Site icon Vistara News

ಈ ವಾರಾಂತ್ಯಕ್ಕೆ OTTಯಲ್ಲಿ ಏನು ನೋಡುವುದು ಎಂಬ ಗೊಂದಲವೇ? ಈ ಶೋಗಳು ನಿಮ್ಮ ಆಯ್ಕೆಯಾಗಲಿ

ನವ ದೆಹಲಿ: ಶನಿವಾರ ಹಾಗೂ ಭಾನುವಾರ ಸಮೀಪಿಸಿದರೆ ಸಾಕು ಎಂದು ಅನೇಕರು ಕಾದು ಕುಳಿತಿರುತ್ತಾರೆ. ವಾರ ಪೂರ್ತಿ ದುಡಿದು ದಣಿದ ದೇಹಕ್ಕೆ ವಾರಾಂತ್ಯದಲ್ಲಿ ವಿಶ್ರಾಂತಿ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವ ಕಾರ್ಯಕ್ರಮ ಯೋಜಿಸಲಾಗುತ್ತದೆ. ಆದರೆ, ಮನೆಯಲ್ಲಿ ಸುಮ್ಮನೆ ಕೂರುವುದು ಎಂದರೆ ಬಹುತೇಕರಿಗೆ ಕಿರಿಕಿರಿ. ಅಂಥವರು ಒಟಿಟಿಯಲ್ಲಿ (OTT) ಯಾವ ಒಳ್ಳೆಯ ಸೀರೀಸ್‌ ಅಥವಾ ಸಿನಿಮಾ ಇದೆ ಎಂದು ಹುಡುಕುತ್ತಾರೆ.

ಒಟಿಟಿಯಲ್ಲಿ ಸಾವಿರಾರು ಸಿನಿಮಾ ಹಾಗೂ ಸೀರೀಸ್‌ಗಳಿರುವಾಗ ಯಾವುದು ನೋಡುವುದು, ಯಾವುದು ಬಿಡುವುದು, ಎಂಬ ಗೊಂದಲ ಉಂಟಾಗುತ್ತದೆ. ಅದಕ್ಕಾಗಿಯೇ ಈ ವಾರ ನೋಡಬಹುದಾದ ಹತ್ತು ಶೋಗಳನ್ನು ಇಲ್ಲಿ ಹೇಳಲಾಗಿದೆ.

ಈ ವಾರಾಂತ್ಯದಲ್ಲಿ ನೋಡಬಹುದಾದ 10 ಶೋಗಳು:

1. ಡಿಯರ್‌ ವಿಕ್ರಮ್-‌ ವೂಟ್‌ ಸೆಲೆಕ್ಟ್‌

ವಿಕ್ರಮ್‌ ಮತ್ತು ನಿತ್ಯಾ ಎಂಬವರ ನಡುವಿನ ಪ್ರೇಮ ಕಥೆ ಇದು. ನಿತ್ಯಾ ಎಂಬ ಮಾಜಿ ಪತ್ರಕರ್ತೆ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡ ಯುವತಿ. ಈಕೆಯ ಬಾಳಿನಲ್ಲಿ ವಿಕ್ರಮ್‌ ಪ್ರೀತಿ ಹೊತ್ತು ತಂದಾಗ ಎರಡು ಪ್ರಪಂಚಗಳು ಮುಖಾಮುಖಿಯಾಗುತ್ತವೆ. ಒಂದಿಷ್ಟು ರಾಜಕೀಯ ತಂತ್ರಗಳನ್ನೂ ಒಳಗೊಂಡಿರುವ, ವಿವಿಧ ಸಿದ್ಧಾಂತಗಳ ಲಾಭ ನಷ್ಟಗಳ ಬಗ್ಗೆ ಬೆಳಕು ಚೆಲ್ಲುವ ರೋಮಾಂಚನಕಾರಿ ಸಿನಿಮಾ.

2. ಸಾಮ್ರಾಟ್‌ ಪೃಥ್ವಿರಾಜ್-‌ ಅಮೆಜಾನ್‌ ಪ್ರೈಮ್‌

ರಾಜ ಪೃಥ್ವಿರಾಜ್‌ ಚೌಹಾಣ್‌ ಜೀವನಾಧಾರಿತ ಈ ಸಿನಿಮಾ ಥಿಯೇಟರ್‌ನಲ್ಲಿ ಹೆಚ್ಚು ಸಮಯ ಇರಲಿಲ್ಲ. ಅಕ್ಷಯ್‌ ಕುಮಾರ್‌ ಅಭಿನಯದ ಈ ಸಿನಿಮಾ ಈಗ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಗೊಂಡಿದೆ. ಭಾರತದ ಇತಿಹಾಸವನ್ನು ಹೇಳುವ ಈ ಸಿನಿಮಾ ಉತ್ತಮ ಸಂಭಾಷಣೆ ಹಾಗೂ ಚಿತ್ರಕಥೆ ಒಳಗೊಂಡಿದ್ದು, ವಾರಾಂತ್ಯಕ್ಕೆ ಒಳ್ಳೆಯ ಮನೊರಂಜನೆ ನೀಡುತ್ತದೆ.

3. ಶಟ್‌ ಟಪ್‌ ಸೋನಾ- ಜೀ5

ಸಂಗೀತ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಇರುವುದಿಲ್ಲ ಎನ್ನುವುದು ಬಹಳ ಕಾಲದ ಸಮಸ್ಯೆ. ಈ ರೀತಿಯ ಸಮಸ್ಯೆಗೆ ಗುರಿಯಾದ ಹಾಡುಗಾರ್ತಿ ಸೋನಾ ಮೊಹಾಪಾತ್ರ ಜೀವನಾಧಾರಿತ ಡಾಕ್ಯುಮೆಂಟರಿ ಸಿನಿಮಾ ಇದಾಗಿದೆ. ಅನೇಕ ಭಾವನಾತ್ಮಕ ಸಂಗತಿಗಳನ್ನು ಒಳಗೊಂಡಿರುವ ಈ ಸಿನಿಮಾ ನಿಜಕ್ಕೂ ಮನಮುಟ್ಟುತ್ತದೆ!

4. ಅನೇಕ್‌- ನೆಟ್‌ಫ್ಲಿಕ್ಸ್‌

ಈಶಾನ್ಯ ಭಾರತದಲ್ಲಿ ಕಂಡುಬರುವ ರಾಜಕೀಯ ಸಮಸ್ಯೆಗಳು ಹಾಗೂ ಜೀವನ ಸಂಘರ್ಷಗಳ ಕಥೆ ಹೊಂದಿರುವಂತಹ ಸಿನಿಮಾ ಇದು. ಇಲ್ಲಿಯ ಜನರು ಅನೇಕ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದರೂ ಹೇಗೆ ಅದರಿಂದ ಹೊರಬಂದು ಜೀವನ ರೂಪಿಸಿಕೊಳ್ಳುತ್ತಾರೆ ಎಂಬುದನ್ನು ಅಚ್ಚುಕಟ್ಟಾಗಿ ರೂಪಿಸಲಾಗಿದೆ.

5. ಸಭಾಪತಿ- ಸೋನಿ ಲೈವ್‌

ಇದು ತಮಿಳಿನ ಕಾಮಿಡಿ ಚಿತ್ರ. ಪೂರ್ತಿ ವಾರದ ದಿನಚರಿಯಿಂದ ಬೇಸತ್ತು ಯಾವುದಾದರೂ ಒಂದು ಒಳ್ಳೆಯ ಕಾಮಿಡಿ ಸಿನಿಮಾ ನೋಡುವ ಮೂಡ್‌ ಇದ್ದರೆ ಈ ಸಿನಿಮಾ ನೋಡಬಹುದು. ಒಬ್ಬ ಅಮಾಯಕನಿಗೆ ಇದ್ದಕ್ಕಿದಂತೆ ಒಂದಿಷ್ಟು ಹಣ ದೊರಕುತ್ತದೆ. ಆ ಬಳಿಕ ಆತ ಸೃಷ್ಟಿಸಿಕೊಳ್ಳುವ ಅವಾಂತರಗಳನ್ನು, ಆತನ ಪಾಡನ್ನು ನೋಡಿ ನಗು ಬರುವುದಂತೂ ನಿಜ.

6. ವಿರಾಟ ಪರ್ವಂ- ನೆಟ್‌ಫ್ಲಿಕ್ಸ್‌

1990ರಲ್ಲಿ ತೆಲಂಗಾಣ ಪ್ರದೇಶದಲ್ಲಿ ನಡೆದ ನಕ್ಸಲ್‌ ಚಳವಳಿಯ ನೈಜ ಘಟನೆ ಆಧಾರಿತ ಸಿನಿಮಾ ಇದು. ರಾಣಾ ದಗ್ಗುಬಾಟಿ ಹಾಗೂ ಸಾಯಿ ಪಲ್ಲವಿ ಜೋಡಿ ಈ ಸಿನಿಮಾದ ಆಕರ್ಷಣೆ. ಸಾಯಿ ಪಲ್ಲವಿಯ ಅಭಿಮಾನಿಗಳು ನೋಡಲೇಬೇಕಾದ ಸಿನಿಮಾ ಇದು. ಈ ಚಿತ್ರ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಲಭ್ಯವಿದೆ.

7. ಕೀಡಂ- ಜೀ5

ಮಲಯಾಳಂ ಬಾಷೆಯ ಥ್ರಿಲ್ಲರ್‌ ಸಿನಿಮಾ! ಸೈಬರ್‌ ಸೆಕ್ಯುರಿಟಿಯ ತಜ್ಞೆ ಒಬ್ಬಳು ಹೇಗೆ ಸೈಬರ್‌ ಮೋಸದ ಬಲೆಗೆ ಸಿಲುಕಿಕೊಳ್ಳುತ್ತಾಳೆ ಎಂಬುದೇ ಸಿನಿಮಾದ ರೋಚಕತೆ. ಕುತೂಹಲಕಾರಿಯಾಗಿ ಸಾಗುವಂತಹ ಸಿನಿಮಾ ಇದು.

8. ಇಂಡಿಯನ್‌ ಮ್ಯಾಚ್‌ಮೇಕಿಂಗ್-‌ ನೆಟ್‌ಫ್ಲಿಕ್ಸ್

ಯಾವುದೇ ವಿಶೇಷ ಸಸ್ಪೆನ್ಸ್‌ ಇರದಿರುವ, ಒಂದು ಸರಳವಾದ, ಹದವಾದ, ಸಾಂಸಾರಿಕ ಸುಖದುಃಖಗಳ ಕತೆಯಿರುವ ಸಿನಿಮಾ ನೋಡಬೇಕೆಂಬ ಆಸೆಯಿದ್ದರೆ ಈ ಸಿನಿಮಾ ನೋಡಬಹುದು.

9. ಒರು ಪಕ್ಕಾ ಕಥೈ- ಜೀ5

ಇದೊಂದು ವಿಶೇಷ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾ. ಪವಾಡ, ಆಧುನಿಕತೆ, ಕಾಲೇಜು ಪ್ರೇಮಕಥೆ ಎಲ್ಲವನ್ನೂ ಹದವಾಗಿ ಬೆರೆಸಿರುವ ಒಂದು ವಿಶಿಷ್ಟ ಸಿನಿಮಾ.

10. ಶಾಂತಿತ್‌ ಕ್ರಾಂತಿ- ಸೋನಿ ಲೈವ್‌

ಇದು ಮರಾಠಿ ವೆಬ್‌ ಸೀರೀಸ್.‌ ಮೂರು ಜನ ಹುಡುಗರು, ಮೂರು ಬಗೆಯ ಸಮಸ್ಯೆಗಳು. ಆದರೆ, ಅವರ ಪ್ರಕಾರ ಅವೆಲ್ಲದಕ್ಕೂ ಪರಿಹಾರ ಒಂದೇ. ಗೋವಾಗೆ ಟ್ರಿಪ್‌ ಹೋಗುವುದು. ಆದರೆ ಈ ಪಯಣ ಹೇಗಿರುತ್ತದೆ, ಎಷ್ಟು ಮಜವಾಗಿರುತ್ತದೆ, ಏನೆಲ್ಲಾ ಅಡಚಣೆ ಎದುರಾಗುತ್ತದೆ ಎಂದು ತಿಳಿಯಲು ಚಿತ್ರವನ್ನು ನೋಡಬೇಕು.

ಇದನ್ನೂ ಓದಿ: Oscar Committee | ಜೈ ಭೀಮ್ ನಟ ಈಗ ಆಸ್ಕರ್‌ ಸಮಿತಿಯ ಸದಸ್ಯ

Exit mobile version