವೇಳೆ ಅವರಲ್ಲದೆ ಬೇರೆಯವರು ರೂಲ್ಸ್‌ ಬ್ರೇಕ್‌ ಮಾಡಿದ್ದರೆ ನಾನು ಈ ಮನೆಯಲ್ಲಿ ಬದುಕಲು ಸಾಧ್ಯವಿತ್ತೇ ಎಂದು ಕೇಳಿದರು. ಇದು ಮುಂದೆ ಡ್ರೋನ್‌ ಮತ್ತು ವಿನಯ್‌ ನಡುವೆ ವಾಗ್ಯುದ್ಧಕ್ಕೆ ಕಾರಣವಾಯಿತು. ಆಗ ಪ್ರತಾಪ್‌ ಮಾತನ್ನು ಸ್ವಲ್ಪ ತಿರುಗಿಸಿ, ನಾನು ಹೇಳಿದ್ದು ಕ್ಯಾಪ್ಟನ್‌ ಶಿಕ್ಷೆ ಕೊಡುತ್ತಿದ್ದರು ಎಂದು ಎಂದರು. ಆಗ ಡ್ರೋನ್‌ ಮತ್ತು ರಕ್ಷಕ್‌ ಬುಲೆಟ್‌ ನಡುವೆ ಬೆಂಕಿ ಹಚ್ಚಿ ತಣ್ಣಗಾಯಿತು.

ಇದನ್ನೂ ಓದಿ: BBK Season 10 : ವರ್ತೂರು ಸಂತೋಷ್‌ ಅರೆಸ್ಟ್‌ ಉಳಿದ ಸ್ಪರ್ಧಿಗಳಿಗೆ ಇನ್ನೂ ಗೊತ್ತೇ ಇಲ್ಲ!

ನೀನೂ ಸಿಗರೇಟ್‌ ಸೇದಿಲ್ವಾ? ಕಾರ್ತಿಕ್‌ ವರ್ಸಸ್‌ ವಿನಯ್‌ ಗೌಡ

ಈ ನಡುವೆ, ಕಾರ್ತಿಕ್‌ ಮಹೇಶ್‌ ಅವರು ಅಡುಗೆ ಮನೆಯಲ್ಲಿದ್ದ ತಮ್ಮ ತಂಡದ ಸದಸ್ಯರ ಬಳಿ ʻವಿನಯ್‌ ಮತ್ತು ಮೈಕೆಲ್‌ ಅವರಿಂದಾಗಿ ಇಡೀ ಮನೆಗೆ ಶಿಕ್ಷೆಯಾಗಿದ್ದನ್ನು ಪ್ರಶ್ನೆ ಮಾಡಬೇಕುʼ ಎಂದು ಕುಮ್ಮಕ್ಕು ನೀಡಿದರು. ಇದನ್ನು ಕೇಳಿಕೊಂಡು ಕೆರಳಿದ ವಿನಯ್‌ ಕಾರ್ತಿಕ್‌ ಮಹೇಶ್‌ ಅವರನ್ನು ತರಾಟೆಗೆತ್ತಿಕೊಂಡರು.

ʻನಾನು ಮಾತ್ರಾನಾ ಸಿಗರೇಟು ಸೇದಿದ್ದು, ನೀನೂ ಜಂಟಿಯಾಗಿ ಸೇದಿಲ್ವಾ? ನಿನ್ನ ವಿಡಿಯೊ ಬಂದಿಲ್ಲ ಎಂಬ ಕಾರಣಕ್ಕೆ ದೊಡ್ಡ ಮನುಷ್ಯನ ಹಾಗೆ ಆಡಬೇಡʼ ಎಂದರು. ಆಗ ಕಾರ್ತಿಕ್‌ ನಾನು ತಪ್ಪು ಮಾಡಿದ್ದೇನೆ ಎಂಬ ಕಾರಣಕ್ಕಾಗಿಯೇ ಮಾತನಾಡುತ್ತಿಲ್ಲ ಎಂದರು. ಆಗ ವಿನಯ್‌ ಯಾಕೆ ಅವರನ್ನೆಲ್ಲ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದೀಯಾ? ಅವರಿಗೆ ಏನು ಮಾಡಬೇಕು ಎಂದು ಗೊತ್ತಿಲ್ವಾ? ಎಂದು ಕೇಳಿದರು.

ಹೀಗೆ ಸಿಗರೇಟಿನಿಂದ ಹುಟ್ಟಿದ ಕಿಡಿ ಇಡೀ ಮನೆಯಲ್ಲಿ ಬೆಂಕಿ ಬೀಳುವಂತೆ ಮಾಡಿದೆ. ಭಾರವಾದ ಚೀಲ ಎಲ್ಲರನ್ನೂ ಜಗ್ಗುತ್ತಿದೆ. ಮಲಗಲಾಗದೆ ಕಷ್ಟಪಡುತ್ತಿರುವ ಸ್ಪರ್ಧಿಗಳು ಬಿಗ್‌ ಬಾಸನ್ನು ಬೇಡಿಕೊಳ್ಳುತ್ತಿದ್ದಾರೆ. ಆದರೆ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು, ಇದಕ್ಕೆ ಕ್ಷಮೆ ಇಲ್ಲ ಎನ್ನುತ್ತಿದ್ದಾರೆ ಬಿಗ್‌ ಬಾಸ್‌!

Exit mobile version