ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೂರು ಪಕ್ಷಗಳಲ್ಲೂ ಸಂಘಟನೆ ಚುರುಕಾಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲುವ ಅನಿವಾರ್ಯತೆ ಇದೆ. ಇತ್ತ ಬಿಜೆಪಿಯು ಜೆಡಿಎಸ್ ಜತೆ ಸಖ್ಯ ಬೆಳೆಸಿ ಕಾಂಗ್ರೆಸ್‌ಗೆ ತಿರುಗೇಟು ಕೊಡಲು ದೆಹಲಿ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಆದರೆ ಈ ಮೈತ್ರಿಗೆ ರಾಜ್ಯ ಬಿಜೆಪಿ ನಾಯಕರನ್ನು ದೂರವಿಟ್ಟಿದ್ದು ಸ್ಥಳೀಯ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಇನ್ನು ಈ ಮೈತ್ರಿ ಮೂಲಕ ಸುಮಲತಾ ಅವರನ್ನು ಮಂಡ್ಯದಿಂದ ಎತ್ತಂಗಡಿ ಮಾಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಬಹುದು. ಸುಮಲತಾಗೆ ಕ್ಷೇತ್ರ ಹುಡುಕಿಕೊಡುವ ಜವಾಬ್ದಾರಿ ರಾಜ್ಯ ಬಿಜೆಪಿ ನಾಯಕರ ಹೆಗಲಿಗೇರಲಿದೆ. ಈ ನಡುವೆ, ಬೆಂಗಳೂರು ದಕ್ಷಿಣದಿಂದ ಈ ಬಾರಿ ತೇಜಸ್ವಿ ಅನಂತಕುಮಾರ್ ಅವರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ನಡುವೆ, ವಲಸಿಗ ಬಿಜೆಪಿ ಶಾಸಕರ ನಡೆಯನ್ನು ಎಲ್ಲರೂ ಕಾತುರದಿಂದ ನೋಡಲಾರಂಭಿಸಿದ್ದಾರೆ.
ರಾಜಕೀಯ ಮೈತ್ರಿ ಮದುವೆ ಫಿಕ್ಸ್!
ಗ್ಯಾರಂಟಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಯುದ್ಧ ಮಾಡಲು ನಿರ್ಧಾರ ಮಾಡಿವೆ. ಹೀಗಾಗಿ ಕಳೆದ ವಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಸುದೀರ್ಘ ಚರ್ಚೆ ನಡೆಸಿ ಬಿಜೆಪಿ ವರಿಷ್ಠರ ಮುಂದೆ ಮೈತ್ರಿ ಸೂತ್ರ ಇಟ್ಟಿದ್ದಾರೆ. ದೊಡ್ಡ ಗೌಡರ ಕುಟುಂಬ ಇಟ್ಟ ಬಹುದೊಡ್ಡ ಬೇಡಿಕೆ ಈಡೇರಿಕೆ ಕಷ್ಟಸಾಧ್ಯ ಎನ್ನುವುದು ಮನವರಿಕೆ ಆಗಿದೆ. ಬಿಜೆಪಿ ನಾಯಕರುಗಳ ಪ್ರಕಾರ ಜೆಡಿಎಸ್ ಯೋಗ್ಯತೆಗೆ ಎರಡು ಲೋಕಸಭಾ ಕ್ಷೇತ್ರಗಳು ಕೊಟ್ಟರೆ ಅದೇ ಹೆಚ್ಚು. ಒಂದು ಸ್ಥಾನ ಹೆಚ್ಚುವರಿ ಕೊಟ್ಟರೆ ಅದು ಬೋನಸ್. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಪಡೆದುಕೊಳ್ಳಬೇಕು ಅನ್ನೋದು ದೊಡ್ಡ ಗೌಡರ ಪ್ಲಾನ್. ಹೀಗಾಗಿ ಗೋವಾ ಸಿಎಂ ಮುಂದೆ ಐದು ಲೋಕಸಭಾ ಕ್ಷೇತ್ರಗಳು, ಎರಡು ಪರಿಷತ್ ಹಾಗೂ ಪರಿಷತ್‌ನಲ್ಲಿ ವಿಪಕ್ಷ ನಾಯಕ ಸ್ಥಾನ, ಒಂದು ರಾಜ್ಯಸಭೆ ಸ್ಥಾನ, ಜತೆಗೆ ಕೇಂದ್ರದಲ್ಲಿ ಮಂತ್ರಿಗಿರಿ ಕೊಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿದ ಬಿಜೆಪಿ ವರಿಷ್ಠರು ಮೈತ್ರಿ ಓಕೆ, ಆದ್ರೆ ಸೀಟ್ ಹಂಚಿಕೆ ವಿಚಾರವನ್ನ ನಿಧಾನವಾಗಿ ಮಾಡೋಣ ಎಂದು ಹೇಳಿ ಕಳಿಸಿದ್ದಾರೆ.
ಟೀಮ್ ಚೇಂಜ್ ಮಾಡಿದ ವಲಸಿಗ ಬಿಜೆಪಿ ಶಾಸಕರು
ರಾಜ್ಯ ಬಿಜೆಪಿಯಲ್ಲಿ ವಲಸಿಗ ಶಾಸಕರನ್ನು ಇಂದಿಗೂ ಅನುಮಾನದಿಂದಲೇ ನೋಡಲಾಗುತ್ತಿದೆ. ಕಾರಣ ಅವರು ಅಂದು ಸಮ್ಮಿಶ್ರ ಸರ್ಕಾರ ಬೀಳಿಸಿ ಬಂದಿದ್ದು ಸಿದ್ಧಾಂತ್ಕಕ್ಕೋ ಅಭಿವೃದ್ಧಿಗಾಗಿಯೋ ಅಲ್ಲ, ಹಣಕ್ಕಾಗಿ ಅನ್ನೋ ಅಭಿಪ್ರಾಯ ರಾಜ್ಯ ಬಿಜೆಪಿಯಲ್ಲಿ ಇದೆ. ಅದೇ ರೀತಿ ಇವರು ಸಹ ಹಲವು ವಿಚಾರಗಳಲ್ಲಿ ಬಿಜೆಪಿ ನಾಯಕರಿಗೆ ಅನುಮಾನ ಬರುವಂತೆ ನಡೆದುಕೊಂಡಿದ್ದಾರೆ. ಯಡಿಯೂರಪ್ಪ ಇದ್ದಾಗ ಅವರಿಗೆ ಜೈ ಅಂದ್ರು. ಬಳಿಕ ಬೊಮ್ಮಾಯಿ ಸಮಯದಲ್ಲಿ ಬೊಮ್ಮಾಯಿ ಸುತ್ತಲೂ ಇದ್ದಿದ್ದು ಇವರೇ. ಈಗ ಮೈತ್ರಿ ಮಾತುಕತೆ ನಡೆಯುತ್ತಿರುವಾಗ ಕುಮಾರಸ್ವಾಮಿ ಭೇಟಿ ಮಾಡಲು ಸುಧಾಕರ್ ದೆಹಲಿಗೆ ತೆರಳಿದ್ರು. ದೆಹಲಿಯಿಂದ ಎಚ್ಡಿ ಕುಮಾರಸ್ವಾಮಿ ಬೆಂಗಳೂರಿಗೆ ಎಂಟ್ರಿ ಆದ ಕ್ಷಣದಿಂದಲೂ ಮುನಿರತ್ನ ಅವರು ಎಚ್ಡಿಕೆ ಕಾರಿನೊಳಗೆ ಜಿಗಿದಿದ್ದಾರೆ! ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಪಡೆಯಲು ಬಿಜೆಪಿಗಿಂತಲೂ ಮೈತ್ರಿ ನಾಯಕರ ಬೆಂಬಲ ಸಂಪರ್ಕ ಮಾಡ್ತಿರುವುದು ಮೂಲ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.
ಪ್ರಾಣಪಕ್ಷಿ ಹಾರಿ ಹೋಗ್ತಿದ್ದ ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ
ಸದ್ಯ ಮಹಿಳೆ ತಲೆ ಮೇಲೆ ಇರೋ ತೆನೆ ದಿನೇದಿನೇ ಒಣಗಿ ಇನ್ನೇನು ಸುಟ್ಟು ಹೋಗುವ ಹಂತದಲ್ಲಿದ್ದಾಗ ಬಿಜೆಪಿ ಸಂಜೀವಿನಿಯಾಗಿ ಪರಿಣಮಿಸಿದೆ. ಕೇವಲ 19 ಸ್ಥಾನಗಳನ್ನ ಗೆಲ್ಲಲಷ್ಟೇ ಸಾಧ್ಯವಾದ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ನಾಲ್ಕು ಸ್ಥಾನ ಬಿಡಲು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಪರಿಷತ್‌ನಲ್ಲೂ ಜೆಡಿಎಸ್ ಗೆ ಅವಕಾಶ ಸಿಗಬಹುದು. ಹೀಗಾಗಿ ಈ ಆರು ವರ್ಷ ಪರಿಷತ್‌ನಲ್ಲಿ ಒಂದು ಸ್ಥಾನ ಗೆಲ್ಲಲು ಆಗದ ಜೆಡಿಎಸ್ ಗೆ ಬಿಜೆಪಿ ಸ್ನೇಹ ಭಾರಿ ಲಾಭ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಬಿಜೆಪಿಗೆ ಇದರಿಂದ ನಷ್ಟ ಆದ್ರೂ ಅಚ್ಚರಿ ಇಲ್ಲ. ಯಾಕೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರು ಕೈ ಮೇಲೆತ್ತಿದ್ದರೂ, ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ನಡುವೆ ಇದ್ದ ಮನಸ್ತಾಪ ಮರೆತು ವೋಟ್ ಹಾಕಿರಲಿಲ್ಲ. ಹೀಗಾಗಿ ಬಿಜೆಪಿ 25+1 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಾಂಗ್ರೆಸ್‌ಗೆ ಇಷ್ಟು ದೊಡ್ಡ ಮಟ್ಟದ ಲಾಭ ಸಿಗದಿದ್ದರೂ ಕನಿಷ್ಠ 12-15 ಸ್ಥಾನ ಗೆಲ್ಲುವ ವಾತಾವರಣವನ್ನು ಈ ಮೈತ್ರಿ ಸೃಷ್ಟಿ ಮಾಡಬಹುದು.
ಅಂಬರೀಶ್ ಬಳಿಕ ಸಿನಿಮಾದವರಿಗೆ ಮಂಡ್ಯದಲ್ಲಿ ಡಬಲ್ ಚಾನ್ಸ್ ಸಿಕ್ತಿಲ್ಲ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿನಿಮಾದವರನ್ನ ಜನ ಎರಡನೇ ಬಾರಿ ಆರಿಸಿದ್ದಿಲ್ಲ. 2013ರ ಮಧ್ಯಂತರ ಚುನಾವಣೆಯಲ್ಲಿ ಗೆದ್ದ ನಟಿ ರಮ್ಯ ಅವರನ್ನ ಬಳಿಕ ನಡೆದ ಚುನಾವಣೆಯಲ್ಲಿ ಸೋಲಿಸಿ ಜನ ಮನೆಗೆ ಕಳುಹಿಸಿದ್ರು. ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನ ಗೆಲ್ಲಿಸಿ ಕಳುಹಿಸಿದ್ರು. ಆದ್ರೆ ಈ ಬಾರಿ ಬಿಜೆಪಿಗೆ ಹೋಗಿ ಟಿಕೆಟ್ ಪಡೆಯಬೇಕು ಅನ್ನೋ ಸುಮಲತಾ ಆಸೆ ಈಡೇರುತ್ತಿಲ್ಲ. ಈ ಬಾರಿ ಮಂಡ್ಯ ಮೈತ್ರಿಯಿಂದ ಜೆಡಿಎಸ್ ಪಾಲಾಗುವುದು ಕನ್ಫರ್ಮ್. ಹೀಗಾಗಿ ನಟಿ ಸುಮಲತಾಗೂ ಈ ಬಾರಿ ಮಂಡ್ಯದ ಜನ ಸೆಂಡ್ಆಪ್ ಕೊಡಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ವಿಧಾನಸೌಧ ರೌಂಡ್ಸ್: ಬಯಲಾಯ್ತು ಎಲೆಕ್ಷನ್ ಟಿಕೆಟ್ ಒಳ ಆಟ; ಕಾಂಗ್ರೆಸ್‌ಗೆ ಶೀತಲಸಮರದ ಸಂಕಟ
ಬೆಂಗಳೂರು ದಕ್ಷಿಣಕ್ಕೆ ಕೈಗೆ ಅಭ್ಯರ್ಥಿ ಕೊರತೆ, ತೇಜಸ್ವಿ ಅನಂತಕುಮಾರ್‌ರನ್ನು ಆಹ್ವಾನಿಸಿದ ಡಿಕೆಶಿ
ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಸ್ಪರ್ಧೆ ಮಾಡಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯಿಂದ ಯಾರನ್ನ ನಿಲ್ಲಿಸಿದರೂ ಗೆಲುವು ಖಚಿತ. ಆದರೆ ಕಳೆದ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿ ಅನಂತಕುಮಾರ್‌ಗೆ ಅವಕಾಶ ಕೊಡದೆ, ಬಿಜೆಪಿ ವರಿಷ್ಠರು ಸಂಪ್ರದಾಯ ಮುರಿದು ಯುವ ನಾಯಕನಿಗೆ ಮಣೆ ಹಾಕಿದ್ರು. ಆದ್ರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ತೇಜಸ್ವಿ ಅನಂತಕುಮಾರ್ ಪರ ಕೈ ನಾಯಕರು ಮಾತನಾಡುತ್ತಿದ್ದಾರೆ. ಅನಂತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ ಕೆ ಶಿವಕುಮಾರ್, ನಿಮ್ಮನ್ನ ನಂಬಿದ ದೊಡ್ಡ ಕಾರ್ಯಕರ್ತರ ಗುಂಪು ಇದೆ. ಅವರನ್ನ ತಬ್ಬಲಿ ಮಾಡಬೇಡಿ. ಚುನಾವಣೆಗೆ ಧುಮುಕಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್ ಕೊಡದಿದ್ರೆ ನಾವು ರೆಡಿ ಇದ್ದೇವೆ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ!