ʼದಿ ಎಲಿಫೆಂಟ್ ವ್ಹಿಸ್ಪರರ್ʼ ಡಾಕ್ಯುಮೆಂಟರಿಯ ಕರ್ಮಕ್ಷೇತ್ರ ಮುದುಮಲೈ ರಕ್ಷಿತಾರಣ್ಯ. ಕರ್ನಾಟಕ, ಕೇರಳ ಮತ್ತು ತಮಿಳುನಾಡು- ಮೂರೂ ರಾಜ್ಯಗಳ ಗಡಿಭಾಗಗಳು ಸೇರುವ ಈ ಸಂರಕ್ಷಿತ ದಟ್ಟ ಕಾಡಿನಲ್ಲಿ ಆನೆಗಳು ಹೆಚ್ಚು. ಒಂದು ಕಡೆ ನಾಗರಹೊಳೆ, ಬಂಡಿಪುರ ರಾಷ್ಟ್ರೀಯ ಅರಣ್ಯಗಳು, ಇನ್ನೊಂದು ಕಡೆ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ಮತ್ತು ಮುಕುರ್ತಿ ಕಾಡು, ಮಗದೊಂದು ಕಡೆ ವಯನಾಡ್ ವನ್ಯಜೀವಿ ಧಾಮಗಳಿಂದ ಆವೃತವಾದ ಈ ಕಾಡಿನ 3300 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 51ಕ್ಕೂ ಅಧಿಕ ಪ್ರಾಣಿ ಪ್ರಭೇದಗಳೂ ನೂರಾರು ಪಕ್ಷಿ ಜಾತಿಗಳೂ ಇವೆ. ಇದು 80ಕ್ಕೂ ಹೆಚ್ಚು ಹುಲಿಗಳಿಗೂ ನೆಲೆಯಾಗಿದೆ.
ದಟ್ಟ ಕಾಡು, ಕುರುಚಲು ಕಾಡು, ಹುಲ್ಲುಗಾವಲು ಮತ್ತು ನೀರಿನ ಆಶ್ರಯಗಳೆಲ್ಲ ಸೇರಿದ ಈ ಕಾಡು ಆನೆಗಳಿಗೆ ಆಶ್ರಯತಾಣ. ಹಲವು ಕ್ಯಾಂಪ್‌ಗಳು ಕೂಡ ಇವೆ. ಅಂಥದೊಂದು ʼತಪ್ಪಕಾಡು ಆನೆ ಕ್ಯಾಂಪ್ʼ. ಇದರ ಹತ್ತಿರದ ಪುಟ್ಟ ಗುಡಿಸಲಿನಲ್ಲಿ ಈ ಸಾಕ್ಷ್ಯಚಿತ್ರದ ನಾಯಕ- ನಾಯಕಿಯರಾದ ಬೆಳ್ಳಿ ಮತ್ತು ಬೊಮ್ಮ ಇರುತ್ತಾರೆ. ಇವರು ಸ್ಥಳೀಯ ಕಟ್ಟುನಾಯಕನ್ ಬುಡಕಟ್ಟಿಗೆ ಸೇರಿದವರು. ಅವರ ಪ್ರಾಯ ಈಗಾಗಲೇ ಐವತ್ತು ದಾಟಿದೆ. ಅರಣ್ಯ ಇಲಾಖೆ ಇವರಿಗೆ ಪುಟ್ಟ, ಅನಾಥ ಆನೆ ಮರಿಗಳನ್ನು ಸಾಕಿ ದೊಡ್ಡದು ಮಾಡುವ ಹೊಣೆಯನ್ನು ವಹಿಸಿದೆ. ಈ ದಂಪತಿಗಾದರೋ ರಘು ಎಂಬ ಹೆಸರಿನ ಆನೆ ಮರಿಯೇ ಎಲ್ಲಾ. ಅದನ್ನು ನಿತ್ಯ ಮೀಯಿಸುವುದು, ಅನ್ನ- ಬೆಲ್ಲ ತಿನ್ನಿಸುವುದು, ವಾಕಿಂಗ್ ಮಾಡಿಸುವುದು ಎಲ್ಲಾ ಇವರೇ. ಆ ಮರಿಯಾದರೋ ಇವರ ಜೊತೆ ಎಷ್ಟು ಬೆರೆತಿದೆಯೆಂದರೆ ಎಲ್ಲ ಮಾತುಗಳನ್ನೂ ಅರ್ಥ ಮಾಡಿಕೊಳ್ಳುತ್ತದೆ. ಅದರ ಗಾಯಗಳನ್ನು ನಿವಾರಿಸಿ, ಉಣ್ಣಿಸಿ, ಮುದ್ದಿಸಿ ಬೆಳೆಸುವ ದಂಪತಿಗೆ ಅದು ಜೀವದ ಜೀವ.
ಈ ಕಾಡಿನಲ್ಲಿ ಅಪಾಯಗಳೂ ಇವೆ. ಹುಲಿಗಳು, ಚಿರತೆಗಳಿವೆ, ಹಾವುಗಳಿವೆ. ಆದರೆ ಯಾವುದೂ ಇವರ ಆತ್ಮೀಯ ಬಂಧವನ್ನು ಸಡಿಸಲಿಸಲಾರದು. ಬೆಳಗಾಗುತ್ತದೆ, ರಾತ್ರಿಯಾಗುತ್ತದೆ. ರಾತ್ರಿ ದಂಪತಿ ಸೌದೆ ಬೆಂಕಿಯ ಮುಂದೆ ಕುಳಿತು ಮಾತಾಡುತ್ತಿದ್ದರೆ ಒಳಗಿನಿಂದ ಪುಟ್ಟ ಆನೆ ಮರಿ ಸೊಂಡಿಲು ತೂರಿಸಿ ಇವರ ಜತೆ ಚಿನ್ನಾಟವಾಡಲು ಬಯಸುತ್ತದೆ. ತಣ್ಣೀರಿನಲ್ಲಿ ಮೀಯಿಸುವಾಗ ದಂಪತಿಗಳನ್ನೂ ತೋಯ್ದು ತೊಪ್ಪಡಿಯಾಗಿಸುವ ರಘುವಿನ ಆಟ.
ರಘು ಸ್ವಲ್ಪ ದೊಡ್ಡವನಾದ ಬಳಿಕ ಇಂಥ ಟೀನೇಜ್ ಆನೆಮರಿಗಳನ್ನು ನೋಡಿಕೊಳ್ಳುವ ಬೇರೊಂದು ಕಡೆಗೆ ರಘುವನ್ನು ಶಿಫ್ಟ್ ಮಾಡಲಾಗುತ್ತದೆ. ಆಗ ಬೆಳ್ಳಿ- ಬೊಮ್ಮ ದಂಪತಿ ಅನುಭವಿಸುವ ಮೂಕವೇದನೆ! ಆ ಕಾಡಿನ ನಡುವೆ ಸದ್ದಿಲ್ಲದೇ ಬೆಸೆದ ಭಾವಬಂಧವೊಂದು ಹಾಗೆಲ್ಲಾ ಕಡಿದುಹೋಗದು. ಈಗ ರಘುವಿನ ಜಾಗದಲ್ಲಿ ಅಮ್ಮು ಎಂಬ ಹೆಸರಿನ ಅಷ್ಟೇ ಮುದ್ದಾದ ಮತ್ತೂ ಪುಟ್ಟ ಮರಿಯೊಂದು ಬಂದಿದೆ. ಬೆಳ್ಳಿ- ಬೊಮ್ಮರ ಬದುಕಿನ ಚಕ್ರ ಮತ್ತೆ ಮೊದಲಿನಿಂದ ತಿರುಗಲಾರಂಭವಾಗುತ್ತದೆ.
ಕಾಡಿನ ಜೀವನಚಕ್ರ- ಸಣ್ಣಪುಟ್ಟ ಭಾವನಾತ್ಮಕ ತೊರೆಗಳ ಹರಿವು ಹೊಂದಿರುವ ಈ ನಲುವತ್ತು ನಿಮಿಷಗಳ ಸಾಕ್ಷ್ಯಚಿತ್ರ ʼದಿ ಎಲಿಫೆಂಟ್ ವ್ಹಿಸ್ಪರರ್ಸ್ಸ್ʼ ಅರ್ಹವಾಗಿಯೇ ಆಸ್ಕರ್ ಪ್ರಶಸ್ತಿ ಗೆದ್ದಿದೆ. ಈ ಆನೆ ಕ್ಯಾಂಪ್‌ಗಳು ಕರ್ನಾಟಕದ ಗಡಿ ಭಾಗದಲ್ಲಿಯೇ ಇರುವುದರಿಂದ ಇಲ್ಲಿನ ಮಾವುತರು, ಕಾವಾಡಿಗಳು ಕನ್ನಡವನ್ನೂ ಮಾತಾಡುತ್ತಾರೆ. ಹೀಗಾಗಿ ಸಾಕ್ಷ್ಯಚಿತ್ರದ ಅಲ್ಲಲ್ಲಿ ಕನ್ನಡ ಇಣುಕಿದೆ. ಉಳಿದಂತೆ ಕಾವಾಡಿ- ಮಾವುತರಿಗೇ ವಿಶಿಷ್ಟವಾದ ತಮಿಳು ಪ್ರಾಧಾನ್ಯದ ಮಿಶ್ರ ಭಾಷೆಯೊಂದರಲ್ಲಿ ಮಾತನಾಡುತ್ತಾರೆ.
ʼʼನಮ್ಮ ಹಾಗೂ ಪ್ರಾಕೃತಿಕ ಜಗತ್ತಿನ ನಡುವೆ ಇರುವ ಪವಿತ್ರ ಬಂಧ, ಸಹಬಾಳ್ವೆಗಾಗಿ ನಾವು ಸ್ಥಳೀಯ ಸಮುದಾಯಗಳೊಂದಿಗೆ ಹಂಚಿಕೊಳ್ಳಬೇಕಾದ ಗೌರವ ಮತ್ತು ಸಹಾನುಭೂತಿಯ ಪರವಾಗಿ ಮಾತನಾಡಲೋಸುಗ ನಾನಿಲ್ಲಿ ಇಂದು ನಿಂತಿದ್ದೇನೆʼʼ ಎಂದು ಈ ಚಿತ್ರವನ್ನು ನಿರ್ದೇಶಿಸಿದ ಕಾರ್ತಿಕಿ ಗೊನ್ಸಾಲ್ವಿಸ್ ಆಸ್ಕರ್ ವೇದಿಕೆಯ ಮುಂದೆ ಹೇಳಿದ್ದಾರೆ. ಇದು ನಿಜ ಎನ್ನಿಸುವಂತೆ ಈ ಚಿತ್ರ ಪ್ರಕೃತಿಯ ನಡುವೆಯೇ ಅಲ್ಲಿನ ಪ್ರಾಣಿಗಳ ನಡುವೆ ಬದುಕಿರುವ ಬೆಳ್ಳಿ-ಬೊಮ್ಮರಂಥವರ ಹಾಡು ಪಾಡುಗಳ ಜತೆಗೇ ನಾವು ಅದನ್ನು ಪ್ರೀತಿಯಿಂದ ನೋಡಬೇಕಾದ, ಗೌರವಿಸಬೇಕಾದ ರೀತಿಯ ಬಗ್ಗೆ ಒಂದು ಘನವಾದ ನಿರೂಪಣೆಯಲ್ಲಿ ಕಟ್ಟಿಕೊಡುತ್ತದೆ.
ನಲುವತ್ತು ನಿಮಿಷಗಳ ಈ ಡಾಕ್ಯುಮೆಂಟರಿಯ ತುಂಬ ಹಸಿರು, ನೀರು, ಆನೆ, ಪುಟ್ಟ ಮಾತುಗಳು, ಆನೆಗಳು, ಮಾವುತರು ತುಂಬಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ನೀವು ನೋಡಬಹುದಾಗಿರುವ ಈ ಡಾಕ್ಯುಮೆಂಟರಿ ಈಗ ಮುದುಮಲೈ ರಕ್ಷಿತಾರಣ್ಯದ ಬಗ್ಗೆಯೂ ಆಸಕ್ತರ ಗಮನ ಸೆಳೆದಿದೆ. ಕರ್ನಾಟಕಕ್ಕೆ ಹತ್ತಿರವಾಗಿರುವ ಈ ತಾಣಕ್ಕೆ ನೀವು ಭೇಟಿ ನೀಡಬಹುದಾದ ಸಮಯ ಎಂದರೆ ಮಾರ್ಚ್‌ನಿಂದ ಜೂನ್ ಹಾಗೂ ಸೆಪ್ಟೆಂಬರ್‌ನಿಂದ ಅಕ್ಟೋಬರ್.
ಇದನ್ನೂ ಓದಿ: Oscars 2023: ಕನ್ನಡಿಗರ ಲಹರಿ ಸಂಸ್ಥೆ ಬಳಿ ಇದೆ ʻನಾಟು ನಾಟುʼ ಹಾಡಿನ ಹಕ್ಕು!
ಮನುಷ್ಯರಂತೆಯೇ ಪ್ರಾಣಿಗಳಿಗೂ ಭಾವನಾತ್ಮಕ ಬಾಂಧವ್ಯ ಅಗತ್ಯ ಎಂಬುದನ್ನು ಈ ಡಾಕ್ಯುಮೆಂಟರಿ ಹೆಚ್ಚಿನ ಅಬ್ಬರವಿಲ್ಲದೇ ಕಟ್ಟಿಕೊಡುತ್ತದೆ. ಬೆಳ್ಳಿಯ ಬಳಿ ಬಂದು ರಘು ಆಕೆಯ ಮಡಿಲಿನಲ್ಲಿ ತಲೆಯಿಟ್ಟು ಮಲಗಲು ಯತ್ನಿಸುವುದು, ರಘುವಿನ ಅಗಲಿಕೆಯಿಂದ ನೊಂದ ಬೆಳ್ಳಿಯ ಕಣ್ಣೀರನ್ನು ಅಮ್ಮು ಒರೆಸುವುದು ಮುಂತಾದ ದೃಶ್ಯಗಳು ಸಹಜವಾಗಿಯೇ ಚಿತ್ರಿತವಾಗಿ ಡಾಕ್ಯುಮೆಂಟರಿಗೆ ಬೇರೆಯದೇ ಮಟ್ಟದ ಸೌಂದರ್ಯವನ್ನು ನೀಡಿವೆ. ಇವು ಕಾರ್ತಿಕಿಗೆ ಕೂಡ ಫೇವರಿಟ್ ಸೀನುಗಳಂತೆ.
ಯಾರು ಈ ಕಾರ್ತಿಕಿ?
ಕಾರ್ತಿಕಿ ಗೊನ್ಸಾಲ್ವೆಸ್ ಅವರು ʼಸೋನಿ ಆರ್ಟಿಸನ್ʼ ಅಂದರೆ ಸೋನಿ ಆಲ್ಫಾ ಸರಣಿಯ ಸೋನಿ ಇಮೇಜಿಂಗ್ ರಾಯಭಾರಿಯಾಗಿ ಭಾರತದಲ್ಲಿ ಆಯ್ಕೆಯಾದ ಮೊದಲ ಮಹಿಳೆಯರಲ್ಲಿ ಒಬ್ಬರು. ಇವರು ಫೋಟೋ ಜರ್ನಲಿಸ್ಟ್, ಡಾಕ್ಯುಮೆಂಟರಿಗಳ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿ ಕೂಡ. ಭಾರತದ ಊಟಿ ಮತ್ತು ಮುಂಬಯಿಯಲ್ಲಿ ವಾಸ. ಪರಿಸರ, ಪ್ರಕೃತಿ, ವನ್ಯಜೀವಿಗಳ ವೈವಿಧ್ಯತೆ ಮತ್ತು ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಾರೆ. ಸ್ಥಳೀಯ ಸಂಸ್ಕೃತಿಗಳು, ಸಮುದಾಯಗಳ ಅಧ್ಯಯನ, ದಾಖಲೀಕರಣ ಇವರ ಇನ್ನೊಂದು ಆಸಕ್ತಿ.
ಅವರು ಪ್ರಸ್ತುತ ಮೂರು ದೀರ್ಘಾವಧಿಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ: ಪಶ್ಚಿಮ ಘಟ್ಟಗಳ ಎತ್ತರದ ಪರ್ವತಗಳಲ್ಲಿ ವಾಸಿಸುವ ಕಾಡು ಬೆಕ್ಕುಗಳ ಜೀವನ ದಾಖಲೀಕರಣ. ಇತ್ತೀಚೆಗೆ ಮಧ್ಯ ಭಾರತದ ಹಳ್ಳಿಯೊಂದರಲ್ಲಿ ಆದಿವಾಸಿ ಮತ್ತು ಬಿಯೆಲ್ ಸಮುದಾಯಗಳ ಸ್ಥಳೀಯ ಸಾಂಪ್ರದಾಯಿಕ ಕಲಾವಿದರ ಜೀವನ, ಕಥೆಗಳು ಮತ್ತು ಕಲೆಯನ್ನು ದಾಖಲಿಸಿಕೊಂಡಿದ್ದಾರೆ. ಗ್ರೇಟರ್ ಹಿಮಾಲಯದ ಭಾರತ-ಚೀನೀ ಗಡಿಯ ಶೀತ ಎತ್ತರದ ಮರುಭೂಮಿಗಳಲ್ಲಿನ ಜೀವನವನ್ನು ದಾಖಲಿಸುವ ಕಾರ್ಯವನ್ನೂ ಅವರು ಮಾಡಿದ್ದಾರೆ.
ʼದಿ ಎಲಿಫೆಂಟ್ ವ್ಹಿಸ್ಪರೆರ್ʼ ಚಿತ್ರವನ್ನು ಸಿಖ್ಯಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಗುನೀತ್ ಮೋಂಗಾ ನಿರ್ಮಾಣದಲ್ಲಿ ಸಹಕರಿಸಿದ್ದಾರೆ. 2022ರ ನವೆಂಬರ್ 9ರಂದು DOC NYC ಫಿಲಂ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಆಯಿತು. ಅಲ್ಲಿಂದ ನೆಟ್‌ಫ್ಲಿಕ್ಸ್ ಒಟಿಟಿಗೆ ಬಂತು. ಅಮೆರಿಕದ ಪ್ರತಿಷ್ಠಿತ ಫಿಲಂ ಫೆಸ್ಟಿವಲ್‌ಗಳಲ್ಲೂ ಕಾಣಿಸಿಕೊಂಡಿದೆ.