ಡಿಯರ್ ರಿಸೀವರ್,
ಥ್ಯಾಂಕ್ಯು ನನ್ನನ್ನು ಅಳಿಸಿದ್ದಕ್ಕೆ. ಇಲ್ವೋ, ಕೋಪ ಅಥವಾ ವ್ಯಂಗ್ಯದಲ್ಲಲ್ಲಾ… ನಿಜವಾಗಿಯೂ ಥ್ಯಾಂಕ್ಸ್ ಹೇಳ್ತಿದೀನಿ. ಅವತ್ತು ನೀನು ಅತ್ತ ಹೋದ ಕೂಡಲೆ ಥಟ್ ಅಂತ ಕಣ್ತುಂಬ ನೀರು ತುಂಬಿಕೊಂಡುಬಿಡ್ತು. ದಳ ದಳ ಕಣ್ಣೀರೇನಲ್ಲ, ಅಷ್ಟನ್ನು ಬಸಿದರೂ ನಾಕೈದು ಹನಿಯಾದರೆ ಹೆಚ್ಚು. ಅಷ್ಟೇ ಕಣ್ಣೀರು… ಆದರೆ ಅಷ್ಟಕ್ಕೇ ಒಂದು ಕ್ಷಣ ನಿನ್ನ ಮೇಲಿದ್ದ ಬೇಸರ, ಗಂಟಲು ಕಟ್ಟಿಸಿದ್ದ ದುಃಖ ಎಲ್ಲಾ ಮರ್ತೋಗಿ, ವಾವ್ ನಂಗೂ ಕಣ್ಣೀರ್ ಬಂತು ಅಂತ ಒಂತರಾ ವಿಚಿತ್ರ ಸಂಭ್ರಮ ಆಗ್ಹೋಗಿ, ಬೇಗ ಬೇಗ ಮನೆಗ್ ಹೋಗಿ ಕಣ್ಣೀರ್ ಬಂದಾಗ ನಾ ಹೇಗ್ ಕಾಣ್ತೀನಂತ ಕನ್ನಡಿ ಮುಂದೆ ನಿಂತ್ ನೋಡ್ಕೋಬೇಕನಿಸ್ತು ಕಣೋ. ಅಷ್ಟರಲ್ಲಿ ಹಾಳಾದ್ದು ಬಂದಿದ್ದ ನಾಕು ಡ್ರಾಪು ಕಣ್ಣೀರೂ ಎವಾಪರೇಟಾಗೋಯ್ತು! ಮತ್ತೆ ನೀ ಮಾಡಿದ ಬೇಜಾರಿನ ನೆನಪಾದರೂ ಕಣ್ಣಿರೇನೂ ಬರಲಿಲ್ಲ.
ಕಣ್ಣೀರೊಂದು ವರ ಕಣೋ, ಕುತ್ತಿಗೆವರೆಗೂ ದುಃಖ ಚಾಚಿಕೊಂಡಿರ್ತದೆ. ಅತ್ತು ಕರಗಿಸಬೇಕು ಅನಿಸ್ತಿರ್ತದೆ. ಆದರೆ ಎಂತಾ ಸಂದರ್ಭದಲ್ಲೂ ಕಣ್ಣೀರೇ ಬರಲ್ಲ ನಂಗೆ. ಎಷ್ಟೆಷ್ಟು ಪ್ರಯತ್ನಿಸಿದರೂ, ಬಾ ಕಣ್ಣೀರೇ ಅತ್ತು ಹಗುರಾಗುವೆ ಅಂತ ಅಂಗಲಾಚಿ ಬೇಡಿಕೊಂಡರೂ ಊಹ್ಞೂಂ, ಬರಲ್ಲ. ಪುಸ್ತಕ ಓದ್ತಾ ಅಳ್ತೀನಿ. ಪಿಚ್ಚರ್ ನೋಡ್ತಾ ಬೇಜಾನು ಅಳ್ತೀನಿ. ನನ್ ಸ್ವಂತ ವಿಷಯಕ್ಕೆ ಏನು ಮಾಡಿದರೂ ಬರಲ್ಲ ಕಣ್ಣೀರು. ಎಂತಾ ಕಷ್ಟ ಗೊತ್ತಾ ಅದು? “ಹೆಣ್ಣಿಗೆ ಬತ್ತಿದ ಕಣ್ಣಿನಂತಾ ಶಾಪ ಮತ್ತೊಂದಿಲ್ಲ” ಅಂತ ಬಹುಶಃ ಯಯಾತಿ ನಾಟಕದಲ್ಲಿ ಶರ್ಮಿಷ್ಟೆ ಹೇಳ್ತಾಳೆ. ಬಹಳ ಇಷ್ಟದ ಪಾತ್ರ ನಂಗದು. ಕಾಲೇಜಿನಲ್ಲಿ ಸ್ವತಃ ಶರ್ಮಿಷ್ಟೆಯೇ ನನ್ನ ಮೈಮೇಲೇರಿ ಬಂದಂತೆ ಅವಳ ಡೈಲಾಗು ಓದುತ್ತಿದ್ದೆ.. ಅದ್ಯಾವ ಗಳಿಗೆಯಲೋ ಅವಳ ಆ ಡೈಲಾಗು ನಂದೂ ಆಗಿಬಿಡೋದಾ?
ಆದ್ರೆ ಒಂದರ್ಥ ಆಗಲಿಲ್ಲ. ಬತ್ತಿದ ಕಣ್ಣು ಹೆಣ್ಣಿಗೆ ಮಾತ್ರ ಯಾಕೆ ಶಾಪ? ಗಂಡಿಗ್ಯಾಕಲ್ಲ? ಅತ್ತು ಹಗುರಾಗುವ ದಾರಿಗೆ ಗಂಡೇನು ಹೆಣ್ಣೇನು? ಅದಕೆಲ್ಲಿಯ ಲಿಂಗಬೇಧ? ಅದ್ಯಾಕಿಂಗ್ ಬರೆದ್ರಿ ಸಾರ್ ಅಂತ ಕೇಳಣಾಂದ್ರೆ ಈಗ ಕಾರ್ನಾಡರಿಲ್ಲ. ಹೋಗ್ಲಿ ನೀನೇ ಹೇಳು, ನಿನಗೂ ಬೇಜಾರಾದಾಗ ಅತ್ರೆ ಸಮಾಧಾನ ಆಗತ್ತೆ ತಾನೆ? ಅಥವಾ ನಾ ಗಂಡು ಅಳಬಾರದು ಅಂತೆಲ್ಲ ಅಹಂ ಗಿಹಂ ಇದೆಯಾ ನಿನಗೂ? ನಾನು ಅಳಲಾರೆ ಅನ್ನೋ ತೀರ್ಮಾನ ಬೇರೆ. ನಾನು ಗಂಡು ಅದಕ್ಕಾಗಿ ಅಳಲ್ಲ ಅನ್ನೋದ್ ಬೇರೆ. ಅದೆಲ್ಲ ಏನ್ ತಲೆಲಿಟ್ಕೋಬೇಡ. ಮುಖ್ಯ, ನಿನಗೆ ಅಳೋ ಸಂದರ್ಭಾನೇ ಬರದಿರಲಿ. ಹಾಗಂತ ದಿನವೂ ಪ್ರಾರ್ಥಿಸುವೆ. ನನ್ನೆಲ್ಲ ಪ್ರಾರ್ಥನೆಗಳನೂ ಮೀರಿ ಸಂಕಟ ಎದುರಾಗಿ ಅಕಸ್ಮಾತ್ ಅಳು ಬಂತಾ? ಅತ್ಬಿಡು ಅಷ್ಟೆ. ನಿನಗೂ ನನ್ ತರಾ ಕಣ್ ಮರುಭೂಮಿ ಪ್ರಾಬ್ಲೆಂ ಇಲ್ಲಾಂದ್ರೆ ಅದು ಅದೃಷ್ಟ ಅನ್ಕೋ.
ನಮ್ ರವೀಂದ್ರನಾಥ ಶಾನಭಾಗ್ ಗೊತ್ತಲ್ವ ನಿನಗೆ ? ಸ್ವಲ್ಪ ದಿನದ್ ಹಿಂದೆ ಉಡುಪಿಯ ಅವ್ರ ಆಫೀಸಿಗೆ ಹೋದಾಗ ಯಾರೋ ಸ್ನೇಹಿತರು ಅವರನ್ನು ದೇವಸ್ಥಾನಕ್ಕೆ ಕರೆದ್ರು. ಶಾನಭಾಗರು “ಇಲ್ಲ ಮಾರಾಯ, ಆಚೆ ಎಷ್ಟೊಂದು ಜನ ತಮ್ಮ ಕಷ್ಟ ಹೇಳಲು ಕಾಯ್ತಾ ಇದ್ದಾರೆ. ದೇವಸ್ಥಾನ ಪವಿತ್ರವಾಗೋದು ಜನರ ಕಣ್ಣೀರಿನಿಂದ. ಇಲ್ಲಿಯೂ ಜನ ಅದನ್ನೇ ಮಾಡ್ತಾರೆ. ಇದೇ ನನ್ನ ದೇವಸ್ಥಾನʼʼ ಅಂದಿದ್ದರು. ಸಿಕ್ಕಾಪಟ್ಟೆ ಕಾಡಿಬಿಡ್ತು ಈ ಮಾತು. ನಿಜ ಅಲ್ವೇನೋ? ಜನ ತಮ್ ಸುಖಗಳಿಗಿಂತಾ ಕಷ್ಟಗಳನ್ನ ಹೇಳ್ಕೊಳಕೆ, ಏನಾದರೂ ಬೇಡೋಕೆ ತಾನೇ ದೇವರ ಹತ್ರ ಹೋಗದು? ಕಣ್ಣಿಗೆ ಕಾಣೋ ಹಾಗೆ ಕಣ್ಣೀರು ಹಾಕದಿದ್ರೂ, ದೇವರೆದುರು ಮನಸಾ ದುಃಖನಿವೇದನೆ ಇರತ್ತಲ್ಲಾ? ಅದೊಂತರಾ ಕಾಣದ ಕಣ್ಣೀರಲ್ವ? ಆ ಎಲ್ಲ ಪ್ರತ್ಯಕ್ಷ ಪರೋಕ್ಷ ಕಣ್ಣೀರಿಂದ ಪವಿತ್ರ ಆಗತ್ತಂತೆ ದೇವಸ್ಥಾನ. ದೇವರ ಮುಂದೇನೋ ಒಕೆ. ಮನುಷ್ಯರ ಮುಂದೆ? ಸಾಮಾನ್ಯವಾಗಿ ಯಾರೂ ಯಾರ ಮುಂದೂ ಅಳೋಕಿಷ್ಟಪಡಲ್ಲ. ಎದುರಿಗಿರೋ ವ್ಯಕ್ತಿ ನಮ್ಮ ಭಾವಗಳ ನಿಜವಾದ ರಿಸೀವರ್ ಆಗಿದ್ರೆ ಮಾತ್ರ, ಅಂತೋರ ಮುಂದೆ ಅಳು ಬರತ್ತೆ. ಯಾರಾದ್ರೂ ನಮ್ ಮುಂದೆ ಅತ್ರೆ ಅಷ್ಟು ಮಾತ್ರ ಗ್ರೇಟ್ ನಾವು ಅನ್ಕೋಬೇಕು. ಯಾರದೋ ಪ್ರಾಮಾಣಿಕ ಕಣ್ಣೀರು ನೋಡೋಷ್ಟೂ, ಅದಕ್ಕೆ ಸ್ಪಂದಿಸೋಷ್ಟೂ ಹೊತ್ತೂ ಮನುಷ್ಯ ದೇವರಾಗ್ತಾನಾ ಅಂತ? ಮನುಷ್ಯನ ಪ್ರಾಮಾಣಿಕ ಕಣ್ಣೀರು ಅತ್ಯಂತ ಪವಿತ್ರವಾದ್ದು. ಹಾಗನ್ಸಲ್ವ ನಿನಗೆ?
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ಒಂದು ಸಲವಾದರೂ ನೀನು ಸೋಲಬಾರದೇ!
ಅದ್ ಬಿಡು. ಎಂದೂ ಅಳದ ನಾ ಯಾಕೆ ಅತ್ತೆ? ಹೋಗಲಿ ನನ್ನ ಅಪರೂಪದ ಕಣ್ಣೀರು ಅವತ್ ಪಟ್ಟಂತ ಕಾಣಿಸಿಕೊಳ್ಳೋಷ್ಟು ದೊಡ್ಡ ವಿಷಯವಾಗಿತ್ತಾ ಅದು? ಮಾಮೂಲಿ ಸಣ್ಣ ಜಗಳ, ಪುಟಾಣಿ ಮುನಿಸು. ಅಷ್ಟಕ್ಕೇ ಬಂದುಬಿಡ್ತಾ ಕಣ್ಣೀರು? ಹೆಂಗೋ ಮಾರಾಯ? ಯೋಚಿಸ್ತಾನೇ ಇದೀನಿ ಈ ಬಗ್ಗೆ. ಯಾಕೆ ಹೀಗಾಯ್ತು? ಯಾವುದೋ ಎರಡಕ್ಷರದ ಒಂದು ಶಬ್ದಕ್ಕಾ? ಬರಿಯ ಶಬ್ದವಲ್ಲ ಅದು, ನನ್ನ ಇಡೀ ವ್ಯಕ್ತಿತ್ವವನ್ನೇ ಕ್ಷಣ ಪ್ರಶ್ನಿಸಿದ ಹೊತ್ತು. ನೀನು ಹಾಗ್ ಮಾಡಿದ್ದಕ್ಕೆ ನನ್ನದೇ ಬುದ್ಧಿ, ನಿನ್ನನ್ನು ನಂಬಿದ ಹೃದಯವನ್ನು ನೋಡಿ ಅಣಕಿಸಿ, ಕಿಸಕ್ಕನೆ ನಕ್ಕುಬಿಟ್ಟಿತಲ್ಲಾ… ಅದಕ್ಕಾಗಿ ಬಂತಾ ಕಣ್ಣಲ್ಲಿ ನೀರು? ನಿನ್ನೊಂದಿಗೆ ನಾನು ಮಗುವಾಗಿರ್ತೀನಿ. ಮಕ್ಳ ಹಾಗಾಡಬೇಡ ಅಂತ ಮತ್ತೆ ಬೈಬೇಡ ನೀನು. ಚೈಲ್ಡಿಶ್ನೆಸ್ ಬೇರೆ. ಬೀಯಿಂಗ್ ಚೈಲ್ಡ್ ಬೇರೆ. ನಿನ್ನ ಜೊತೆಗಿರುವಾಗ ಕೂಸೊಂದಕ್ಕೆ ತಾಯಿಂದ ಸಿಗುವ ಸುರಕ್ಷತಾ ಭಾವವಿರಬಹುದೇನೋ ನನಗೂ. ಕಾಪಾಡಬೇಕಾದ ಅಮ್ಮ ಅನಿರೀಕ್ಷಿತವಾಗಿ ಯಾತಕ್ಕೋ ಪಟ್ ಅಂತ ಕೊಟ್ಟರೆ ಗಲಿಬಿಲಿಯಾಗಿ ಕಣ್ತುಂಬಿಕೊಳ್ತದಲ್ಲಾ ಮಗು? ಅಂತಾ ಗಲಿಬಿಲಿಯ ಭಾವವಿರಬಹುದಾ ಅದು? ಪಟ್ ಅಂತ ಕೊಟ್ಟ ಮರುಕ್ಷಣ ಅಮ್ಮನಿಗೆ ಕರುಳು ಹಿಂಡುತ್ತದೆ. ನಾನು ನೊಂದ ಮರುಕ್ಷಣ ನಿನಗೂ ಅದು ತಾಕುತ್ತದೆ. ಓ… ಈಗರ್ಥವಾಯ್ತು ನೋಡು, ನಾಕ್ ಹನಿ ಕಣ್ಣೀರ ಮಧ್ಯೆಯೂ ವಾಟ್ಸಪ್ ನೋಡಿದ್ದೆ. ನೀನು ಸಾರೀ ಸಾರೀ ಸಾರೀ ಅಂದಿದ್ದೆ. ವಾಯ್ಸ್ ಮೆಸೇಜಲ್ಲಿ ನಿನ್ನ ಧ್ವನಿ ಕೇಳ್ತಿದ್ ಹಾಗೇ ಅಪರೂಪಕ್ ಬಂದಿದ್ ಕಣ್ಣೀರು ಬಂದಿದ್ದೇ ಸುಳ್ಳೇನೋ ಅನ್ನೋ ಹಾಗೆ ಆವಿಯಾಗೋಯ್ತು.
ಆದ್ರೆ ಒಂದ್ ಹೇಳ್ತೀನ್ ಕೇಳ್ಕೋ, ನಾ ಏನಾದ್ರೂ ಕೇಳ್ದಾಗ ಆಗಲ್ಲ ಅಂದ್ರೆ ಆಗಲ್ಲ ಅಂತ್ಲೇ ಹೇಳು. ಮೆಸೇಜಲ್ಲಿ ಯಾವ್ದೋ ಗ್ಯಾನ್ದಲ್ಲಿ ಹೂಂ ಅಂದ್ಬಿಟ್ಟು ಆಮೇಲಿಲ್ಲ ಅಂದ್ರೆ ನಂಗ್ ಬೇಜಾರಾಗತ್ ನೋಡು. ಕಟ್ಟಿದ್ದು ಒಡ್ದಾಗ ಬೇಜಾರಾಗ್ದೇ ಇರೋಕೆ ಅದೇನ್ ಮರಳ ಕಪ್ಪೆಗೂಡಾ? ಕನಸು ಕಣೋ ಅದು ಮುದ್ದಾ… ಕಟ್ಬೇಡ. ಕಟ್ಟಿದ್ಮೇಲ್ ಒಡೀಬೇಡ. ಅಳ್ಸೋದ್ಯಾಕೆ, ಸಮಾಧಾನ ಮಾಡದ್ಯಾಕೆ? ಕಟ್ಟೋದು, ಕೆಡವೋದು, ಅಳಿಸೋದು, ಕೊರಗೋದು, ಕರಗೋದು… ಇದಿದೇ ರಿಪೀಟೆಡ್ ಭಾವತಿರುಗಣೆಯ ಚಕ್ರ!
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ನದಿಯ ವಾರ್ತೆಗೆ ಕಿವಿದೆರೆದ ಕಡಲು
ಆದ್ರೆ ಹೇಳೀಗ, ಯಾವ್ದಕ್ಕೆ ಥ್ಯಾಂಕ್ಸ್ ಹೇಳಲಿ ನಿನಗೆ? ಅಪರೂಪಕ್ಕೆ ನನಗೂ ಕಣ್ಣೀರು ಬರುವ ಹಾಗೆ ಮಾಡಿದ್ದಕ್ಕಾ? ಅಥವಾ ಅದು ಕೆನ್ನೆಗುರುಳುವ ಮುನ್ನ ಕಾದಿದ್ದಕ್ಕಾ? ಎಲ್ಲಕ್ಕೂ ಥ್ಯಾಂಕ್ಸ್.
ಎಲ್ಲಿಂದಾ ಗಂಟುಬಿದ್ದೆ ಮಾರಾಯ ನೀನು ನನಗೆ? ಹೋಗ.
(ಅಂಕಣಕಾರರು ಕತೆಗಾರ್ತಿ. ʼಯೋಳ್ತೀನ್ ಕೇಳಿʼ ಇವರ ಅಂಕಣಗಳ ಸಂಕಲನ)