ಬೆಂಗಳೂರು : ಹೊಂಬಾಳೆ ಫಿಲ್ಮ್ಸ್ ನಿಂದ ಸಾಲು ಸಾಲು ಸಿನಿಮಾಗಳು ಅನೌನ್ಸ್ ಆಗುತ್ತಲೇ ಇವೆ. ಇತ್ತೀಚೆಗಷ್ಟೇ ಪ್ಯಾನ್ ಇಂಡಿಯಾ ಸಿನಿಮಾಗಳು ಘೋಷಣೆ ಆಗಲಿವೆ ಎಂದು ಹೊಂಬಾಳೆ ಫಿಲ್ಮ್ಸ್ ತಂಡ ಹೇಳಿತ್ತು. ಇದೀಗ ಒಂದು ಹೊಸ ಪ್ಯಾನ್ ಇಂಡಿಯಾ ಸಿನಿಮಾವನ್ನು ಘೋಷಣೆ ಮಾಡಲಾಗಿದೆ. ವಿಶೇಷವೆಂದರೆ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಮಲಯಾಳಂ ‘ಸೂಪರ್ ಸ್ಟಾರ್’ ಪೃಥ್ವಿರಾಜ್ ಸುಕುಮಾರನ್ “ಟೈಸನ್ʼʼ ಮೂಲಕ ಇದಕ್ಕೆ ಕೈಜೋಡಿಸಿದ್ದಾರೆ.
ಈಗಾಗಲೇ ಟೈಟಲ್ ಕೂಡ ರಿವೀಲ್ ಆಗಿದ್ದು, ನಟನೆ ಜತೆ ನಿರ್ದೇಶನವನ್ನೂ ಪೃಥ್ವಿರಾಜ್ ಸುಕುಮಾರನ್ ಮಾಡುತ್ತಿರುವುದೇ ವಿಶೇಷ. ಹೊಸ ಸಿನಿಮಾಕ್ಕೆ ʼಟೈಸನ್ʼ ಎಂದು ಹೆಸರು ಇಟ್ಟಿದ್ದು, ಅದನ್ನು ಐದು ಭಾಷೆಗಳಲ್ಲಿ ತೆರೆಗೆ ತರಲು ಹೊಂಬಾಳೆ ಫಿಲ್ಮ್ಸ್ ಸಜ್ಜಾಗಿದೆ.
ಇದನ್ನೂ ಓದಿ | Kantara vs Martin Movie : ಆ್ಯಕ್ಷನ್ ಪ್ರಿನ್ಸ್ ಮತ್ತು ರಿಷಭ್ ಶೆಟ್ಟಿ ಒಂದೇ ದಿನ ಮುಖಾಮುಖಿ!
ಹೇಗಿರಲಿದೆ ಟೈಸನ್?
ಪೃಥ್ವಿರಾಜ್ ಅವರ ನಟನೆ ಮತ್ತು ನಿರ್ದೇಶನದ ಈ ಸಿನಿಮಾ ಆಕ್ಷನ್ ಥ್ರಿಲರ್ ಆಗಿದ್ದು, ಸಾಮಾಜಿಕ ವಿಚಾರಗಳು ಇರಲಿವೆಯಂತೆ. ಮೋಹನ್‌ಲಾಲ್ ನಟನೆಯ ʼಲೂಸಿಫರ್ʼ ಸಿನಿಮಾ ನಿರ್ದೇಶನದ ಮೂಲಕ ಡೈರೆಕ್ಷನ್‌ಗೆ ಇಳಿದಿದ್ದರು ಪೃಥ್ವಿರಾಜ್. ಮೊದಲ ಸಿನಿಮಾದಲ್ಲೇ ಸಕ್ಸಸ್ ಪಡೆದ ಪೃಥ್ವಿರಾಜ್ ನಂತರ ʼಬ್ರೋ ಡ್ಯಾಡಿʼ ಸಿನಿಮಾ ನಿರ್ದೇಶಿಸಿದರು. ಈಗ ʼಲೂಸಿಫರ್ʼ ಸಿನಿಮಾದ ಸಿಕ್ವೇಲ್ ʼಎಂಪುರಾನ್ʼ ನಿರ್ದೇಶನ ಮಾಡುತ್ತಿದ್ದಾರೆ.
ಇದೀಗ ಅವರ ನಿರ್ದೇಶನದಲ್ಲಿ ನಾಲ್ಕನೇ ಸಿನಿಮಾ ಟೈಸನ್. ಗೋಪಿ ಅವರು ಪೃಥ್ವಿರಾಜ್ ಅವರ ಹಿಂದಿನ ಸಿನಿಮಾಗೂ ಸ್ಕ್ರಿಪ್ಟ್ ಮಾಡಿದ್ದು, ಈ ಸಿನಿಮಾಗೂ ಸ್ಕ್ರಿಪ್ಟ್ ಗೋಪಿಯವರೇ ಮಾಡುತ್ತಿದ್ದಾರೆ.
ಮಾಲಿವುಡ್‌ನಲ್ಲಿ ಅಬ್ಬರಿಸಲಿರುವ ಹೊಂಬಾಳೆ ಫಿಲ್ಮ್ಸ್
ಪ್ರಶಾಂತ್ ನೀಲ್ ಅವರ ʼಸಲಾರ್ʼ ಮೂಲಕ ಟಾಲಿವುಡ್‌ಗೆ ಸಖತ್ ಎಂಟ್ರಿ ನೀಡಿರುವ ಹೊಂಬಾಳೆ ಫಿಲ್ಮ್ಸ್ ಇದೀಗ ʼಟೈಸನ್ʼ ಮೂಲಕ ಮಾಲಿವುಡ್‌ಗೆ ಕಾಲಿಟ್ಟಿದೆ. 2023ರಲ್ಲಿ ಶೂಟಿಂಗ್ ಆರಂಭಿಸಿ , 2024ರಲ್ಲಿ ಪಂಚ ಭಾಷೆಗಳಾದ ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಈ ಸಿನಿಮಾದ ಟೈಟಲ್ ಲುಕ್ ರಿಲೀಸ್ ಆಗಿದ್ದು, ಮುಂದಿನ ದಿನಗಳಲ್ಲಿ ಕಲಾವಿದರ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.
ಸಾಲು ಸಾಲು ಸಿನಿಮಾದ ಮೂಲಕ ಮುನ್ನುಗ್ಗುತ್ತಿರುವ ಹೊಂಬಾಳೆ
ಕೆಜಿಎಫ್-2 ಸಿನಿಮಾದ ಮೂಲಕ ಭಾರಿ ಲಾಭ ಗಳಿಸಿದ ಹೊಂಬಾಳೆ ಫಿಲ್ಮ್ಸ್ ಸಿನಿಮಾಗಳನ್ನು ಮಾಡುವುದರ ಜತೆ ಹೊಸ ಹೊಸ ಸಿಹಿ ಸುದ್ದಿಯನ್ನು ನೀಡುತ್ತಿದೆ.
ಅಗಸ್ಟ್ 5ರಂದು ʼಹೊಂಬಾಳೆ ಫಿಲ್ಮ್ಸ್ʼನ ʼರಾಘವೇಂದ್ರ ಸ್ಟೋರ್ಸ್ʼ ಮತ್ತು ಸೆಪ್ಟೆಂಬರ್ 30ರಂದು ರಿಷಭ್ ಶೆಟ್ಟಿ ಅವರ ʼಕಾಂತಾರʼ ಸಿನಿಮಾ ತೆರೆಕಾಣಲಿದೆ. ʼಸಲಾರ್ʼ ಶೂಟಿಂಗ್ ಜತೆ ಶ್ರೀಮುರಳಿ ಅವರ ʼಬಘೀರʼ ಚಿತ್ರಕ್ಕೆ ಮೂಹರ್ತ ನೆರವೇರಿಸಿದೆ.
ಇದನ್ನೂ ಓದಿ | ಶೋ ಮ್ಯಾನ್ ಪ್ರಶಾಂತ್ ನೀಲ್ Birthday: ಪ್ಯಾನ್ ಇಂಡಿಯಾ ಸ್ಟಾರ್‌ಗಳ ಸಮಾಗಮ