: ಡಾ. ಡಿ.ಸಿ. ರಾಮಚಂದ್ರ
ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ… ದೇಶ ಕಂಡ ಮಹಾನ್ ಚೇತನ ಇವರು. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ. ಇಂತಹ ಮೇರು ವ್ಯಕ್ತಿತ್ವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರದು.
ಈಗಿನ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಜನಿಸಿದ ಡಾ. ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ಬರೀ ಕಷ್ಟವನ್ನೇ ಕಂಡಿದ್ದವರು. ಅಸ್ಪೃಶ್ಯತೆ ಎಂಬ ಭೂತ ಬಲವಾಗಿ ಬೇರೂರಿದ್ದ ಆ ಕಾಲದಲ್ಲಿ ಅಂಬೇಡ್ಕರ್ ತುಂಬಾ ನೋವುಂಡಿದ್ದರು. ಇದೇ ನೋವಿನ ಜೀವನ ಬಳಿಕ ಅವರನ್ನು ಒಬ್ಬ ಹೋರಾಟಗಾರರನ್ನಾಗಿ ರೂಪಿಸಿತ್ತು. ಸಾಮಾಜಿಕ ಸಮಾನತೆಯ ಕನಸು ಕಾಣುವಂತೆ ಮಾಡಿತ್ತು. ಹೀಗೆ ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರಾದರು, ಅದೆಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾದರು.
ಸಂವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ. ಈ ಪವಿತ್ರ ಗ್ರಂಥದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ಅಂಬೇಡ್ಕರ್ ಜೀವನ.
ಬಾಬಾ ಸಾಹೇಬರ ಬಾಲ್ಯ
ಭೀಮರಾವ್ ರಾಮ್‍ಜೀ ಅಂಬೇಡ್ಕರ್ ಏಪ್ರಿಲ್ 14, 1891ರಂದು ರಾಮ್‍ಜಿ ಮತ್ತು ಭೀಮಬಾಯಿ ದಂಪತಿಗಳ 14ನೇ ಮಗನಾಗಿ ಜನಿಸಿದರು. ಅಂಬೇಡ್ಕರರ ಮೊದಲ ಹೆಸರು ಭೀಮರಾವ್ ಆಗಿತ್ತು. ಪ್ರಾಥಮಿಕ ಶಿಕ್ಷಣವು ನೋವು ಮತ್ತು ಅವಮಾನಗಳಿಂದ ಕೂಡಿತ್ತು. ಪ್ರಾಥಮಿಕ ಶಿಕ್ಷಣವನ್ನು ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢಶಾಲೆಯಲ್ಲಿ ಅನೇಕ ಕಹಿ ಘಟನೆಗಳ ಮಧ್ಯಯೇ 1907ರಲ್ಲಿ 10ನೇ ತರಗತಿ ಪಾಸಾಗುತ್ತಾರೆ. ಮುಂದಿನ ಅಭ್ಯಾಸಕ್ಕಾಗಿ ಎಲ್ಫಿನ್‌ಸ್ಟನ್ ಸೇರಿದ ಅಂಬೇಡ್ಕರ್ 1912ರಲ್ಲಿ ಬಿಎ ಮುಗಿಸುತ್ತಾರೆ. ನಂತರ 1913ರಲ್ಲಿ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗೂ ಎಂ.ಎ. ಪಿ.ಎಚ್.ಡಿ. ಪದವಿ ಪಡೆದ ನಂತರ ಉನ್ನತ ವ್ಯಾಸಂಗವನ್ನು ಇಂಗ್ಲೆಂಡಿನಲ್ಲಿ ಮುಗಿಸಿ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಭಾರತಕ್ಕೆ ಬಂದು ವಕೀಲ ವೃತ್ತಿಯನ್ನು ಪ್ರಾರಂಭಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಇವರನ್ನು 1927ರಲ್ಲಿ ಮುಂಬಯಿಯ ಶಾಸಕಾಂಗ ಸದಸ್ಯರಾಗಿ ಬ್ರಿಟನ್ ಸರ್ಕಾರ ನೇಮಿಸುತ್ತದೆ. ಈ ಮೂಲಕ ರಾಜಕೀಯ ಜೀವನಕ್ಕೂ ಕಾಲಿಡುತ್ತಾರೆ.
ಹೋರಾಟದ ಹಾದಿ
1927ರಿಂದ 1932ರ ವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು, ಮತದಾನದ ಹಕ್ಕು ಇತ್ಯಾದಿಗಳಿಗಾಗಿ ಹೋರಾಟ ಮಾಡುವ ಮೂಲಕ ಸಮಾನ ಸಮಾಜ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುತ್ತಾರೆ. ದೇಶದ ಮೊದಲ ಕಾನೂನು ಮಂತ್ರಿಯಾಗಿ ಅನೇಕ ಪ್ರಗತಿಪರ ಕಾರ್ಯಗಳನ್ನು ಕೈಗೊಂಡು ಅದರಲ್ಲಿಯೂ ವಿಶೇಷವಾಗಿ ರಾಜಕೀಯ ಹಾಗೂ ಕಾನೂನು ರಂಗದಲ್ಲೂ ಅತ್ಯುತ್ತಮ ಕೆಲಸ ಮಾಡಿ ದೇಶದ ಜನಸಾಮಾನ್ಯರ ಪ್ರೀತಿ ಸ್ನೇಹ ಸಂಪಾದನೆ ಮಾಡಿದರು.
ಸಂವಿಧಾನದ ಅರ್ಪಣೆ
ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಗಾಧ ಜ್ಞಾನಿ, ಇವರು ರಚಿಸಿದ ಸಂವಿಧಾನ ಭಾರತಕ್ಕಲ್ಲದೇ ವಿಶ್ವಕ್ಕೆ ಮಾದರಿ, ಪ್ರೇರಣೆ ಹಾಗೂ ಪ್ರಜಾಪ್ರಭುತ್ವವನ್ನು ಅರ್ಥೈಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಭಾರತ ಸಂವಿಧಾನ ವಿಶ್ವ ಸರ್ವ ಶ್ರೇಷ್ಠ ಮಹಾಸಂವಿಧಾನ. ಇಂದು ರಾಷ್ಟ್ರಪತಿಯಿಂದ ಹಿಡಿದು ಗ್ರಾಮ ಪಂಚಾಯಿತಿ ಸದಸ್ಯರವರೆಗೆ ಆಡಳಿತ ಸುಗಮವಾಗಿ ನಡೆಯಲು ಕಾರಣ ನಮ್ಮ ಸಂವಿಧಾನ.
ಪುಸ್ತಕ ಪ್ರೀತಿ
ಅಂಬೇಡ್ಕರ್ ಇಂಗ್ಲೆಂಡಿನಿಂದ ಹಿಂದಿರುಗುವಾಗ 32 ಪೆಟ್ಟಿಗೆ ಪುಸ್ತಕಗಳನ್ನು ತಂದರು. ಜತೆಗೆ ಎಲ್ಲೇ ಹೋದರೂ ಪುಸ್ತಕ ಖರೀದಿಸುವ ಹವ್ಯಾಸ ರೂಢಿಸಿಕೊಂಡಿದ್ದರು. ಮಧ್ಯರಾತ್ರಿವರೆಗೂ ಪುಸ್ತಕ ಓದುತ್ತಿದ್ದರು. ಅವರ ಪುಸ್ತಕ ಪ್ರೇಮ ಇಂದಿನ ಜನಗಳಿಗೆ ಮಾದರಿಯಾಗಬೇಕಲ್ಲವೇ. ಪ್ರಾಣಿಗಳನ್ನು ಸಾಕುವುದರಲ್ಲಿ ಅಂಬೇಡ್ಕರ್ ನಿಸ್ಸೀಮರು. ಜತೆಗೆ ಸಂಗೀತ ಕೇಳುವುದರಲ್ಲಿಯೂ ಆಸಕ್ತಿ ಇವರಿಗೆ. ಅವರಿಗಿದ್ದ ಜ್ಞಾನದ ಹಂಬಲ ಯುವ ಜನತೆಗೆ ಆಶಾಕಿರಣ ತತ್ವ ಮತ್ತು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ 12ನೇ ಶತಮಾನದ ಬಸವಾದಿ ಪ್ರಮಥರು ಹೇಳಿದ ಮಾತನ್ನು ಈ ಸಮಾಜದಲ್ಲಿ ಸಾಕಾರಗೊಳಿಸಿ ಸಮಾನತಾ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕೊಡುಗೆ ಅಪಾರ.
ಅವರ ಸಮ-ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳೂ ಅನುಕರಿಸುತ್ತಿವೆ ಹಾಗೂ ಅನುಸರಿಸುತ್ತಿವೆ. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆಯ ಭಾವನೆಗಳನ್ನು ಎತ್ತಿ ಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡಲ್ಲಿ ಅವರು ಕಂಡ ನಿಜವಾದ ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ನಾವೆಲ್ಲರೂ ನನಸಾಗಿಸಬಹುದು. ಅವರ ಜೀವನ ಚರಿತ್ರೆ ಹಾಗೂ ಅವರು ಸಾಗಿಸಿದ ಬದುಕು ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು. ಆ ದಿಸೆಯಲ್ಲಿ ಯುವಜನತೆ ಅಂಬೇಡ್ಕrರ ಹಾದಿಯಲ್ಲಿ ಒಂದಿಷ್ಟು ದೂರ ಕ್ರಮಿಸಿದರೆ ದೇಶಕ್ಕೆ, ವಿಶ್ವಕ್ಕೆ ಉತ್ತಮ ಅಲ್ಲದೆ ನಾವೆಲ್ಲರೂ ಸಮೃದ್ಧವಾಗಿ ಜೀವನ ನಡೆಸಲು ಸಾಧ್ಯ.