Site icon Vistara News

ಭಾವಲೋಕದೊಳ್‌ ಅಂಕಣ : ಬ್ರೇಕಪ್ ಎಂಬ ಮೂರಕ್ಷರದ ಪದ ನೂರು ಜನುಮ ಸವೆಸಿದರೂ ಮುಗಿಯದ ನೋವಿನ ಹಾದಿ!

Love break up

#image_title

#image_title

ಪ್ರತಿಯೊಂದರ ಅಂತ್ಯವೂ ಮತ್ತೊಂದರ ಆರಂಭ!
ಬದುಕೆಂಬ ತೂಗುಯ್ಯಾಲೆಯಲ್ಲಿ ಯಾವುದೂ ಕೂಡ ಶಾಶ್ವತವಲ್ಲ. ಒಮ್ಮೆ ತಂಗಾಳಿಯಂತೆ ಬೀಸಿ ಹಿತ ನೀಡಿದರೆ ಮತ್ತೊಮ್ಮೆ ಸುಡುಗಾಳಿಯಂತೆ ಸುಂಟರಗಾಳಿ ಹೊರಡಿಸುತ್ತದೆ. ಅಮ್ಮನ ಒಡಲಿನಿಂದ ಹೊರಬಿದ್ದು ಕರುಳಬಳ್ಳಿಯ ಕಡಿತದಿಂದಲೇ ಆ ಭಾವಸ್ಥಿತಿಗೆ ವಿದಾಯವೆಂಬ ಹೊಸದೊಂದು ಕೊಂಡಿ ಬೆಸೆದುಕೊಂಡಿರುತ್ತದೆ. ಬೆಳಕಿಗೆ ಕಾಲಿಟ್ಟೊಡನೆ ಕತ್ತಲ ಗರ್ಭಕ್ಕೊಂದು ವಿದಾಯ, ಅಂಬೆಗಾಲಿಟ್ಟು ಹೆಜ್ಜೆ ಹಾಕಿದರೆ ತೂಗು ತೊಟ್ಟಿಲಿಗೊಂದು ವಿದಾಯ, ಕೈನಲ್ಲಿ ಪುಸ್ತಕ ಹಿಡಿದರೆ ಅಕ್ಷರ ಕಲಿಸಿದ ಅಂಕಲಿಪಿಗೊಂದು ವಿದಾಯ, ಪ್ರತಿ ವರ್ಷ ಪಾಸಾದಾಗೊಮ್ಮೆ ಹಳೆ ತರಗತಿಯ ಬೆಂಚಿಗೊಂದು ವಿದಾಯ, ಶಾಲೆ ಬದಲಾಯಿಸಿದಂತೆ ಗೆಳೆಯರ ಪಡೆಗೊಂದು ವಿದಾಯ, ಅನ್ನದ ದಾರಿ ಹಿಡಿದು ಬದುಕ ಅರಸಿ ಹೊರಟಾಗ ನೂರಾರು ವೃತ್ತಿಗಳಿಗೆ ವಿದಾಯ, ಸಲಹಿದ ಮಕ್ಕಳೇ ಸೆಟೆದು ಗದರಿದಾಗ ಅಕ್ಕರೆಯ ಮಕ್ಕಳಿಗೊಂದು ವಿದಾಯ, ಸಾಕು ನನ್ನೆಡೆಗೆ ಬಾ ಎಂಬ ಭಗವಂತನ ಕರೆಗೆ ಬದುಕಿಗೊಂದು ವಿದಾಯ.

ವಿದಾಯದಲ್ಲೇ ಸಾಗಿಹೋದ ಬದುಕಿನಲ್ಲಿ ಕೆಲವೊಂದು ವಿದಾಯಗಳು ನೋವಿನ ಸಂಗತಿಯಾದರೆ ಇನ್ನೂ ಕೆಲವು ಬಿಡುಗಡೆಯ ಸಂಭ್ರಮ, ಸ್ವಾತಂತ್ರ್ಯದ ಸಾಕ್ಷಾತ್ಕಾರ. ಆದರೆ ನೂರಾರು ವಿದಾಯಗಳ ನಡುವೆ ಪ್ರೇಮದ ವಿದಾಯ ಮಾತ್ರ ಎದೆಯೊಳಗೆ ಕಟ್ಟಿಕೊಳ್ಳುವ ಶಾಶ್ವತ ಗೂಡು. ಆ ವಿದಾಯಕ್ಕೆ ಮಾತ್ರ ಗುಡ್‌ಬೈ ಎಂಬ ಎರಡಕ್ಷರವನ್ನು ಎದುರು ನಿಂತು ಹೇಳಲೇ ಆಗದು. ಆ ವಿದಾಯದಲ್ಲೊಂದು ಉತ್ತರ ಸಿಗದ ಪ್ರಶ್ನೆಗಳಿವೆ!?
ನೋವಿದೆ, ನರಳಾಟವಿದೆ, ಕೌತುಕವಿದೆ, ಯಾತನೆಯಿದೆ,
ಕಣ್ಣೀರಿದೆ, ಕೆಟ್ಟ ದ್ವೇಷವಿದೆ, ತೋರಿಕೆಯ ಸಂತಸವಿದೆ,
ಕಿರುಚಾಟದ ಕೂಗಿದೆ, ಕಗ್ಗತ್ತಲೆಯ ಮೌನವಿದೆ, ಸಾಕು ನಡೆ ಎಂಬ ಅಸಡ್ಡೆಯಿದೆ,
ಇನ್ನು ಬಾಳು ಸಾಗದು ಎಂಬ ಅಸಹಾಯಕತೆಯಿದೆ, ಕೈ ಮುಗಿದು ಹೊರ ನಡೆವ ಮುಕ್ತಿಯಿದೆ,
ಪ್ರೇಮದೆಡೆಗೆ ಅನುಮಾನವಿದೆ, ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂಬ ಅವಮಾನವಿದೆ,
ಅಹಂಕಾರದ ದಡ್ಡತನವಿದೆ….

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು ನಾವು ನಮ್ಮ ಅಂತರಾಳವ …!?
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ ?
-ಎಚ್ ಎಸ್ ವೆಂಕಟೇಶ್‌ಮೂರ್ತಿ

ಎಲ್ಲವೂ ಹೇಗೆ ನಡೆದುಬಿಡುತಲ್ವಾ !? ಅವನೆಡೆಗೊ/ಅವಳೆಡೆಗೊ ಪ್ರೇಮ ಚಿಗುರಿದ್ದಾದರೂ ಯಾವಾಗ!?
ಆ ಪ್ರೇಮ ಅಂಕುರವಾಗಲೂ ಕಾರಣವೇ ಬೇಕಿಲ್ಲ.
ರಸ್ತೆಯಲ್ಲಿ ನಿಸ್ಸಂಕೋಚವಾಗಿ ಹೆಜ್ಜೆ ಹಾಕುತ್ತಿದ್ದ ಅವಳೆದುರಿಗೆ ಭರ್ರನೆ ಬೈಕ್‌ನಲ್ಲಿ ಎದುರಾದ ಅವನ ನೋಟಕ್ಕೆ ಸೋತಳಾ?
ರಸ್ತೆಯ ಕಾರ್ನರಿನಲ್ಲಿ ನಿಂತು ಟೀ ಕುಡಿದು ಸಿಗರೇಟು ಎಳೆಯುವ ಅವನ ಭಂಗಿಗೆ ಮೆಚ್ಚಿದಳಾ?
ಸೋತೆ ಎಂದು ಕುಗ್ಗಿದಾಗ ಹೆಗಲಾಗಿ ಜೊತೆ ನಿಂತವನ ಅಪ್ಪನ ಗುಣಕ್ಕೆ ಮನಸು ಕೊಟ್ಟಳಾ?
ಗಾಂಭೀರ್ಯದ ಮಾತಿನ ಧಾಟಿಗೆ ಮರಳಾದಳಾ?
ಅವನಾದರೂ ಅವಳೆಡೆಗೆ ಮೋಹಗೊಂಡಿದ್ದು ಯಾವ ಕ್ಷಣಕ್ಕೆ ?
ಗೌರಿಹಬ್ಬದ ಮುಸ್ಸಂಜೆಯಲ್ಲಿ ಅಮ್ಮನ ಹಿಂದೆ ಸೀರೆಯುಟ್ಟು ಬಂದವಳ ನೋಟಕ್ಕೆ ಕಳೆದುಹೋದನಾ?
ಕ್ಲಾಸಿನಲ್ಲಿ ಎಲ್ಲರ ನಡುವೆ ಸೆಳೆಯುತ್ತಿದ್ದ ಅವಳ ಕಾಂತಿಯ ಸೌಂದರ್ಯಕ್ಕೆ ಶರಣಾದನಾ?
ನನ್ನವಳು ಎಂದು ಎದೆತಳದಲ್ಲಿ ಭಾವ ಮೂಡಿದಾಗ ಮನಸ್ಸು ಕೊಟ್ಟನಾ?
ಯಾವುದೇ ಪ್ರೇಮಿಗಳನ್ನು ಕೇಳಿದಾಗಿಯೂ ಈ ರೀತಿಯ ನೂರಾರು ಉತ್ತರ ಸಿಕ್ಕಿದರೂ ಕೂಡ ಅದು ದಿಟವಲ್ಲ.
ಆ ಪ್ರೇಮಕ್ಕೆ ಅಸಲಿಗೆ ಕಾರಣವೇ ಇಲ್ಲ, ಇದ್ದರೂ ಅದು ನಾವು ಕೊಡುವೆ ಸಬೂಬಷ್ಟೆ.
ಕಾರಣದ ಆಧಾರವನ್ನು ಮೀರಿದ್ದು ಪ್ರೇಮ.

ಪ್ರೀತಿಯ ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತಲ್ಲ?

ದಾರಿ ತಪ್ಪಿದ್ದು ಯಾವಾಗ!? ಪ್ರೀತಿ ಶುರುವಾದಾಗ ಇದ್ದ ಹುಮ್ಮಸ್ಸು, ಆಸ್ಥೆ ಅರಿವಿಗೆ ಬಾರದಂತೆ ಕಳೆದುಹೋಗಲು ಶುರು ಮಾಡಿದಾಗಲೇ ಎಲ್ಲವೂ ಬೇರೆ ದಿಕ್ಕಿನೆಡೆ ನಡೆಯಲು ಶುರುವಿಟ್ಟುಬಿಟ್ಟಿರುತ್ತದೆ.
ಏನೋ ಕಾರಣ ಹೇಳಿ ಕದ್ದುಮುಚ್ಚಿ ತಪ್ಪಿಸಿಕೊಳ್ಳುವುದು, ಸುಳ್ಳು ಹೇಳಿ ಸಿಕ್ಕಿಬೀಳುವುದು,
‘ನೀನೆ ಎಲ್ಲ’ ಅನ್ನುವ ಭಾವದಿಂದ ‘ಎಲ್ಲರೂ ನನಗೆ ಬೇಕಾದವರೆ’ ಎಂಬ ಮಾತನಾಡಿ ಎದೆಯಾಳದಲ್ಲಿ ನೋವು ಮೂಡಿದಾಗ, ನಿನ್ನೊಟ್ಟಿಗೆ ಮಾತಾಡಿದರೆ ಸಾಕು ಎಂಬ ಭಾವದಿಂದ ಬರೀ ನಿನ್ನ ಜೊತೆ ಹರಟೋಕೆ ಆಗಲ್ಲ Give me some space ಎಂಬ ಮಾತು ಆಡಿದಾಗ, ಸಣ್ಣ ಹುಸಿ ಕಣ್ಣೀರು ಕೂಡಾ ತಡೆಯಲಾಗದ ಸ್ಥಿತಿಯಿಂದ ಬಿಕ್ಕಳಿಸಿ ಬಿದ್ದು ಒದ್ದಾಡಿದರೂ ಕಾಣದಾದ ಅಸಡ್ಡೆಯಲ್ಲಿ, ನಗುವೊಂದೆ ನಿನ್ನ ಅಂದ ಎನ್ನುತ್ತಿದ್ದವರು ರಸ್ತೆಯ ಪಕ್ಕ ಇನ್ಯಾರನ್ನೋ ಕಣ್ಣಾಡಿಸುವ ಕಲ್ಮಶದಲ್ಲಿ, ಸ್ಪರ್ಶವೊಂದೇ ಸಾನಿಧ್ಯ ಎಂಬ ಭಾವದಿಂದ ದೇಹದೆಡೆಗೆ ಬೆಳೆದು ನಿಂತ ಕಾಮದಲ್ಲಿ, ಕಲ್ಪನೆಯ ಕನಸು ಕಟ್ಟಿದ್ದರಿಂದ ಕನಸುಗಳನ್ನು ಕೈಚೆಲ್ಲಿದ ಹತಾಶೆಯಲ್ಲಿ,
ಪ್ರೇಮ ಗೋಪುರವೆಂಬ ತುತ್ತತುದಿ ತೋರಿಸಿ ಈಗ ಒಂದೆಜ್ಜೆ ಕೂಡ ನಡೆಯಲಾಗದ ತಾತ್ಸರದಲ್ಲಿ,
ಅಕ್ಕಪಕ್ಕದವರ ಚಾಡಿ ಮಾತಿನಲ್ಲಿ, ಮನೆಯವರ ಒತ್ತಡದಲ್ಲಿ, ನಂಬಿಕೆಯಿಲ್ಲದ ಸಂಬಂಧದಲ್ಲಿ, ನನ್ನ ಬಿಟ್ಟು ಎಲ್ಲಿ ಹೋದಾನು ಎಂಬ ಅಲಕ್ಷ್ಯದಲ್ಲಿ, ಪ್ರೀತಿಯೇ ಇಲ್ಲದ ಭಾವದಲ್ಲಿ ಪ್ರೀತಿ ಸತ್ತು ಹೋಗುತ್ತದೆ.
ವರುಷಗಳು ಕಳೆದಂತೆ ಪ್ರೇಮಿಗಳಿಬ್ಬರು ಕೇವಲ ಅನಾಮಿಕರಾಗುತ್ತಾರೆ.

ಪ್ರೀತಿಯಲ್ಲಿ ಯಾವುದು ಸರಿಯಾಗಿಲ್ಲ, ಇದನ್ನು ಗಟ್ಟಿಯಾಗಿ ಬಿಗಿ ಹಿಡಿದು ಸರಿಪಡಿಸಿಕೊಳ್ಳಬೇಕೆಂಬ ಬಯಕೆಯನ್ನೆ ಪ್ರೇಮಿಗಳು ಸಾಯಿಸಿರುತ್ತಾರೆ. ಇದರಿಂದ ಮುಕ್ತಿ ಪಡೆದು ಹೊರನಡೆದರೆ ಸಾಕಪ್ಪಾ ! ಎಂಬ ಧಾವಂತ ಅದಾಗಲೇ ಅವರನ್ನು ಆವರಿಸಿರುತ್ತದೆ. ಎಷ್ಟಾದರೂ ಇವನು‌ ನನ್ನ ಮುದ್ದಿನ‌ ಹುಡುಗನಲ್ಲವೇ? ಕ್ಷಮಿಸಿಬಿಡೋಣ, ಕೋಪಿಷ್ಠನಾದರೂ ಅಪ್ರಮಾಣಿಕನಲ್ಲ ಅನುಸರಿಸಿಕೊಂಡು ಬಿಡೋಣ,
ನನಗಾಗಿ ತನ್ನನ್ನೇ ಬದಲಾಯಿಸಿಕೊಂಡಿದ್ದಾನೆ! ಸ್ವಲ್ಪ ಕಾದರೆ ಬದುಕನ್ನು ಕಟ್ಟಿನಿಲ್ಲಿಸುತ್ತಾನೆ, ಮನೆಯವರನ್ನು ಒಂದಿಷ್ಟು ದಿನ ಸಂತೈಸೋಣ, ಇನ್ನೂ ಎಳೆ ಮನಸ್ಸು ಜವಾಬ್ದಾರಿ ಇಲ್ಲದಿರುವುದರಿಂದ ಈ ನಡವಳಿಕೆ ನನ್ನ ಕುತ್ತಿಗೆಗೊಂದು ತಾಳಿ ಕಟ್ಟಿದರೆ ಸರಿ ಹೋಗುತ್ತಾನೆ, ಇವಳ ಜೊತೆಗಲ್ಲವೆ ಸಪ್ತಪದಿಯ ಕನಸು ಕಂಡಿದ್ದು,
ನನ್ನ ಮಕ್ಕಳಿಗೆ ಮಡಿಲು ನೀಡಬೇಕಾದವಳು ಇವಳಲ್ಲವೇ, ಸೋತಾಗ ನಾನಿದ್ದೇನೆ ಎಂದು ಜೊತೆಗಿದ್ದವಳಲ್ಲವೇ? ಮನೆಯವರೇ ಕೈಬಿಟ್ಟಾಗ ನನ್ನನ್ನು ನಂಬಿದವಳಲ್ಲವೇ? ಅವಳಿಗೆ ಅದೆಷ್ಟು ಪ್ರೇಮಪತ್ರ ಬಂದರೂ ಎಲ್ಲವನ್ನೂ ತಿರಸ್ಕರಿಸಿದವಳಲ್ಲವೇ? ಒಂದಿಷ್ಟು ಹಠಮಾರಿಯಾದರೂ ಕ್ಷಣಮಾತ್ರದಲ್ಲಿ ಮಗುವಾಗುವವಳಲ್ಲವೇ? ಹಣದ ಆಸೆಯಿದ್ದರೂ ಬದುಕು ನೋಡಬೇಕೆಂಬ ಬಯಕೆಯಲ್ಲವೇ!? ಹೀಗೆ ನೂರಾರು ಸಮಾಧಾನಗಳನ್ನು ಒಂದು ಕ್ಷಣ ತಮ್ಮೊಳಗೆ ಕೇಳಿಕೊಂಡಿದ್ದರೆ ಎಲ್ಲವೂ ಸರಿಹೋಗಿರುತ್ತಿತ್ತು. ಕನಿಷ್ಠ ಎಲ್ಲದಕ್ಕೂ ಉತ್ತರವಾದ್ರೂ ಸಿಕ್ಕಿರುತ್ತಿತ್ತು. ಆದರೆ ಆ ಪ್ರಯತ್ನಕ್ಕೆ ಅವರು ಹೋಗಲೇ ಇಲ್ಲ. ಅದೊಂದು ಭಾವವನ್ನೇ ಹಿಡಿದುಕೊಂಡು ಬ್ರೇಕಪ್ ಎಂದು ಗಟ್ಟಿಯಾಗಿ ಹೇಳಿ ಇನ್ನೆಂದೂ ನಿನ್ನೊಟ್ಟಿಗೆ ಬದುಕಲಾಗದು ಎಂದು ಹೊರನಡೆದುಬಿಟ್ಟರು.

#image_title

ಭರತನ ಭೂಮಿಯಲ್ಲಿ ಅದೆಷ್ಟೋ ಬದಲಾವಣೆಯಾದರೂ ಭಾವನೆಗಳಿನ್ನು ಬದುಕಿದೆ. ಸೀತೆ ಇಲ್ಲದ ರಾಮ ಪ್ರತಿಮೆಯನ್ನೇ ಮಡದಿಯಾಗಿಸಿ ಅಶ್ವಮೇಧ ಯಾಗ ಮಾಡಿದ. ಸಾವಿರಾರು ಸಖಿಯರು ಅವನೆಡೆಗೆ ಅರಸಿ ಬಂದರೂ ಕೃಷ್ಣ ಮಾತ್ರ ಅವನೆಲ್ಲ ಪ್ರೀತಿಯನ್ನು ರಾಧೆಗೆ ಮೀಸಲಿಟ್ಟಿದ್ದ. ಸಾಕು ನಡೆ ಎಂದು ಎದ್ದುಹೋಗಲು ಇದು ಎಂಜಲೆಲೆಯ ಅನ್ನವಲ್ಲ! ಅಮೂರ್ತ ಪ್ರೇಮದ ಬದುಕು. ಇವಳು ಸರಿಯಲ್ಲ ಇನ್ನೊಬ್ಬಳು, ಇನ್ನೊಬ್ಬಳಲ್ಲಿ ಬೇಕಾದುದಿಲ್ಲ ಮತ್ತೊಬ್ಬಳು, ಮತ್ತೊಬ್ಬಳ ಜೊತೆ ಬದುಕಿಲ್ಲ, ಮಗದೊಬ್ಬಳು ಎಂದು ಹುಡುಕುತ್ತಾ ಹೋದಂತೆ ಚಾರಿತ್ರ್ಯದ ಜೊತೆಜೊತೆಗೆ ಆಂತರ್ಯದ ಅಂತರಾಳವೆ ಸಾಯುವುದಿಲ್ಲವೇ!? ಯಾರೊಂದಿಗೂ ಬದುಕಲಾಗದು ಎನಿಸಿದರೆ ಹುಡುಕಬೇಕಿರುವುದು ಹೊರಗೋ ಅಥವಾ ತಿದ್ದಿಕೊಳ್ಳಬೇಕಿರುವುದು ನಮ್ಮೊಳಗೋ? ನೀನಿಲ್ಲದಿದ್ದರೆ ಇನ್ನೊಬ್ಬ ಎಂದು ಬದುಕನ್ನು ಆಯ್ಕೆಗೆ ಮೀಸಲಿಡುವುದಲ್ಲ.
Relationship is a beautiful creature.

80 ವರುಷಗಳು ಅಜ್ಜನ ಜೊತೆಗೆ ಬಾಳಿ ಬದುಕಿದ ಮೂಲೆಯ ಅಜ್ಜಿ ನಮಗೆ ಕಾಣುವುದೇ ಇಲ್ಲ.
ಅವಳು ಅನುಸರಿಕೊಂಡು ಹೋಗಿದ್ದು ಅವಳ ಅಸಹಾಯಕತೆಯಲ್ಲ, ಸಂಬಂಧದ ಮೌಲ್ಯ ತಿಳಿದವಳು ಎಂಬ ಭಾವ ಗೊತ್ತೇ ಆಗುವುದಿಲ್ಲ. ಮುರಿದುಕೊಳ್ಳುವುದು ಸುಲಭ, ಕಡಿದುಕೊಳ್ಳುವುದು ಸಲೀಸು, ಬೆಸೆದು ಬೆಳೆಸಲು ಬದುಕೇ ಸಾಲದು. ಸಾಧ್ಯವಾದರೆ ಮತ್ತೊಮ್ಮೆ ಕಾಲು ಹಿಡಿದು ಬೇಡಿ ಉಳಿಸಿಕೊಳ್ಳಿ, ಎಲ್ಲವನ್ನೂ ಕೊಟ್ಟ, ಕಲಿಸಿಕೊಟ್ಟ ಪ್ರೇಮ ಕಳೆದುಹೋಗಬಾರದು. ಕೊಂಚ ಅಹಂ ಬಿಟ್ಟು ಪ್ರಯತ್ನಿಸಿದರೆ ಜೊತೆಗಿರುತ್ತಿದ್ದರೇನೋ ಎಂಬ ಕೊರಗು ಉಳಿಸಿಕೊಳ್ಳಬೇಡಿ. ಕಳೆದುಕೊಳ್ಳಲೇ ಬೇಕೆಂದುಕೊಂಡರೆ ಮುಪ್ಪಾದರೂ ಮರೆಯದ ನೋವು ನಿಮ್ಮನ್ನು ಬೆನ್ನಟ್ಟಿ ಕಾಡುತ್ತದೆ‌ ಎಂಬುದನ್ನು ಮರೆಯಬೇಡಿ.
ಬ್ರೇಕಪ್ ಎಂಬ ಮೂರಕ್ಷರದ ಪದ ನೂರು ಜನುಮಕ್ಕಾಗುವಷ್ಟು ಯಾತನೆಯ ಹಾದಿ.

ಇದನ್ನೂ ಓದಿ : ಭಾವಲೋಕದೊಳ್‌ ಅಂಕಣ : ಕೊನೆಯದೊಂದು ಸಹಿ ಹಾಕಿ ಹೋಗುತ್ತೇನೆ, ನಿನ್ನ ಬಾಳು ಇನ್ನಾದರೂ ಸಿಹಿಯಾಗಿರಲಿ..

Exit mobile version