ಚಿಕ್ಕಂದಿನಲ್ಲಿ ಬಾಲಮಂಗಳದಲ್ಲೊಂದು ಕಥೆ ಓದಿದ್ದೆ. ಒಂದೂರಲ್ಲಿ ಒಬ್ಬ ವ್ಯಾಪಾರಿಯಿದ್ದ. ಆತ ತನ್ನ ಬಹು ಅಮೂಲ್ಯದ ವಸ್ತುವೊಂದನ್ನು ಮನೆಯ ಹಿತ್ತಲಿನ ಮರದಲ್ಲಿ ಅಡಗಿಸಿಟ್ಟಿದ್ದ. ಪ್ರತಿಕ್ಷಣ ಅವನಲ್ಲೊಂದು ಆತಂಕ… ಯಾರಾದರೂ ಅದನ್ನು ಕದ್ದುಬಿಟ್ಟರೇನು ಗತಿ? ತನ್ನಿಂದ ಅದು ದೂರಾದರೆ ಹೇಗೆ ಬದುಕುವುದು? ಎಂದು ಚಿಂತಿಸುತ್ತಾ, ಹೆದರಿ ತನ್ನ ಮನೆಯಂಗಳವನ್ನು ದಾಟಿ ಎಲ್ಲಿಯೂ ಹೋಗುತ್ತಿರಲಿಲ್ಲ. ಆ ಮರಕ್ಕೆ ಪ್ರತಿದಿವಸ ನೀರು ಹಾಕುವುದು, ಆರೈಕೆ ಮಾಡುವುದು ಎಲ್ಲ ಆತನೇ… ಯಾವ ಆಳಿಗೂ ಆ ಜಾಗದ ಬಳಿ ಸುಳಿಯಲೂ ಬಿಡುತ್ತಿರಲಿಲ್ಲ. ಊಟ, ನಿದ್ದೆ ಎಲ್ಲ ಸಮಯದಲ್ಲೂ ಅವನ ಒಂದು ಗಮನ ಅತ್ತಲೇ ಇರುತ್ತಿತ್ತು. ಹೀಗಿರುವಾಗ ಅದೊಂದು ದಿನ ಅಚಾನಕ್ಕಾಗಿ ಆತನಿಗೆ ಜ್ಞಾನೋದಯವಾಯಿತು. ಆ ವಸ್ತುವಿನ ಮೇಲಿನ ಆತನ ಮೋಹ ಮಾಯವಾಗಲು ಆತ ಹೊರ ಜಗತ್ತಿಗೆ ಕಾಲಿಟ್ಟ. ಅಲ್ಲಿಯವರೆಗೆ ಆ ಮನೆಯ ಬಾಗಿಲು ದಾಟಲೂ ಹೆದರುತ್ತಿದ್ದವನು ಸರಾಗವಾಗಿ ಓಡಿದ, ಮೇಲೇರಿ ಹಾರಿಬಿಟ್ಟ.
ಈ ಕಥೆಯನ್ನು ಮತ್ತೊಮ್ಮೆ ನಾನು ಸ್ಮರಿಸಿಕೊಳ್ಳುವಂತೆ ಮಾಡಿದ್ದು ಅಪರೂಪದ ಮರಾಠಿ ಚಲನಚಿತ್ರ ‘ಸೈಕಲ್’. ನಾನು ಗಮನಿಸಿರುವಂತೆ ಮರಾಠಿ ಚಲನಚಿತ್ರಗಳು ಬಹುಪಾಲು ಸಾಮಾಜಿಕ ಬದಲಾವಣೆಗೆ, ಸುಧಾರಣೆಗೆ ಒತ್ತುಕೊಟ್ಟು ನಿರ್ಮಿತವಾಗುವಂಥವು. ಆದರೆ ಅವುಗಳಲ್ಲಿ ಹಲವು ಆಧ್ಯಾತ್ಮಿಕ ಚಿಂತನೆಗಳನ್ನು ಬಹಳ ಸೂಕ್ಷ್ಮವಾಗಿ ನೇಯ್ದುಕೊಟ್ಟಿದ್ದೂ ಇದೆ. ಅಂಥದ್ದೇ ಸುಂದರ ಕಥೆಯುಳ್ಳ, ಸರಳ ನಿರೂಪಣೆಯಲ್ಲೇ ಬಹು ದೊಡ್ಡ ಜೀವನ ಮೌಲ್ಯವನ್ನು ತೆರೆದಿಡುವ ಚಿತ್ರ ‘ಸೈಕಲ್’. ಈ ಚಿತ್ರದ ನಿರ್ದೇಶ ಪ್ರಕಾಶ್ ಕುಂಟೆ ಮತ್ತು ಪ್ರಮುಖ ಪಾತ್ರದಲ್ಲಿ ಹೃಷಿಕೇಶ್ ಜೋಶಿ ನಟಿಸಿದ್ದಾರೆ.
ಚಿತ್ರದ ನಾಯಕ ಕೇಶವನಿಗೆ ಅವನ ಅಜ್ಜ ತನಗೆ ಬ್ರಿಟಿಶರಿಂದ ಬಳುವಳಿಯಾಗಿ ಬಂದಿದ್ದ ಚಂದದ ಸೈಕಲ್ ಒಂದನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳುವ ಜವಾಬ್ದಾರಿಯನ್ನಿತ್ತು ಮರಣಿಸಿರುತ್ತಾನೆ. ಅ ದಿನದಿಂದ ಆ ಸೈಕಲ್ ಕೇಶವನ ಪರಮಾಪ್ತ ಸಂಗಾತಿಯಾಗಿರುತ್ತದೆ. ತನ್ನ ಹೆಂಡತಿ, ಮಗುವಿನಷ್ಟೇ ಜೋಪಾನವಾಗಿ ಅದನ್ನು ಕಾಪಿಟ್ಟುಕೊಂಡು, ತನ್ನ ಬಿಟ್ಟು ಬೇರೆ ಯಾರಿಗೂ ಅದನ್ನು ಸವಾರಿ ಮಾಡಲು ಬಿಡದೇ ಕಾಯುತ್ತಿರುತ್ತಾನೆ. ಅಂತಹ ಅಚ್ಚುಮೆಚ್ಚಿನ ಸೈಕಲ್ ಅನ್ನು ಅದೊಂದು ರಾತ್ರಿ ಕಳ್ಳರಿಬ್ಬರು ಕದ್ದುಬಿಡುತ್ತಾರೆ. ಅತೀವ ದುಃಖದಲ್ಲಿ ಆತ ಅದನ್ನು ಹುಡುಕಿಕೊಂಡು ಹೊರಟುಬಿಡುತ್ತಾನೆ. ಅಲ್ಲಿಂದ ಕಥೆ ಹಲವು ತಿರುವುಗಳನ್ನು, ಹೊಸ ಹೊಳಹುಗಳನ್ನು ಕಾಣಿಸುತ್ತಾ ಸಾಗುತ್ತದೆ.
ಅತ್ತ, ಆ ಸೈಕಲನ್ನು ಅಚಾನಕ್ಕಾಗಿ ಕದ್ದ ಇಬ್ಬರು ಪಾಪದ ಕಳ್ಳರಿಗೆ ತಮ್ಮ ಪ್ರಯಾಣದುದ್ದಕ್ಕೂ ಆ ಸೈಕಲಿನ ಒಡೆಯನ ಉದಾತ್ತ ಸ್ವಭಾವದ ಪರಿಚಯವಾಗುತ್ತಾ ಹೋಗುವುದು. ಕಥೆಯ ಅಂತಿಮದಲ್ಲಿ ಇದಕ್ಕೊಂದು ಬಹಳ ಚಂದದ ತಿರುವು ಸಿಕ್ಕಿ ಲೌಕಿಕತೆಯ ಸೆಳೆತದಿಂದ ಬಿಡುಗಡೆಗೊಂಡು ಪಾರಮಾರ್ಥಿಕತೆಗೆ ಹಾರಿ ಹೋಗುವ ಸಾಧ್ಯತೆಯ ಅನಾವರಣವಾಗುತ್ತದೆ. ಇದೊಂಥರ ಆರಂಭದಲ್ಲಿ ಮೊಟ್ಟೆಯಾಗಿದ್ದು, ಹುಳುವಾಗಿ ತೆವಳಿ, ಕೋಶಾವಸ್ಥೆಯಲ್ಲಿ ಧ್ಯಾನಸ್ಥವಾಗಿ ಆಮೇಲೆ ಅದರಿಂದ ಹೊರ ಬರುವ ಚಂದದ ಚಿಟ್ಟೆಯೊಂದು ಸ್ವಚ್ಛಂದವಾಗಿ ವನದಲ್ಲಿ ಹಾರುವ ರೀತಿಯ ಕಥೆಯಾಗಿದೆ.
ಇದನ್ನೂ ಓದಿ | ಬೆಳಕಿನ ಗರಿ ಅಂಕಣ | ಪರೋಮಿತಾಳ ಒಂದು ದಿನ
1958ರಲ್ಲಿ ಕೊಂಕಣ ಪ್ರಾಂತ್ಯದ ಪುಟ್ಟ ಹಳ್ಳಿಯೊಂದರಲ್ಲಿ ನಡೆಯುವ ಸಾಮಾನ್ಯ ಘಟನೆಯೊಂದು ಹೇಗೆ ಬದುಕಿನ ವಿವಿಧ ಮಜಲುಗಳನ್ನು ತೆರೆಯುತ್ತಾ ಹೋಗುತ್ತದೆ ಎನ್ನುವುದನ್ನು ಇಲ್ಲಿ ನಾವು ಕಾಣಬಹುದು! ಆದರೆ, ಚಿತ್ರದ ಆರಂಭದಲ್ಲೇ ಒಂದು ಸ್ಪಷ್ಟನೆ ಕೊಡಲಾಗಿದೆ. “ಆ ಕಾಲದಲ್ಲಿ.. ಜನ ಬಹಳ ಮುಗ್ಧರಾಗಿದ್ದರು.. ಈ ಕಥೆ ಅಂತಹ ಸಮಯದಲ್ಲಿ ನಡೆದದ್ದು..” ಎಂದು. ಎಂದರೆ ಇಂದು ಅಂತಹ ಘಟನೆ ಒಂದೊಮ್ಮೆ ಘಟಿಸಿದಲ್ಲಿ, ಚಿತ್ರದೊಳಗೆ ನಡೆದಂತಹ ಯಾವ ಮನಃಪರಿವರ್ತನೆ, ಸುಧಾರಣೆ ಅಥವಾ ಕಥೆಯೊಳಗಿನ ಅಮೋಘ ತಿರುವು ಸಾಧ್ಯವಿಲ್ಲ. ಮುಗ್ಧತೆ ಜಗತ್ತಿನಿಂದ ಮಾಯವಾಗುತ್ತಿದೆ. ಮಾಯವಾಗಿದೆ ಎಂದೂ ಅರ್ಥೈಸಿಕೊಳ್ಳಬಹುದು! ಒಳಿತನ್ನು ನಂಬುವ ಅಥವ ಒಳಿತೇ ಇಲ್ಲ ಎಂದು ನಂಬಿರವ ಇಬ್ಬರಿಗೂ ಸಂದೇಶ ಸಾರುವಂತಹ ಚಿತ್ರಕಥೆಯಿದು. ಅಲ್ಲದೇ, ನಮ್ಮ ಭವಿಷ್ಯ, ಬದುಕು ಸುಧಾರಿಸುವುದು ಅಥವಾ ಮತ್ತೂ ಹದಗೆಡುವುದು ನಮ್ಮ ಕರ್ಮದಿಂದ ಎನ್ನುವುದನ್ನು ಬಹಳ ಸೂಕ್ಷ್ಮ ನೇಯ್ಗೆಯ ಮೂಲಕ ತೋರಿಸಲಾಗಿದೆ.
ನಾವು ಚಿಕ್ಕವರಿದ್ದಾಗ ಇಷ್ಟಪಟ್ಟು ಹಠಮಾಡಿ ಕೊಂಡಿದ್ದ ಪೆನ್ಸಿಲ್ ಬಾಕ್ಸೋ, ಪೆನ್ನೋ ನಮಗೆ ಬಹಳ ಆಪ್ತವಾಗಿದ್ದುಬಿಡುತ್ತವೆ. ಆ ಪೆನ್ನಿನಿಂದ ಬರೆದರೇ ಉತ್ತಮ ಅಂಕ ಬರುವುದು. ಈ ಬಾಕ್ಸ್ ಬಳಿ ಇದ್ದರೇ ಎಕ್ಸಾಮ್ ಚೆನ್ನಾಗಿ ಆಗುತ್ತದೆ ಇತ್ಯಾದಿ ನಂಬಿಕೆ ಇದ್ದಿರುತ್ತದೆ. ಪೆನ್ನಿನ ನಿಬ್ಬು ಮುರಿದರೆ ಏನೋ ತಳಮಳ, ಬೇಸರ. ಇನ್ನು ಅಂತಹ ವಸ್ತು ನಮ್ಮಿಂದ ದೂರವೇ ಆಗಿಬಿಟ್ಟರೆ? ಕೆಲವು ಸಮಯ ಇನ್ನಿಲ್ಲದಂತೇ ಹುಡುಕಾಡುತ್ತೇವೆ, ಕೊರಗುತ್ತೇವೆ, ಅಳುತ್ತೇವೆ… ಅಪ್ಪ, ಅಮ್ಮ ಹೊಸತು ತಂದುಕೊಟ್ಟರೂ ಅದು ಬೇಡ ಅನ್ನುತ್ತೇವೆ. ಇದಕ್ಕೆ ಕಾರಣ ಆ ವಸ್ತುವಿನೊಂದಿಗೆ ನಾವು ಬೆಸೆದುಕೊಂಡಿದ್ದ ಭಾವ ತೀವ್ರತೆಯಾಗಿರುತ್ತದೆ. ಮುಂದೊಂದು ದಿನ ಬೆಳೆದು ಹಿಂದಿರುಗಿ ನೋಡಿದಾಗ ಅ ದಿನಗಳ ನಮ್ಮ ಒದ್ದಾಟ, ಅಳು ಎಲ್ಲ ಎಷ್ಟು ಕ್ಷಲ್ಲಕ ಎಂದು ತಿಳಿಯಲು, ನಾವು ನಕ್ಕು ಬಿಡುತ್ತೇವೆ. ಕೆಲವು ದಿನ ನಾವು ಅನುಭವಿಸಿದ ಸುದೀರ್ಘ ಭಾವಾವೇಶ, ಸಂಕಟವೆಲ್ಲ ಅದೆಷ್ಟು ನಿರರ್ಥಕ. ಆ ಪೆನ್ನು ಈಗ ಅಷ್ಟು ಮುಖ್ಯವೇ ಅಲ್ಲ ಎಂದೆನಿಸಿಬಿಡುವುದಿದೆಯಲ್ಲ ಅದು ನಿಜವಾದ ಅರಿವು!
ಇದನ್ನೂ ಓದಿ | ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!
ದೇಹ ಸಾವಿಗೆ ಹೆದರಿ ಜೀವಕ್ಕೆ ಜೋತುಬಿದ್ದು ಬಿಡುತ್ತದೆ. ಅನುಕ್ಷಣವೂ ತನ್ನ ಪ್ರಾಣಕ್ಕೇನಾದರೂ ಕುತ್ತು ಬಂದರೆ ಎಂಬ ಭಯದಲ್ಲೇ ಅನೇಕ ಕಸರತ್ತು, ಒದ್ದಾಟ ನಡೆಯುತ್ತಿರುತ್ತದೆ. ಯಾವತ್ತು ಇದೆಲ್ಲ ಅನಗತ್ಯ ತೊಳಲಾಟ ಎಂಬುದು ಅರಿವಾಗುವುದೋ ಈ ಎಲ್ಲ ಒದ್ದಾಟಗಳಿಗೆ ಅಂತ್ಯ ಉಂಟಾಗುತ್ತದೆ. ಜೀವ ತನ್ನದಲ್ಲದ, ನಶ್ವರತೆಗೆ ಅಂಟಿಕೊಂಡಷ್ಟೂ ಮೆತ್ತಿಕೊಳ್ಳುವ ಈ ಮೋಹಕ್ಕೆ ಬೀಳದೇ ಕೊಡವಿದಾಗ ಏನಾಗಬಹುದು ಎಂಬುದನ್ನು ಒಂದು ನಿರ್ಜೀವ ವಸ್ತುವಾದ ಸೈಕಲಿನ ಮೂಲಕ ವೀಕ್ಷಕರಿಗೆ ತಿಳಿಸಿದ ರೀತಿ ಮನಸೂರೆಗೊಳ್ಳುತ್ತದೆ. ಹೀಗಾಗಿ ಇದೊಂದು ವಿಶಿಷ್ಟ ಚಲನಚಿತ್ರ. Netflixನಲ್ಲಿ ಲಭ್ಯವಿದೆ.
(ಲೇಖಕರು ಕಥೆಗಾರರು. ʼಜೋತಯ್ಯನ ಬಿದಿರು ಬುಟ್ಟಿʼ ಇವರ ಇತ್ತೀಚಿನ ಕಥಾಸಂಕಲನ)