ಜುಲೈ ತಿಂಗಳಲ್ಲಿ ರಾಜ್ಯಪಾಲರ ಉಪಸ್ಥಿತಿಯ ಜಂಟಿ ಅಧಿವೇಶನಕ್ಕೆ ಸರ್ಕಾರ ಸಕಲ ಸಿದ್ಧತೆ ಆರಂಭಿಸಿದೆ. ಈ ನಡುವೆ ವಿಧಾನಸೌಧ ರೌಂಡ್ಸ್‌ನಲ್ಲಿ ಗಮನ ಸೆಳೆದಿದ್ದು ನೂತನ ಶಾಸಕರಿಗೆ ಕಾರ್ಯಾಗಾರಕ್ಕೆ ಕರೆದ ಅತಿಥಿಗಳ ಮೇಲಿನ ಕೋಪವನ್ನು ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವವರು ಸ್ಪೀಕರ್ ನಡೆಗೆ ತಿರುಗಿಸಿದ್ದು. ವಿಧಾನಸೌಧದ ಸಿಎಂ ಕಚೇರಿಯ ದಕ್ಷಿಣದ ಬಾಗಿಲು ತೆರೆಸಲು ಸಿದ್ದರಾಮಯ್ಯ ಸಿಎಂ ಆಗಬೇಕಾಯಿತು. ಪಂಚಮಸಾಲಿ ನಿಯೋಗದ ಸಭೆಯಲ್ಲಿ ಡಿ ಕೆ ಶಿವಕುಮಾರ್ ಮಾತಿಗೆ ಹೆಬ್ಬಾಳ್ಕರ್ ಏರುಧ್ವನಿಯಲ್ಲಿ ಮಾತನಾಡಿದ್ದು ಭಾರೀ ಚರ್ಚೆಗೆ ಕಾರಣವಾಯಿತು.
ವಾಸ್ತವ ಅರಿಯುವುದರಲ್ಲಿ ಎಡವಿದ ಬುದ್ಧಿಜೀವಿಗಳು
ಈ ವಾರ ಹಲವು ವಿಚಾರಗಳು ವಿಧಾನಸೌಧ ರೌಂಡ್ಸ್‌ನಲ್ಲಿ ಚರ್ಚೆ ಆಗಿವೆ. ಹೆಚ್ಚಾಗಿ ಗಮನ ಸೆಳೆದಿದ್ದು ಸ್ಪೀಕರ್ ಯು ಟಿ ಖಾದರ್ ಅವರು ನೂತನವಾಗಿ ಆಯ್ಕೆಯಾಗಿ ಬಂದ ಶಾಸಕರಿಗೆ ನಾನಾ ವಲಯದ ಪ್ರಾಜ್ಞರಿಂದ ಎರಡು ದಿನಗಳ ಕಾಲ ಕಾರ್ಯಾಗಾರ ಮಾಡುವ ನಿರ್ಧಾರ. ಈ ಬಗ್ಗೆ ಸ್ಪೀಕರ್ ಯು ಟಿ ಖಾದರ್ ಆಗಲಿ ಇಲ್ಲವೇ ಅವರ ಕಚೇರಿ ಆಗಲಿ ಎಲ್ಲೂ ಮಾಹಿತಿ ಹಂಚಿಕೊಂಡಿರಲಿಲ್ಲ. ಸ್ಪೀಕರ್ ಖಾದರ್ ಅವರು ಖುದ್ದು ಭೇಟಿಯಾಗಿ ಅಹ್ವಾನ ನೀಡಿದ್ದು ಕೇವಲ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರನ್ನ ಮಾತ್ರ. ಯಾಕೆಂದರೆ ಡಾ. ವೀರೇಂದ್ರ ಹೆಗ್ಗಡೆ ಅವರು ನಾಡಿನಲ್ಲಿ ಎಲ್ಲರಿಂದಲೂ ಅಪಾರ ಗೌರವಕ್ಕೆ ಪಾತ್ರರಾಗಿರುವವರು ಎಂಬ ಕಾರಣಕ್ಕೆ ಅವರನ್ನು ಸಹಜವಾಗಿಯೇ ಆಹ್ವಾನ ಮಾಡಿದ್ದರು. ಸ್ಪೀಕರ್ ಮಾತಿಗೆ ಗೌರವ ಕೊಟ್ಟು ಹೆಗ್ಗಡೆ ಅವರು ಬರಲು ಒಪ್ಪಿಗೆ ಸೂಚಿಸಿದ್ದರು. ಆದರೆ ಸ್ವಯಂಘೋಷಿತ ಬುದ್ಧಿಜೀವಿಗಳು ಅನಗತ್ಯವಾಗಿ ಹಲವಾರು ಗಣ್ಯ ವ್ಯಕ್ತಿಗಳ ಹೆಸರು ಉಲ್ಲೇಖಿಸಿ ಲಬೋಲಬೋ ಎಂದು ಬಾಯಿ ಬಡಿದುಕೊಂಡರು. ಗುರುರಾಜ ಕರ್ಜಗಿ, ರವಿಶಂಕರ್ ಗುರೂಜಿ, ಆಶಾ ದೀದಿ ಅವರನ್ನ ಯಾಕೆ ಕರೀತೀರಾ ಎಂದು ಉದ್ದದ ಪತ್ರ ಬರೆದು ಬಿಟ್ಟರು. ವಾಸ್ತವಿಕವಾಗಿ ರವಿಶಂಕರ್ ಗುರೂಜಿ ಸದ್ಯ ವಿದೇಶದಲ್ಲಿದ್ದಾರೆ. ಗುರುರಾಜ ಕರ್ಜಗಿ ಅವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಆಶಾ ದೀದಿಗೆ ಇದು ಯಾವುದೂ ಬೇಕಿಲ್ಲ. ಕೊನೆಗೆ ಬುದ್ಧಿಜೀವಿಗಳ ಈ ದೂರು ಸಿಎಂವರೆಗೂ ಹೋಗಿ ಅವರು ಸಹ ಅತಿಥಿಗಳನ್ನು ಬದಲಿಸುವಂತೆ ಸ್ಪೀಕರ್‌ಗೆ ಸೂಚಿಸಿದರು ಎನ್ನಲಾಗಿದೆ. ಅಂತೂ ಬುದ್ಧಿಜೀವಿಗಳ ಆತುರಗೇಡಿತನದಿಂದಾಗಿ ಗಣ್ಯರು ಮುಜುಗರ ಅನುಭವಿಸಬೇಕಾಯಿತು.
ಮುಚ್ಚಿದ ಬಾಗಿಲು ತೆಗೆಸಲು ಸಿದ್ದರಾಮಯ್ಯ ಸಿಎಂ ಆಗಬೇಕಾಯಿತು!
ಕೆಲ ನಾಯಕರು ವಿಧಾನಸೌಧವನ್ನು ಸಾರ್ವಜನಿಕರ ಸ್ವತ್ತು ಎಂದು ಪರಿಗಣಿಸಿಯೇ ಇಲ್ಲ. ಅಧಿಕಾರಕ್ಕೆ ಬಂದ ಮೇಲೆ ತಮಗೆ ಬೇಕಾದ ಹಾಗೇ ಕೊಠಡಿ ಬದಲಿಸಿಕೊಳ್ಳುತ್ತಿದ್ದಾರೆ. ಇದು ಮೂರೂ ಪಕ್ಷಗಳ ನಾಯಕರಿಗೂ ಅನ್ವಯಿಸುತ್ತದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಇರುವ ಸಿಎಂ ಕಚೇರಿಯ ದಕ್ಷಿಣ ಬಾಗಿಲು 2008ರಲ್ಲಿ ಯಡಿಯೂರಪ್ಪ ಸಿಎಂ ಆದಾಗ ವಾಸ್ತು ಸಲುವಾಗಿ ಬಂದ್ ಮಾಡಿದ್ದರು. ಅವರ ಬಳಿಕ ಸಿಎಂ ಆದ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಸಹ ಆ ಬಾಗಿಲು ಓಪನ್ ಮಾಡಿಸಲಿಲ್ಲ. ಇನ್ನು 2013ರಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ ಈ ಬಾಗಿಲು ಓಪನ್ ಮಾಡಿಸಿ ವಾಸ್ತುದೋಷ ನಿವಾರಣೆ ಮಾಡಿದರು. 2018ರಲ್ಲಿ ಕುಮಾರಸ್ವಾಮಿ ಸಿಎಂ ಆದ ತಕ್ಷಣ ಮತ್ತೆ ದಕ್ಷಿಣದ ಬಾಗಿಲು ಬಂದ್ ಮಾಡಿಸಿದರು. ತದನಂತರ ಬಂದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅದನ್ನ ಓಪನ್ ಮಾಡಿಸಲೇ ಇಲ್ಲ. ಸಿದ್ದರಾಮಯ್ಯ ಇತ್ತೀಚೆಗೆ ಲಿಫ್ಟ್ ನಿಂದ ಹೊರ ಬರುವಾಗ ಮುಚ್ಚಿದ ಬಾಗಿಲು ಕಂಡು, ಯಾಕೆ ಈ ಬಾಗಿಲು ಓಪನ್ ಮಾಡಲ್ಲ ಎಂದಿದ್ದಾರೆ. ಸರ್ ವಾಸ್ತು ದೋಷ ಅಂತ ಈ ಹಿಂದಿನ ಮುಖ್ಯಮಂತ್ರಿಗಳು ಮುಚ್ಚಿಸಿದ್ದಾರೆ ಅಂತ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಕಿಟಕಿ ಬಾಗಿಲು ಇಡುವುದು ಗಾಳಿ ಬೆಳಕು ಬರಲಿ ಅಂತಾರೀ. ಮೊದಲು ಬಾಗಿಲು ಓಪನ್ ಮಾಡ್ಸಿ ಅಂತ ಹೇಳಿ ಅದೇ ಬಾಗಿಲಿನಿಂದ ಕೊಠಡಿಗೆ ಎಂಟ್ರಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಈ ನಡೆ ವಿಧಾನಸೌಧ ಆವರಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಸಮುದಾಯ ನಂಬಿದರೂ ನೀವು ನಂಬಲ್ಲವಾ ಎಂದು ಹೆಬ್ಬಾಳ್ಕರ್ ಗುಡುಗು
ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿ ಕೆ ಶಿವಕುಮಾರ್ ಅವರದು ಒಂದು ರೀತಿಯಲ್ಲಿ ಗುರು – ಶಿಷ್ಯರ ನಂಟು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಶಿಫಾರಸು ಸಂಬಂಧ ಸಿಎಂ ಮತ್ತು ಡಿಸಿಎಂ ಭೇಟಿ ಮಾಡಿ ಅವರು ಇತ್ತೀಚೆಗೆ ಮನವಿ ಮಾಡಿದರು. ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಸಮುದಾಯ ಮೀಸಲಾತಿ ನಮ್ಮ ಕೈ ಸುಡಲ್ವಾ ಅಂದಿದ್ದಾರೆ. ಕಾರಣ 2018ರಲ್ಲಿ ಕಾಂಗ್ರೆಸ್ ಲಿಂಗಾಯತ ಧರ್ಮಕ್ಕೆ ಕೈ ಹಾಕಿ ಕೈ ಸುಟ್ಟು ಕೊಂಡಿತ್ತು. ಹೀಗಾಗಿ ಡಿಕೆಶಿ ನಮಗೆ ತೊಂದರೆ ಆಗಲ್ವಾ ಅಂತ ಕೇಳಿದ್ದಾರೆ. ಪಕ್ಕದಲ್ಲಿ ಕೂತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ “”ಸಮುದಾಯ ನಂಬಿದರೂ ನೀವು ನಂಬಲ್ಲವಾ?ʼʼ ಅಂತ ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದ್ದು ಕಂಡು ಸಭೆಯಲ್ಲಿದ್ದವರೆಲ್ಲ ಹೌಹಾರಿದ್ದಾರೆ. ಆ ಮೇಲೆ ಹೊರ ಬಂದ ಕೆಲ ನಾಯಕರು ನೀವು ಸರಿಯಾಗಿ ಮತ್ತು ಧೈರ್ಯವಾಗಿ ಹೇಳಿದ್ರಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಕ್ಷಣ ಹೆಬ್ಬಾಳ್ಕರ್ I have Rights ಎಂದು ಪ್ರತಿಕ್ರಿಯಿಸಿದರಂತೆ. ಆಗ ಅಲ್ಲಿದ್ದವರು, ಇವರು ಯಾವ ಅರ್ಥದಲ್ಲಿ ಹೀಗೆ ಹೇಳಿದರು ಎಂದು ತಲೆ ಕೆಡಿಸಿಕೊಂಡರಂತೆ.
ಎಸ್‌ಬಿಎಂ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ
ಕಾಂಗ್ರೆಸ್ ಸರ್ಕಾರ ಬಂದ ಬಳಿಕ, ಎಸ್‌ಬಿಎಂ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವರು ಮೂವರೂ ಸೈಲೆಂಟ್ ಆಗಿದ್ದಾರೆ. ವಿಧಾನಸೌಧದ ಮೊದಲ ಮಹಡಿಯ ಹೊಟೇಲ್ ನಲ್ಲಿ ಕಾಫಿ ಕುಡಿಯುತ್ತಿರುವಾಗ ಏನ್ ಸರ್ ಎಸ್ಬಿಎಂ ಪತ್ತೆ ಇಲ್ಲ. ಕಾಂಗ್ರೆಸ್ ಗೆ ಬಂದಿದ್ದರೆ ಮೂವರೂ ಗೆಲ್ಲುತ್ತಿದ್ರು. ಕೊನೆಯ ಕ್ಷಣದವರೆಗೂ ಸೋಮಶೇಖರ್, ಬೈರತಿ ಬಸವರಾಜ ಸಂಪರ್ಕದಲ್ಲಿ ಇದ್ವಿ. ಸೋಮಶೇಖರ್ ಆ ಕ್ಯಾಬಿನೆಟ್ ಮುಗಿಯಲಿ ಅಂತ ಹೇಳಿ ನಮಗೆ ಕೈಕೊಟ್ಟರು. ಈಗ ಸಿಕ್ಕಿದಾಗ ಕೇಳಿದ್ರೆ ಆಗ ಬಂದಿದ್ರೆ ಚೆನ್ನಾಗಿ ಇರ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬಂದ ದೆಹಲಿಯ ಚಾಣಕ್ಯನ ಕರೆ ನನ್ನ ಧೈರ್ಯ ಕುಗ್ಗಿಸಿತು ಅಂತ ಹೇಳಿದ್ರಂತೆ. ಇನ್ನು ಮುನಿರತ್ನ ಕಾಂಗ್ರೆಸ್ ಬರಲು ಡಿ ಕೆ ಬ್ರದರ್ಸ್ ಗೆ ಇಷ್ಟವಿರಲಿಲ್ಲ. ಕುಸುಮಗೆ ಕ್ಷೇತ್ರ ಸಿಗಲ್ಲ ಅನ್ನೋ ಕಾರಣಕ್ಕೆ. ಬಸವರಾಜ, ಎಸ್ಟಿ ಸೋಮಶೇಖರ್ ಮೇಲೆ ಇದ್ದ ಪ್ರೀತಿ ಮುನಿರತ್ನ ಮೇಲೆ ಇರಲ್ಲಿಲ್ಲವಂತೆ ಅವರಿಗೆ!
ಮಹಿಳೆಯರ ಶಕ್ತಿ ಪ್ರದರ್ಶನ ಜಾಸ್ತಿ ಆಗ್ತಿದೆ!
ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಬಸ್‌ನಲ್ಲಿ ಮಹಿಳೆಯರು ವಿಪರೀತ ತುಂಬಿಕೊಂಡು, ನಿತ್ಯ ಗಲಾಟೆ ನಡೆಯುತ್ತಿದೆ. ನಮ್ ಹೆಂಡ್ರು ಬಿಟ್ಟಿ ಬಸ್‌ನಲ್ಲಿ ಊರೂರು ಸುತ್ತುತ್ತಿದ್ದಾರೆ; ಮನೇಲಿ ಅಡುಗೆ ಮಾಡೋರಿಗೆ ಗತಿ ಇಲ್ಲ ಎಂದು ಗಂಡಸರು ಆರ್ತನಾದ ಹೊರಡಿಸುತ್ತಿದ್ದಾರೆ. ಯಾಕೆ? ಮಹಿಳೆಯರು ಸುತ್ತಾಡಬಾರದಾ? ನೀವು ಮಾತ್ರ ಊರು ಸುತ್ತಬೇಕಾ ಎಂಬ ಮಾರುತ್ತರೂ ಕೇಳಿ ಬರುತ್ತಿದೆ. ಈ ನಡುವೆ, ಈ ಫ್ರೀ ಬಸ್ ಯೋಜನೆಗಿಂತ ಮಹಿಳೆಯರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಉಚಿತವಾಗಿ ನೀಡಿದರೆ ಸಿದ್ದರಾಮಯ್ಯ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಿದ್ದರು ಅನ್ನೋ ಅಭಿಪ್ರಾಯವೂ ಕೇಳಿ ಬರುತ್ತಿದೆ.
ಇದನ್ನೂ ಓದಿ: ವಿಧಾನಸೌಧ ರೌಂಡ್ಸ್: ತಿಂಗಳಾದರೂ ಸಚಿವರಿಗಿಲ್ಲ ಮನೆ ಭಾಗ್ಯ, ವಿಧಾನಸೌಧ ಈಗ ಕೆ ಆರ್ ಮಾರ್ಕೆಟ್!
ಗುದ್ದುವ ಟಗರು ಹುಡುಕುತ್ತಿರುವ ಬಿಜೆಪಿ!
ರಾಜ್ಯ ಬಿಜೆಪಿ ಚುನಾವಣೆ ಸೋತ ಬಳಿಕ ಚೇತರಿಸಲು ಯತ್ನಿಸುತ್ತಿದೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡನ್ನೇ ತಿರುಗಿ ಹೊಡೆಯಲು ಹವಣಿಸುತ್ತಿದೆ. ವಿಧಾನಸಭೆ ಒಳಗೆ ಸಿದ್ದರಾಮಯ್ಯ ಅವರನ್ನ ಎದುರಿಸುವ ನಾಯಕ ಈಗ ಬಿಜೆಪಿಗೆ ಬೇಕಿದೆ. ಯಾವುದೇ ಆರೋಪಗಳು ಇಲ್ಲದವರು ಬೇಕಾಗಿದ್ದಾರೆ. ಅಂಕಿಅಂಶಗಳ ಸಮೇತ ಮಾತನಾಡುವವರು ಬೇಕಾಗಿದ್ದಾರೆ. ಸಿದ್ದರಾಮಯ್ಯ ಅನ್ನೋ ಟಗರಿಗೆ ಗುಮ್ಮುವ ಟಗರು ಬೇಕು ಅಂತ ಹುಡುಕಾಡುತ್ತಿದ್ದಾರೆ. ಇನ್ನು ವಿಧಾನಸಭೆ ಹೊರಗೂ ಸಹ ಅಂಥ ಯುವ ಮತ್ತು ವರ್ಚಸ್ಸು ಇರೋ ನಾಯಕನನ್ನ ಹುಡುಕಲಾಗುತ್ತಿದೆ. ಹಾಗಾಗಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕರ ನೇಮಕ ಇನ್ನಷ್ಟು ತಡವಾಗಬಹುದು ಅನ್ನೋ ಮಾತು ಕೇಳಿ ಬರುತ್ತಿದೆ.