Site icon Vistara News

ವಿಶ್ಲೇಷಣೆ: ಜನಸಮೂಹದ ಆಯ್ಕೆ ಸ್ವಾತಂತ್ರ್ಯ ಕಸಿದ ಬೆಲೆಯೇರಿಕೆ

inflation

:: ಡಾ.ಜಿ.ವಿ ಜೋಶಿ

ಈ ದೊಡ್ಡ ದೇಶವನ್ನು ಅನೇಕ ವರ್ಷಗಳಿಂದ ಒಂದಿಲ್ಲೊಂದು ರೀತಿಯಲ್ಲಿ—ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ- ಕಾಡುತ್ತಿರುವ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆ, ಮತ್ತು ಬೆಲೆಯೇರಿಕೆಗಳಿಗೆ ಸರಿಯಾದ ಪರಿಹಾರವೇ ಇಲ್ಲವೆಂದು ಜನಸಾಮಾನ್ಯರು ಭಾವಿಸುವಂತಾಗಿ ಹೋಗಿದೆ. ಸರಕಾರಗಳು ಬಂದವು ಹೋದವು. ಈ ಸಮಸ್ಯೆಗಳು ಮಾತ್ರ ಬೇರೂರಿಕೊಂಡು ನಿಂತಿವೆ. ಈಗಂತೂ ಉಳಿದ ಸಮಸ್ಯೆಗಳನ್ನೂ ಉಲ್ಬಣಗೊಳಿಸುವ ವಿಶೇಷ ಶಕ್ತಿ ಹೊಂದಿದ ತೀವ್ರವಾದ ಸಮಸ್ಯೆಯೆಂದರೆ ಬೆಲೆಯೇರಿಕೆ. ಮಾರುಕಟ್ಟೆಯಲ್ಲಿ ಸರಕು-ಸೇವೆಗಳನ್ನು ಖರೀದಿಸುವಾಗ ಸ್ವತಂತ್ರ ಭಾರತದ ಜನಸಮೂಹ ಆಯ್ಕೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ಕಹಿ ಸತ್ಯ.

ಬೆಲೆಗಳು ಆಕಾಶವನ್ನು ಮುಟ್ಟಲು ಜಂಪ್ಮಾಡುತ್ತಿರುವಾಗ ವಿರೋಧಪಕ್ಷಗ ಳ ಸರಕಾರವಿರುವ ರಾಜ್ಯಗಳು ಕೇಂದ್ರ ಸರಕಾರದತ್ತ ಬೊಟ್ಟು ಮಾಡುವುದು ಒಂದು ವಾಡಿಕೆ. ಅದೇ ರಾಜ್ಯಗಳು ತಮ್ಮ ನೀತಿಗಳಿಂದ ಬೆಲೆಗಳು ಹಾರಲು ಪ್ರಾರಂಭಿಸಿದಾಗಲೂ ಕೇಂದ್ರವನ್ನೇ ಗುರಿಮಾಡುತ್ತಿರುವುದು ಅಪಾಯಕಾರಿ ವಿಪರ್ಯಾಸ. ಹಾಲಿನ ಮತ್ತು ಹಾಲಿನ ಉತ್ಪತ್ತಿಗಳ ದರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸರಕಾರದ ನೀತಿ ಕಾರಣ. ಇದೇ ಬಡವರ ಸರ್ಕಾರ ಬೆಲೆಯೇರಿಕೆಗೆ ಮೋದಿ ಸರಕಾರವೇ ಹೊಣೆ ಎಂದು ಡಂಗುರ ಸಾರುತ್ತಿದೆ.

ಬೆಲೆಯೇರಿಕೆ ನಮ್ಮ ಆರ್ಥಿಕತೆಯ ನರನಾಡಿಯನ್ನು ಅದುಮಿ ಹಾಕುತ್ತಿರುವುದಕ್ಕೆ ನಮ್ಮ ದಿನ ನಿತ್ತದ ಅನುಭವವೇ ಸಾಕ್ಷಿ.ಜನಸಾಮಾನ್ಯರ ಬದುಕು ಅಸಹನೀಯವಾತ್ತಿರುವುದನ್ನು ಕೇಂದ್ರವಾಗಲಿ, ರಾಜ್ಯವಾಗಲಿ ಅಲಕ್ಷಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಆಗುವ ಮಳೆಯ ಪ್ರಮಾಣಕ್ಕಿಂತ ತೀರ ಕಡಿಮೆ ಮಳೆ ಕಳೆದ ಜೂನ್ತಿಂಗಳಿನಲ್ಲಿ ಸುರಿದಿದ್ದರಿಂದ ದೇಶದಲ್ಲಿ ಒಟ್ಟು ಭತ್ತದ ಕ್ಷೇತ್ರದಲ್ಲಿ ಶೇ.21ರಷ್ಟು ಇಳಿಕೆಯಾಗಿ ಹೋಯಿತು. ಈಗ ಅಕ್ಕಿ ವಿದೇಶಗಳಿಗೆ ರಫ್ತಾಗುವದನ್ನು ಮೋದಿ ಸರಕಾರ ನಿಲ್ಲಿಸಿದರೂ ಅದರ ದರ ಮಾರುಕಟ್ಟೆಯಲ್ಲಿ ಏರುತ್ತಲೇ ಇದೆ. ಮಳೆ ಕೈಕೊಟ್ಟ ಕಾರಣ ಮುಂದಿನ ದಿನಗಳಲ್ಲಿ ಅಕ್ಕಿ ದರ ಇನ್ನಷ್ಟು ಹೆಚ್ಚುವುದು ಕರ್ನಾಟಕ ಸರಕಾರದ ಭಾಷೆಯಲ್ಲಿ ಹೇಳುವದಾದರೆ ಗ್ಯಾರಂಟಿ. ಇತರ ಬೇಳೆ ಕಾಳುಗಳ ದರಗಳು ಗಗನ ಸಖಿಗಳಾಗಿವೆಯೇ ಉಳಿದುಕೊಂಡಿವೆ. ಕೊರೋನಾ ದಾಳಿಯ ಸಮಯದಲ್ಲಿ ಹುಟ್ಟಿಕೊಂಡ ಕೊರತೆಗೆ ಪೂರಕವಾದ ಶಕ್ತಿಗಳು ಆರ್ಥಿಕತೆಯ ಬೇರುಗಳನ್ನೇ ಅಲ್ಲಾಡಿಸಿ ಬಿಟ್ಟಿದ್ದವು. ಕೊರೊನಾ ಹೋದಮೇಲೂ ಆ ಶಕ್ತಿಗಳಿಂದಾಗಿಯೇ ಗೃಹ ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗಳ ಬೆಲೆಗಳು ಜನಸಾಮಾನ್ಯರ ಕೈಗೆ ಎಟುಕದ ರೀತಿಯಲ್ಲೇ ಮೆಲೆ ಮೇಲೆ ಹಾರುತ್ತಿವೆ. ʼಮದುವೆ ಮಾಡಿ ನೋಡು, ಮನೆಕಟ್ಟಿ ನೋಡುʼ ಎನ್ನುವುದು ಜನಪ್ರಿಯ ಅನುಭವ ವಾಣಿ. ಈಗಿನ ಬೆಲೆಗಳ ಮಿತಿ ಮೀರಿದ ಮುಂದುವರಿದ ಪ್ರಯಾಣವನ್ನು ನೋಡಿದರೆ ಮದುವೆ ಮಾಡಿ ನೋಡಲು ಸಾಧ್ಯವಾದರೂ ಮನೆ ಕಟ್ಟಿ ನೋಡಲಿಕ್ಕೆ ಉಳಿಯಲು ಸಾಧ್ಯವಾಗದು ಎಂದು ಹೇಳಬೇಕಾದ ನೋವಿನ ಸನ್ನಿವೇಶ. ಬೆಲೆಯೇರಿಕೆಯಿಂದ ಭ್ರಷ್ಟಾಚಾರ, ಭ್ರಷ್ಟಾಚಾರದಿಂದ ಬೆಲೆಯೇರಿಕೆ- ಇದು ದೀರ್ಘವಾದ ಇತಿಹಾಸವುಳ್ಳ ವಿಷವರ್ತುಲ.

ಈ ವಿ಼ಷವರ್ತುಲಕ್ಕೆ ದೃಷ್ಟಾಂತ ಹುಡುಕಲು ದೂರ ಹೋಗಬೇಕಾಗಿಲ್ಲ. ಬೇಕಾದಷ್ಟು ( ಬೇಡವಾದಷ್ಟು!) ಸಾಕ್ಷಿಗಳು ನಮ್ಮ ನಾಡಿನಲ್ಲೇ ತಮ್ಮ ನಾಡಿಮಿಡಿತ ಪ್ರದರ್ಶಿಸುತ್ತಿವೆ. ಕಳೆದ ನವೆಂಬರ್ತಿಂಗಳಿನಲ್ಲಿ ನಿರ್ಮಾಣ ಕ್ಷೇತ್ರದ ಅಗತ್ಯ ವಸ್ತುಗಳ ಬೆಲೆಗಳು ಆಕಾಶದೆತ್ತರಕ್ಕೆ ಹಾರಲು ಪ್ರಾರಂಭಿಸಿದ್ದರಿಂದ ಬೊಮ್ಮಾಯಿ ಸರಕಾರ ಚಡಪಡಿಸಬೇಕಾಯಿತು. ಬರದ ಸಮಸ್ಯೆಗೆ ಪರಿಹಾರ ಒದಗಿಸಲು ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವದು ಸಾಮಾನ್ಯ ರೂಢಿ. ಉಕ್ಕು, ಸಿಮೆಂಟ್, ಎಂಎಸ್ಪ್ಲೇಟ್ಗಳು, ವಿವಿಧ ಪೈಪುಗಳು, ಅಗತ್ಯ ಉಪಕರಣಗಳು ದುಬಾರಿಯಾದ್ದರಿಂದ ನೀರಾವರಿ ಕಾಮಗಾರಿಗಳಿಗೆ ಬರ ಬಡಿದುಬಿಟ್ಟಿತ್ತು. ಈ ವಾಸ್ತವವನ್ನು ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳೇ ಬಹಿರಂಗವಾಗಿ ಒಪಿಕೊಂಡಿದ್ದರು. ಗ್ಯಾರಂಟಿಗಳ ಗಾಳದಿಂದಲೇ ಮತ ಹಿಡಿದು ಪೇಚಾಡುತ್ತಿರುವ ಈಗಿನ ಕಾಂಗ್ರೆಸ್ ಸರಕಾರಕ್ಕೆ ಬೆಲೆಯೇರಿಕೆಯಂಥ ಸುಡುತ್ತಿರುವ ಸಮಸ್ಯೆಗಳು ಕಾಣಿಸುತ್ತಲೇ ಇಲ್ಲ. ಗ್ಯಾರಂಟಿಗಳಿಗೆ ಹಣ ಹೊಂದಿಸುವದು ಕಷ್ಟವಾಗುತ್ತಿರುವಾಗ ಸರಕಾರದಲ್ಲಿ ದೊಡ್ಡ ಸ್ಥಾನ ಗಿಟ್ಟಿಸಿದ ಡಿಕೆಶಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವುದು ಕಷ್ಟವೆಂದು ಹೇಳಿಬಿಟ್ಟಿದ್ದಾರೆ. ತೀರ ಅಗತ್ಯವಾದ ನೀರಾವರಿ ಕಾಮಗಾರಿಗಳು ಕೂಡ ವಾತರೋಗದಿಂದ ನರಳುವಂತಾಗಿದೆ.

ಹಿಂದೆಯೂ ಬೆಲೆಯೇರಿಕೆಯಾದಾಗ ಒಂದಿಲ್ಲೊಂದು ವಿವರಣೆ ನೀಡುತ್ತ , ಹೇಗೋ ಮ್ಯೆನೇಜ್ಮಾಡುತ್ತಿದ್ದ ಕೇಂದ್ರ ಸಚಿವರು ಸಾರ್ವಜನಿಕರ ಆಕ್ರೋಶವನ್ನು ಉಪಶಮನ ಮಾಡುವ ಸಾಹಸಕ್ಕೆ ಕೈಹಾಕಿದ್ದರು. ಪ್ರಣವ್ಮುಖರ್ಜಿ 2010ರಲ್ಲಿ ವಿತ್ತಸಚಿವರಾಗಿದ್ದಾಗಿನ ಘಟನೆಗಳನ್ನು ನೆನಪಿಸಿಕೊಂಡರೆ ಸಾಕು ಬೆಲೆಯೇರಿಕೆಯ ಪ್ರಹಾರದ ಪ್ರಭಾವ ತಿಳಿಯಲು. ಆಹಾರ ಪದಾರ್ಥಗಳ ದರ ಶೇ 16ಕ್ಕಿಂತ ಜಾಸ್ತಿಯಾದ ಕಾಲ ನೆನಪಾಗುತ್ತದೆ. 2020 ಜೂನ್21ರಂದು ಐ.ಎಮ್, ಎಫ್ನಲ್ಲಿ ಭಾಷಣ ಮಾಡುವಾಗ ಪ್ರಣವ್ ಬೆಲೆಗಳು ಇಳಿಮುಖವಾಗಲು ಒಳ್ಳೆಯ ಮನ್ಸೂನ್ಗಾಗಿ ಭಾರತ ಕಾಯುತ್ತಿದೆಯೆಂದು ಹೇಳಿ ಪಾರಾಗುವ ಜಾಣತನ ಪ್ರದರ್ಶಿಸಿದ್ದರು. ಅದಾದ ಕೆಲವೇ ದಿನಗಳ ನಂತರ ಕೇಂದ್ರ ವಿತ್ತಸಚಿವರಿಗೆ ಸಲಹೆಗಾರರಾಗಿದ್ದ ಆರ್ಥಿಕ ತಜ್ಞ ಕೌಶಿಕ ಬಸು ʼ ಈಗಾಗಲೇ ಹಣದುಬ್ಬರದ ಪ್ರಮಾಣ ಶೇ.10.3ರಷ್ಟಿದೆ, ಇದು ಇನ್ನಷ್ಟು ಹೆಚ್ಚಲಿದೆʼ ಎಂದು ಪ್ರಾಮಾಣಿಕವಾಗಿ ಹೇಳಿ ಪ್ರಣವ್ಅವರ ಕೆಂಗಣ್ಣಿಗೆ ಗುರಿಯಾದರು. ಇಬ್ಬರೂ ಬಂಗಾಲದ ಮಕ್ಕಳೇ ಆದರೂ ಕೆಲವೇ ದಿನಗಳ ನಂತರ ಬಸು ಹಸ್ತಿನಾವತಿಯಲ್ಲಿರುವ ವಿತ್ತಸಚಿವಾಲಯ ಬಿಟ್ಟು ವಿದೇಶಕ್ಕೆ ಮರಳಬೇಕಾಯಿತು. ʼಹೀಗೂ ಉಂಟೇ ?ʼ ಎಂದು ಬೆಲೆಯೇರಿಕೆಯ ಬಿಸಿ ವಿಪರೀತವಾಗಿ ಬದುಕು ಭಾರವಾಗುತ್ತಿರುವ ಈ ಸಮಯದಲ್ಲಿ ಆ ಘಟನೆಯನ್ನೂ ನೆನಪಿಸಿಕೊಳ್ಳಬೇಕಾದ ಪ್ರಸಂಗ ಬಂದಿದೆ.

ನವ ದೆಹಲಿಯಲ್ಲಿ ಪ್ರಣವ್ ವಿತ್ತ ಸಚಿವರಾಗಿರುವಾಗಲೇ ದೇಶವ್ಯಾಪಿ ಆರ್ಥಿಕ ಹಿಂಜರಿತವನ್ನು ತಡೆಗಟ್ಟಲು ವಿತ್ತೀಯ ಉತ್ತೇಜಕಗಳನ್ನು ಸಾರುವದು ಅನಿವಾರ್ಯವಾಗಿತ್ತು. ಅವರು ರಾಷ್ಟ್ರಪತಿ ಭವನ ಸೇರಿದ ಮೇಲೆ ಅವರ ʼಸ್ನೇಹಿತ- ವೈರಿʼ, ಅತಿ ಬುದ್ದಿವಂತ ಪಿ.ಚಿದಂಬರಂ ಕೇಂದ್ರ ವಿತ್ತಸಚಿವರಾಗಿ ಬೆಲೆಯೇರಿಕೆ ತೀವ್ರವಾಗಲು ವಿತ್ತೀಯ ಉತ್ತೇಜಕಗಳು ಕಾರಣ ಎಂದು ಹೇಳಿದಾಗ ಪ್ರಣವ್ ಬಹಿರಂಗವಾಗಿ ಏನನ್ನೂ ಹೇಳಲಾರದೆ ಚಡಪಡಿಸಿದರು. ನಂತರ ವಿದೇಶ ಪ್ರವಾಸದಲ್ಲಿದ್ದಾಗ ಇದನ್ನು ಅಲ್ಲಗಳೆದು ತುಸು ಸಮಾಧಾನ ಪಟ್ಟುಕೊಂಡಿದ್ದರು. ಇತೀಚೆಗೆ ವಿದೇಶಗಳಲ್ಲಿ ವಿಶೇಷ ಗೌರವ ಪಡೆದ ಪ್ರಧಾನಿ ನರೇಂದ್ರ ಮೋದಿ ಸ್ವದೇಶಕ್ಕೆ ಮರಳಿದ ಕೂಡಲೇ ಏರಿದ ಬೆಲೆಗಳು ಅವರ ಮುಂದೆ ಸಾಲುಗಟ್ಟಿ ನಿಂತು ಹುಬ್ಬು ಹಾರಿಸುತ್ತಿರುವುದು ದೊಡ್ಡ ಸವಾಲು.

ಸ್ಥಿತ ಪ್ರಜ್ಞ ಆರ್ಥಿಕ ತಜ್ಞರಾದರೂ ಸ್ಥಿತಿಯಿಲ್ಲದ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್‌ ಸರಕಾರದ ಎರಡನೇ ಅವಧಿಯಲ್ಲಿ ಅತಿಪ್ರಸರಣ ಮತ್ತು ನಿರುದ್ಯೋಗ ಅತಿಯಾಗಿದ್ದರಿಂದಲೇ ರಾಜ್ಯಮಟ್ಟದ ಚುನಾವಣೆಗಳಲ್ಲಿ ಯುಪಿಎ ಹೀನಾಯ ಸೋಲು ಕಾಣುವಂತಾಯಿತು. ಇದನ್ನು ಮನಮೋಹನ ಸಿಂಗರೇ ಒಪ್ಪಿಕೊಂಡಿದ್ದು ದಾಖಲೆಗೆ ಸೇರಿದೆ. ಬೆಲೆಗಳನ್ನು ನಿಗ್ರಹಿಸುವ ಮತ್ತು ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿಯೇ ನರೇಂದ್ರ ಮೋದಿ ನಾಯಕತ್ವದ ಎನ್.ಡಿಎ. 2014ರಲ್ಲಿ ಹಸ್ತಿನಾವತಿಯಲ್ಲಿ ಗದ್ದುಗೆ ಏರಿತ್ತು. ಈಗ ಎರಡೂ ಸಮಸ್ಯೆಗಳು ಲೋಕಸಭಾ ಚುನಾವಣೆ ಹತ್ತಿರ ಹತ್ತಿರ ಬರುತ್ತಿರುವಾಗ ಮತ್ತೆ ತೀವ್ರತೆ ಪಡೆದು ರಣವಾದ್ಯ ಬಾರಿಸುತ್ತಿವೆ. ಬೆಲೆಗಳನ್ನು ಕಂಟ್ರೋಲ್ಮಾಡುವ ಹೊಣೆ ಹೊತ್ತ ಆರ್.ಬಿ.ಐ ರೆಪೊ ದರವನ್ನು ಕೂಡ ಸಮರ್ಪಕ ಪ್ರಮಾಣದಲ್ಲಿ ಏರಿಸಲಾಗದೆ ಕುಳಿತು ಬಿಟ್ಟಿದೆ. ಅದಕ್ಕೆಲ್ಲಿದೆ ಈಗ ಸ್ವಾತಂತ್ರ್ಯ?

ಇದನ್ನೂ ಓದಿ: ವಿಶ್ಲೇಷಣೆ: ಭರ್ಜರಿ ರಾಜಕೀಯದ ದಾಳಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ರಾಜ್ಯ ಬಜೆಟ್

1960ರ ದಶಕದಲ್ಲಿ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದಂತೆ ಹಣದ ಚಲಾವಣೆ ಜಾಸ್ತಿಯಾಗಿ ಬೆಲೆಯೇರಿಕೆ ಸಮಸ್ಯೆ ಜನಸಾಮಾನ್ಯರನ್ನು ಕಾಡಲು ಶುರು ಮಾಡಿತ್ತು. ಆಗಲೇ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಬೆಲೆಯೇರಿಕೆ ಅನಿವಾರ್ಯ ಎನ್ನುವ ವಾದ ಹುಟ್ಟಿಕೊಂಡಿದ್ದು. ಹೆಸರಾಂತ ಆರ್ಥಿಕ ತಜ್ಞರೇ ಈ ವಾದವನ್ನು ಮಂಡಿಸಿ ಮುಂಚೂಣಿಗೆ ಬಂದರು. ಈಗಲೂ ಇದೇ ವಾದಕ್ಕೆ ಮನ್ನಣೆ ಇದೆ. ಇದೇ ವಾದದಿಂದ ದೇಶಕ್ಕೆ ಅಪಾಯವೂ ಆಗಿದೆ. ಫೆ.13, 2011ರಿಂದ ಮಾರ್ಚ್17, 2011ರ ಅವಧಿಯಲ್ಲಿ ( ಹೆಚ್ಚು ಕಡಿಮೆ ಒಂದೇ ವರ್ಷದ ಅವಧಿಯಲ್ಲಿ) ರಿಸರ್ವ್‌ ಬ್ಯಾಂಕ್ ಒಂಬತ್ತು ಬಾರಿ ರೆಪೊ ದರವನ್ನು ಏರಿಸಿದರೂ ಬೆಲೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹಾಗಾದರೆ ಇದೆಲ್ಲಾ ಅನಿವಾರ್ಯವೆಂದು ಸಮಾಧಾನ ಪಟ್ಟುಕೊಳ್ಳಬೇಕೆ? ನೊಬೆಲ್ಪಾರಿತೋಷಕ ವಿಜೇತ ಅರ್ಥಶಾಸ್ತ್ರ್ಞಜ್ಞ ಮಿಲ್ಟನ್‌ ಫ್ರೀಡ್‌ಮನ್ ಅಭಿವೃದ್ಧಿಯಾಗಬೇಕಾದರೆ ಬೆಲೆಯೇರಿಕೆ ಅನಿವಾರ್ಯವೆಂಬವಾದವನ್ನು ಬಲವಾಗಿ ತಳ್ಳಿಹಾಕಿದ್ದಾರೆ.

ವಾದ-ವಿವಾದಗಳೇನೇ ಇರಲಿ, ಈಗ ಬೆಲೆಯೇರಿಕೆಯನ್ನು ನಿಗ್ರಹಿಸುವ ಪ್ರಯತ್ನ ದೇಶಾದ್ಯಂತ ನಡೆಯಬೇಕಾಗಿದೆ. ಅನಗತ್ಯ ವೆಚ್ಚಗಳಿಗೆ ಕಾರಣವಾಗುವ ಪ್ರಯತ್ನ ಸರಕಾರ ಮಾಡಲಿ, ನಾಗರಿಕರು ಮಾಡಲಿ ಅದು ಬೆಲೆಯೇರಿಕೆಗೆ ಪೂರಕವಾಗುವದಂತೂ ಹೌದು. ಇಂಥ ವೆಚ್ಚಗಳನ್ನು ನಿಯಂತ್ರಿಸುವ ಯತ್ನ ವ್ಯಾಪಕವಾಗಬೇಕು. ಕೆಲವು ಬೆಲೆಗಳು ಜಾಸ್ತಿಯಾದಾಗ ತುಲನಾತ್ಮಕವಾಗಿ ಅಗ್ಗವಾದ ಪರ್ಯಾಯ ಸರಕು-ಸೇವೆಗಳನ್ನು ಬಳಸುವ ಜೀವನ ಶೈಲಿಯನ್ನು ಶ್ರೀಮಂತರೂ ರೂಢಿಸಿಕೊಳ್ಳಬೇಕು, ಸಾಮಾನ್ಯರೂ ( ಬಡವರು ಕೂಡ ಸೇರಿದಂತೆ) ರೂಢಿಸಿಕೊಳ್ಳಬೇಕು. ಬೆಲೆಯೇರಿಕೆಯನ್ನು ಹತೋಟಿಗೆ ತರುವ ಕೆಲಸ ಕೇವಲ ರಿಸರ್ವ್ಬ್ಯಾಂಕಿಗಷ್ಟೇ ಸೀಮಿತವಾಗದೇ ಕೇಂದ್ರ, ರಾಜ್ಯ ಸರಕಾರಗಳಿಂದಲೂ ಆದರೆ ಮಾತ್ರ ಜನಸಾಮಾನ್ಯರಿಗೆ ಬೇಕಾದ ಗ್ಯಾರಂಟಿ ಸಿಗಲಿದೆ. ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿದ ಬೆಲೆಯೇರಿಕೆಯನ್ನು ನಿಯಂತ್ರಿಸುವ ಕಾರ್ಯ ಸಮರೋಪಾದಿಯಲ್ಲಿ ವಿಳಂಬವಿಲ್ಲದೆ ನಡೆಯದಿದ್ದರೆ ಅದು ನಮ್ಮೆಲ್ಲರ ವಿರುದ್ಧ ಮಿತಿ ಮೀರಿದ ಸ್ವಾತಂತ್ರ್ಯ ಪೀಕಿಸಿ ಅಪಾಯಕಾರಿ ಸಮರ ಸಾರಲಿದೆ.

ಇದನ್ನೂ ಓದಿ: Money changes in August : ಆಗಸ್ಟ್‌ ತಿಂಗಳಿನಲ್ಲಿ ಪ್ರಮುಖ ಹಣಕಾಸು ಬದಲಾವಣೆಗಳೇನು?

Exit mobile version