Site icon Vistara News

BBC Documentary On Modi | ಭಾರತೀಯ ಮುಸ್ಲಿಮರು ಭೂತಕಾಲದಿಂದ ಮುಂದೆ ಸಾಗಿದ್ದಾರೆ, ಬಿಬಿಸಿ ಅಲ್ಲೇ ಇದೆ: ಅಲಿಗಢ ಮುಸ್ಲಿಂ ವಿವಿ ಉಪಕುಲಪತಿ

Youth Festival
ಪ್ರೊ.ತಾರೀಖ್‌ ಮನ್ಸೂರ್‌

ನವ ದೆಹಲಿ: ಪಿಎಂ ಮೋದಿ ಅವರನ್ನು ವಿಲನ್‌ ಆಗಿ ಚಿತ್ರಿಸುವ ಸುದ್ದಿಸಂಸ್ಥೆ ಬಿಬಿಸಿಯ ಪ್ರಯತ್ನ ಯಶ ಕಾಣದು. ಭಾರತೀಯ ಮುಸ್ಲಿಮರು ಇಂದು ಭೂತಕಾಲದಲ್ಲಿ ಬದುಕುತ್ತಿಲ್ಲ. ಅವರು ಮುಂದೆ ಸಾಗಿದ್ದಾರೆ. ಭರವಸೆ ನಿರೀಕ್ಷೆಗಳಿಂದ ಬದುಕುತ್ತಿದ್ದಾರೆ ಎಂದು ಅಲಿಗಢ ಮುಸ್ಲಿಂ ಯೂನಿವರ್ಸಿಟಿಯ ಉಪಕುಲಪತಿ ಪ್ರೊ.ತಾರೀಖ್‌ ಮನ್ಸೂರ್‌ ಹೇಳಿದ್ದಾರೆ.

ಬಿಬಿಸಿ ಇತ್ತೀಚೆಗೆ ಪ್ರಸಾರ ಮಾಡಿರುವ ʼದಿ ಮೋದಿ ಕ್ವೆಶ್ಚನ್‌ʼ ಸರಣಿಯ ಬಗ್ಗೆ ಅವರು ‘ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ಪತ್ರಿಕೆಗೆ ಬರೆದ ಅಂಕಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸರಣಿಯಲ್ಲಿ ಮೋದಿಯವರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಬಗ್ಗೆ ದೇಶಾದ್ಯಂತ ಆಕ್ಷೇಪ ವ್ಯಕ್ತವಾಗಿತ್ತು. ಬ್ರಿಟನ್‌ನ ಒಬ್ಬ ಸಂದರೂ ಈ ಸರಣಿಯನ್ನು ಟೀಕಿಸಿದ್ದರು.

ಭಾರತೀಯ ಮುಸ್ಲಿಮರು ಭೂತಕಾಲದ ಕರಾಳ ನೆನಪುಗಳಿಂದ ಆಚೆ ಬಂದು ಮುಂದೆ ಸಾಗಿದ್ದಾರೆ. ಅವರು ಭಾರತದ ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆ, ನಿಷ್ಠೆ ಹೊಂದಿದ್ದಾರೆ. ಇಲ್ಲಿನ ಶಾಸಕಾಂಗ, ನ್ಯಾಯಾಂಗಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸುತ್ತವೆ ಎಂಬ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಭಾರತೀಯ ಮುಸ್ಲಿಮರಿಗೆ ಮೋದಿಯವರು ಸಮಸ್ಯೆಯಲ್ಲ; ಬದಲಾಗಿ, ನಮ್ಮ ಮೇಲೆ ಎಸಗಲಾದ ಅದೆಷ್ಟೋ ಅನ್ಯಾಯಗಳಿಗೆ ಅವರು ಉತ್ತರ ಎಂದು ಅವರು ಬಣ್ಣಿಸಿದ್ದಾರೆ.

ಪಾಶ್ಚಾತ್ಯ ಮಾಧ್ಯಮ ಅನಗತ್ಯವಾಗಿ ತನ್ನ ಮೇಲೆ ʼಶ್ವೇತವರ್ಣೀಯನ ಹೊರೆʼಯನ್ನು ಹೊರಿಸಿಕೊಂಡು ಬಳಲುತ್ತಿದೆ. ತನಗೆ ಸಂಬಂಧವೇ ಇಲ್ಲದ ತೃತೀಯ ಜಗತ್ತಿನ ಮಂದಿಯ ಹೊಣೆಯನ್ನು ತಾನು ಹೊತ್ತಿದ್ದೇನೆಂದು ಭ್ರಮಿಸಿದೆ, ಅವರನ್ನು ಉದ್ಧಾರ ಮಾಡುವ ಸೋಗು ಹಾಕುತ್ತಿದೆ. ಈ ಸೋಗಿನ ಹಿನ್ನೆಲೆಯಲ್ಲಿ ಈ ಬಿಬಿಸಿ ಸರಣಿ ಬಂದಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನ ಮಂತ್ರಿಯನ್ನು ಟಾರ್ಗೆಟ್‌ ಮಾಡಿರುವ ಈ ಸರಣಿ ದುರುದ್ದೇಶಪೂರಿತ ಎಂದು ಅವರು ಆಪಾದಿಸಿದ್ದಾರೆ.

ಇದನ್ನೂ ಓದಿ | BBC Documentary On Modi | ಮೋದಿ ಕುರಿತ ಡಾಕ್ಯುಮೆಂಟರಿ ಏಕಪಕ್ಷೀಯ, ಬ್ರಿಟನ್‌ ಸಂಸದ ಆಕ್ರೋಶ, ಬಿಬಿಸಿಗೆ ಪತ್ರ

ಮೊದಲನೆಯದಾಗಿ, ಈ ಸರಣಿ ಅಪ್ಪಟ ನ್ಯಾಯಾಂಗ ನಿಂದನೆ ಎಸಗಿದೆ. 2002ರ ಗುಜರಾತ್‌ ದಂಗೆಯಲ್ಲಿ ಮೋದಿ ಅಪರಾಧಿ ಎಂದು ಅದು ಚಿತ್ರಿಸಿದೆ. ಆದರೆ ಕೋರ್ಟ್‌ಗಳು ಈಗಾಗಲೇ ಮೋದಿಯವರ ನಿರ್ದೋಷಿತ್ವವನ್ನು ಎತ್ತಿ ಹಿಡಿದಿವೆ. ಬಿಬಿಸಿ ತನ್ನನ್ನು ತಾನು ಭಾರತದ ನ್ಯಾಯಾಂಗಕ್ಕಿಂತ ಮೇಲಿನದು ಎಂದು ಭಾವಿಸಿಕೊಂಡಿದೆಯೇ? ಎರಡನೆಯದು, ಬಿಬಿಸಿಯ ಆರೋಪ ಜನತಾ ನ್ಯಾಯಾಲಯದ ಮುಂದೆಯೂ ಬೆಲೆ ಪಡೆದುಕೊಂಡಿಲ್ಲ. 2002, 2007, 2012ರ ಗುಜರಾತ್‌ ಚುನಾವಣೆಗಳಲ್ಲಿ, 2014, 2019ರ ರಾಷ್ಟ್ರೀಯ ಚುನಾವಣೆಗಳಲ್ಲಿ ಹೆಚ್ಚು ಹೆಚ್ಚು ಬಹುಮತದಿಂದ ಮೋದಿಯವರನ್ನು ಗೆಲ್ಲಿಸಿದ್ದಾರೆ. ಎಲ್ಲ ಧರ್ಮ ಸಮುದಾಯಗಳ ಜನ ಮತ ಹಾಕದೇ ಈ ಪ್ರಮಾಣದ ಗೆಲುವು ಸಾಧ್ಯವಿಲ್ಲ ಎಂಬುದನ್ನು ಬಿಬಿಸಿ ಉದ್ದೇಶಪೂರ್ವಕವಾಗಿ ಮರೆತಿದೆ ಎಂದು ತಾರೀಖ್‌ ಟೀಕಿಸಿದ್ದಾರೆ.

ಮುಸ್ಲಿಮರ ಜತೆಗಿನ ನನ್ನ ಮಾತುಕತೆಯಲ್ಲಿ, ಮೋದಿಯವರ ಬಗ್ಗೆ ಒಲವು ವ್ಯಕ್ತವಾಗಿದೆ. ವಿಶೇಷವಾಗಿ ಮುಸ್ಲಿಂ ಮಹಿಳೆಯರು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತ್ರಿವಳಿ ತಲಾಖ್‌ ರದ್ದತಿ ಮುಂತಾದ ಕ್ರಮಗಳ ಮೂಲಕ ಸುಧಾರಣೆಯತ್ತ ಅವರು ಸಮುದಾಯವನ್ನು ಕೊಂಡೊಯ್ದಿದ್ದಾರೆ ಎಂದು ಮೆಚ್ಚಿದ್ದಾರೆ. ಅರ್ಧ ಬೆಂದ ಐಡಿಯಾಗಳ ನಾಯಕರಿಂದ ಮುಸ್ಲಿಂ ಸಮುದಾಯದ ಉದ್ಧಾರ ಸಾಧ್ಯವಿಲ್ಲ. ʼಒಂದು ಕೈಯಲ್ಲಿ ಕುರಾನ್‌, ಇನ್ನೊಂದು ಕೈಯಲ್ಲಿ ಕಂಪ್ಯೂಟರ್‌ ಇದ್ದರೆ ಮಾತ್ರ ಸಮಾಜದ ಉದ್ಧಾರ ಸಾಧ್ಯʼ ಎಂದ ಮೋದಿಯವರ ಮಾತು ಮುಸ್ಲಿಂ ಯುವಕರ ಮನ ಗೆದ್ದಿದೆ. ಮಾತ್ರವಲ್ಲ, ಅರಬ್‌ ದೇಶಗಳು ಕೂಡ ಮೋದಿಯವರ ಜತೆಗೆ ಆತ್ಮೀಯ, ಸೌಹಾರ್ದ ಸಂಬಂಧವನ್ನು ಬೆಸೆದುಕೊಂಡಿವೆ. ಬಿಬಿಸಿ ಮಾತ್ರ ಇಪ್ಪತ್ತು ವರ್ಷಗಳ ವರದಿಗಾರಿಕೆಯನ್ನು ಬಳಸಿಕೊಂಡು ಮೋದಿಯವರನ್ನು ವಿನಾಕಾರಣ ಹಣಿಯಲು ಮುಂದಾಗಿದೆ ಎಂದಿದ್ದಾರೆ ತಾರೀಖ್.‌

ಇದನ್ನೂ ಓದಿ | Narendra Modi Bust | ಬಂಗಾರದಲ್ಲಿ ನರೇಂದ್ರ ಮೋದಿ ಪುತ್ಥಳಿ ಕೆತ್ತಿಸಿದ ಗುಜರಾತ್‌ ಉದ್ಯಮಿ, ಏನಿದಕ್ಕೆ ಕಾರಣ?

Exit mobile version