Site icon Vistara News

ಶುಕ್ರವಾರವೇ ಸಿನಿಮಾ ರಿಲೀಸ್‌ ಆಗೋದು ಯಾಕೆ?

ಸಿನಿಮಾ

ಸಿನಿಮಾ: ಶುಕ್ರವಾರ ಬಂತೆಂದರೆ ಸಾಕು ʼಈ ವಾರ ಯಾವ ಸಿನಿಮಾ ಬಿಡುಗಡೆ ಆಗುತ್ತಿದೆʼ ಎಂದು ಬುಕ್‌ ಮೈ ಶೋ ಆಪ್‌, ಗೂಗಲ್‌ನಲ್ಲಿ ನೋಡುವದು ಅನೇಕರಿಗೆ ರೂಢಿಯಾಗಿಬಿಟ್ಟಿದೆ. ಇದಕ್ಕೆ ಕಾರಣ ಪ್ರತಿ ಶುಕ್ರವಾರ ಒಂದು ಹೊಸ ಸಿನಿಮಾ ಬಿಡುಗಡೆಯಾಗುವುದು.

ಎಲ್ಲಾ ಸಿನಿಮಾಗಳು ಯಾಕೆ ಶುಕ್ರವಾರವೇ ರಿಲೀಸ್‌ ಅಗುತ್ತದೆ ಎಂದು ಯೋಚಿಸಿದ್ದೀರಾ? ಈ ಬಗ್ಗೆ ಯೋಚಿಸಿದಾಗ ಇನ್ನಷ್ಟು ಪ್ರಶ್ನೆಗಳು ಮೂಡಬಹುದು. ಶುಕ್ರವಾರವನ್ನು ಕೇವಲ ಒಂದು ವಾರಾಂತ್ಯದ ದಿನ ಎಂದು ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿದೆಯೇ? ಅಥವಾ ಅದಕ್ಕೂ ಮಿಗಿಲಾದದ್ದು ಏನಾದರು ಇದೆಯೇ? ಶುಕ್ರವಾರದ ವಿಶೇಷತೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಇಲಿದೆ ಉತ್ತರ.

ಶುಕ್ರವಾರದ ಇತಿಹಾಸ

ಶುಕ್ರವಾರ ಕೇವಲ ವಾರಂತ್ಯ ಎಂಬ ಕಾರಣಕ್ಕೆ ಮಾತ್ರ ಚಿತ್ರಗಳನ್ನು ಬಿಡುಗಡೆ ಮಾಡುತ್ತಿಲ್ಲ. ಸಿನಿಮಾಗಳನ್ನು ಶುಕ್ರವಾರ ಬಿಡುಗಡೆ ಮಾಡಲು ಅನೇಕ ಕಾರಣಗಳಿವೆ. ಶುಕ್ರವಾರ ಸಿನಿಮಾಗಳನ್ನು ಬಿಡುಗಡೆ ಮಾಡುವ ರೂಢಿ ಅಮೆರಿಕಾ ಹಾಗೂ ಬ್ರಿಟಿಷರ ಅಭ್ಯಾಸದಿಂದ ಭಾರತಕ್ಕೆ ಬಂದಿದ್ದು. 1939ರಲ್ಲಿ ಬಿಡುಗಡೆಯಾದ ಹಾಲಿವುಡ್‌ನ ʼಗಾನ್‌ ವಿತ್‌ ದಿ ವಿಂಡ್‌ʼ ಸಿನಿಮಾದಿಂದ ಭಾರತದಲ್ಲಿ ಸಿನಿಮಾಗಳನ್ನು ಶುಕ್ರವಾರ ರಿಲೀಸ್‌ ಮಾಡುವ ರೂಢಿ ಜಾರಿಗೆಬಂದಿದ್ದು.

ಈ ಮೊದಲು ಭಾರತದಲ್ಲಿ ಸಿನಿಮಾಗಳು ಬೇರೆ ಬೇರೆ ಬಿಡುಗಡೆಗೊಳ್ಳುತ್ತಿದ್ದ ಉದಾಹರಣೆಗಳಿವೆ. ಬಾಲಿವುಡ್‌ನ ನೀಲ್‌ ಕಮಲ್‌ ಸಿನಿಮಾ ಮಾರ್ಚ್‌ 24, 1947ರಂದು ಬಿಡುಗಡೆಯಾಗಿತ್ತು. ಅದು ಸೋಮವಾರ.

1950ರ ಅವಧಿಯಲ್ಲಿ ಸಿನಿಮಾಗಳು ಶುಕ್ರವಾರ ರಿಲೀಸ್‌ ಆಗಲು ಶುರುವಾಗಿದ್ದು. ಭಾರತದಲ್ಲಿ ಶುಕ್ರವಾರ ಬಿಡಿಗಡೆಯಾದ ಮೊತ್ತಮೊದಲ ಸಿನಿಮಾ ಎಂದರೆ ಅದು ಮುಘಲ್-ಎ-ಆಝಮ್. 5 ಅಗಸ್ಟ್‌ 1950, ಶುಕ್ರವಾರದಂದು ಬಿಡುಗಡೆಯಾಗಿತ್ತು. ಅಲ್ಲಿಂದ ಈಚೆಗೆ ಬಹುತೇಕ ಸಿನಿಮಾಗಳು ಶುಕ್ರವಾರದಂದು ಬಿಡುಗಡೆಗೊಳಿಸುವ ಅಭ್ಯಾಸಕ್ಕೆ ಒಳಗಾಗಿದ್ದು.

ಶುಕ್ರವಾರ ಬಿಡುಗಡೆಯಾಗಲು ಕಾರಣಗಳೇನು?

  1. ವಿದೇಶದಲ್ಲಿ ಚಿತ್ರಗಳನ್ನು ಶುಕ್ರವಾರ ಬಿಡುಗಡೆಗೊಳಿಸುತ್ತಿದ್ದರು. ಅಲ್ಲಿ ಶನಿವಾರ ಹಾಗೂ ಭಾನುವಾರ ವಾರಾಂತ್ಯದ ಕಾರಣ ಜನರು ಚಿತ್ರಮಂದಿರಗಳಿಗೆ ಭೇಟಿ ನೀಡುವ ಸಾಧ್ಯತೆಗಳು ಹೆಚ್ಚಿತ್ತು. ಅಮೆರಿಕದಲ್ಲಿ ಜನರು ಯಾವುದೇ ಹೊಸ ಸಿನಿಮಾ ರಿಲೀಸ್‌ ಆದರೂ ಅದನ್ನು ಶನಿವಾರ ಅಥವಾ ಭಾನುವಾರ ಹೋಗಿ ನೋಡುತ್ತಿದ್ದರು. ಅಮೆರಿಕದಲ್ಲಿ ಯಶಸ್ವಿಯಾದ ಈ ತಂತ್ರವನ್ನು ಭಾರತದ ಚಿತ್ರರಂಗವೂ ಅಳವಡಿಸಿಕೊಂಡಿತು.
  2. ಭಾರತದಲ್ಲಿ ಈ ಹಿಂದೆ ಕಲರ್‌ ಟಿ.ವಿ ಇರಲಿಲ್ಲ. ಅಲ್ಲದೆ, ಆಗ ಮುಂಬೈನಲ್ಲಿ ಸಣ್ಣ ಮಟ್ಟದ ಕೈಗಾರಿಕಾ ಸಂಸ್ಥೆಗಳಲ್ಲಿ ಶುಕ್ರವಾರ ಅರ್ಧದಿನ ಕೆಲಸ ಮಾಡುವ ಅಭ್ಯಾಸವಿತ್ತು. ಶುಕ್ರವಾರ ಅರ್ಧದಿನ ಕೆಲಸ ಮಾಡಿ ಮನೆಗೆ ಹೋಗುವ ನೌಕರರನ್ನು ಎಂಗೇಜ್‌ ಮಾಡುವ ನಿಟ್ಟಿನಲ್ಲಿ ಸಿನಿಮಾಗಳನ್ನು ಶುಕ್ರವಾರ ರಿಲೀಸ್‌ ಮಾಡಲಾಗುತ್ತಿತ್ತು.
  3. ಭಾರತದಲ್ಲಿ ಶುಕ್ರವಾರವನ್ನು ಲಕ್ಷ್ಮೀದೇವಿಯ ವಾರ ಎಂದು ನಂಬಲಾಗಿದೆ. ಹಾಗಾಗಿ ಈ ದಿನ ಚಿತ್ರವನ್ನು ಬಿಡುಗಡೆಮಾಡಿದರೆ ಚಿತ್ರದ ನಿರ್ಮಾಪಕರಿಗೆ ಲಕ್ಷ್ಮೀ ಹಣದ ರೂಪದಲ್ಲಿ ಒಲಿಯುತ್ತಾಳೆ ಎಂಬ ನಂಬಿಕೆ.
  4. ಚಿತ್ರವನ್ನು ಶುಕ್ರವಾರ ಬಿಡುಗಡೆಗೊಳಿಸುವ ಹಿಂದೆ ಒಂದು ಆರ್ಥಿಕ ಕಾರಣವೂ ಇದೆ. ಒಂದು ಚಿತ್ರವನ್ನು ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶಿಸಬೇಕಾದರೆ, ನಿರ್ಮಾಪಕರು ಚಿತ್ರಮಂದಿರದವರಿಗೆ ಶುಲ್ಕವನ್ನು ನೀಡಬೇಕು. ಉಳಿದ ದಿನಗಳಲ್ಲಿ ಹೆಚ್ಚಿನ ಶುಲ್ಕವನ್ನು ನಿರ್ಮಾಪಕರು ನೀಡಬೇಕಾಗುತ್ತದೆ. ಶುಕ್ರವಾರದಂದು ಈ ಶುಲ್ಕ ಕಡಿಮೆಯಿರುತ್ತದೆ. ಶುಕ್ರವಾರ ಬಹುಶಃ ಚಿತ್ರಮಂದಿರಕ್ಕೆ ಬರುವ ಜನರ ಸಂಖ್ಯೆ ಜಾಸ್ತಿಯಿರುತ್ತದೆ ಎಂಬ ಕಾರಣಕ್ಕಿರಬಹುದು, ಶುಲ್ಕದ ಮೊತ್ತವನ್ನು ಕಡಿಮೆ ಇರಿಸಲಾಗಿದೆ.

ಈ ಎಲ್ಲಾ ಕಾರಣಗಳು ಒಂದು ಸಿನಿಮಾವನ್ನು ಶುಕ್ರವಾರ ಬಿಡುಗಡೆಗೊಳಿಸಲು ಪ್ರೇರೇಪಿಸಿದೆ. ʼಫ್ರೈಡೇʼ ಈಗ ʼಮೂವಿಡೇʼ ಎಂದೇ ಪ್ರಸದ್ಧಿಯಾಗಿ ಜನರನ್ನು ಚಿತ್ರಮಂದಿರದತ್ತ ಸೆಳೆಯುತ್ತದೆ. ಈ ಶುಕ್ರವಾರ ಸಿನಿಮಾ ನೋಡಲು ಹೋಗುವಾಗ ಯಾಕೆ ಶುಕ್ರವಾರವೇ ರಿಲೀಸ್‌ ಆಗಿದ್ದು ಎಂಬ ಯೋಚನೆಯಿಂದ ಹೊರಬಂದು ಸಿನಿಮಾ ನೋಡಬಹುದು.

ಇದನ್ನೂ ಓದಿ: Prithviraj | 50,000 ಕಾಸ್ಟ್ಯೂಮ್‌, 500 ಟರ್ಬನ್‌ ಶೂಟಿಂಗ್‌ನಲ್ಲಿ ಬಳಕೆ

Exit mobile version