ಭಾರತದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಕಿರುತೆರೆಯಲ್ಲಿ ಕಾಣಿಸಿಕೊಂಡು 16 ವರ್ಷಗಳೇ ಉರುಳಿವೆ! ಸದಾ ಗಾಸಿಪ್, ಮನರಂಜನೆ, ವಾದ-ವಿವಾದಗಳಿಂದ ಸುದ್ದಿಯಲ್ಲಿರುವ ಈ ರಿಯಾಲಿಟಿ ಶೋ, ಅಂತಾರಾಷ್ಟ್ರೀಯ ರಿಯಾಲಿಟಿ ಶೋ ಬಿಗ್ ಬ್ರದರ್‌ನ ಭಾರತೀಯ ಆವೃತ್ತಿಯಾಗಿದೆ.
ಡಚ್ ಮೂಲದ ಎಂಡಮೋಲ್ ಶೈನ್ ಗ್ರೂಪ್‌ನ ಭಾಗವಾಗಿರುವ ಎಂಡೆಮೋಲ್ ಶೈನ್ ಇಂಡಿಯಾ, ಭಾರತದಲ್ಲಿ ಬಿಗ್ ಬಾಸ್ ಅನ್ನು ನಡೆಸಿಕೊಡುತ್ತದೆ. ಶೋಗೆ ಆಯ್ಕೆಯಾದ ಅಭ್ಯರ್ಥಿಗಳು ಬಿಗ್ ಬಾಸ್ ಮನೆಯಲ್ಲಿ ಇರಬೇಕಾಗುತ್ತದೆ. 100 ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ ನಾನಾ ಹಂತಗಳಲ್ಲಿ ಅಭ್ಯರ್ಥಿಗಳು ಗೇಟ್ ಪಾಸ್ ಆಗುತ್ತಾರೆ. ಪ್ರತಿವಾರ ಮನೆಯಿಂದ ಯಾರು ಹೊರ ಹೋಗಬೇಕು ಎಂಬುದರ ಬಗ್ಗೆ ಸ್ಪರ್ಧಿಗಳು ನಾಮಿನೇಶನ್ ಮಾಡುತ್ತಾರೆ. ವೀಕ್ಷಕರೂ ತಮ್ಮ ಮತ ಚಲಾಯಿಸುತ್ತಾರೆ. ಕೊನೆಯಲ್ಲಿ ಒಬ್ಬ ಅಭ್ಯರ್ಥಿ ಬಿಗ್ ಬಾಸ್ ಆಗಿ ಆಯ್ಕೆಯಾಗುತ್ತಾರೆ. ದೊಡ್ಡ ಮೊತ್ತದ ನಗದು ಬಹುಮಾನವನ್ನೂ ತಮ್ಮದಾಗಿಸುತ್ತಾರೆ. ಈ ನೂರು ದಿನಗಳಲ್ಲಿ ದಿನ ನಿತ್ಯ ಸ್ಪರ್ಧಿಗಳ ಆಟ, ಟಾಸ್ಕ್‌ಗಳು, ಮನರಂಜನೆ, ಸಲ್ಲಾಪ, ಗಾಸಿಪ್, ಜಗಳ, ಸ್ನೇಹ, ಅಳು-ನಗು ಎಲ್ಲವೂ ಖುಲ್ಲಂ ಖುಲ್ಲ ಕ್ಯಾಮೆರಾಗಳಲ್ಲಿ ಸೆರೆಯಾಗಿ ವೀಕ್ಷಕರ ಅದಮ್ಯವಾದ ಕುತೂಹಲವನ್ನು ತಣಿಸುತ್ತವೆ. ವೀಕ್ಷಕರ ಕುತೂಹಲವನ್ನು ಕೆರಳಿಸಿ, ರಂಜಿಸಿ ತಣಿಸುವುದು ಇದರ ಗುರಿ. ಒಳಗಿದ್ದಷ್ಟೂ ದಿನ ಸ್ಪರ್ಧಿಗಳಿಗೆ ಹೊರ ಜಗತ್ತಿನ ಜತೆ ಸಂಪರ್ಕ ಇರುವುದಿಲ್ಲ. ಟಿಆರ್‌ಪಿ ಹೆಚ್ಚಿದಷ್ಟು ಬಿಗ್ ಬಾಸ್ ಆದಾಯವೂ ಹೆಚ್ಚುತ್ತದೆ. ಸ್ಪರ್ಧಿಗಳಿಗೆ ಆಹಾರ ತಯಾರಿಸಿಕೊಳ್ಳಲು ಬೇಕಾಗುವಷ್ಟನ್ನು ವಿತರಿಸಲಾಗುತ್ತದೆ.
ಸೋನಿ ಟಿ.ವಿಯಲ್ಲಿ 2006ರಲ್ಲಿ ಹಿಂದಿಯಲ್ಲಿ ಶುರುವಾಗಿದ್ದ ಬಿಗ್ ಬಾಸ್, ಮೂಲತಃ ಡಚ್ ರಿಯಾಲಿಟಿ ಶೋ ಬಿಗ್ ಬ್ರದರ್‌ನ ಫ್ರಾಂಚೈಸಿ. ಈಗ ಹಿಂದಿ, ಕನ್ನಡ, ಬೆಂಗಾಲಿ, ತಮಿಳು, ತೆಲುಗು, ಮರಾಠಿ, ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ನಡೆಯುತ್ತಿದೆ. ಬಣಿಜಯ್ ಗ್ರೂಪ್ ಮತ್ತು ಸಿಎ ಮೀಡಿಯಾದ ಜಂಟಿ ಸಹಭಾಗಿತ್ವದಲ್ಲಿ ಎಂಡೆಮೋಲ್ ಶೈನ್ ಇಂಡಿಯಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಏಳು ಭಾಷೆಗಳಲ್ಲಿ ನಡೆಯುವ ಬಿಗ್ ಬಾಸ್ ಜತೆಗೆ, ಫಿಯರ್ ಫ್ಯಾಕ್ಟರ್, ಮಾಸ್ಟರ್ ಚೆಫ್ ಇಂಡಿಯಾ, ದಿ ಟೆಸ್ಟ್ ಕೇಸ್ ಮೊದಲಾದ ಜನಪ್ರಿಯ ಶೋಗಳನ್ನು ನಿರ್ಮಿಸಿದೆ.
ಕೆಲವು ವರದಿಗಳ ಪ್ರಕಾರ ಬಿಗ್ ಬಾಸ್ 15ರ ಆವೃತ್ತಿಯಲ್ಲಿ ಸಲ್ಮಾನ್ ಖಾನ್ 350 ಕೋಟಿ ರೂ. ಗೌರವಧನ ಗಳಿಸಿದ್ದಾರೆ. ಬಿಗ್ ಬಾಸ್ 16ಕ್ಕಂತೂ 1,000 ಕೋಟಿ ರೂ. ಶುಲ್ಕ ಪಡೆಯುತ್ತಿದ್ದಾರೆ. ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿನ ಬಿಗ್ ಬಾಸ್‌ನ ಒಂದು ಸೀಸನ್ ನಡೆಸಲು ಕನಿಷ್ಠ 50 ಕೋಟಿ ರೂ. ವೆಚ್ಚವಾಗುತ್ತದೆ ಎಂಬ ವರದಿಗಳಿವೆ. ಆದರೆ ಇದಾವುದೂ ಅಧಿಕೃತ ಅಂಕಿ ಅಂಶಗಳಲ್ಲ.
ಬಿಗ್ ಬಾಸ್ ಹೇಗೆ ಆದಾಯ ಗಳಿಸುತ್ತದೆ?
ಬಿಗ್ ಬಾಸ್‌ನಲ್ಲಿ ಗೆಲ್ಲುವವರಿಗೆ ದೊಡ್ಡ ಮೊತ್ತದ ನಗದು ಬಹುಮಾನ ಸಿಗುತ್ತದೆ. ಈ ರಿಯಾಲಿಟಿ ಶೋವನ್ನು ನಡೆಸಿಕೊಡುವ ತಾರೆಯರೆಲ್ಲ ಸಾಮಾನ್ಯರಲ್ಲ. ಚಿತ್ರರಂಗದ ಮುಂಚೂಣಿಯ ನಟರು. ಸಲ್ಮಾನ್ ಖಾನ್‌ನಂಥ ಪ್ರಖ್ಯಾತ ನಟರಿಗೆ ಬಿಗ್‌ಬಾಸ್ ಎಷ್ಟು ಕೋಟಿ ರೂ. ಗೌರವ ಧನ ನೀಡಬಹುದು ಎಂಬ ಚರ್ಚೆ ಸದಾ ಪ್ರಚಲಿತವಾಗಿದೆ. ಕೋಟ್ಯಂತರ ರೂ. ಹೂಡಿಕೆ ಬಯಸುವ ಬಿಗ್ ಬಾಸ್ ರಿಯಾಲಿಟಿ ಶೋ ಆದಾಯವನ್ನು ಹೇಗೆ ಗಳಿಸುತ್ತದೆ?
ಮೊದಲನೆಯದಾಗಿ ನೇರವಾಗಿ ಜಾಹೀರಾತುಗಳಿಂದ ಬಿಗ್ ಬಾಸ್ ಶೋಗೆ ಆದಾಯ ಸಿಗುತ್ತದೆ. ಕೆಲವು ಕಂಪನಿಗಳ ನಿರ್ದಿಷ್ಟ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಿದರೆ ಅದರಿಂದ ಆದಾಯ ಸಿಗುತ್ತದೆ. ಎರಡನೆಯದಾಗಿ ನಾನಾ ಸಿನಿಮಾಗಳ ಪ್ರಚಾರಾರ್ಥ ಕಾರ್ಯಕ್ರಮಗಳು ನಡೆಯುತ್ತವೆ. ಅವುಗಳೂ ಶುಲ್ಕ ಅನ್ವಯವಾಗುತ್ತದೆ. ಡಿಜಿಟಲ್ ಮಾಧ್ಯಮಗಳ ಮೂಲಕವೂ ಆದಾಯ ಸಿಗುತ್ತದೆ. ವೂಟ್ ಮೂಲಕವೂ ಆದಾಯ ಸಿಗುತ್ತದೆ. ಟಿ.ವಿಯಲ್ಲಿ ಶೋ ಪ್ರಸಾರದ ವೇಳೆ, ನಡುವೆ ಪ್ರದರ್ಶನವಾಗುವ ಜಾಹೀರಾತುಗಳಿಂದಲೂ ಬಿಗ್‌ಬಾಸ್‌ಗೆ ಆದಾಯ ದೊರೆಯುತ್ತದೆ. ಬಿಗ್ ಬಾಸ್ ಶೋ ಪ್ರದರ್ಶಿಸುವುದರಿಂದ ಟಿ.ವಿ ಚಾನೆಲ್‌ಗೂ ಲಾಭವಿದೆ. ಅದು ಅದಕ್ಕೊಂದು ಹಿರಿಮೆ. ಶೋ ಅನ್ನು ನೋಡುವ ಅಸಂಖ್ಯಾತ ವೀಕ್ಷಕರಲ್ಲಿ ಗಣನೀಯ ಮಂದಿ ಮುಂದೆ ಚಾನೆಲ್‌ನ ಕಾಯಂ ವೀಕ್ಷಕರಾಗುವ ಸಾಧ್ಯತೆಯೂ ಇರುತ್ತದೆ ಎಂಬ ಲೆಕ್ಕಾಚಾರ ಇಲ್ಲಿ ಇರುತ್ತದೆ. ಹೀಗಾಗಿ ಹೊಸ ವೀಕ್ಷಕರನ್ನು ಸೆಳೆದುಕೊಳ್ಳಲು ಇದು ರಹದಾರಿ. ಹಾಗಂತ ಎಲ್ಲ ಚಾನೆಲ್‌ಗಳಿಗೂ ಬಿಗ್ ಬಾಸ್ ನಡೆಸುವ ಸಾಮರ್ಥ್ಯ ಒದಗಿ ಬರುವುದಿಲ್ಲ.
ಬಿಗ್ ಬ್ರದರ್ ರೂವಾರಿ ಜಾನ್ ಡೆ ಮೋಲ್ ಜ್ಯೂನಿಯರ್
ನೆದರ್ಲೆಂಡ್ ಮೂಲದ ಜಾನ್ ಡೆ ಮೋಲ್ ಎಂಬುವರೇ ಬಿಗ್ ಬ್ರದರ್ ರಿಯಾಲಿಟಿ ಶೋದ ರೂವಾರಿ. ಎಂಡೆಮೋಲ್ ಕಂಪನಿಯ ಸ್ಥಾಪಕ. 1999-2000ರಲ್ಲಿ ನಾವು ಬಿಗ್ ಬ್ರದರ್ ರಿಯಾಲಿಟಿ ಶೋವನ್ನು ಆರಂಭಿಸಿದಾಗ, ನೂರಾರು ರಿಯಾಲಿಟಿ ಶೋಗಳ ನಡುವೆ ವಿಭಿನ್ನವಾಗಿತ್ತು. ಹೊಸತನದ ರಿಯಾಲಿಟಿ ಶೋ ಯಶಸ್ಸು ಗಳಿಸುವುದೆ? ಇದೇನಿದು? ಎಂಬ ಕುತೂಹಲ ಮಾರುಕಟ್ಟೆಯಲ್ಲಿ ಇತ್ತು. ಹಲವಾರು ಮಂದಿ ನಕಾರಾತ್ಮಕವಾಗಿ ಟೀಕಿಸಿದ್ದರು. ಆದರೆ ಮೂರು -ನಾಲ್ಕು ವಾರಗಳ ಬಳಿಕ ಸಕಾರಾತ್ಮಕ ಜನ ಸ್ಪಂದನೆ ಲಭಿಸಿತು. ಹಿಂದೆಂದೂ ಕಂಡರಿಯದಿದ್ದ ರಿಯಾಲಿಟಿ ಶೋ ಇದಾಗಿತ್ತು. ಮೊದಲ ಬಾರಿಗೆ ಶೋ ಒಂದರಲ್ಲಿ 120 ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿತ್ತು. ಭವಿಷ್ಯದಲ್ಲಿ ಈ ರಿಯಾಲಿಟಿ ಶೋ ಗೆಲ್ಲಲಿದೆ ಎಂಬ ಗ್ರಹಿಕೆ ನನ್ನಲ್ಲಿತ್ತು. ತಂತ್ರಜ್ಞಾನದ ವಿಷಯದಲ್ಲಿ ಮಾತ್ರ ಯೋಚಿಸುತ್ತಿದ್ದೆ. ಮೊದಲ ಸರಣಿ ಒಂದು ರೀತಿಯಲ್ಲಿ ಬೋರ್ ಹೊಡೆಸುವಂತಿತ್ತು. ಏಕೆಂದರೆ ನಾವು ಅಗತ್ಯಕ್ಕಿಂತ ಹೆಚ್ಚು ಎಚ್ಚರಿಕೆ ವಹಿಸಿದ್ದೆವು.
ಬಿಗ್ ಬ್ರದರ್ ಆಲೋಚನೆ ಹುಟ್ಟಿದ್ದು ಹೇಗೆ?!
ಬಿಗ್ ಬ್ರದರ್ ಮಾಡುವ ಆಲೋಚನೆ ಹುಟ್ಟಿದ್ದು ಆಕಸ್ಮಿಕ. ನನ್ನ ಕಂಪನಿಯ ಉದ್ಯೋಗಿಯೊಬ್ಬ ಅಮೆರಿಕದ ವೈಜ್ಞಾನಿಕ ಪ್ರಯೋಗವೊಂದರ ಬಗ್ಗೆ ಲೇಖನ ಬರೆದಿದ್ದ. ಒಂದಷ್ಟು ಜನರ ಗುಂಪನ್ನು ಗಾಜಿನ ಮನೆಯಲ್ಲಿ ದಿನವಿಡೀ ಕೂರಿಸಿ, ಅವರ ವರ್ತನೆಗಳನ್ನು ಅವಲೋಕಿಸಲಾಗುತ್ತಿತ್ತು. ಅದು ಅಪ್ಪಟ ವಿಜ್ಞಾನದ ಪ್ರಯೋಗವಾಗಿತ್ತು. ಆದರೆ ಇದನ್ನೇ ರಿಯಾಲಿಟಿ ಶೋ ಮಾಡಿದರೆ ಹೇಗೆ ಎಂದು ಆಲೋಚಿಸಿ ಕಾರ್ಯರೂಪಕ್ಕೆ ಇಳಿಸಲು ನಿರ್ಧರಿಸಿದೆ ಎನ್ನುತ್ತಾರೆ ಜಾನ್ ಡೆ ಮೋಲ್! ಆಗ ಅವರು ಟಿ.ವಿ ಕಾರ್ಯಕ್ರಮಗಳಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಆಗಿದ್ದರು. ಜನರಿಗೆ ಹೊಸತನದ ಮನರಂಜನೆ ನೀಡುವುದು ನನ್ನ ಉದ್ದೇಶವಾಗಿತ್ತು. ಹೀಗೆ ಯುರೋಪ್‌ನ ಪುಟ್ಟ ರಾಷ್ಟ್ರ ನೆದರ್ಲೆಂಡ್‌ನಲ್ಲಿ ಜಗತ್ತಿನ ಗಮನ ಸೆಳೆದ ಬಿಗ್ ಬ್ರದರ್ ಪರಿಕಲ್ಪನೆ ಹುಟ್ಟಿಕೊಂಡಿತ್ತು! ಕಾಲಕ್ರಮೇಣ ಅದು ಇಡೀ ಜಗತ್ತಿನ ಕಿರು ತೆರೆಯನ್ನು ಆವರಿಸಿತು. ನೀವು ಅಮೆರಿಕದಂಥ ದೊಡ್ಡ ಮಾರುಕಟ್ಟೆಯ ದೇಶದಲ್ಲಿ ಇದ್ದರೆ ಅನುಕೂಲ ಹೆಚ್ಚು. ನಾವು ಸಣ್ಣ ದೇಶದ ಸಣ್ಣ ಮಾರುಕಟ್ಟೆಯಲ್ಲಿದ್ದೆವು. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದೆವು. ಡಚ್ಚರ ಸ್ವಭಾವವೂ ಅಂಥ ಸಾಹಸಮಯವಾಗಿರುತ್ತದೆ ಎನ್ನುತ್ತಾರೆ ಅವರು. ಕೋಟ್ಯಂತರ ಮಂದಿ ಬಿಗ್ ಬ್ರದರ್ ಅನ್ನು ವೀಕ್ಷಿಸುತ್ತಾರೆ.
ಕಾಪಿರೈಟ್‌ನಿಂದ ಎಂಡೊಮೋಲ್‌ಗೆ ಆದಾಯದ ಮೂಲ: ಎಂಡೆಮೋಲ್ ಗ್ರೂಪ್ ತನ್ನ ಬಿಗ್‌ಬ್ರದರ್‌ಗೆ ಕಾಪಿರೈಟ್ ಅನ್ನು ಹೊಂದಿದೆ. ಹೀಗಾಗಿ ಬಿಗ್ ಬಾಸ್ ಶೋವನ್ನು ಜಗತ್ತಿನ ಯಾವುದೇ ಭಾಗದಲ್ಲಿ, ಯಾವುದೇ ಇತರ ಚಾನೆಲ್ ನಡೆಸುವುದಿದ್ದರೆ, ಎಂಡೊಮೋಲ್ ಅನ್ನು ಸಂಪರ್ಕಿಸಬೇಕು. ಕಾಪಿರೈಟ್ ಅನ್ನು ಉಲ್ಲಂಘಿಸಿದರೆ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ. ಉದಾಹರಣೆಗೆ ಮಲಯಾಳದಲ್ಲಿ “ಮಲಯಾಳಿ ಹೌಸ್ʼ ಎಂಬ ರಿಯಾಲಿಟಿ ಶೋ 2013ರಲ್ಲಿ ಆರಂಭವಾಯಿತು. ಆದರೆ ಶೋ ಮುಕ್ತಾಯವಾಗುವ ವೇಳೆಗೆ ವಿವಾದ ಉಂಟಾಗಿತ್ತು. ಬಿಗ್ ಬಾಸ್ ಕಾಪಿ ರೈಟ್ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಎಂಡೆಮೋಲ್ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿತ್ತು.
ಇದನ್ನೂ ಓದಿ | Brand story | ಗೌತಮ್ ಶಾಂತಿಲಾಲ್ ಅದಾನಿ ಮುಟ್ಟಿದ್ದೆಲ್ಲ ಚಿನ್ನ, ಏನಿದು ಕಮಾಲ್ ?!
ಅಂತಾರಾಷ್ಟ್ರೀಯ ಪರಿಕಲ್ಪನೆಯ ಶೋಗಳ ಸುಗ್ಗಿ: ಎಂಡೊಮೋಲ್ ಕಂಪನಿ ಹೇಗೆ ಬಿಗ್ ಬ್ರದರ್, ಬಿಗ್ ಬಾಸ್ ಪರಿಕಲ್ಪನೆಯ ಕಾಪಿ ರೈಟ್ ಮೂಲಕ ಇಂಥ ರಿಯಾಲಿಟಿ ಶೋಗಳ ಮೇಲೆ ತನ್ನ ನಿಯಂತ್ರಣವನ್ನು ಹೊಂದಿದೆಯೋ, ಅದೇ ರೀತಿ ಮತ್ತಷ್ಟು ರಿಯಾಲಿಟಿ ಶೋ, ಗೇಮ್ ಶೋಗಳು ಇವೆ. ಉದಾಹರಣೆಗೆ ಕೌನ್ ಬನೇಗಾ ಕ್ರೋರ್ ಪತಿ ಎಂದರೆ ಬ್ರಿಟಿಷ್ ಮೂಲದ ” ಹು ವಾಂಟ್ಸ್ ಟು ಬಿ ಎ ಮಿಲಿಯನೇರ್ʼ ಎಂಬ ಗೇಮ್ ಶೋದಿಂದ ಪ್ರೇರಣೆ ಪಡೆದಿರುವಂಥದ್ದು. ಇದು 24 ವರ್ಷಗಳ ಹಿಂದೆ ಆರಂಭವಾಗಿತ್ತು. ಇಂಡಿಯನ್ ಐಡಿಯಲ್ ಮ್ಯೂಸಿಕ್ ಸ್ಪರ್ಧೆ ಶೋ ಕೂಡ ಪಾಪ್ ಐಡಿಯಲ್ ಎಂಬ ಬ್ರಿಟಿಷ್ ಮ್ಯೂಸಿಕ್ ಶೋದ ಫ್ರಾಂಚೈಸಿಯಾಗಿದೆ. ಎಂಡೆಮೋಲ್ ಈಗ ಎಂಡೆಮೋಲ್ ಏಷ್ಯಾ, ಆಸ್ಟ್ರೇಲಿಯಾ, ಯುಎಸ್‌ಎ, ಇಟಲಿ, ಫ್ರಾನ್ಸ್ ಎಂದು ನಾನಾ ದೇಶಗಳಲ್ಲಿ ತನ್ನ ಫ್ರಾಂಚೈಸಿಗಳನ್ನು ಹೊಂದಿದೆ. ಡೀಲ್ ಔರ್ ನೋ ಡೀಲ್, ಫಿಯರ್ ಫ್ಯಾಕ್ಟರ್, ವೈಪ್‌ಔಟ್, ದಿ ಮನಿ ಡ್ರಾಪ್, ಯುವರ್ ಫೇಸ್ ಸೌಂಢಶ ಫೆಮೀಲಿಯರ್ ಇತ್ಯಾದಿಶೋಗಳನ್ನು ನಡೆಸಿಕೊಡುತ್ತದೆ.
ಸಾಮಾನ್ಯರೇ, ಅಸಾಮಾನ್ಯರೇ-ಯಾರು ಸೂಕ್ತ?
ಬಿಗ್ ಬಾಸ್ ಕನ್ನಡದ ಸೀಸನ್ ಒಂದರಲ್ಲಿ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ” ನನ್ನ ಪ್ರಕಾರ ಬಿಗ್‌ಬಾಸ್ ವೇದಿಕೆಯಲ್ಲಿ ಪ್ರೋಗ್ರಾಮ್ ಚೆನ್ನಾಗಿ ನಡೆಯಬೇಕಿದ್ದರೆ, ಸ್ಪರ್ಧಿಗಳಲ್ಲಿ ಒಂದು ವಿಶಿಷ್ಟ ವ್ಯಕ್ತಿತ್ವ ಇರಬೇಕು, ಅವರಿಗೊಂದು ಪರ್ಸನಾಲಿಟಿ ಇರಬೇಕು, ಆವಾಗಲೇ ಶೋ ನಡೆಯುವುದು. ಬರೀ ಸಿನಿಮಾದವರು, ಅವರಿವರು ಎಂಬ ಪ್ರೊಫೈಲ್ ಇದ್ದರೆ ಸಾಕಾಗುವುದಿಲ್ಲ. ಸ್ಮಾರ್ಟ್‌ನೆಸ್ ಇರಬೇಕು, ಮನರಂಜನೆ ನೀಡುವ ಏನಾದರೂ ಸಾಮರ್ಥ್ಯ ಇರಬೇಕುʼʼ ಎಂದಿದ್ದರು. ಅಂದರೆ ಸಾಮಾನ್ಯರಿಗೆ ಬಿಗ್‌ಬಾಸ್‌ನಲ್ಲಿ ಸಕ್ಸಸ್ ಸಿಗಲಾರದು ಎಂಬರ್ಥದಲ್ಲಿ ಮಾತನಾಡಿದ್ದರು. ಜತೆಗೆ ಒಟಿಟಿ ಡಿಜಿಟಲ್ ಪ್ಲಾಟ್ ಫಾರ್ಮ್‌ನಲ್ಲಿ ಈ ಶೋ ಪ್ರಸಾರವಾಗುವಾಗ, ಸ್ಪರ್ಧಿಗಳ ಯುವ ವಯಸ್ಸು ಕೂಡ ನಿರ್ಣಾಯಕವಾಗುತ್ತದೆ. ಏಕೆಂದರೆ ಒಟಿಟಿ ಬಳಕೆದಾರರಲ್ಲಿ ಹೆಚ್ಚಿನವರು ಯುವಜನತೆ ಎಂಬುದೇ ಕಾರಣ.
ಆಸಕ್ತಿ ಕಳೆದುಕೊಳ್ಳುತ್ತಿವೆಯಾ?! ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋಗಳು ಆಸಕ್ತಿ ಕಳೆದುಕೊಳ್ಳುತ್ತಿವೆಯಾ ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಚರ್ಚಿತವಾಗುತ್ತಿದೆ. ಬಿಗ್‌ಬಾಸ್ ಸಾಕಷ್ಟು ವರ್ಷಗಳಿಂದ ಚಿರಪರಿಚಿತವಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಸೆಲೆಬ್ರಿಟಿಗಳ ವೈಯಕ್ತಿಕ ಬದುಕನ್ನು ತಿಳಿದುಕೊಳ್ಳುವ, ಅವರ ಒನಪು ವೈಯ್ಯಾರಗಳನ್ನು, ಭಾವೋದ್ವೇಗಗಳನ್ನು, ವರ್ತನೆಗಳನ್ನು ಕಾಣುವ ಮಾನವ ಸಹಜ ಕುತೂಹಲ ವೀಕ್ಷಕರಲ್ಲಿ ಇರುವುದೇ ರಿಯಾಲಿಟಿ ಶೋಗಳ ಜೀವ ದ್ರವ್ಯ. ಹೀಗಿದ್ದರೂ, ಟಿಆರ್‌ಪಿ ವರದಿಗಳ ಪ್ರಕಾರ ಈಗಲೂ ಬಿಗ್ ಬಾಸ್ ಟಾಪ್ ಟಿವಿ ಶೋಗಳಲ್ಲೊಂದು!
ಇದನ್ನೂ ಓದಿ | Brand story | ಅಂದು ರಿಕ್ಷಾ ಚಾಲಕ, ಇಂದು ಬಿಸಿನೆಸ್ 500 ಕೋಟಿ ವಾರ್ಷಿಕ, ಅವರೇ ಬಿಂದು ಜೀರಾ ಮಾಲೀಕ!