Site icon Vistara News

Gicchi Giligili : ಗಿಚ್ಚಿಗಿಲಿಗಿಲಿ ಖ್ಯಾತಿಯ ಚಂದ್ರಪ್ರಭಾಗೆ ಈಗ ಡಿಕ್ಕಿ ಗಲಿಬಿಲಿ!; Hit and Run ಮಾಡಿ ಪರಾರಿಯಾದ ಕಾಮಿಡಿ ಕಿಲಾಡಿ!

Chandraprabha G

ಚಿಕ್ಕಮಗಳೂರು: ಜನಪ್ರಿಯ ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿ (Gicchi gili Gili) ಸೀಸನ್‌ 2 ವಿನ್ನರ್‌ (Gicchi gili Gili season 2 winner) ಚಂದ್ರಪ್ರಭಾ ಜಿ. (Chandraprabha) ಅವರು ಇದೀಗ ವಿವಾದದಲ್ಲಿ ಸಿಲುಕಿದ್ದಾರೆ. ಚಿಕ್ಕಮಗಳೂರಿನಲ್ಲಿ ಕಾರಿನಲ್ಲಿ ಸಾಗುತ್ತಿದ್ದ ಅವರು ಎದುರಿನಿಂದ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬಳಿಕ ನಿಲ್ಲಿಸದೆ ತಪ್ಪಿಸಿಕೊಂಡಿದ್ದಾರೆ. ಹೀಗಾಗಿ ಅವರ ಮೇಲೆ ಹಿಟ್‌ ಎಂಡ್‌ ರನ್‌ ಕೇಸು (Hit and run Case) ದಾಖಲಾಗಿದೆ. ವೃತ್ತಿಯಲ್ಲಿ ಕಲಾವಿದರಾಗಿರುವ, ತಮ್ಮ ಸ್ಕಿಟ್‌ಗಳಲ್ಲಿ ಮಾನವೀಯತೆಯ ಬಗ್ಗೆ ಮಾತನಾಡುವ ಇವರು ಅಪಘಾತ ನಡೆಸಿದ ಬಳಿಕ ಕನಿಷ್ಠ ನಿಲ್ಲಿಸುವ ಸೌಜನ್ಯವಾಗಲೀ, ಮಾನವೀಯತೆಯಾಗಲೀ ತೋರಿಸಿಲ್ಲ ಎನ್ನುವುದು ಈಗ ಭಾರಿ ಚರ್ಚೆಯಲ್ಲಿದೆ.

ಎಲ್ಲಿ ಅಪಘಾತ, ಗಾಯಾಳು ಯಾರು?

ಚಿಕ್ಕಮಗಳೂರು ನಗರದಲ್ಲಿ ನಡೆದ ಅಪಘಾತ ಇದು. ನಗರದ ಬಸ್‌ ನಿಲ್ದಾಣ ಬಳಿ ಚಂದ್ರಪ್ರಭ ಅವರು ಚಲಾಯಿಸುತ್ತಿದ್ದ ಕಾರು ಬೈಕ್‌ ಒಂದಕ್ಕೆ ಡಿಕ್ಕಿ ಹೊಡೆದಿದೆ. ಬೈಕ್‌ ಸವಾರ ರಸ್ತೆಗೆ ಬಿದ್ದು ಹೊರಳಾಡುತ್ತಿದ್ದರೂ ಚಂದ್ರಪ್ರಭ ಅವರು ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ನಿವಾಸಿಯಾಗಿರುವ ಮಾಲ್ತೇಶ್‌ ಅವರು ಬೈಕ್‌ನಲ್ಲಿ ಸಾಗುತ್ತಿದ್ದಾಗ ನಡೆದ ಘಟನೆ ಇದಾಗಿದ್ದು, ಅವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ರವಾನೆ ಮಾಡಲಾಗಿದೆ.

ಗಾಯಾಳು ಮಾಲ್ತೇಶ್‌

ಸಿಕ್ಕಿಬಿದ್ದಿದ್ದು ಹೇಗೆ?

ಮಂಗಳವಾರ ಈ ಅಪಘಾತ ನಡೆದಿದ್ದು, ಚಂದ್ರಪ್ರಭ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಹಾಗಿದ್ದರೆ ಅಪಘಾತ ಮಾಡಿದ್ದು ಅವರೇ ಎಂದು ಗೊತ್ತಾಗಿದ್ದು ಹೇಗೆ? ಘಟನಾ ಸ್ಥಳದಲ್ಲಿ ಪೊಲೀಸರು ಕೂಡಾ ಇದ್ದರು. ಆದರೆ, ಅವರಿಗೆ ವಾಹನ ಯಾರದ್ದು ಎನ್ನುವುದು ಗೊತ್ತಾಗಿರಲಿಲ್ಲ. ಕೂಡಲೇ ಸಿಸಿ ಟಿವಿ ಫೂಟೇಜ್‌ ಚೆಕ್‌ ಮಾಡಿದಾಗ ಕಾರಿನ ನಂಬರ್‌ KA 51 MD 9552 ಎನ್ನುವುದು ಗೊತ್ತಾಯಿತು.

ಅದನ್ನು ಚೆಕ್‌ ಮಾಡಿದಾಗ ಅದು ಗಿಚ್ಚಿಗಿಲಿಗಿಲಿ ಖ್ಯಾತಿಯ ನಟ ಚಂದ್ರಪ್ರಭ ಅವರಿಗೆ ಸೇರಿದ ಕಾರು ಎಂದು ಗೊತ್ತಾಯಿತು. ಇದೀಗ ಪೊಲೀಸರು ಕುಟುಂಬದವರು ನೀಡಿದ ದೂರಿನ ಆಧಾರದಲ್ಲಿ ಚಂದ್ರಪ್ರಭ ಅವರ ಹಿಟ್‌ ಎಂಡ್‌ ರನ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕಮಗಳೂರು ನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ಬೇರೆ ಯಾರೆಲ್ಲ ಇದ್ದರು ಎನ್ನುವುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: Gicchi Giligili: ಮದುವೆಗೆಂದು ಡೂಪ್ಲಿಕೆಟ್‌ ಆಧಾರ್‌ ಕಾರ್ಡ್‌ ಮಾಡ್ಸಿದ್ರಂತೆ ʻಗಿಚ್ಚಿ ಗಿಲಿಗಿಲಿʼ ವಿನ್ನರ್‌ ಚಂದ್ರಪ್ರಭ!

ಗಿಚ್ಚಿ ಗಿಲಿಗಿಲಿ ಸೀಸನ್‌ 2 ವಿನ್ನರ್‌ ಚಂದ್ರಪ್ರಭ

ಚಂದ್ರಪ್ರಭ ಅವರು ಮಜಾಭಾರತ, ಗಿಚ್ಚಿ ಗಿಲಿಗಿಲಿ ಸೀಸನ್‌ 1 ಮತ್ತು 2ರಲ್ಲಿ ಸ್ಪರ್ಧಿಯಾಗಿದ್ದರು. ಗಿಚ್ಚಿ ಗಿಲಿಗಿಲಿ ಎರಡನೇ ಸೀಸನ್‌ನಲ್ಲಿ ಅವರು ವಿಜೇತರು. ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ಮಾಡುವ ಪ್ರತಿಭೆ ಹೊಂದಿರುವ ಚಂದ್ರಪ್ರಭ ಅವರಿಗೆ ವಯಸ್ಸಾಗಿದೆ ಎಂದು ಶೋನಲ್ಲಿ ತಮಾಷೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಅವರಿಗೆ ಭಾರತಿ ಪ್ರಿಯಾ ಎಂಬವರ ಜತೆ ಮದುವೆಯಾಗಿದೆ.

ಅವರು ಕದ್ದು ಮುಚ್ಚಿ ಮದುವೆಯಾದರು, ಯಾರಿಗೂ ಹೇಳಿಲ್ಲ ಎಂದೆಲ್ಲ ಗೆಳೆಯರು ಕಾಲೆಳೆದಿದ್ದರು. ಅಂತೂ ಕಾಮಿಡಿ ಸ್ಟಾರ್‌ ಆಗಿ ಮಿಂಚಿದ ನಟ ಈಗ ಅಪಘಾತದಲ್ಲಿ ಗಾಯಗೊಂಡವನನ್ನು ನೋಡದೆ ಬಿಟ್ಟು ಹೋಗಿದ್ದು ಮತ್ತೊಂದು ರೀತಿಯಲ್ಲಿ ಚರ್ಚೆಗೆ ಕಾರಣವಾಗಿದೆ.

Exit mobile version