Site icon Vistara News

Brand story | NDTV: ದೇಶದ ಮೊದಲ 24×7 ನ್ಯೂಸ್‌ ಚಾನೆಲ್ ಈಗ ಸುದ್ದಿಯಲ್ಲಿ!

prannoy rao

ಎನ್‌ಡಿಟಿವಿ! ದೇಶದ ಮೊಟ್ಟ ಮೊದಲ 24X7 ನ್ಯೂಸ್‌ ಚಾನೆಲ್‌ ಇದೀಗ ತಾನೇ ಸುದ್ದಿಯ ಕೇಂದ್ರ ಬಿಂದುವಾಗಿದೆ. ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್, ಎನ್‌ಡಿಟಿವಿಯ ಬಹುಪಾಲು ಷೇರುಗಳನ್ನು ಖರೀದಿಸಿ ಅದರ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳಲು ನಿರ್ಧರಿಸಿದೆ. (Brand story) ಈಗಾಗಲೇ ವಿಶ್ವಪ್ರಧಾನ್‌ ಕಮರ್ಶಿಯಲ್‌ (ವಿಸಿಪಿಎಲ್)‌ ಕಂಪನಿಯನ್ನು ಖರೀದಿಸುವ ಮೂಲಕ ಪರೋಕ್ಷವಾಗಿ ಎನ್‌ಡಿಟಿವಿಯಲ್ಲಿನ ೨೯% ಷೇರುಗಳನ್ನು ತನ್ನದಾಗಿಸಿದೆ. ಜತೆಗೆ ಹೆಚ್ಚುವರಿಯಾಗಿ ಮುಕ್ತ ಮಾರುಕಟ್ಟೆಯಲ್ಲಿ ೨೬% ಷೇರುಗಳನ್ನು ಖರೀದಿಸುವ ಪ್ರಸ್ತಾಪವನ್ನು ಎನ್‌ಡಿಟಿವಿಯ ಷೇರುದಾರರ ಮುಂದಿಟ್ಟಿದೆ. ಇದೆಲ್ಲ ಅದಾನಿ ಗ್ರೂಪ್‌ಗೆ ಹೇಗೆ ಸಾಧ್ಯವಾಯಿತು? ಎಂಬುದನ್ನು ತಿಳಿಯುವುದಕ್ಕೆ ಎನ್‌ಡಿಟಿವಿಯ ಇತಿಹಾಸವನ್ನು ಅವಲೋಕಿಸೋಣ.

ಕಳೆದ ೩೮ ವರ್ಷಗಳ ಹಿಂದೆ, ೧೯೮೪ರಲ್ಲಿ ಅಸ್ತಿತ್ವಕ್ಕೆ ಬಂದ ಎನ್‌ಡಿಟಿವಿ ಸಮೂಹ ಮಾಧ್ಯಮದಲ್ಲಿ ಪ್ರಚಲಿತವಾಗಿರುವ ಬ್ರಾಂಡ್.‌ ಟಿ.ವಿ ನ್ಯೂಸ್‌ ಚಾನೆಲ್ ಹಾಗೂ ಡಿಜಿಟಲ್‌ ನ್ಯೂಸ್‌ ಸೇವೆಯನ್ನು ಒದಗಿಸುತ್ತಿದೆ. 80ರ ದಶಕದ ಮಧ್ಯಭಾಗದಲ್ಲಿ ಎನ್‌ಡಿಟಿವಿ ನ್ಯೂಸ್‌ ಚಾನೆಲ್‌ ಅಸ್ತಿತ್ವಕ್ಕೆ ಬರುವುದಕ್ಕೆ ಮುನ್ನ ಕೇಂದ್ರ ಸರ್ಕಾರದ ದೂರದರ್ಶನವೇ ಏಕೈಕ ಟಿ.ವಿ ನ್ಯೂಸ್‌ ಚಾನೆಲ್‌ ಆಗಿತ್ತು ಎಂದರೆ ಈಗಿನ ಕಾಲದ ಹೈಕಳಿಗೆ ವಿಸ್ಮಯವಾಗಬಹುದು. ಅಷ್ಟೊಂದು ಚಾನೆಲ್‌ಗಳು ಈಗ ದೇಶದ ಮೂಲೆ ಮೂಲೆಯಲ್ಲಿವೆ. ಆದರೆ ಆಗ ದೂರದರ್ಶನ ಟಿ.ವಿ ನ್ಯೂಸ್‌ ಚಾನೆಲ್‌ ಆಗಿದ್ದರೂ, ಸುದ್ದಿಗಳ ಜತೆ ಮನರಂಜನೆಯ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುತ್ತಿತ್ತು. ಮಾತ್ರವಲ್ಲದೆ ಸರ್ಕಾರಿ ನ್ಯೂಸ್‌ ಚಾನೆಲ್‌ ಆಗಿದ್ದರಿಂದ ಅದಕ್ಕೆ ಅದರದ್ದೇ ಇತಿ-ಮಿತಿಗಳಿತ್ತು.

ಅಂಥ ಕಾಲದಲ್ಲಿ ಮೊದ ಬಾರಿಗೆ ದಿನದ ೨೪ ಗಂಟೆಯೂ, ವಾರದ ಎಲ್ಲ ದಿನಗಳಲ್ಲಿಯೂ ಸುದ್ದಿಗಳನ್ನು ಬಿತ್ತರಿಸುವ ಟಿವಿ ನ್ಯೂಸ್‌ ಚಾನೆಲ್‌ ಮಾಡಬಹುದು ಎಂದು ತೋರಿಸಿಕೊಟ್ಟವರು ಯಾರೆಂದರೆ, ಪ್ರಣಯ್‌ ರಾಯ್ ಮತ್ತು ರಾಧಿಕಾ ರಾಯ್‌ ದಂಪತಿ. ಇಬ್ಬರೂ ಪತ್ರಕರ್ತರಾಗಿ ಆಗಲೇ ಹೆಸರು ಮಾಡಿದ್ದರು. ದೇಶದ ಮೊದಲ ಲೈಫ್‌ ಸ್ಟೈಲ್‌ ಚಾನೆಲ್‌ ಅನ್ನು ಆರಂಭಿಸಿದ್ದೂ ಇದೇ ಎನ್‌ಡಿಟಿವಿ. ಅನೇಕ ಪತ್ರಕರ್ತರು ಎನ್‌ಡಿಟಿವಿ ಗರಡಿಯಲ್ಲಿ ಬೆಳೆದಿದ್ದಾರೆ. ಕೋಲ್ಕತಾದಲ್ಲಿ ದಿ ಟೆಲಿಗ್ರಾಫ್‌ ಪತ್ರಿಕೆಯಲ್ಲಿದ್ದ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಕೂಡ ೧೯೯೬-೨೦೦೬ ಅವಧಿಯಲ್ಲಿ ಎನ್‌ಡಿಟಿವಿಯ ನ್ಯೂಸ್‌ ಆ್ಯಂಕರ್ ಆಗಿದ್ದರು.

ಎನ್‌ಡಿಟಿವಿ ಸ್ಥಾಪಕ ಪ್ರಣಯ್‌ ರಾಯ್ ಹಿನ್ನೆಲೆ

ಕೋಲ್ಕತಾದಲ್ಲಿ ೧೯೪೯ರಲ್ಲಿ ಜನಿಸಿದ ಪ್ರಣಯ್‌ ರಾಯ್‌ ಅವರಿಗೆ ೭೨ ವರ್ಷ ವಯಸ್ಸು. ಪತ್ರಕರ್ತ, ಆರ್ಥಿಕ ತಜ್ಞ, ಚುನಾವಣಾ ಅಂಕಿ ಅಂಶಗಳ ವಿಶ್ಲೇಷಕ (Psephologist) ಮತ್ತು ಲೇಖಕ. ಲಂಡನ್‌ ವಿವಿಯಲ್ಲಿ ಬಿಎಸ್ಸಿ, ಇಂಗ್ಲೆಂಡ್‌ನಲ್ಲಿ ಇನ್‌ಸ್ಟಿಟೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ನಲ್ಲಿ ಸಿಎ, ದಿಲ್ಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಪಿಎಚ್‌ಡಿ ಗಳಿಸಿದವರು. ಇವರ ಪತ್ನಿ ರಾಧಿಕಾ ರಾಯ್‌ (೧೯೪೯) ಕೂಡ ಪತ್ರಕರ್ತೆ. ರಾಧಿಕಾ ರಾಯ್‌ ಅವರ ಸೋದರಿ ಬೃಂದಾ ಕಾರಟ್ ಸಿಪಿಐ ನಾಯಕಿಯಾಗಿದ್ದಾರೆ. ಹಾಗೂ ಸಿಪಿಐ ನಾಯಕ ಪ್ರಕಾಶ್‌ ಕಾರಟ್‌ ಅವರ ಪತ್ನಿ. ಲಂಡನ್‌ನಲ್ಲಿ ವಿವಾಹವಾದ ಪ್ರಣಯ್‌ ರಾಯ್‌, ರಾಧಿಕಾ ರಾಯ್‌ ದಿಲ್ಲಿಗೆ ಮರಳಿದರು. ಕಿರಿಯ ವಯಸ್ಸಿನಿಂದಲೂ ಪ್ರಣಯ್‌ ರಾಯ್‌ ಅವರಿಗೆ ಚುನಾವಣೆಯ ವಿಶ್ಲೇಷಣೆ ಮತ್ತು ಅಂಕಿ ಅಂಶಗಳ ಬಗ್ಗೆ ಆಸಕ್ತಿ ಇತ್ತು. ೧೯೭೭ರ ಸಾರ್ವತ್ರಿಕ ಚುನಾವಣೆಯ ಚುನಾವಣಾ ಮುನ್ನೋಟವನ್ನು ಪ್ರಸ್ತುತಪಡಿಸಿದ್ದರು. ೧೯೮೪ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಚಂಡ ಗೆಲುವಿನ ಬಗ್ಗೆ ನಿಖರ ಮುನ್ನೋಟವನ್ನು ರಾಯ್‌ ಮಂಡಿಸಿದ್ದರು. ೮೦ರ ದಶಕದಲ್ಲಿ ದೂರದರ್ಶನಕ್ಕೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಪತ್ನಿ ರಾಧಿಕಾ ರಾಯ್‌ ೧೯೮೪ರಲ್ಲಿ ಸ್ಥಾಪಿಸಿದ ನ್ಯೂ ಡೆಲ್ಲಿ ಟೆಲಿವಿಶನ್‌ ಲಿಮಿಟೆಡ್‌ (ಎನ್‌ಡಿಟಿವಿ) ಸಂಸ್ಥೆಗೆ ಪ್ರಣಯ್‌ ರಾಯ್‌ ಸಹ-ಸಂಸ್ಥಾಪಕರಾಗಿ ಸೇರಿದದರು. ಈ ನಡುವೆ ೧೯೮೫ರಲ್ಲಿ ದಿಲ್ಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ಗೆ ಸಹಾಯಕ ಪ್ರೊಫೆಸರ್‌ ಆಗಿ ಸೇರಿದರು. ದೂರದರ್ಶನ ೧೯೮೯ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಸಾರದ ಗುತ್ತಿಗೆಯನ್ನು ಎನ್‌ಡಿಟಿವಿಗೆ ವಹಿಸಿತ್ತು. ಎನ್‌ಡಿಟಿವಿ ಮೊದಲ ಬಾರಿಗೆ ೧೯೮೯ರ ಲೋಕಸಭೆ ಚುನಾವಣೆಯ ಕವರೇಜ್‌ ಮಾಡಿತು. ೧೯೯೫ರಲ್ಲಿ ದೂರದರ್ಶನವು “ದಿ ನ್ಯೂಸ್‌ ಟುನೈಟ್‌ʼ ಎಂಬ ನ್ಯೂಸ್‌ ಬುಲೆಟಿನ್‌ ಅನ್ನು ತಯಾರಿಸುವ ಗುತ್ತಿಗೆಯನ್ನು ಎನ್‌ಡಿಟಿವಿಗೆ ವಹಿಸಿತ್ತು. ದೂರದರ್ಶನಕ್ಕೆ “ದ್‌ ನ್ಯೂಸ್‌ ಅವರ್‌”, “ಗುಡ್‌ ಮಾರ್ನಿಂಗ್‌ ಇಂಡಿಯಾ” ಎಂಬ ಕಾರ್ಯಕ್ರಮವನ್ನೂ ಎನ್‌ಡಿಟಿವಿ ಗುತ್ತಿಗೆ ಆಧಾರದಲ್ಲಿ ಕೊಟ್ಟಿತು.

೧೯೯೮ರಲ್ಲಿ ಎನ್‌ಡಿಟಿವಿ ೨೪x7 ನ್ಯೂಸ್‌ ಚಾನೆಲ್‌ ಆರಂಭ

ಎನ್‌ಡಿಟಿವಿ ೧೯೯೮ರಲ್ಲಿ ಸ್ಟಾರ್‌ ಇಂಡಿಯಾ ಜತೆ ೫ ವರ್ಷಗಳ ವಿಶೇಷ ಪಾಲುದಾರಿಕೆಯಲ್ಲಿ ದೇಶದ ಮೊಟ್ಟ ಮೊದಲ ೨೪x7 ನ್ಯೂಸ್‌ ಚಾನೆಲ್‌ ಅನ್ನು ಆರಂಭಿಸಿತು. ಆಗ ರಾಧಿಕಾ ರಾಯ್‌ ಕಂಪನಿಯ ಅಧ್ಯಕ್ಷೆಯಾಗಿದ್ದರು. ಪ್ರಣಯ್‌ ರಾಯ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ೨೦೦೩ರಲ್ಲಿ ಸ್ಟಾರ್‌ ಇಂಡಿಯಾ ಜತೆಗಿನ ಸಹಭಾಗಿತ್ವ ಅಂತ್ಯವಾಯಿತು. ಅದೇ ವರ್ಷ ಎನ್‌ಡಿಟಿವಿ ಎರಡು ನ್ಯೂಸ್‌ ಚಾನೆಲ್‌ಗಳಾದ ಎನ್‌ಡಿಟಿವಿ 24×7 ಮತ್ತು ಎನ್‌ಡಿಟಿವಿ ಇಂಡಿಯಾವನ್ನು ಆರಂಭಿಸಿತು. ೨೦೦೪ರ ಮೇನಲ್ಲಿ ಎನ್‌ಡಿಟಿವಿ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಯಿತು. ಆಗ ಎನ್‌ಡಿಟಿವಿಯ ಜನಪ್ರಿಯತೆ ಎಷ್ಟಿತ್ತೆಂದರೆ, ಐಪಿಒದಲ್ಲಿ ೧.೭೩ ಕೋಟಿ ಷೇರುಗಳಿಗೆ ಪ್ರತಿಯಾಗಿ ೨೮.೭೩ ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಕೆಯಾಗಿತ್ತು. ಐಪಿಒ ಗಾತ್ರದ ಹತ್ತಾರು ಪಟ್ಟು ಹೆಚ್ಚಿನ ಬಿಡ್‌ ಲಭಿಸಿತ್ತು! ಅತ್ಯಧಿಕ ಮಾರುಕಟ್ಟೆ ಮೌಲ್ಯವಿರುವ ಮಾಧ್ಯಮ ಕಂಪನಿಗಳಲ್ಲಿ ಒಂದಾಗಿತ್ತು. ಎನ್‌ಡಿಟಿವಿಯಲ್ಲಿ ಪ್ರಣಯ್‌ ರಾಯ್‌ ಅವರ “ದಿ ವರ್ಲ್ಡ್‌ ದಿಸ್‌ ವೀಕ್‌ʼ ಕಾರ್ಯಕ್ರಮ ಜನಪ್ರಿಯವಾಗಿತ್ತು. ಲೋಕಸಭೆ ಚುನಾವಣೆ, ಬಜೆಟ್‌ ವಿಶ್ಲೇಷಣೆಗಳಿಗೆ ರಾಯ್‌ ಹೆಸರಾಗಿದ್ದರು. ಖ್ಯಾತ ರಾಜಕಾರಣಿಗಳು, ಸೂಪರ್‌ ಸ್ಟಾರ್‌ಗಳು, ಕ್ರೀಡಾಪಟುಗಳು, ಕಲಾವಿದರು, ನೊಬೆಲ್‌ ಪುರಸ್ಕೃತರು, ದೇಶ-ವಿದೇಶಗಳ ಪ್ರಧಾನಿ, ಅಧ್ಯಕ್ಷರನ್ನು ರಾಯ್‌ ಸಂದರ್ಶಿಸಿದರು. ಎನ್‌ಡಿಟಿವಿ ಪ್ರಾಫಿಟ್‌, ಎನ್‌ಡಿಟಿವಿ ಪ್ರೈಮ್‌ ಸಮೂಹದ ಮತ್ತೆರಡು ಚಾನೆಲ್‌ಗಳು. ೭ ವಂಡರ್ಸ್‌ ಆಫ್‌ ಇಂಡಿಯಾ, ಸೇವ್‌ ಅವರ್‌ ಟೈಗರ್ಸ್‌, ದಿ ಗ್ರೀನ್‌ಥಾನ್‌, ಸಪೋರ್ಟ್‌ ಮೈ ಸ್ಕೂಲ್‌ ಇತ್ಯಾದಿ ಹಲವು ಅಭಿಯಾನಗಳನ್ನು ನಡೆಸಿದೆ. ೨೦೨೧-೨೨ರಲ್ಲಿ ಎನ್‌ಡಿಟಿವಿ ೪೨೧ ಕೋಟಿ ರೂ. ಆದಾಯ ಮತ್ತು ೮೫ ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ಸಿಬಿಐ ದಾಳಿ, ಸೆಬಿ ನಿಷೇಧ: ಎನ್‌ಡಿಟಿವಿ ಹಾಗೂ ಪ್ರಣಯ್‌ ರಾಯ್‌ ಈ ಹಿಂದೆ ವಿವಾದಗಳನ್ನೂ ಎದುರಿಸಿದ್ದರು. 2016ರಲ್ಲಿ ಎನ್‌ಡಿಟಿವಿ ಇಂಡಿಯಾ ಹಿಂದಿ ನ್ಯೂಸ್‌ ಚಾನೆಲ್‌ ವಿರುದ್ಧ ಒಂದು ದಿನದ ನಿಷೇಧ ವಿಧಿಸಲಾಯಿತು. ಸಂಸ್ಥೆ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗೆ ವಿರುದ್ಧದ ಸುದ್ದಿಗಳನ್ನು ಬಿತ್ತರಿಸುತ್ತಿದೆ ಎಂದು ಸರ್ಕಾರ ಸಮರ್ಥಿಸಿತ್ತು. ಪಠಾಣ್ ಕೋಟ್‌ನಲ್ಲಿ ೨೦೧೬ರ ಜನವರಿ ೨ರಂದು ವಾಯಪಡೆಯ ನೆಲೆಯ ಮೇಲೆ ನಡೆದ ಉಗ್ರರ ದಾಳಿ ಕುರಿತ ಸುದ್ದಿಯ ಪ್ರಸಾರ ವಿವಾದಕ್ಕೀಡಾಗಿತ್ತು. ಹೀಗಿದ್ದರೂ ಸರ್ಕಾರ ಬಳಿಕ ಆದೇಶವನ್ನು ಹಿಂತೆಗೆದುಕೊಂಡಿತ್ತು.

ಪ್ರಣಯ್‌ ರಾಯ್‌ ನಿವಾಸಕ್ಕೆ ಸಿಬಿಐ ದಾಳಿ: ದಿಲ್ಲಿಯಲ್ಲಿ ೨೦೧೭ರ ಜೂನ್‌ನಲ್ಲಿ ಪ್ರಣಯ್‌ ರಾಯ್‌, ರಾಧಿಕಾ ರಾಯ್‌ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿತ್ತು. ಖಾಸಗಿ ಬ್ಯಾಂಕ್‌ ಒಂದರ ಜತೆಗಿನ ಹಣಕಾಸು ವ್ಯವಹಾರದಲ್ಲಿ ಬ್ಯಾಂಕ್‌ಗೆ ೪೮ ಕೋಟಿ ರೂ.ಗಳನ್ನು ನಷ್ಟ ಮಾಡಿದ ಆರೋಪವನ್ನು ದಂಪತಿ ಎದುರಿಸಿದ್ದರು.

ಸೆಬಿಯಿಂದ ೨ ವರ್ಷ ನಿಷೇಧ: ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ೨೦೧೯ರಲ್ಲಿ ಪ್ರಣಯ್‌ ರಾಯ್‌ ಮತ್ತು ರಾಧಿಕಾ ರಾಯ್‌ ವಿರುದ್ಧ ಎರಡು ವರ್ಷಗಳ ಕಾಲ ಷೇರು ವಹಿವಾಟುಗಳನ್ನು ನಡೆಸದಂತೆ ನಿಷೇಧ ವಿಧಿಸಿದೆ. ವಿಶ್ವಪ್ರಧಾನ್‌ ಕಮರ್ಶಿಯಲ್‌ ಪ್ರೈವೇಟ್‌ ಲಿಮಿಟೆಡ್‌ (ವಿಸಿಪಿಎಲ್)‌ ಸಂಸ್ಥೆಗೆ, ಎನ್‌ಡಿಟಿವಿಯ ಷೇರುಗಳ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ದಂಪತಿ ವಿರುದ್ಧ ಸೆಬಿ ಈ ಕ್ರಮ ಕೈಗೊಂಡಿದೆ. ಈ ಕೇಸ್‌ನಲ್ಲಿ ಎನ್‌ಡಿಟಿವಿಯ ಆಡಳಿತ ಮಂಡಳಿ ಮತ್ತು ಷೇರುದಾರರ ಗಮನಕ್ಕೆ ತರದೆ ೩೦% ಷೇರುಗಳನ್ನು ವಿಸಿಪಿಎಲ್‌ಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಪ್ರಣಯ್‌ ರಾಯ್‌ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.

ಅದಾನಿ ಗ್ರೂಪ್‌ ಎನ್‌ಡಿಟಿವಿ ಷೇರುಗಳನ್ನು ಖರೀದಿಸಿದ್ದು ಹೇಗೆ?!

NDTV logo; Gautam Adani

ಬಿಲಿಯನೇರ್‌ ಉದ್ಯಮಿ ಗೌತಮ್‌ ಅದಾನಿಯವರು ಪ್ರಣಯ್‌ ರಾಯ್‌ ಅವರಿಗೆ ಹೇಳದೆಯೇ ಎನ್‌ಡಿಟಿವಿಯ ೨೯.೨% ಷೇರುಗಳನ್ನು ಖರೀದಿಸಿದ್ದು ಹೇಗೆ ಎಂಬ ಕುತೂಹಲ ಈಗ ಉಂಟಾಗಿದೆ. ಇದು ಹೇಗಾಯಿತು ಎಂಬುದನ್ನು ತಿಳಿಯೋಣ.

ಅದಾನಿ ಗ್ರೂಪ್‌ ನೇರವಾಗಿ ಎನ್‌ಡಿಟಿವಿಯ ೨೯.೨% ಷೇರುಗಳನ್ನು ಖರೀದಿಸಲಿಲ್ಲ. ಬದಲಿಗೆ ವಿಶ್ವಪ್ರಧಾನ್‌ ಕಮರ್ಶಿಯಲ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿಯನ್ನು ಖರೀದಿಸುವ ಮೂಲಕ ಎನ್‌ಡಿಟಿವಿಯ ಷೇರುಗಳನ್ನು ಬಾಚಿಕೊಂಡಿದೆ. ವಿಶ್ವಪ್ರಧಾನ್‌ ಕಮರ್ಶಿಯಲ್‌ ಈಗ ಅದಾನಿ ಸಮೂಹದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ನ ಅಧೀನದಲ್ಲಿರುವ ಕಂಪನಿಯಾಗಿದೆ. ಈ ವಿಶ್ವಪ್ರಧಾನ್‌ ಕಮರ್ಶಿಯಲ್‌ ಕಂಪನಿಯು ೨೦೦೯-೧೦ರಲ್ಲಿ ಎನ್‌ಡಿಟಿವಿಯ ಪ್ರವರ್ತಕ ಕಂಪನಿಯಾದ ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌ಗೆ ೪೦3 ಕೋಟಿ ರೂ. ಸಾಲವನ್ನು ಕೊಟ್ಟಿತ್ತು. ಆದರೆ ಮುಂದೆ ನಡೆದ ವಿದ್ಯಮಾನಗಳು ಈಗಿನ ಸನ್ನಿವೇಶವನ್ನು ಸೃಷ್ಟಿಸಿವೆ!

ಪ್ರಣಯ್‌ ರಾಯ್‌ ಅವರಿಗೆ ಮುಳುವಾಯಿತೇ ೪೦೩ ಕೋಟಿ ರೂ. ಸಾಲ?

ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌ ಎನ್‌ಡಿಟಿವಿಯಲ್ಲಿ ೨೯.೧೮% ಷೇರುಗಳನ್ನು ಹೊಂದಿದೆ. ಪ್ರಣಯ್‌ ರಾಯ್‌ ಮತ್ತು ರಾಧಿಕಾ ರಾಯ್‌ ಇದರ ಮುಖ್ಯಸ್ಥರು. ಆರ್‌ಆರ್‌ಪಿಆರ್‌ ಎಂದರೆ ರಾಧಿಕಾ ರಾಯ್‌ ಪ್ರಣಯ್‌ ರಾಯ್‌ ಪ್ರೈವೇಟ್‌ ಲಿಮಿಟೆಡ್‌. ಈ ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌, ಎನ್‌ಡಿಟಿವಿ ಪರವಾಗಿ ೨೦೦೯-೧೦ರಲ್ಲಿ ವಿಶ್ವಪ್ರಧಾನ್‌ ಕಮರ್ಶಿಯಲ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ೪೦೩ ಕೋಟಿ ರೂ. ಬಡ್ಡಿ ರಹಿತ ಸಾಲ ಪಡೆಯಿತು. ೨೦೦೯ರ ಜುಲೈನಲ್ಲಿ ೩೫೦ ಕೋಟಿ ರೂ. ಹಾಗೂ ೨೦೧೦ರ ಜನವರಿಯಲ್ಲಿ ೫೩ ಕೋಟಿ ರೂ. ಸಾಲವನ್ನು ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌ ಪಡೆಯಿತು.

ಸೆಬಿಯ ಪ್ರಕಾರ ಎನ್‌ಡಿಟಿವಿಯ ಪ್ರವರ್ತಕರಾದ ಪ್ರಣಯ್‌ ರಾವ್‌ ಮತ್ತು ರಾಧಿಕಾ ರಾಯ್‌ ಅವರು ಈ ಬೃಹತ್‌ ಮೊತ್ತದ ಸಾಲವನ್ನು ವಿಸಿಪಿಎಲ್‌ನಿಂದ ಪಡೆದ ಸಂಗತಿಯನ್ನು ಎನ್‌ಡಿಟಿವಿಯ ಷೇರುದಾರರ ಗಮನಕ್ಕೆ ತಂದಿರಲಿಲ್ಲ. ಸಾಲದ ಒಪ್ಪಂದದ ಪ್ರಕಾರ ಆರ್‌ಆರ್‌ಪಿಆರ್‌ ಒಂದು ವೇಳೆ ಸಾಲವನ್ನು ನಿಗದಿತ ಅವಧಿಯೊಳಗೆ ಮರು ಪಾವತಿಸದಿದ್ದರೆ, ಸಾಲವನ್ನು ಷೇರುಗಳಾಗಿ ಪರಿವರ್ತಿಸಿ ವಿಶ್ವಪ್ರಧಾನ್‌ ಕಮರ್ಶಿಯಲ್‌ (ವಿಸಿಪಿಎಲ್)‌ ಖರೀದಿಸಬಹುದು. ಪ್ರಣಯ್‌ ರಾಯ್‌ ಅವರು ಸಾಲವನ್ನು ಮರು ಪಾವತಿಸಿರಲಿಲ್ಲ. ಈ ನಡುವೆ ವಿಸಿಪಿಎಲ್‌ ಅನ್ನೇ ಖರೀದಿಸಿದ ಅದಾನಿ ಗ್ರೂಪ್‌, ವಿಸಿಪಿಎಲ್‌ ಮೂಲಕ ಒಪ್ಪಂದದಂತೆ ವಾರಂಟ್‌ ಹೊರಡಿಸಿ, ಎನ್‌ಡಿಟಿವಿಯಲ್ಲಿನ ೨೯.೨% ಷೇರುಗಳನ್ನು ಖರೀದಿಸಿದೆ. ಜತೆಗೆ ಇನ್ನೂ ಹೆಚ್ಚುವರಿ ೨೬% ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಕೊಳ್ಳುವುದಾಗಿ ತಿಳಿಸಿದೆ. ಅದರಲ್ಲಿ ಯಶಸ್ವಿಯಾದರೆ, ಎನ್‌ಡಿಟಿವಿಯ ೫೫%ಗೂ ಹೆಚ್ಚು ಷೇರು ಪಾಲು ಅದಾನಿ ಗ್ರೂಪ್‌ ಪಾಲಾಗಲಿದೆ. ಮಾಲಿಕತ್ವ ನಿಯಂತ್ರಣ ಕೂಡ ಸಿಗಲಿದೆ.

ಇದನ್ನೂ ಓದಿ: NDTV | ಅದಾನಿಗೆ RRPR ಷೇರು ಖರೀದಿಗೆ ಸೆಬಿ ಅನುಮತಿ ಅಗತ್ಯ: ಎನ್‌ಡಿಟಿವಿ

ರಿಲಯನ್ಸ್‌ ಗ್ರೂಪ್‌ ಲಿಂಕ್?‌ ವಿಶ್ವಪ್ರಧಾನ್‌ ಕಮರ್ಶಿಯಲ್‌ ಕಂಪನಿ ೨೦೦೯ರಲ್ಲಿ ಎನ್‌ಡಿಟಿವಿಯ ಪ್ರವರ್ತಕ ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌ಗೆ ೪೦೩ ಕೋಟಿ ರೂ. ಸಾಲ ನೀಡಲು ಶಿನಾನೊ ರಿಟೇಲ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿಯಿಂದ ಸಾಲ ಪಡೆದಿತ್ತು. ಶಿನಾನೊ ರಿಟೇಲ್‌, ರಿಲಯನ್ಸ್‌ ಗ್ರೂಪ್‌ನ ಭಾಗವಾದ ರಿಲಯನ್ಸ್‌ ಇಂಡಸ್ಟ್ರಿಯಲ್‌ ಇನ್ವೆಸ್ಟ್‌ಮೆಂಟ್ಸ್‌ & ಹೋಲ್ಡಿಂಗ್ಸ್‌ನಿಂದ ಸಾಲ ಪಡೆದಿತ್ತು ಎಂಬ ವರದಿಗಳೂ ಇವೆ. ಆದರೆ ರಿಲಯನ್ಸ್‌ ಗ್ರೂಪ್‌, ಎನ್‌ಡಿಟಿವಿ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಮುನ್ನವೇ, ಅದಾನಿ ಗ್ರೂಪ್‌ ಈ ಜಿದ್ದಾಜಿದ್ದಿನಲ್ಲಿ ಮುನ್ನಡೆ ಗಳಿಸಿದೆ ಎನ್ನುತ್ತಾರೆ ಕಾರ್ಪೊರೇಟ್‌ ವಲಯದ ವಿಶ್ಲೇಷಕರು.

ಹೋಸ್ಟಿಲ್‌ ಟೇಕ್‌ ಓವರ್?‌ ಕಾರ್ಪೊರೇಟ್‌ ವಲಯದಲ್ಲಿ ಒಂದು ಕಂಪನಿಯನ್ನು ಅದರ ಪ್ರವರ್ತಕರ ಒಪ್ಪಿಗೆಗೆ ಕಾಯದೆಯೇ, ಮತ್ತೊಂದು ಕಂಪನಿ ಸ್ವಾಧೀನಪಡಿಸಿಕೊಳ್ಳುವುದನ್ನು ಹೋಸ್ಟಿಲ್‌ ಟೇಕ್‌ ಓವರ್‌ (Hostile Takeover) ಎನ್ನುತ್ತಾರೆ. ಕಾರ್ಪೊರೇಟ್‌ ಇತಿಹಾಸವನ್ನು ಗಮನಿಸಿದರೆ ಅಂಥ ಹಲವಾರು ಸ್ವಾಧೀನಗಳು ನಡೆದಿದೆ. ಈ ವಿಧಾನದಲ್ಲಿ ಕಂಪನಿಯ ಷೇರುದಾರರನ್ನು ನೇರವಾಗಿ ಸಂಪರ್ಕಿಸಿ, ಷೇರುಗಳನ್ನು ಖರೀದಿಸಿ ಕಂಪನಿಯನ್ನು ತೆಕ್ಕೆಗೆ ತೆಗೆದುಕೊಳ್ಳಲಾಗುತ್ತದೆ. ಎನ್‌ಡಿಟಿವಿ ಕೂಡ ಇದೇ ರೀತಿ ಪ್ರಣಯ್‌ ರಾಯ್‌ ಅವರ ಹಿಡಿತದಿಂದ ಅದಾನಿ ಗ್ರೂಪ್‌ ಪಾಲಾಗುವ ಸಾಧ್ಯತೆ ಇದೀಗ ಉಂಟಾಗಿದೆ. ಒಟ್ಟಿನಲ್ಲಿ ಭಾರಿ ಮೊತ್ತದ ಸಾಲವನ್ನು ಪಡೆದ ಬಳಿಕ ಅದರ ನಿರ್ವಹಣೆಯಲ್ಲಿ ಪ್ರಣಯ್‌ ರಾಯ್‌ ಎಡವಿದರೇ ಎಂಬ ಪ್ರಶ್ನೆ ಇದೀಗ ಉಂಟಾಗಿದೆ.

ಇದನ್ನೂ ಓದಿ :Brand story | ಕಾಲೇಜು ಡ್ರಾಪ್‌ಔಟ್‌ ಹುಡುಗ ಡಿಮಾರ್ಟ್‌ ಸ್ಟೋರ್ ತೆರೆದು ರಿಟೇಲ್‌ ಕಿಂಗ್‌ ಆಗಿದ್ದು ಹೇಗೆ?!

Exit mobile version