ಈ ಅಂಕಣವನ್ನು ಇಲ್ಲಿ ಕೇಳಿ:
ದೀರ್ಘಾಯು ರಾಣಿಯ ಸಾವಿಗೆ ಕೆಲ ಮಾಧ್ಯಮಗಳು ವಿಪರೀತ ಕಣ್ಣೀರು ಸುರಿಸಿವೆ. ಅದರಲ್ಲೂ ಇಂಗ್ಲಿಷ್ ಮಾಧ್ಯಮಗಳ ಆಕ್ರಂದನ ಪ್ರಾಯಶಃ “ಹೆವನ್”ಗೂ ತಲುಪಿರಬೇಕು. ಬ್ರಿಟಿಷರಿಂದ ಸ್ವಾತಂತ್ರ್ಯ ಬಂತು, ಎಪ್ಪತ್ತೈದು ವರ್ಷಗಳಾದವು, ಎಂದು ನಾವೂ ಬಾಯಿ ಬಡಿದುಕೊಳ್ಳುತ್ತಲೇ, ರಾಣಿಯ ಸಾವಿಗೆ ಶೋಕಾಚರಣೆ ಮಾಡಿದ್ದೇವೆ. ನಮ್ಮ ರಾಷ್ಟ್ರಧ್ವಜ ಸಹ ಅರ್ಧಕ್ಕೆ ಹಾರಿದೆ! ಬ್ರಿಟಿಷರೇ ನಮ್ಮ ದೇಶಕ್ಕೆ ಶಿಕ್ಷಣದ ಬೆಳಕು ತಂದವರು, ಉದ್ಯಮಗಳನ್ನು ಸ್ಥಾಪಿಸಿದವರೇ ಅವರು, ಎಂದೆಲ್ಲಾ ವೃಥಾ ಕೈಕಾಲು ಬಡಿದುಕೊಂಡು ಅಳುವ ಮುನ್ನ, ನಾವೆಲ್ಲಾ ಒಂದಿಷ್ಟಾದರೂ ಗತ-ಇತಿಹಾಸದ ಅವಲೋಕನ ಮಾಡುವುದು ಒಳ್ಳೆಯದು. ಈಸ್ಟ್ ಇಂಡಿಯಾ ಕಂಪನಿಯ ಮೂಲಕ ನಡೆದ ಪರೋಕ್ಷ ಆಡಳಿತವೇ ಇರಲಿ, 1857ರ ನಂತರದ ನೇರ ಆಡಳಿತವೇ ಇರಲಿ, ಈ ರಾಣಿಯ- ಈ ವಂಶದ “ಕೊಡುಗೆಗಳನ್ನು” ಪಟ್ಟಿ ಮಾಡಿದರೆ ದಿನಪತ್ರಿಕೆಯೊಂದರ ಇಡೀ ಸಂಚಿಕೆಯ ಸ್ಥಳಾವಕಾಶವೂ ಸಾಲದೇ ಹೋಗಬಹುದು.
18ನೆಯ ಶತಮಾನದ ಕೊನೆಯ ಭಾಗದಲ್ಲಿ ಬಂಗಾಳದ ಗವರ್ನರ್ ಆಗಿ ಬಂಗಾಳವನ್ನು ನಾಶ ಮಾಡಿದ ವಾರನ್ ಹೇಸ್ಟಿಂಗ್ಸ್ ಹಿಂಸೆ, ಅತ್ಯಾಚಾರ, ವಿಕೃತಿ, ದ್ವೇಷಗಳ ಚರಮಸೀಮೆಯನ್ನೂ ದಾಟಿದ್ದ. ಇವನ ಕುಖ್ಯಾತಿ ಎಂತಹುದು ಎಂದರೆ, ಬ್ರಿಟಿಷ್ ಸಂಸತ್ತಿನಲ್ಲಿ ತತ್ತ್ವಜ್ಞಾನಿ ಆರ್ಥಿಕ ತಜ್ಞ ಎಡ್ಮಂಡ್ ಬರ್ಕ್ ಅವರು ಈ ಹೇಸ್ಟಿಂಗ್ಸ್ ಭಾರತದಲ್ಲಿ ಮಾಡಿದ ಕುಕೃತ್ಯಗಳ ವಿರುದ್ಧ ದೋಷಾರೋಪಣೆಯನ್ನು ಮಾಡಿದರು. ಬಂಗಾಳದಲ್ಲಿ, ವಿಶೇಷವಾಗಿ ಬಂಗಾಳಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರಗಳು ನಾಗರಿಕ ಸಮಾಜಗಳು ತಲೆ ತಗ್ಗಿಸುವಂತಹುವು. ಆ ಕಾಲದಲ್ಲಿ ಬ್ರಿಟಿಷರು ಐವತ್ತಕ್ಕೂ ಹೆಚ್ಚು ಶತಾಂಶದಷ್ಟು ತೆರಿಗೆ ಹಾಕಿ, ಭಾರತದ ಕೃಷಿ ಮತ್ತು ಉದ್ಯಮಗಳನ್ನು ನಾಶ ಮಾಡಿದರು. ಬರ್ಕ್ ಅವರ ದೋಷಾರೋಪಣೆ ಪಟ್ಟಿಯಲ್ಲಿ “…ತೆರಿಗೆ ನೀಡದವರ ಮನೆಯ ಹೆಂಗಸರನ್ನು ಸುಡುಬಿಸಿಲಿನಲ್ಲಿ ಪ್ರಾಣಿಗಳಂತೆ ಪಂಜರದಲ್ಲಿ ಕೂಡಿಹಾಕಲಾಗುತ್ತಿತ್ತು. ಆ ಮಹಿಳೆಯರ ಮೊಲೆತೊಟ್ಟುಗಳನ್ನು ಕತ್ತರಿಸಿ ಎಸೆಯಲಾಗುತ್ತಿತ್ತು….” ಎಂಬ ಮಾತುಗಳನ್ನು ಕೇಳಿ ಸಂಸತ್ತಿನಲ್ಲಿ ಬ್ರಿಟಿಷ್ ಸಂಸದೆಯೋರ್ವರು ಅಲ್ಲಿಯೇ ಮೂರ್ಛೆ ಹೋದರು. ಆದರೇನು! ಲೂಟಿಕೋರ ರಾಜ-ರಾಣಿಯರ ಪರಂಪರೆಯ ಮತ್ತು ವಸಾಹತುಶಾಹಿ ಹಿಂಸ್ರಪಶುಗಳ ಆ ಸಂಸತ್ತಿನಲ್ಲಿ ಹೇಸ್ಟಿಂಗ್ಸನಿಗೆ ಯಾವ ಶಿಕ್ಷೆಯೂ ಆಗಲಿಲ್ಲ.
ಹೇಸ್ಟಿಂಗ್ಸನದು ಅಪರೂಪದ ಉದಾಹರಣೆ ಅಲ್ಲ. ಎಲ್ಲ ಬ್ರಿಟಿಷ್ ಅಧಿಕಾರಿಗಳದ್ದೂ, ಇಂಗ್ಲೆಂಡಿನ ಎಲ್ಲ ರಾಜ-ರಾಣಿಯರದ್ದೂ ಇದೇ ದುರ್ವರ್ತನೆ. ಬ್ರಿಟಿಷರ ಆಡಳಿತದ 1770ರಿಂದ 1900ರ ಅವಧಿಯಲ್ಲಿ ಜಗತ್ತಿನ ಎಲ್ಲ ಯುದ್ಧಗಳಲ್ಲಿ ಸತ್ತವರ ಸಂಖ್ಯೆ ಐವತ್ತು ಲಕ್ಷಗಳಾದರೆ, ಬ್ರಿಟಿಷ್ ಆಡಳಿತದ ಭಾರತದಲ್ಲಿ ಕ್ಷಾಮದಿಂದ ಸತ್ತ ನತದೃಷ್ಟರ ಸಂಖ್ಯೆ ನಾಲ್ಕು ಕೋಟಿ. ಹೌದು, ನಾಲ್ಕು ಲಕ್ಷ ಅಲ್ಲ, ನಾಲ್ಕು ಕೋಟಿ. ಬಂಗಾಳ, ಮದ್ರಾಸ್, ಬಿಹಾರ, ಮುಂಬಯಿ, ಹೈದರಾಬಾದ್, ಒಡಿಶಾ, ಆಗ್ರಾ ಮುಂತಾದೆಡೆ ಜನರು ಹೀಗೆ ಸತ್ತದ್ದು ಮಳೆಯಿಲ್ಲದೆ ಸಹಜವಾಗಿ ಎರಗಿದ ಬರಗಾಲದಿಂದ ಅಲ್ಲ. ಅದು ಮಾನವ-ನಿರ್ಮಿತ ಕ್ಷಾಮ. ಬ್ರಿಟಿಷ್ ಆಳರಸರಿಂದಾದ ಕ್ಷಾಮ. ಭಾರತದೆಲ್ಲೆಡೆ ಬೆಳೆದ ಆಹಾರ ಧಾನ್ಯಗಳನ್ನು ರಫ್ತು ಮಾಡಿ ಆ ಹಣದಲ್ಲಿ ಬ್ರಿಟಿಷರು ಬೇರೆ ಅನೇಕ ದೇಶಗಳನ್ನು ವಸಾಹತುಗಳನ್ನಾಗಿ ಮಾಡಿಕೊಳ್ಳಲು ಯುದ್ಧಗಳನ್ನು ಆಯೋಜಿಸುತ್ತಿದ್ದರು. ಖ್ಯಾತ ಇತಿಹಾಸಕಾರ ವಿಲ್ ಡ್ಯೂರಾಂಟ್ “ಆ ಅವಧಿಯಲ್ಲಿ ಭಾರತೀಯರು ಆಹಾರವಿಲ್ಲದೆ ಅಕ್ಷರಶಃ ಅಸ್ಥಿಪಂಜರಗಳಾಗಿದ್ದರು, ಕುಪೋಷಣೆಯಿಂದ ನರಳುತ್ತಿದ್ದರು” ಎಂದು ದಾಖಲಿಸಿದ್ದಾರೆ.
ಬಂಗಾಳದಲ್ಲಿ ಎಂತಹ ಆಹಾರ ಕೊರತೆ ಇತ್ತೆಂದರೆ, ಎಂಟು ವರ್ಷ ವಯಸ್ಸಾಗುವ ಮೊದಲೇ ಅರ್ಧಕ್ಕಿಂತ ಹೆಚ್ಚು ಮಕ್ಕಳು ಕುಪೋಷಣೆಯಿಂದ ಸತ್ತುಹೋಗುತ್ತಿದ್ದರು. ಇತಿಹಾಸಕಾರ ಆರ್.ಸಿ.ದತ್ತ ಅವರು, ಅತಿಯಾದ ತೆರಿಗೆಯ ಭಾರದಿಂದ ಕೃಷಿಕರ ಬಳಿಯೂ ಆಹಾರ ಉಳಿಯುತ್ತಿರಲಿಲ್ಲ. ತೆರಿಗೆ ನೀಡದವರ ಮನೆಯ ಮಹಿಳೆಯರ ಸ್ತನಗಳನ್ನು ಬ್ರಿಟಿಷರು ಕತ್ತರಿಸಿಹಾಕುತ್ತಿದ್ದರು ಎಂದು ಬರೆದಿದ್ದಾರೆ. ಬ್ರಿಟಿಷರ ನೇರ ಆಡಳಿತದ ಮುಂಬಯಿಯಲ್ಲಿ 1921ರಲ್ಲಿ ಆರೋಗ್ಯಸೇವೆಗಳ ಅಲಭ್ಯತೆಯಿಂದ, ಬಡತನದಿಂದ, ಕುಪೋಷಣೆಯಿಂದ ಮೂರನೆಯ ಎರಡು ಭಾಗದಷ್ಟು ಶಿಶುಗಳು ಮರಣ ಹೊಂದಿದ ದಾಖಲೆಗಳಿವೆ.
ಅಮೆರಿಕಾ ಮೂಲದ ಇತಿಹಾಸ ಬರೆಹಗಾರ್ತಿ ಕ್ಯಾದರಿನ್ ಮೇಯೋ ಎನ್ನುವ ಧೂರ್ತ ಮಹಿಳೆ ತನ್ನ “ಮದರ್ ಇಂಡಿಯಾ” ಎನ್ನುವ ಪುಸ್ತಕದಲ್ಲಿ ʼʼಭಾರತದಲ್ಲಿ ಹಿಂದೂ ತಾಯಂದಿರು ತಮ್ಮ ಮಕ್ಕಳಿಗೆ ತಾವೇ ಅಫೀಮು ತಿನ್ನಿಸುತ್ತಾರೆ, ಈ ದರಿದ್ರ ದೇಶಕ್ಕೆ ಸ್ವಯಮಾಡಳಿತದ ಯೋಗ್ಯತೆಯಿಲ್ಲ, ಅದು ಗುಲಾಮಗಿರಿಯಲ್ಲಿಯೇ ಇರತಕ್ಕದ್ದು” ಎಂಬ ತೀರ್ಮಾನವನ್ನೂ ಬರೆದಳು. ಅದು ನ್ಯೂಯಾರ್ಕಿನಲ್ಲಿ 1928ರಲ್ಲಿ ಪ್ರಕಟವಾದಾಗ ಕೋಲಾಹಲವೇ ಆಯಿತು. ಓದಿದವರು ಬೆಚ್ಚಿಬಿದ್ದರು. ಆದರೆ, ನೇಪಥ್ಯದ ವಾಸ್ತವವನ್ನು ಮೇಯೋ ಮರೆಮಾಚಿದ್ದಳು. ಏಕೆ ತಿನ್ನಿಸುತ್ತಿದ್ದರು ಎಂಬುದನ್ನು ಆಕೆ ಹೇಳಿರಲಿಲ್ಲ. ಭಯಾನಕ ಬಡತನ, ಹಸಿವುಗಳಿಂದ ಕಂಗೆಟ್ಟುಹೋಗಿದ್ದ ಭಾರತದ ಹೆಣ್ಣುಮಕ್ಕಳು ಬ್ರಿಟಿಷರ ಕಾರ್ಖಾನೆಗಳಲ್ಲಿ ಅನಿವಾರ್ಯವಾಗಿ ದುಡಿಯಲು ಹೋಗುತ್ತಿದ್ದರು. ದುಡಿಯಲು ಹೋಗದಿದ್ದರೆ ಆ ಮಕ್ಕಳ ಸಹಿತ ಎಲ್ಲರೂ ಉಪವಾಸದಿಂದ ಸತ್ತುಹೋಗಬೇಕಾಗಿತ್ತು! ಬ್ರಿಟಿಷರೇ ಈ ಅಫೀಮನ್ನು ಉತ್ಪಾದಿಸುತ್ತಿದ್ದರು, ಏಳು ಸಾವಿರ ಅಂಗಡಿಗಳ ಮೂಲಕ ದೇಶಾದ್ಯಂತ ಮಾರಾಟ ಮಾಡುತ್ತಿದ್ದರು ಎಂಬುದನ್ನೂ ಈ ದುಷ್ಟ ಮಹಿಳೆ ಮೇಯೋ ಮುಚ್ಚಿಟ್ಟಿದ್ದಳು. ಆರ್ಯಸಮಾಜ, ಬ್ರಹ್ಮಸಮಾಜ, ಮತ್ತಿತರರು ಪ್ರತಿಭಟಿಸುತ್ತಿದ್ದರೂ, ಬ್ರಿಟಿಷರು ಈ ಮಾರಾಟವನ್ನು ನಿಲ್ಲಿಸಲಿಲ್ಲ.
ಬ್ರಿಟಿಷರು ಎರಡನೆಯ ಮಹಾಯುದ್ಧದ ಅವಧಿಯಲ್ಲಿ 1943-1944ರ ಅವಧಿಯಲ್ಲಿ ಬಂಗಾಳವನ್ನು, ಬಂಗಾಳದ ಆಹಾರ ದಾಸ್ತಾನನ್ನು ಅದು ಹೇಗೆ ಬರಿದು ಮಾಡಿದರೆಂದರೆ, ಕೋಲ್ಕತ್ತಾದ ರಸ್ತೆ ರಸ್ತೆಗಳಲ್ಲಿ ಲಕ್ಷಾಂತರ ಜನ ಹಸಿವಿನಿಂದ ಕಂಗೆಟ್ಟು ಸತ್ತುಹೋದರು. ಹೀಗೆ ಸತ್ತವರ ಸಂಖ್ಯೆ ಒಂದಲ್ಲಾ ಎರಡಲ್ಲ ನಲವತ್ತು ಲಕ್ಷ. ಈಗ ನಂಬಲೂ ಕಷ್ಟವಾಗುತ್ತದೆ. ಅಂದಿನ ಭಾರತದ ಜನಸಂಖ್ಯೆಯನ್ನು ಕಣ್ಮುಂದೆ ತಂದುಕೊಂಡರೆ, ಇನ್ನಷ್ಟು ಸಂಕಟವಾಗುತ್ತದೆ. ಮಳೆ-ಬೆಳೆ ಚೆನ್ನಾಗಿ ಆಗಿದ್ದರೂ ಈ ದವಸಧಾನ್ಯಗಳನ್ನು ಬ್ರಿಟಿಷರು ತಮ್ಮ ಯುದ್ಧಕಾಲದ ದಾಸ್ತಾನು ಮಾಡಿಕೊಳ್ಳಲು ಬಳಸಿದರು.
ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ವಿಷಸರ್ಪಗಳನ್ನು ಓಲೈಸುವ ರಾಜಕಾರಣ ಇನ್ನು ಬೇಕಿಲ್ಲ
ಬ್ರಿಟಿಷ್ ರಾಜ-ರಾಣಿಯರು ಯಾರೂ ಈವರೆಗೆ ಈ ಎಲ್ಲ ದುಷ್ಕಾರ್ಯಗಳ ಬಗೆಗೆ ಪಶ್ಚಾತ್ತಾಪ ಪಡುವುದಿರಲಿ, ತೋರಿಕೆಯ ವಿಷಾದದ ಹೇಳಿಕೆಯನ್ನೂ ನೀಡಿಲ್ಲ. ನಿರಪರಾಧಿಗಳಾದ, ನಿಶ್ಶಸ್ತ್ರರಾದ ಜನರ ಮೇಲೆ ಗುಂಡಿನ ಮಳೆಗರೆದು, ಸಾವಿರಾರು ಸಾವುಗಳಿಗೆ ಕಾರಣವಾದ ಜಲಿಯನ್ ವಾಲಾ ಬಾಗ್ ದುರಂತದ ಬಗೆಗೂ ಅವರಿಗೆ ವಿಷಾದವೆನ್ನಿಸಿಲ್ಲ!
ಈ ಸಂದರ್ಭದಲ್ಲಿ ನಮ್ಮ ಮೈಸೂರು ಒಡೆಯರ್ ವಂಶದ ಮಹಾರಾಜರುಗಳ ಸ್ಮರಣೆ ತುಂಬ ಅರ್ಥಪೂರ್ಣವಾದೀತು. 19ನೆಯ ಶತಮಾನದ ಕೊನೆಯ ಭಾಗದ ಬರಗಾಲದಲ್ಲಿ ಮೈಸೂರು ಪ್ರಾಂತವೂ ಆಪತ್ತಿಗೆ ಸಿಲುಕಿತ್ತು. ಆಗ ಮಹಾರಾಜರಾಗಿದ್ದವರು ಚಾಮರಾಜೇಂದ್ರ ಒಡೆಯರ್ (1863 -1894). ಅವರು ಇದ್ದುದೇ ಬರಿಯ 31 ವರ್ಷ. ಅದೆಂತಹ ಪ್ರಜಾಪ್ರೇಮ, ಅದೆಂತಹ ಸಮಯಾವಧಾನ, ಆಡಳಿತ. ಬರಗಾಲದಲ್ಲಿ ಅವರು ಬ್ರಿಟಿಷರಿಂದಲೇ ಸಾಲ ಮಾಡಿ ಜನರಿಗೆ ಗಂಜಿಕೇಂದ್ರಗಳನ್ನು ಸ್ಥಾಪಿಸಿ ಕೋಟಿಕೋಟಿ ಜನರನ್ನು ಉಳಿಸಿದರು. ಹೀಗಿದ್ದೂ ಸಂಸ್ಥಾನದ 30 ಶತಾಂಶ ಜನರು ಸತ್ತುಹೋದರೆಂದರೆ, ಅಂದಿನ ಸಂದರ್ಭ ಹೇಗಿದ್ದಿರಬಹುದು, ಭಾರತದ ಉಳಿದ ಪ್ರಾಂತಗಳ ದುಃಸ್ಥಿತಿ ಎಂತಹುದಿರಬಹುದು; ಊಹಿಸುವುದೂ ಕಷ್ಟವಾಗುತ್ತದೆ.
ಚಾಮರಾಜೇಂದ್ರರ ಮಗ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ವಿಷಯವನ್ನು ಎಷ್ಟು ಹೇಳಿದರೂ ಸಾಲದು. ಇನ್ನು 1940ರಲ್ಲಿ ಜಯಚಾಮರಾಜೇಂದ್ರರ ಪಟ್ಟಾಭಿಷೇಕ ನಡೆದಾಗ ಎರಡನೆಯ ಮಹಾಯುದ್ಧದ ದುರ್ಭರ ಸ್ಥಿತಿ. ಅನಂತರದ್ದು ದೇಶವಿಭಜನೆ, ಸ್ವಾತಂತ್ರ್ಯಪ್ರಾಪ್ತಿಗಳ ಸಂಕ್ರಮಣ ಕಾಲ. ಜಯಚಾಮರಾಜರು ತಮ್ಮ ರಾಜ್ಯವನ್ನೂ ಕಳೆದುಕೊಳ್ಳಬೇಕಾಯಿತು. ಆದರೇನು, ಅವರದ್ದು ಅತ್ಯಪೂರ್ವವಾದ ಸುಸಂಸ್ಕೃತವಾದ ಮಹಾನ್ ಪರಂಪರೆ. ಈ ಎಲ್ಲ ಘಟನಾವಳಿಯ ಐತಿಹಾಸಿಕ ಅವಧಿಯಲ್ಲಿಯೂ ಅವರು 1947ರಲ್ಲಿ ವೇದಸಂಪುಟಗಳ ಪ್ರಕಟಣೆಗೆ ಧನಸಹಾಯ ಮಾಡಿದರು, ಬೆಂಬಲವಾಗಿ ನಿಂತರು. ಆಗ ಅವರಿಗೆ ಬರಿಯ 28 ವರ್ಷ. ಡೆಮೈ ಚತುರ್ದಳಾಕಾರದ ಮೂವತ್ತು ಸಾವಿರಕ್ಕೂ ಹೆಚ್ಚು ಪುಟಗಳ, ಭಾರೀ ಗಾತ್ರದ 36 “ವೇದರತ್ನಮಾಲಾ” ಸಂಪುಟಗಳನ್ನು ನೋಡುವಾಗೆಲ್ಲಾ ಎದೆ ತುಂಬಿ ಬರುತ್ತದೆ. ಜನ ಹೆಮ್ಮೆ ಪಡುವ ರಾಜಪರಂಪರೆ ಎಂದರೆ ಹೀಗಿರಬೇಕು, ಹೀಗಿರುತ್ತದೆ.
ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ಸ್ವಾತಂತ್ರ್ಯ ಸೇನಾನಿಗಳ ರುಧಿರಾಭಿಷೇಕ