–ಕಿರಣ್ ಕುಮಾರ್ ಡಿ.ಕೆ.
ಜಗತ್ತಿನ ಕೋಟ್ಯಂತರ ಮಕ್ಕಳು ತಾವೂ ಟೆನಿಸ್ ಆಡಬೇಕೆಂದು ರ‍್ಯಾಕೆಟ್ ಹಿಡಿಯಲು ಸ್ಫೂರ್ತಿಯಾಗಿದ್ದವರು ರೋಜರ್ ಫೆಡರರ್ (Roger Federer). ಈ ಕಲಾತ್ಮಕ, ಲಾಲಿತ್ಯಪೂರ್ಣ ‘ಜಂಟಲ್ಮನ್’ ಇದೀಗ ವಿದಾಯ ಘೋಷಿಸುವುದರೊಂದಿಗೆ ತೆರೆಮರೆಗೆ ಸರಿದಿದ್ದಾರೆ.
ರೋಜರ್ ಆಟವೆಂದರೆ ಅದೊಂದು ಸೊಬಗು, ಸೊಗಸು. ಇವರ ಆಟ ಹರಿಯುವ ನದಿಯಂತೆ. ಆಟದುದ್ದಕ್ಕೂ ರಭಸವಿದ್ದರೂ ಕಣ್ಮನ ಸೆಳೆಯುವ ಮನಮೋಹಕತೆಗೆ ಕೊನೆಯಿಲ್ಲ. ಟೆನಿಸ್ ಅಂಗಳದಲ್ಲಿ ಈ ರೀತಿಯ ಇನ್ನೊಬ್ಬ ಚಮತ್ಕಾರಿ ಉದಯಿಸುವುದು ಕಷ್ಟಸಾಧ್ಯ. ಏಕೆಂದರೆ ರೋಜರ್ ಪ್ರದರ್ಶನಕ್ಕೆ ಉತ್ತರ ನೀಡಲಾಗದೆ ನೆಲಕಚ್ಚಿದ ಅದೆಷ್ಟೋ ಆಟಗಾರರು ಇವರತ್ತ ದ್ವೇಷದ ನೋಟ ಬೀರಿಲ್ಲ. ಬದಲಾಗಿ ಇವರ ಆಟಕ್ಕೆ ಮನಸೋತು ಪ್ರಶಂಸಿಸುವಷ್ಟು ಇವರ ಕಲಾತ್ಮಕತೆ ಪರವಶಗೊಳಿಸುತ್ತಿತ್ತು ಎನ್ನುವುದು ಸತ್ಯ.
ಮನಸೂರೆಗೊಂಡ ಮೋಡಿಗಾರ:
ಅಥ್ಲೀಟ್ ತಾಯಿಯ ಪ್ರೇರಣೆ, ತಂದೆಯ ಪ್ರೋತ್ಸಾಹದಿಂದ ಬಾಲ್ಯದಲ್ಲೇ ಟೆನಿಸ್ನೆಡೆಗೆ ಆಸಕ್ತಿ ಬೆಳೆಸಿಕೊಂಡ ಫೆಡರರ್ ನಾವು ನೀವೆಲ್ಲ ಅಂದುಕೊಂಡಿರುವಂತೆ ತಾಳ್ಮೆಯ ಪ್ರತಿರೂಪವಲ್ಲ. ಟೀನೇಜ್ನಲ್ಲಿ ಕೋಪ ತಾಪವನ್ನು ಟೆನಿಸ್ ಅಂಗಳದೊಳಗೂ ಹೊರಹಾಕುತ್ತಿದ್ದ, ರ್ಯಾಕೆಟ್ಗಳನ್ನು ಚಚ್ಚಿ ಮುರಿಯುತ್ತಿದ್ದ ಇವರು ಕ್ರೀಡಾಲೋಕ ಕಂಡ ಜಂಟಲ್ಮನ್ ಆಗಿ ಜಗತ್ತನ್ನು ಸೆಳೆದ ಪರಿ ಅಚ್ಚರಿ. ಏಕೆಂದರೆ ರೋಜರ್ ಒಬ್ಬ ಆಟಗಾರನಾಗಿಯಷ್ಟೇ ಅಲ್ಲ, ಸ್ನೇಹಪರತೆ, ಸಜ್ಜನಿಕೆಯಂಥ ಗುಣಗಳಿಂದ ಸಾಮಾನ್ಯರನ್ನಷ್ಟೇ ಅಲ್ಲ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಆಟಗಾರರು, ಕಲಾವಿದರು, ರಾಜಕಾರಣಿಗಳು, ಉದ್ಯಮಿಗಳೂ ತಮ್ಮ ಅಭಿಮಾನಿಗಳಾಗುವಂತೆ ಸೆಳೆದರು. ಗ್ರಾಸ್ ಹಾಗೂ ಹಾರ್ಡ್ಕೋರ್ಟ್ನಲ್ಲಿ ಪವಾಡವನ್ನೇ ಸೃಷ್ಟಿಸಿರುವ ರೋಜರ್ ಫೆಡರರ್ ಅವರ ವಿಂಬಲ್ಡನ್ನಲ್ಲಿನ ಪಂದ್ಯಗಳನ್ನು ನೋಡಲು ಹಾಲಿವುಡ್ನ ಹೆಸರಾಂತ ಸ್ಟಾರ್ಗಳು, ಭಾರತದ ಖ್ಯಾತನಾಮ ಕ್ರಿಕೆಟರ್ಗಳು ದಾಂಗುಡಿ ಇಡುತ್ತಿದ್ದುದನ್ನು ನೋಡಿದ್ದೇವೆ. ರೋಜರ್ ಜತೆ ಟೆನಿಸ್ ಆಡಿದ್ದೆ ಎಂಬುವುದು ಹಲವು ಟೆನಿಸ್ಸಿಗರಿಗೆ ಹೆಮ್ಮೆಯ ವಿಚಾರವಾದರೆ, ಬಹಳಷ್ಟು ಜನರಿಗೆ ಫೆಡರರ್ ಆಟವನ್ನು ನಾನು ಸ್ಟೇಡಿಯಂನಲ್ಲಿ ಕುಳಿತು ನೋಡಿದ್ದೆವು ಎಂಬುವುದೇ ಹೆಚ್ಚುಗಾರಿಕೆ. ಇದು ಫೆಡರರ್ ಹೇಗೆ ಕ್ರೀಡಾ ಪ್ರೇಮಿಗಳ ಮನಸೂರೆಗೊಂಡಿದ್ದರು ಎಂಬುವುದಕ್ಕೆ ಸಾಕ್ಷಿ.
ಇದನ್ನೂ ಓದಿ: Tennis Player : ನಿವೃತ್ತಿ ಘೋಷಿಸಿದ ಅಮೆರಿಕದ ಟೆನಿಸ್ ಪ್ರತಿಭೆ ಸೆರೆನಾ ವಿಲಿಯಮ್ಸ್
ಸದಾ ಅಪ್ಗ್ರೇಡ್ ಆದರು:
15, 30, 40, ಡ್ಯೂಸ್ ಹೀಗೆ ಪಾಯಿಂಟ್ ಬದಲಾಗುವುದರ ಜತೆಗೆ ಗೇಮ್, ಸೆಟ್, ಏಸ್ ಈ ರೀತಿಯ ಟೆನಿಸ್ನ ಪರಿಭಾಷೆಗಳೇ ಅರ್ಥವಾಗದಿದ್ದರೂ ಬಹಳಷ್ಟು ಜನ ಕೆಲಸ, ನಿದ್ರೆಯನ್ನೂ ಬಿಟ್ಟು ಟೆನಿಸ್ನ ಸೊಗಸನ್ನು ಸವಿಯುವಂತೆ ಮಾಡಿದವರು ಫೆಡರರ್. ರಾಡ್ ಲೇವರ್, ಇವಾನ್ ಲೆಂಡ್ಲೆ, ಪೀಟ್ ಸಾಂಪ್ರಸ್, ಆಂಡ್ರೆ ಅಗಾಸ್ಸಿ, ಸ್ಟೆಫಿ ಗ್ರಾಫ್ ಹೀಗೆ ಟೆನಿಸ್ ಲೋಕವನ್ನು ಆಳಿದವರ ನಡುವೆ ಹೊಸ ರಾಜಕುಮಾರನಾಗಿ ಉದಯಿಸಿದವರು ಫೆಡರರ್. ಪೀಟ್ ಸಾಂಪ್ರಸ್ ಅವರ ಹೆಸರಲ್ಲಿದ್ದ 14 ಗ್ರ್ಯಾನ್ ಸ್ಲಾಮ್ ಗರಿಮೆಯನ್ನು 27ನೇ ವಯಸ್ಸಿಗೆ ಹಿಂದಿಕ್ಕಿದರೂ ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಅವರಂಥ ಘಟಾನುಘಟಿಗಳ ಪೈಪೋಟಿಯನ್ನು ಎದುರಿಸಲು ಕಾಲಕಾಲಕ್ಕೆ ಆಟವನ್ನು ಉತ್ತಮಪಡಿಸಿಕೊಳ್ಳುತ್ತಲೇ ಸಾಗಿದವರು. 37ನೇ ವಯಸ್ಸಿನಲ್ಲಿ ಇವರು ಗ್ರ್ಯಾನ್ಸ್ಲಾಮ್ ಗೆಲ್ಲುವುದಕ್ಕೆ ಕಾರಣವಾಗಿದ್ದೇನೆಂದರೆ ವಯಸ್ಸಾದರೂ ತಮ್ಮ ಆಟವನ್ನು ಅಪ್ಗ್ರೇಡ್ ಮಾಡಿಕೊಳ್ಳುವ ಈ ಗುಣ. ವಿಶೇಷವೆಂದರೆ ತಮ್ಮ ಆಟವನ್ನ ಉತ್ತಮಪಡಿಸಿಕೊಳ್ಳುವ ಜೊತೆಗೆ ಎದುರಾಳಿಗಳ ಸಾಮರ್ಥ್ಯವನ್ನೂ ಹೆಚ್ಚಿಸಿ ಟೆನಿಸ್ ಆಟದ ಗುಣಮಟ್ಟ ಹೆಚ್ಚಾಗಲು ಕಾರಣರಾದವರು ಫೆಡರರ್ ಎಂಬುವುದು ಸುಳ್ಳಲ್ಲ.
ಗ್ರೇಟೆಸ್ಟ್ ಆಫ್ ಆಲ್ ಟೈಮ್?:
ಪ್ರಸ್ತುತ ನಂಬರ್ 1 ಟೆನಿಸ್ ಆಟಗಾರ ಹಾಗೂ ಯುಎಸ್ ಓಪನ್ ಗ್ರ್ಯಾನ್ಸ್ಲಾಮ್ ವಿಜೇತ ಕಾರ್ಲೋಸ್ ಅಲ್ಕಾರಜ್ ಸೇರಿದಂತೆ ಈಗಾಗಲೇ ಟೆನಿಸ್ ಲೋಕದಲ್ಲಿ ಹೆಸರು ಮಾಡಿರುವ ಹತ್ತಾರು ಆಟಗಾರರಿಗೆ ರೋಜರ್ ಫೆಡರರ್ ಐಡಲ್. ಇದೀಗ ಟೆನಿಸ್ ಲೋಕದ ಮತ್ತೊಬ್ಬರು ತಾರೆ ಸೆರೆನಾ ವಿಲಿಯಮ್ಸ್ ತೆರೆಮರೆಗೆ ಸರಿದ ಕೆಲವೇ ದಿನಗಳಲ್ಲಿ ರೋಜರ್ ವಿದಾಯ ಹೇಳಿ ಮರೆಯಾಗುತ್ತಿದ್ದಾರೆ.
ಆದರೆ, ಜಗತ್ತಿನೆಲ್ಲೆಡೆ ಜನರನ್ನು ಈ ಕ್ರೀಡೆಯತ್ತ ಆಕರ್ಷಿಸಿದ ಫೆಡರರ್ ಅವರ ಆಟ ಕ್ರೀಡಾಪ್ರೇಮಿಗಳ ಮನಸ್ಸಿನಿಂದ ಮರೆಯಾಗುವುದು ಸಾಧ್ಯವೇ ಇಲ್ಲ. ಸರ್ವ್ ಆ್ಯಂಡ್ ವಾಲಿ, ವನ್ ಹ್ಯಾಂಡೆಡ್ ಬ್ಯಾಕ್ ಹ್ಯಾಂಡ್, ನಿಖರ ಫೋರ್ ಹ್ಯಾಂಡ್ ಹೀಗೆ ಫೆಡರರ್ ಒಬ್ಬ ಕಂಪ್ಲೀಟ್ ಟೆನಿಸ್ ಪ್ಲೇಯರ್. ಅದ್ಭುತ, ವಿಭಿನ್ನವಾಗಿರುವ ಈ ಕ್ರೀಡೆಗೆ ಮತ್ತಷ್ಟು ಮೆರುಗು ನೀಡಿದವರು. ಟೆನಿಸ್ ಲೋಕದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಈ 20 ಗ್ರ್ಯಾನ್ಸ್ಲಾಮ್ಗಳ ಒಡೆಯನ ಕಣ್ಣೆದುರೇ ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ಅದಕ್ಕಿಂತ ಹೆಚ್ಚಿನ ಗ್ರ್ಯಾನ್ಸ್ಲಾಮ್ಗಳನ್ನು ಗೆಲ್ಲುತ್ತ ಮುನ್ನಡೆದಾಗ ರೋಜರ್ ಇನ್ನೊಂದು ಗ್ರ್ಯಾನ್ಸ್ಲಾಮ್ ಗೆದ್ದು ಆನಂದಭಾಷ್ಪ ಸುರಿಸುತ್ತ ಟ್ರೋಫಿಗೆ ಮುತ್ತಿಡುವುದನ್ನು ನೋಡಲು ಬಯಸಿದ ಹೃದಯಗಳೆಷ್ಟೋ. ಆದರೆ ಇವರು ಇದೀಗ ವಿದಾಯ ಘೋಷಿಸುವುದರೊಂದಿಗೆ ಆ ಬಯಕೆ ಹುಸಿಯಾಗಿದೆ. ಆದರೆ ಯಾರು ಅದೆಷ್ಟೇ ಗ್ರ್ಯಾನ್ಸ್ಲಾಮ್ ಗೆದ್ದರೂ ನಂಬರ್ ವನ್ ಆಗಿ ಮೆರೆದರೂ, ದಾಖಲೆಗಳನ್ನು ಮುರಿದರೂ ರೋಜರ್ ಗಳಿಸಿದ ಪ್ರೀತಿ, ಪ್ರಖ್ಯಾತಿಯನ್ನು ಹಿಂದಿಕ್ಕುವುದು ಅಸಾಧ್ಯ. ಏಕೆಂದರೆ ಗ್ರೇಟೆಸ್ಟ್ ಆಫ್ ಆಲ್ ಟೈಮ್ (ಗೋಟ್) ರೇಸ್ನಲ್ಲಿ ರೋಜರ್ ಹೆಸರು ಸದಾ ಅಗ್ರಗಣ್ಯ. ಅಭಿಮಾನಿಗಳ ಹೃದಯದಲ್ಲಿ ಸದಾ ವಿರಾಜಮಾನ.
ತಲೆಗೇರಲಿಲ್ಲ ಸಕ್ಸಸ್
24 ವರ್ಷಗಳ ವೃತ್ತಿ ಬದುಕಿನಲ್ಲಿ ಬಹುತೇಕ ಎಲ್ಲ ರೀತಿಯ ಸಕ್ಸಸ್ ಕಂಡವರು ಫೆಡರರ್. 1500ಕ್ಕೂ ಹೆಚ್ಚಿನ ಪಂದ್ಯಗಳನ್ನಾಡಿರುವ ಇವರು ಎಲ್ಲ ನಾಲ್ಕು ಮಾದರಿಯ ಗ್ರ್ಯಾನ್ಸ್ಲ್ಯಾಮ್, ಒಲಿಂಪಿಕ್ಸ್, ಎಟಿಪಿ ಟೂರ್ ಫೈನಲ್ಸ್, ಎಟಿಪಿ ಮಾಸ್ಟರ್ಸ್, ಡೇವಿಸ್ ಕಪ್ ಹೀಗೆ ಟೆನಿಸ್ನಲ್ಲಿರುವ ಎಲ್ಲ ಮಾದರಿಯ ಟೂರ್ನಿಗಳಲ್ಲೂ ಗೆಲುವಿನ ಸವಿ ಉಂಡವರು. ಒಟ್ಟು 103 ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದವರು. 310 ವಾರಗಳ ಕಾಲ ನಂಬರ್ ವನ್ ಆಟಗಾರನಾಗಿದ್ದವರು. 5 ಬಾರಿ ವಿಶ್ವದ ವರ್ಷದ ಕ್ರೀಡಾಪಟು ಪುರಸ್ಕಾರಕ್ಕೆ ಭಾಜನರಾದವರು. ಹಾಗಿದ್ದರೂ ಯಾವತ್ತೂ ಗೆಲುವು ಇವರ ನೆತ್ತಿಗೇರಲಿಲ್ಲ. ಗೆಲುವಿನ ಅಮಲೇರಿಸಿಕೊಳ್ಳದೆ ಸಮಚಿತ್ತದಲ್ಲೇ ಉಳಿದರು. ಇದಲ್ಲದೆ ಸೋಲಿನ ಪೆಟ್ಟನ್ನೂ ಅದೇ ಮಾದರಿಯಲ್ಲಿ ಅರಗಿಸಿಕೊಂಡವರು. ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ಜೊತೆಗೆ ಇವರದು ಟೆನಿಸ್ ಲೋಕದ ಹೆಸರಾಂತ ರೈವಲ್ರಿ. ಇದಲ್ಲದೆ ನಡಾಲ್ ವಿರುದ್ಧದ 2008ರ ವಿಂಬಲ್ಡನ್ ಫೈನಲ್ನಲ್ಲಿ 4 ಗಂಟೆ 48 ನಿಮಿಷ ಸೆಣಸಿ ಸೋತರೆ, 2019ರ ವಿಂಬಲ್ಡನ್ ಫೈನಲ್ನಲ್ಲಿ ಜೊಕೊವಿಕ್ ವಿರುದ್ಧ 4 ಗಂಟೆ 57 ನಿಮಿಷಗಳ ಕಾಲ ಹೋರಾಡಿ ಸೋತಿದ್ದೂ ಸೇರಿದಂತೆ ಅತ್ಯದ್ಭುತ ಎನ್ನಬಹುದಾದ ಹಲವಾರು ನೆನಪುಗಳ ಬುತ್ತಿಯನ್ನೇ ಅಭಿಮಾನಿಗಳಿಗೆ ಫೆಡರರ್ ನೀಡಿದ್ದಾರೆ. ಇದೇ ತಿಂಗಳ 23ರಿಂದ ಲಂಡನ್ನಲ್ಲಿ ನಡೆಯುವ ಲೇವರ್ ಕಪ್ ಮೂಲಕ ಫೆಡರರ್ ಕೊನೆಯ ಬಾರಿಗೆ ಎಟಿಪಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ದಶಕಗಳ ಕಾಲದ ಪ್ರತಿಸ್ಪರ್ಧಿಗಳಾದ ನಡಾಲ್, ಜೊಕೊವಿಕ್, ಆ್ಯಂಡಿ ಮರ್ರಿ ಅವರನ್ನೊಳಗೊಂಡ ಟೀಮ್ ಯೂರೋಪ್ ತಂಡದಲ್ಲಿಯೇ ರೋಜರ್ ಕೂಡ ಇರುವುದು ವಿಶೇಷ.
ಕಂಪ್ಲೀಟ್ ಪ್ಲೇಯರ್, ಕಂಪ್ಲೀಟ್ ಫ್ಯಾಮಿಲಿ ಮ್ಯಾನ್:
ತಾವು ಬೆಳೆದು ಬಂದ ಹಾದಿಯನ್ನು ವಿದಾಯದ ವೇಳೆ ನೆನಪಿಸಿಕೊಂಡಿರುವ ರೋಜರ್, ಸ್ವಿಜರ್ಲೆಂಡಿನ ಬಾಲ್ಕಿಡ್ ಒಬ್ಬನ ಕನಸು ನನಸಾಗಲು ಕಾರಣರಾದ ಪ್ರತಿಯೊಬ್ಬರಿಗ ಧನ್ಯವಾದ ಸಲ್ಲಿಸಿದ್ದಾರೆ. ”ನಾನು ಇದೀಗ ಏನಾಗಿದ್ದರೂ ನನ್ನ ಹೃದಯದಲ್ಲಿ ಯಾವಾಗಲೂ ನಾನೊಬ್ಬ ಬಾಲ್ ಬಾಯ್ ಆಗಿಯೇ ಉಳಿದುಕೊಂಡಿರುತ್ತೇನೆ” ಎಂದು ಹೇಳಿರುವುದು ಅವರ ಸರಳತೆಗೆ ಸಾಕ್ಷಿ. ಎರಡು ಬಾರಿ ಇಬ್ಬರು ಅವಳಿ ಮಕ್ಕಳ (ಒಟ್ಟು ನಾಲ್ಕು ಮಕ್ಕಳು) ತಂದೆಯಾಗಿರುವ ಇವರು ಟೆನಿಸ್ ಆಟಗಾರನಾಗಿ ಉತ್ತುಂಗದಲ್ಲಿದ್ದಾಗಲೇ ”ಅದೇನೇ ಸಾಧನೆಗೈದರೂ ರಾತ್ರಿ ನಿದ್ದೆಯಿಂದೆದ್ದು ಮಕ್ಕಳ ಡೈಪರ್ ಬದಲಾಯಿಸುವಾಗ ಸಿಗುವ ಖುಷಿ ವಿಭಿನ್ನವಾದುದು’’ ಎಂದು ಹೇಳಿಕೊಂಡಿರುವುದು ಅವರೊಬ್ಬ ಕಂಪ್ಲೀಟ್ ಟೆನಿಸ್ ಪ್ಲೇಯರ್ ಮಾತ್ರವಲ್ಲದೆ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಎಂಬುದಕ್ಕೂ ಉದಾಹರಣೆ. ಹೀಗೆಯೇ ಅಲ್ಲವೆ ರೋಜರ್ ಫೆಡರರ್ ದೇಶ ದೇಶಗಳನ್ನೂ ಮೀರಿ ಟೆನಿಸ್ ಪ್ರೇಮಿಗಳ ಹೃದಯವನ್ನು ಬೆಸೆದದ್ದು?
ಇದನ್ನೂ ಓದಿ: Roger Federer | ವೃತ್ತಿ ಟೆನಿಸ್‌ಗೆ ವಿದಾಯ ಹೇಳಿದ ದಿಗ್ಗಜ ರೋಜರ್ ಫೆಡರರ್