Site icon Vistara News

Ambedkar Jayanti: ಸಾಮಾಜಿಕ ಅಸಮತೆಯನ್ನು ಕಾರ್ಲ್‌ ಮಾರ್ಕ್ಸ್‌ಗಿಂತ ವಿಭಿನ್ನವಾಗಿ ನೋಡಿದವರು ಡಾ. ಬಿ.ಆರ್‌. ಅಂಬೇಡ್ಕರ್

ambedkar jayanti Ambedkar seen social problems in different perspective than marx

#image_title

ಸುಮಂತ್‌ ಎಸ್‌., ಬೆಂಗಳೂರು
19ನೇ ಶತಮಾನ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಕಾಲಘಟ್ಟ. ಅದು ಬ್ರಿಟಿಷ್ ವಸಾಹತುಶಾಹಿ ಉತ್ತುಂಗದಲ್ಲಿದ್ದಂತಹ ಕಾಲ ಅದು. ಮತ್ತು ಭಾರತೀಯ ಸಮಾಜ ಜಾತಿ ಪದ್ಧತಿ, ಅಸ್ಪೃಶ್ಯತೆ, ಮುಂತಾದ ಸಾಮಾಜಿಕ ಪಿಡುಗುಗಳ ಆಗರವಾಗಿತ್ತು. ಇಂತಹ ಸಂದರ್ಭದಲ್ಲಿ ಅನೇಕ  ಉದ್ಯಮವ್ಯಕ್ತಿಗಳು,  ಪ್ರತಿಭಾನ್ವಿತ ನಾಯಕರು, ರಾಜಕಾರಣಿಗಳು, ಮುತ್ಸದಿಗಳು, ಮತ್ತು ದೇಶಪ್ರೇಮಿಗಳು ದೇಶದ ದಾಸ್ಯ ವಿಮೋಚನೆಗೆ  ಮತ್ತು ಪುನಶ್ಚೇತನಕ್ಕೆ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಚಿರಸ್ಮರಣೀಯರಾಗಿದ್ದಾರೆ. ಇಂತಹ ಚಿರಸ್ಮರಣೀಯರ ಪಟ್ಟಿಯಲ್ಲಿ ಅಗ್ರಗಣ್ಯರು ಡಾ. ಬಿ ಆರ್ ಅಂಬೇಡ್ಕರ್.

ಅಂಬೇಡ್ಕರವರದ್ದು ಆದರ್ಶ ಮತ್ತು ಪ್ರತಿಭಾನ್ವಿತ ವ್ಯಕ್ತಿತ್ವ.  ಅವರು ಕೇವಲ ಸಮಾಜ ಸುಧಾರಕ,  ರಾಜಕೀಯ ವಿಜ್ಞಾನಿ, ಸಂವಿಧಾನ ಶಿಲ್ಪಿ ಮಾತ್ರ ಅಲ್ಲದೆ  ಅವರು ಒಬ್ಬ  ಶ್ರೇಷ್ಠ ಆರ್ಥಿಕತಜ್ಞರು ಆಗಿದ್ದರು.  ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಕ್ಕೆ ಎಷ್ಟು ಕೊಡುಗೆಯನ್ನು ಕೊಟ್ಟಿದ್ದಾರೋ ಅದರ ಎರಡರಷ್ಟು ಕೊಡುಗೆಯನ್ನು ಅಂಬೇಡ್ಕರ್ ಅವರು ಆರ್ಥಿಕ ಕ್ಷೇತ್ರಕ್ಕೆ ನೀಡಿದ್ದಾರೆ ಎಂಬುದನ್ನು ಇಂದು ನಾವು ಮರೆತಿದ್ದೇವೆ.

ಅಂಬೇಡ್ಕರ್ ಮೂಲಭೂತವಾಗಿ ಒಬ್ಬ ಅರ್ಥಶಾಸ್ತ್ರಜ್ಞರಾಗಿದ್ದರು. 1917ರಲ್ಲಿ ಕೊಲಂಬಿಯಾ ಯೂನಿವರ್ಸಿಟಿಯಿಂದ  ಎಕನಾಮಿಕ್ಸ್ ವಿಷಯದಲ್ಲಿ ಪಿ ಎಚ್ ಡಿ ಪಡೆದುಕೊಂಡರು ಮತ್ತು 1921ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ Dsc (ಡಾಕ್ಟರ್ ಆಫ್ ಸೈನ್ಸ್ ) ಡಿಗ್ರಿಯನ್ನು ಪಡೆದುಕೊಂಡರು.  ವಿತ್ತೀಯ ಅರ್ಥಶಾಸ್ತ್ರ, ಕೃಷಿ ಅರ್ಥಶಾಸ್ತ್ರ ಮತ್ತು  ಸಾರ್ವಜನಿಕ ಹಣಕಾಸು ಅವರ ಆಸಕ್ತಿ ಅಧ್ಯಯನ ಕ್ಷೇತ್ರಗಳಾಗಿದ್ದವು. ರುಪಿ ಮ್ಯಾನೇಜ್ಮೆಂಟ್ ಮತ್ತು ಬ್ರಿಟಿಷ್ ಕಾಲದ ಕೇಂದ್ರ ಹಾಗೂ  ಪ್ರಾಂತಗಳ  ನಡುವಣ ಆರ್ಥಿಕ ಸಂಬಂಧಗಳ ಕುರಿತು ಆಳವಾದ ಪಾಂಡಿತ್ಯವಿದ್ದ  ಕೆಲವೇ ಕೆಲವು ವ್ಯಕ್ತಿಗಳಲ್ಲಿ ಅಂಬೇಡ್ಕರ್ ಒಬ್ಬರಾಗಿದ್ದರು.

ಅವರು ತಮ್ಮ ಡಿಎಸ್‌ಸಿ ಡೆಸರ್ಟೇಶನ್ ಆದ ದಿ ಪ್ರಾಬ್ಲಮ್ ಆಫ್ ರುಪೀ: ಇಟ್ಸ್ ಆರಿಜಿನ್ಸ್ ಅಂಡ್ ಇಟ್ಸ್  ಸೊಲ್ಯೂಷನ್ (The problem of the Rupee: its Origins and its solutions) ನಲ್ಲಿ ಭಾರತೀಯ ಕರೆನ್ಸಿಯ ಉಗಮ  ಮತ್ತು ಬೆಳವಣಿಗೆಯ  ಇತಿಹಾಸವನ್ನು ಚರ್ಚಿಸುತ್ತಾರೆ.  ನೀತಿ ನಿರೂಪಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ ವಿಷಯ ರುಪಿಯ ಸ್ಥಿರತೆಗೆ ಸುವರ್ಣ ಪರಿಮಿತಿ (Gold Standard) ಸೂಕ್ತವೋ  ಅಥವಾ  ಸುವರ್ಣ ವಿನಿಮಯ ಪರಿಮಿತಿ( Gold Exchange Standard)  ಸೂಕ್ತವೋ ಎಂಬುವಂತದ್ದು. ಅಂಬೇಡ್ಕರವರ ಪ್ರಕಾರ  ಸುವರ್ಣ ವಿನಿಮಯ ಪರಿಮಿತಿ ಶುದ್ಧ ಸುವರ್ಣ ಪ್ರಮಿತಿಯ ಸ್ವಾಭಾವಿಕ ಸ್ಥಿರತೆಯನ್ನು ಹೊಂದಿಲ್ಲ ಎಂಬುವಂತದ್ದು.

ಅವರು ಹೇಳುವ ಹಾಗೆ “ಶುದ್ಧ ಸುವರ್ಣ ಪರಿಮಿತಿಯಲ್ಲಿ ಚಲಾವಣೆಯಲ್ಲಿರುವ ಬಂಗಾರವು ದೊಡ್ಡ ಪ್ರಮಾಣದಾಗಿದ್ದು ,ಈ ಸಂಗ್ರಹಕ್ಕೆ ಹೋಲಿಸಿದಲ್ಲಿ ಹೊಸದಾಗಿ ಚಲಾವಣೆಗೆ ತಂದ ಹೆಚ್ಚುವರಿ ಬಂಗಾರ ಅತ್ಯಲ್ಪ ಪ್ರಮಾಣದ್ದಾಗಿರುತ್ತದೆ. ಈ ಕಾರಣದಿಂದಲೇ ಶುದ್ಧ ಸುವರ್ಣ ಪರಿಮಿತಿಯು ಸ್ಥಿರತೆಯನ್ನು ಒದಗಿಸುತ್ತದೆ.  ಆದರೆ ಸುವರ್ಣ ವಿನಿಮಯ ಪರಿಮಿತಿಯಲ್ಲಿ ಹೊಸದಾಗಿ ಚಲಾವಣೆಗೆ ಬರುವ ಹೆಚ್ಚಳವು ಹಣವನ್ನು ಚಲಾವಣೆಗೆ ತರುವ ಅಧಿಕಾರಿಯ ಇಚ್ಛೆಯನ್ನು ಅವಲಂಬಿಸಿದ್ದು,  ಈ ಹೆಚ್ಚಳದ ಪ್ರಮಾಣವು ಪರಿಮಿತಿಯ ಸ್ಥಿರತೆಗೆ ಗಣನೀಯ ಧಕ್ಕೆಯನ್ನು ಉಂಟುಮಾಡಬಹುದು”  ಎಂಬುದು ಅಂಬೇಡ್ಕರರ ಅಭಿಪ್ರಾಯವಾಗಿತ್ತು.

 ಈ ಪುಸ್ತಕದಲ್ಲಿ ಚರ್ಚಿಸಿರುವ ಹಲವಾರು ವಿಷಯಗಳನ್ನು, 1926ರಲ್ಲಿ ಭಾರತದ ಹಣಕಾಸು ವ್ಯವಸ್ಥೆಯ ಬಗ್ಗೆ ಬ್ರಿಟನ್ ಸಾಮ್ರಾಟರಿಂದ ನಿಯೋಜಿಸಲ್ಪಟ್ಟ  ಇಲ್ಟನ್  ಯಂಗ್ ಆಯೋಗದ ಮುಂದೆ  ಪ್ರಚುರ ಪಡಿಸುತ್ತಾರೆ.  ಆ ವಿಚಾರಗಳ ಆಧಾರದ ಮೇಲೆ 1935ರ ಏಪ್ರಿಲ್ 1ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಯಯಿತು ಎಂಬುದು ತುಂಬಾ ಕುತೂಹಲಕಾರಿಯಾದ ವಿಷಯ.

ಅವರ Ph.D. ಡೆಸರ್ಟೇಶನ್ ದಿ ಎವೊಲ್ಯೂಷನ್ ಆಫ್ ಪ್ರಾವಿನ್ಶಿಯಲ್ ಫೈನಾನ್ಸ್ ಇನ್ ಬ್ರಿಟಿಷ್ ಇಂಡಿಯಾ( The evolution of provincial Finance in British India) ಸಾರ್ವಜನಿಕ ಹಣಕಾಸಿನ ಅಧ್ಯಯನ ಕ್ಷೇತ್ರಕ್ಕೆ ಅವರು ಕೊಟ್ಟಿರುವ ಮೇರು ಕೊಡುಗೆ. ಇಲ್ಲಿ ಅಂಬೇಡ್ಕರವರು 1833 ರಿಂದ 1871ರವರೆಗಿನ ಕೇಂದ್ರ ಮತ್ತು ಪ್ರಾಂತ್ಯಗಳ ನಡುವಣ ಹಣಕಾಸು ಸಂಬಂಧಗಳ ಐತಿಹಾಸಿಕ ಅಧ್ಯಯನವನ್ನು ಕೈಗೊಂಡು ಅದರಲ್ಲಿನ ನ್ಯೂನತೆಗಳನ್ನು ಬಹಿರಂಗಪಡಿಸಿದ್ದಾರೆ.

ಕೇಂದ್ರೀಕೃತ ಅರ್ಥ ವ್ಯವಸ್ಥೆಯಲ್ಲಿ ಪ್ರಾಂತ್ಯಗಳ ಜವಾಬ್ದಾರಿ ಕೇವಲ ಯಾವ ಕ್ಷೇತ್ರಕ್ಕೆ ಎಷ್ಟು ಹಣ ಬೇಕು ಎಂಬುದನ್ನು  ಕೇಂದ್ರದ ಮುಂದಿಡುವುದಾಗಿತ್ತು.  ಪ್ರತಿ ವರ್ಷ ತಾವು ನಮೂದಿಸಿದ ವೆಚ್ಚ ಕೇಂದ್ರ ಕೊಟ್ಟು ತೀರ ಬೇಕಾಗಿತ್ತು. ಈ ವ್ಯವಸ್ಥೆ ಭಾರಿ ದುಂದು ವೆಚ್ಚಕ್ಕೆ ಎಡೆ ಮಾಡಿ ಕೊಟ್ಟಿತ್ತು. ಇದರ ನೇರ ಹೊಡೆತ ಬಿದ್ದಿದ್ದು ಸಾಮಾನ್ಯ ಜನರ ಮೇಲೆ ಏಕೆಂದರೆ ಪ್ರಾಂತ್ಯಗಳ ಬೇಡಿಕೆಯನ್ನು ಪೂರೈಸಲು ಕೇಂದ್ರ ದಮನಕಾರಿ ತೆರಿಗೆ ಪದ್ಧತಿಯನ್ನು ಜಾರಿಗೆ ತರುವುದು ಅನಿವಾರ್ಯವಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಪ್ರಾಂತ್ಯಗಳಿಗೆ  ತಮ್ಮ ವೆಚ್ಚಕ್ಕೆ ಬೇಕಾದ ಹಣವನ್ನು ತಾವೇ ಹೊಂದಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕೊಡಬೇಕೆಂದು ಅಂಬೇಡ್ಕರ್ ಅವರು ಅಂದಿನ  ವಸಾಹತು ಶಾಹಿ ಸರ್ಕಾರದ ಮುಂದೆ ವಾದಿಸಿದರು.

ಮಾರ್ಕ್ಸ್ ಮತ್ತು ಅಂಬೇಡ್ಕರ್
ಆ ಕಾಲದಲ್ಲಿ ಇಡಿಯ ಜಗತ್ತನ್ನು ವ್ಯಾಪಿಸಿದ ಆರ್ಥಿಕ ಚಿಂತನಾಕ್ರಮಗಳಲ್ಲಿ ಅತ್ಯಂತ ಪ್ರಮುಖವಾದದ್ದು ಮಾರ್ಕ್ಸ್‌ವಾದ.  ಮಾರ್ಕ್ಸ್ ವಾದವನ್ನು ಅಂಬೇಡ್ಕರ್ ಸಾರಾಸಗಟ್ಟಾಗಿ ತಿರಸ್ಕರಿಸದಿದ್ದರೂ ಅವರ ಚಿಂತನಾ ಕ್ರಮಕ್ಕೂ ಮಾರ್ಕ್ಸ್‌ನ ಚಿಂತನಾಕ್ರಮಕ್ಕೂ ಮೂಲಭೂತ ವ್ಯತ್ಯಾಸಗಳಿದ್ದವು ಎಂಬುದು ಅವರ “ಬುದ್ಧ ಮತ್ತು ಕಾಲ್ ಮಾರ್ಕ್ಸ್ ನ”  ಪ್ರಬಂಧದಿಂದ ಸ್ಪಷ್ಟವಾಗುತ್ತದೆ. ಅಂಬೇಡ್ಕರ್  ಮಾರ್ಕ್ಸ್ ನ ಮೂಲ  ವಾದ  “ಮೇಲ್ವರ್ಗದವರು ಆರ್ಥಿಕವಾಗಿ ಹಿಂದುಳಿದ ಕೆಳವರ್ಗದವರನ್ನು ಶೋಷಿಸುತ್ತಾರೆ ಎಂಬುದನ್ನ ಒಪ್ಪಿದ್ದರು.” ಆದರೆ ಅವರು ಶೋಷಣೆಯನ್ನ ತುಂಬಾ ವಿಶಾಲವಾದ ದೃಷ್ಟಿಕೋನದಿಂದ ನೋಡುತ್ತಾರೆ. ಅಂಬೇಡ್ಕರ ಪ್ರಕಾರ ಒಬ್ಬ ಮನುಷ್ಯ ಆರ್ಥಿಕವಾಗಿ  ಶೋಷಣೆ ಒಳಗಾಗುವುದಲ್ಲದೆ  ರಾಜಕೀಯ ಹಾಗೂ ಸಾಮಾಜಿಕ ಶೋಷಣೆಗೂ ಒಳಗಾಗಿರುತ್ತಾನೆ. ಆದ್ಧರಿಂದ ಆರ್ಥಿಕ ಶೋಷಣೆಯಿಂದ ಮುಕ್ತಿ ಎಷ್ಟು ಮುಖ್ಯವೋ ಸಾಮಾಜಿಕ ಶೋಷಣೆಯಿಂದ ಮುಕ್ತಿಯೂ ಅಷ್ಟೇ ಮುಖ್ಯ. ಹಾಗೂ ಒಬ್ಬ ಪ್ರಜಾಪ್ರಭುತ್ವವಾದಿಯಾಗಿದ್ದ ಅಂಬೇಡ್ಕರ್ ಮಾರ್ಕ್ಸ್ ನ “ಶ್ರಮಜೀವಿ ಸರ್ವಾಧಿಕಾರದ” ಪರಿಕಲ್ಪನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಸಾಂವಿಧಾನಿಕ ಚಿಂತನೆಗಳಲ್ಲಿ  ಅಚಲವಾದ ನಂಬಿಕೆ ಇದ್ದಂತಹ ಅಂಬೇಡ್ಕರರಿಗೆ  ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ರಾಜ್ಯದ’ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಸಾಮಾನ್ಯ ಜನರನ್ನು ಬಂಡವಾಳಶಾಹಿಗಳ  ಶೋಷಣೆಯಿಂದ  ತಪ್ಪಿಸಲು  ಪ್ರಮುಖ ಕೈಗಾರಿಕೆಗಳು ಮತ್ತು ಶಿಕ್ಷಣವು ಸರ್ಕಾರದ ಸ್ವಾಮ್ಯದಲ್ಲಿರಬೇಕು ಎಂಬುದು ಅಂಬೇಡ್ಕರರವರ ಪ್ರಮುಖ ವಾದವಾಗಿತ್ತು.

 ಒಟ್ಟಾರೆಯಾಗಿ ಅಂಬೇಡ್ಕರ್ ಒಬ್ಬ ಶ್ರೇಷ್ಠ ಆರ್ಥಿಕ  ತಜ್ಞರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.  ಅವರ ಎಲ್ಲಾ ಆರ್ಥಿಕ ಚಿಂತನೆಗಳು  ಇಂದಿಗೆ ಪ್ರಸ್ತುತವಾಗದಿರಬಹುದು ಆದರೆ ಅವರ ಚಿಂತನೆಗಳ ಆಧಾರದ ಮೇಲೆ ನಿರ್ಮಾಣಗೊಂಡಿರುವ ಆರ್ಥಿಕ ಸಂಸ್ಥೆಗಳಾದಂತಹ ಆರ್. ಬಿ. ಐ. ಇಂದಿಗೂ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿವೆ.  ಯಾವುದೇ ಸಿದ್ಧಾಂತಗಳಿಗೆ,ಅದು ಬಂಡವಾಳಶಾಹಿ ಆಗಿರಬಹುದು, ಸಮಾಜವಾದ ಆಗಿರಬಹುದು, ಕಮ್ಯುನಿಸಂ ಆಗಿರಬಹುದು, ತಮ್ಮನ್ನು ತಾವು ಸೀಮಿತಗಳಿಸಿಕೊಳ್ಳದೆ ಕೇವಲ ಕೂಲಂಕುಶ ಅಧ್ಯಯನ ಮತ್ತು ತರ್ಕಬದ್ಧತೆಯ ಆಧಾರದ ಮೇಲೆ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸುತ್ತಿದ್ದದ್ದು ಅವರಿಗೆ ಇದ್ದ ಜನಪರ ಕಾಳಜಿ ಮತ್ತು ಸಾಮಾಜಿಕ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.  ಇಂತಹ ದ್ರಷ್ಟಾರನನ್ನು ಕೆಲವರು ಒಂದು ಜಾತಿಗೆ ಸೀಮಿತಗೊಳಿಸಿರುವುದು ಆಧುನಿಕ ಭಾರತದ ಪ್ರಮುಖ ವಿಪರ್ಯಾಸಗಳಲ್ಲಿ ಒಂದು.

(ಲೇಖಕರು: ಇತಿಹಾಸ ಶಿಕ್ಷಕ)

ಇದನ್ನೂ ಓದಿ: Ambedkar Jayanti: 18 ಸಾವಿರ ನೋಟ್‌ಬುಕ್‌ಗಳಿಂದ ಸಿದ್ಧವಾಯ್ತು ಅಂಬೇಡ್ಕರ್‌ ಚಿತ್ರ

Exit mobile version