Site icon Vistara News

Brand story : ಜಗತ್ತನ್ನೇ ದಂಗುಬಡಿಸಿದ ಚಾಟ್‌ಜಿಪಿಟಿ ಜನಕ ಓಪನ್‌ಎಐನಲ್ಲಿ ಇನ್ಫೋಸಿಸ್‌ ಹಣ ಹೂಡಿದ್ದೇಕೆ?!

#image_title

ಆರು ತಿಂಗಳಿನ ಹಿಂದೆ ಇಂಥದ್ದೊಂದು ಚಾಟ್‌ಬೋಟ್‌ ಈ ಜಗತ್ತಿನಲ್ಲೇ ಇದ್ದಿರಲಿಲ್ಲ. ಆದರೆ ಈಗ ಕಾರ್ಪೊರೇಟ್‌ ವಲಯದ ಪಡಸಾಲೆಗಳಲ್ಲಿ ಕಾಳ್ಗಿಚ್ಚಿನಂತೆ ಇದರ ಪ್ರತಾಪದ ಬಗ್ಗೆ ಚರ್ಚೆ ನಡೆದಿದೆ. ಇಂಥ ಸಾಧನಗಳಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಆತಂಕ ಮನೆ ಮಾಡಿದೆ. ದೈತ್ಯ ಟೆಕ್‌ ಕಂಪನಿಗಳು ಇವುಗಳ ಮೇಲೆ ಭಾರಿ ಹೂಡಿಕೆಯನ್ನು ಮಾಡಿವೆ. ನಿಮ್ಮ ಊಹೆ ನಿಜ, ( ChatGPT) ಅಮೆರಿಕದ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ರಿಸರ್ಚ್‌ ಲ್ಯಾಬೊರೇಟರಿ ಸಂಸ್ಥೆಯಾದ ಓಪನ್‌ ಎಐ, (Brand story) ಚಾಟ್‌ಜಿಪಿಟಿ ಎಂಬ ಕೃತಕಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್‌ ಟೆಕ್ನಾಲಜಿ ಆಧರಿತ ಚಾಟ್‌ಬೋಟ್‌ ಬಿಡುಗಡೆಗೊಳಿಸಿ ಪ್ರಪಂಚದಲ್ಲೇ ಸಂಚಲನ ಸೃಷ್ಟಿಸಿದೆ.

ಚಾಟ್‌ಬೋಟ್‌ (Chatbot) ಅಂದರೆ ಒಂದು ಸಾಫ್ಟ್‌ವೇರ್‌ ಅಪ್ಲಿಕೇಶನ್.‌ ಅದು ಮನುಷ್ಯರ ಸಂಭಾಷಣೆಯನ್ನು ಆನ್‌ಲೈನ್‌ನಲ್ಲಿ ಟೆಕ್ಸ್ಟ್‌ ಅಥವಾ ಧ್ವನಿಯ ರೂಪದಲ್ಲಿ ಅನುಕರಿಸುತ್ತದೆ. ಈ ಚಾಟ್‌ಜಿಪಿಟಿಯ ಕ್ರಾಂತಿಕಾರಕ ಪ್ರಯೋಜನ ಏನೆಂದರೆ ಸಹಜವಾಗಿ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತದೆ ಮತ್ತು ಮನುಷ್ಯರ ಜತೆ Text ಸಂಭಾಷಣೆ ನಡೆಸಬಲ್ಲುದು. ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಬಳಕೆದಾರರ ಇಂಗಿತವನ್ನೂ ಅರಿಯಬಲ್ಲುದು. ಕೇವಲ ಚಾಟ್‌ಬೋಟ್‌ಗಿಂತ ಹೆಚ್ಚು ಆಧುನಿಕ. ನೀವು ಚಾಟ್‌ಜಿಪಿಟಿಗೆ ಪ್ರಶ್ನೆಗಳನ್ನು ಕೇಳಬಹುದು. ಗೂಗಲ್‌ ಸರ್ಚ್‌ ಎಂಜಿನ್‌ಗೂ ಚಾಟ್‌ಜಿಪಿಟಿಗೂ ಇರುವ ವ್ಯತ್ಯಾಸ ಏನು? ಗೂಗಲ್‌ ಮಾಹಿತಿಗಳ ಲಿಂಕ್‌ಗಳನ್ನು ಮಾತ್ರ ನೀಡುತ್ತದೆ. ಆದರೆ ಚಾಟ್‌ಜಿಪಿಟಿ ಬಳಕೆದಾರರಿಗೆ ತಾನೇ ಹಲವಾರು ಕ್ಷೇತ್ರಗಳಲ್ಲಿ (domains) ಮಾಹಿತಿಯನ್ನು ಸಂಸ್ಕರಿಸಿ ಸಂಭಾಷಣೆಯ ಶೈಲಿಯಲ್ಲಿ ನೀಡುತ್ತದೆ. ಉದಾಹರಣೆಗೆ ಕಾರು ಸಾಲದ ಬಗ್ಗೆ ಲೇಖನ ಕೋರಿದರೆ ಗೂಗಲ್‌, ಹಲವು ಲಿಂಕ್‌ಗಳನ್ನು ಕೊಡಬಹುದು. ಆದರೆ ಚಾಟ್‌ಜಿಪಿಟಿ ಲೇಖನವನ್ನೇ ಸಿದ್ಧಪಡಿಸಿ ಕೊಡುತ್ತದೆ. ಹಾಗಂತ ಗೂಗಲ್‌ಗಿಂತಲೂ ಚಾಟ್‌ಜಿಪಿಟಿ ಮೇಲು ಎಂದಲ್ಲ, ಎರಡಕ್ಕೂ ಅದರದ್ದೇ ಆದ ವಿಶೇಷತೆ ಇದೆ.

10 ಕೋಟಿ ಬಳಕೆದಾರರೊಂದಿಗೆ ಇತಿಹಾಸ ಸೃಷ್ಟಿಸಿದ ಚಾಟ್‌ಜಿಪಿಟಿ : ಓಪನ್‌ ಎಐ ಸಂಸ್ಥೆ ಕೃತಕಬುದ್ಧಿಮತ್ತೆ ಕುರಿತ ಸಂಶೋಧನೆ, ಎಐ ಉತ್ಪನ್ನಗಳ ಅಭಿವೃದ್ಧಿ ಮತ್ತು ಮಾರಾಟವನ್ನು ಮಾಡುತ್ತದೆ. ಇದರ ಉತ್ಪನ್ನಗಳೆಂದರೆ ಜಿಪಿಟಿ-4, DALL-4, ಓಪನ್‌ಎಐ ಫೈವ್‌, ಚಾಟ್‌ಜಿಪಿಟಿ, ಓಪನ್‌ಎಐ ಕೋಡೆಕ್ಸ್.‌ (www.openai.com) ವಿಶ್ವದಲ್ಲೇ ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೆಬ್‌ಸೈಟ್‌ ಓಪನ್‌ಎಐನದ್ದಾಗಿದೆ (OpenAI) ಚಾಟ್‌ಜಿಪಿಟಿ ಇಡೀ ಜಗತ್ತಿನಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಕೇವಲ 7 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಓಪನ್‌ಎಐ ಮಾಡುತ್ತಿರುವ ಸದ್ದು ಅಷ್ಟಿಷ್ಟಲ್ಲ. ಚಾಟ್‌ಜಿಪಿಟಿ 2023ರ ಜನವರಿಯಲ್ಲಿ ಕನ್‌ಸ್ಯೂಮರ್‌ ಸಾಫ್ಟ್‌ವೇರ್‌ ಅಪ್ಲಿಕೇಶನ್‌ನ ಇತಿಹಾಸದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಅಪ್ಲಿಕೇಶನ್‌ ಆಗಿ ಚಾಟ್‌ಜಿಪಿಟಿ ಹೊರಹೊಮ್ಮಿತು. ಇದರ ವೇಗ ಕಂಡು ಬೆಚ್ಚಿದ ಗೂಗಲ್‌, ತನ್ನ ಚಾಟ್‌ಬೋಟ್‌ ಬಾರ್ಡ್‌ ಅನ್ನು ಅಭಿವೃದ್ಧಿಪಡಿಸಿತು.

ಓಪನ್‌ ಎಐ ಸ್ಥಾಪಕರು ಯಾರು?

ಓಪನ್‌ ಎಐ ಸಿಇಒ ಸ್ಯಾಮುಯೆಲ್‌ ಹ್ಯಾರಿಸ್‌ ಆಲ್ಟ್‌ಮನ್

ಓಪನ್‌ ಎಐ ಅನ್ನು ಹತ್ತು ಮಂದಿ ತಂತ್ರಜ್ಞರು ಸೇರಿ 2015ರಲ್ಲಿ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಸ್ಥಾಪಿಸಿದರು. ವಾಸ್ತವವಾಗಿ ಮೊದಲಿಗೆ ಓಪನ್‌ ಎಐ ಒಂದು ಎನ್‌ಜಿಒ ಆಗಿ ಅಸ್ತಿತ್ವಕ್ಕೆ ಬಂದಿತ್ತು. ಆರಂಭದಲ್ಲಿ ಇನ್ಫೋಸಿಸ್‌, ಎಲಾನ್‌ ಮಸ್ಕ್‌ ಮತ್ತಿತರ ಮೂಲಗಳಿಂದ 1 ಶತಕೋಟಿ ಡಾಲರ್‌ ಹೂಡಿಕೆ ಲಭಿಸಿತ್ತು (ಅಂದಾಜು 8,200 ಕೋಟಿ ರೂ.) ಇಲ್ಯಾ ಸುಟ್ಸ್‌ಕೆವರ್‌, ಗ್ರೇಗ್‌ ಬ್ರೋಕ್‌ ಮನ್‌, ಟ್ರೆವೊರ್‌ ಬ್ಲಾಕ್‌ವೆಲ್‌, ವಿಕಿ ಚೆಯುಂಗ್‌, ಆಂಡ್ರೇಜ್‌ ಕಾರ್‌ಪಥಿ, ಡ್ಯುರ್ಕ್‌ ಕಿಂಗ್‌ಮಾ, ಜೆಸ್ಸಿಕಾ ಲಿವಿಂಗ್‌ಸ್ಟನ್‌, ಜಾನ್‌ ಸ್ಕುಲ್‌ಮ್ಯಾನ್‌, ಪಮೇಲಾ ವಗಾಟಾ ಮತ್ತು ವೊಜಿಸ್ಕ್‌ ಜೆರೆಮ್‌ಬಾ. ಉದ್ಯಮಿ ಸ್ಯಾಮ್‌ ಅಲ್ಟ್‌ಮನ್‌ ಮತ್ತು ಎಲಾನ್‌ ಮಸ್ಕ್‌ ಆರಂಭಿಕ ಹಂತದಲ್ಲಿ ಕಂಪನಿಯ ನಿರ್ದೇಶಕರುಗಳ ಮಂಡಳಿಯ ಸದಸ್ಯರಾಗಿದ್ದರು. ಸ್ಯಾಮ್‌ ಆಲ್ಟ್‌ಮನ್‌ ಕಂಪನಿಯ ಸಿಇಒ ಆಗಿದ್ದಾರೆ. ಇವರೆಲ್ಲರೂ ಅಸಾಧಾರಣ ಯುವ ತಂತ್ರಜ್ಞಾನಿಗಳು. ಸಿಇಒ ಆಲ್ಟ್‌ಮನ್‌ ಅವರಿಗೆ ಈಗ 37 ವರ್ಷ ವಯಸ್ಸು. ಯೆಹೂದಿ ಕುಟುಂಬದಲ್ಲಿ ಜನಿಸಿದ್ದ ಆಲ್ಟ್‌ಮನ್‌ 8 ವರ್ಷದ ಬಾಲಕನಾಗಿದ್ದಾಗ ಕಂಪ್ಯೂಟರ್‌ ಬಳಸುತ್ತಿದ್ದ. 2005ರಲ್ಲಿ ಸ್ಟಾನ್‌ಫೋರ್ಡ್‌ ಯುನಿವರ್ಸಿಟಿಯಲ್ಲಿ 1 ವರ್ಷ ಕಂಪ್ಯೂಟರ್‌ ಸೈನ್ಸ್‌ ಓದಿ ಡ್ರಾಪೌಟ್‌ ಆಗಿದ್ದರು. 2005ರಲ್ಲಿ ಲೊಕೇಶನ್‌ ಆಧರಿತ ಮೊಬೈಲ್‌ ಅಪ್ಲಿಕೇಶನ್‌ ಲೂಪ್ಟ್‌ ಅನ್ನು ಅಭಿವೃದ್ಧಿಪಡಿಸಿದ್ದರು. 2020ರಲ್ಲಿ ಓಪನ್‌ ಎಐನ ಸಿಇಒ ಆದರು. 2023ರಲ್ಲಿ ಟೈಮ್‌ ನಿಯತಕಾಲಿಕೆಯ ಪ್ರಕಾರ 100 ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಆಲ್ಟ್‌ ಮನ್‌ ಕೂಡ ಒಬ್ಬರಾಗಿದ್ದಾರೆ. ಆಲ್ಟ್‌ಮನ್‌ ಒಬ್ಬ ಅದ್ಭುತ ಉದ್ಯಮಿ ಎನ್ನುತ್ತಾರೆ ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾಡೆಳ್ಳಾ.

ಓಪನ್‌ ಎಐನಲ್ಲಿ ಇನ್ಫೋಸಿಸ್‌ ಹೂಡಿದ್ದೇಕೆ?

ವಿಶಾಲ್‌ ಸಿಕ್ಕಾ, ಮಾಜಿ ಸಿಇಒ, ಇನ್ಫೋಸಿಸ್

ಚಾಟ್‌ಜಿಪಿಟಿ ತಯಾರಕ ಓಪನ್‌ಎಐ ಆರಂಭದಲ್ಲಿ ಎನ್‌ಜಿಒ ( non-profit) ಆಗಿತ್ತು. ಆದರೆ 2015ರಲ್ಲೇ ಇನ್ಫೋಸಿಸ್‌, ಎಲಾನ್‌ ಮಸ್ಕ್‌, ವೈಸಿ ರೀಸರ್ಚ್‌, ಎಡಬ್ಲ್ಯುಎಸ್‌ ಮುಖ್ಯಸ್ಥರು ಓಪನ್‌ ಎಐನಲ್ಲಿ ಸುಮಾರು 1 ಶತಕೋಟಿ ಡಾಲರ್‌ ಹೂಡಿಕೆ ಮಾಡಿದ್ದರು ಎಂದು ವರದಿಯಾಗಿತ್ತು. ಅದರಲ್ಲೂ ಆಗ ಇನ್ಫೋಸಿಸ್‌ನ ಸಿಇಒ ಆಗಿದ್ದ ವಿಶಾಲ್‌ ಸಿಕ್ಕಾ ಅವರಿಗೆ ಎಐ ತಂತ್ರಜ್ಞಾನದ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಇತ್ತು. ಹೀಗಾಗಿ ಇನ್ಫೋಸಿಸ್‌, ಓಪನ್‌ಎಐಗೆ ಡೊನೇಶನ್‌ ನೀಡಿತ್ತು. ಸಿಕ್ಕಾ ಅವರು ಓಪನ್‌ ಎಐಗೆ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಆಗ ಓಪನ್‌ ಎಐ ಮುಕ್ತ ತಂತ್ರಾಂಶ ಅಭಿವೃದ್ಧಿಗೆ ಬದ್ಧವಾಗಿತ್ತು. ಆದರೆ 2017ರಲ್ಲಿ ವಿಶಾಲ್‌ ಸಿಕ್ಕಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಇದರೊಂದಿಗೆ ಓಪನ್‌ ಎಐ ಟೆಕ್ನಾಲಜಿಯನ್ನು ಇನ್ಫೋಸಿಸ್‌ ಜತೆ ಸಂಯೋಜಿಸುವ ಯೋಜನೆ ನನೆಗುದಿಗೆ ಬಿತ್ತು. 2019ರ ವೇಳೆಗೆ ಓಪನ್‌ಎಐನಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಎನ್‌ಜಿಒ ಆಗಿದ್ದ ಓಪನ್‌ ಎಐ, ಕಂಪನಿಯಾಗಿ ಬದಲಾಯಿತು. ಇದಕ್ಕೆ ಕಾರಣ ಓಪನ್‌ ಎಐನ ಹಾಲಿ ಸಿಇಒ ಆಲ್ಟ್‌ಮನ್!

ಕಂಪ್ಯೂಟರ್‌ ಕೋಡ್‌ ಅನ್ನೂ ಬರೆಯಬಲ್ಲ ಸ್ಫೋಟಕ ಎಐ ಟೂಲ್ಸ್! ಓಪನ್‌ ಎಐನಲ್ಲಿ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ ಪವರ್‌ಫುಲ್ ಎಐ ಟೂಲ್ಸ್‌ಗಳು ಸಿಲಿಕಾನ್‌ ವ್ಯಾಲಿಯಲ್ಲೇ ಮಿಂಚಿನ ಸಂಚಾರ ಮೂಡಿಸಿದೆ.‌ ಅದು ಸಂಕೀರಣ text ಗಳಿಂದ computer code ತನಕ ಎಲ್ಲವನ್ನೂ ಮಾಡಬಲ್ಲ ಸಾಮರ್ಥ್ಯ ಹೊಂದಿವೆ. ಓಪನ್‌ಎಐನ GPT2 ಲಾಂಗ್ವೇಜ್‌ ಮಾಡೆಲ್‌ ಟೂಲ್‌ ಬಿಡುಗಡೆಯಾದಾಗ, ಸ್ವತಃ ಕಂಪನಿಯ ಉದ್ಯೋಗಿಗಳು ಇದರ ದುರ್ಬಳಕೆ ಆಗಬಹುದೇನೋ ಎಂದು ಆತಂಕ ವ್ಯಕ್ತಪಡಿಸಿದ್ದರಂತೆ. ಜಿಪಿಟಿ2 ಟೂಲ್‌ ಸಮಕಾಲೀನ ಘಟನೆಗಳ ಬಗ್ಗೆ ಒಂದು ಸಾಲು ಸಿಕ್ಕಿದರೂ, ಅದನ್ನು ಸುದ್ದಿಯಾಗಿ ಬರೆಯುವ ಸಾಮರ್ಥ್ಯ ಹೊಂದಿದೆ. ಸಾಂಸ್ಥಿಕ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಎಐ ತಂತ್ರಜ್ಞಾನದ ಕಾರುಬಾರು ಶುರುವಾಗಿದೆ. ಇಮೇಜ್‌ಗಳ ಸೃಷ್ಟಿಯಲ್ಲಿ ಕ್ರಾಂತಿಕಾರಕ ಪರಿವರ್ತನೆಯಾಗುತ್ತಿದೆ. ನಿಮಗೆ ಬೇಕಾದಂಥ ಚಿತ್ರಗಳ ಸೃಷ್ಟಿ ಇಲ್ಲಿ ಸಾಧ್ಯ. ಆಟೊಮ್ಯಾಟಿಕ್‌ ಫೊಟೊ ಎಡಿಟಿಂಗ್‌ ಅನ್ನು ಮಾಡಬಹುದು. ಚಿತ್ರ ಕಲಾವಿದರು, ಸಂಗೀತಜ್ಞರು, ಬಿಸಿನೆಸ್‌ಮ್ಯಾನ್‌, ಸ್ಟಾರ್ಟಪ್‌ ನಡೆಸುವವರು ಹೀಗೆ ಎಲ್ಲರೂ ಎಐ ನೆರವನ್ನು ಪಡೆಯುತ್ತಿದ್ದಾರೆ.

ಎಐ ತಂತ್ರಜ್ಞಾನ ಕ್ರಾಂತಿಯ ಬಗ್ಗೆ ಓಪನ್‌ ಎಐ ಸಿಇಒ ಹೇಳಿದ್ದೇನು? ಈ ಹಿಂದಿನ ತಂತ್ರಜ್ಞಾನಗಳು ಉದ್ಯೋಗ, ಉದ್ದಿಮೆ ವಲಯದ ಮೇಲೆ ಗಣನೀಯ ಪ್ರಭಾವ ಬೀರಿದೆ. ಎಐ ಟೆಕ್ನಾಲಜಿ ಕೂಡ ಇದೇ ಸಾಲಿನಲ್ಲಿದೆ. ಆದರೆ ಇದರ ಪರಿಣಾಮ ಹೇಗಿರಬಹುದು ಎಂದು ಊಹಿಸುವುದು ಕಷ್ಟ. ತಂತ್ರಜ್ಞಾನ ಅಭಿವೃದ್ಧಿಗಳ ಎರಡೂ ಮುಖಗಳನ್ನು ನೋಡಬೇಕು. ಆದರೆ ಭವಿಷ್ಯದಲ್ಲಿ ಉದ್ಯೋಗಗಳ ಸ್ಥಿತಿಗತಿ ಮತ್ತು ಗುಣಮಟ್ಟ ಸುಧಾರಿಸಲಿದೆ ಎಂದು ನಾನು ನಂಬುತ್ತೇನೆ. ಈಗಾಗಲೇ ಜಿಪಿಟಿ 4 ಬಳಸುತ್ತಿರುವ ಜನತೆ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಜನ ಜೀವನದ ಗುಣಮಟ್ಟ ಅಭಿವೃದ್ಧಿಗೆ ಎಐ ಸಹಕಾರಿಯಾಗುವುದಿದ್ದರೆ ಅದನ್ನು ತಡೆಯುವುದು ಕಷ್ಟ. ನಾನು ಆಶಾವಾದಿಯಾಗಿದ್ದೇನೆ ಎನ್ನುತ್ತಾರೆ ಓಪನ್‌ ಎಐ ಸಿಇಒ ಆಲ್ಟ್‌ಮನ್. ಎಐ ಟೆಕ್ನಾಲಜಿ ಉದ್ಯೋಗಗಳನ್ನು ಕಸಿದುಕೊಳ್ಳಲಿದೆಯೇ ಎಂಬ ಚರ್ಚೆ ಈಗ ವ್ಯಾಪಕವಾಗಿದೆ. ಹಾಲಿ ಮನುಷ್ಯರು ಮಾಡುವ ಏಕತಾನತೆಯ ಟಾಸ್ಕ್‌ಗಳನ್ನು (automate tasks) ಭವಿಷ್ಯದಲ್ಲಿ ಎಐ ಟೂಲ್‌ಗಳು ಮಾಡಲಿವೆ. ಆಗ ಮನುಷ್ಯರು ಏನು ಮಾಡಬಹುದು? ಮತ್ತಷ್ಟು ಸೃಜನಶೀಲ ಅಥವಾ ಮಹತ್ವದ ಕೆಲಸಗಳನ್ನು ಮಾಡಬಹುದು. ಅದೇ ರೀತಿ ಹೊಸ ಕೆಲಸಗಳು ಕೂಡ ಸೃಷ್ಟಿಯಾಗಬಹುದು ಎನ್ನುತ್ತಾರೆ ತಜ್ಞರು.

2024ರಲ್ಲಿ ಬಿಡುಗಡೆಯಾಗಲಿದೆಯೇ GPT 5 ? ಓಪನ್‌ ಎಐ ಜಿಪಿಟಿ5 ( Generative Pre-trained Transformer) ಅನ್ನು ತಯಾರಿಸುತ್ತಿದೆ. 2024ರಲ್ಲಿ ಇದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು ಗೇಮ್‌ ಚೇಂಜರ್‌ ಆಗಲಿದೆ ಎನ್ನುತ್ತಾರೆ ಕಂಪನಿಯ ಸಿಇಒ ಆಲ್ಟ್‌ಮನ್.‌ ಜಿಪಿಟಿ 5 ಸ್ವತಃ ವೆಬ್‌ ಸೈಟ್‌ ಅನ್ನು ತಯಾರಿಸಲಿದೆ. ಇದರ ಮೆಮೊರಿ ಜಾಸ್ತಿಯಾಗಿರಲಿದೆ. ಇದರಲ್ಲಿ ಸುದೀರ್ಘ ಮೆಸೇಜ್‌ಗಳನ್ನು ಬಳಕೆದಾರರು ಕಳಿಸಬಹುದು. ಮಲ್ಟಿಪಲ್‌ ಟಾಸ್ಕ್‌ಗಳನ್ನು ಜಿಪಿಟಿ 5ಗೆ ನೀಡಬಹುದು. ಲಾಜಿಕಲ್‌ ರೀಸನಿಂಗ್‌ ಸುಧಾರಿಸಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಏಐ ಪ್ರಭಾವ ಬೀರಲಿದೆ. ಓಪನ್‌ ಎಐ ಅಕಾಡೆಮಿ ಎಂಬ ಪ್ರಾಜೆಕ್ಟ್‌ ಅನ್ನೂ ಕಂಪನಿ ಆರಂಭಿಸಲು ಉದ್ದೇಶಿಸಿದೆ. ಅಂದರೆ ಇದರ ಮೂಲಕ ಯಾರಿಗೂ ಯಾವುದೇ ವಿಷಯದ ಬಗ್ಗೆ ಕಲಿಯಲು ಹಾದಿ ಸುಗಮವಾಗಲಿದೆ ಎನ್ನುತ್ತಾರೆ ಆಲ್ಟ್‌ಮನ್.‌

ಎಐ ಗೇಮ್‌ನಲ್ಲಿ ಯಾರಿದ್ದಾರೆ?

ಮೈಕ್ರೊಸಾಫ್ಟ್‌, ಗೂಗಲ್‌, ಮೆಟಾ ಇತ್ಯಾದಿ ದಿಗ್ಗಜ ಕಂಪನಿಗಳು ತಮ್ಮದೇ ಎಐ ಟೂಲ್‌ಗಳ ಅಭಿವೃದ್ಧಿಗೆ ಹೂಡಿಕೆ ಮಾಡುತ್ತಿವೆ. ಮೈಕ್ರೊಸಾಫ್ಟ್‌ 2023ರಲ್ಲಿ 10 ಶತಕೋಟಿ ಡಾಲರ್‌ (82,000 ಕೋಟಿ ರೂ.) ಹೂಡಿಕೆ ಮಾಡಿದೆ. ಇದು Azure AI platform ಅನ್ನು ಅಭಿವೃದ್ಧಿಪಡಿಸಿದೆ. ಮೈಕ್ರೊಸಾಫ್ಟ್‌ ಮೊದಲ ಬಾರಿಗೆ ಓಪನ್‌ಎಐನಲ್ಲಿ 2019ರಲ್ಲಿ 1 ಶತಕೋಟಿ ಡಾಲರ್‌ ಹೂಡಿದಾಗ (8200 ಕೋಟಿ ರೂ.) ಈ ಡೀಲ್‌ ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಆಗ ಸ್ಟಾರ್ಟಪ್‌ ಮಾರುಕಟ್ಟೆ ಬೆಳೆಯುತ್ತಿತ್ತು. ಎಲೆಕ್ಟ್ರಿಕ್‌ ವಾಹನ, ಏರೊಸ್ಪೇಸ್‌ ಮಾದರಿಯಲ್ಲಿ ಎಐ ಕ್ಷೇತ್ರ ಕೂಡ ಹೂಡಿಕೆ ಆಕರ್ಷಿಸಿದೆ ಎಂದು ಭಾವಿಸಲಾಗಿತ್ತು. ಆದರೆ ಮೂರು ವರ್ಷಗಳ ಬಳಿಕ ಆಯಾಮ ಬದಲಾಯಿತು. ವರದಿಗಳ ಪ್ರಕಾರ ಮೈಕ್ರೊಸಾಫ್ಟ್‌ ಓಪನ್‌ಎಐನಲ್ಲಿ 13 ಶತಕೋಟಿ ಡಾಲರ್‌ ಹೂಡಿದೆ. (1.06 ಲಕ್ಷ ಕೋಟಿ ರೂ.) ಹೂಡಿಕೆ ಮಾಡಿದೆ. ಇದರಿಂದಾಗಿ ಓಪನ್‌ಎಐನ ಮಾರುಕಟ್ಟೆ ಮೌಲ್ಯ 29 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. (2.37 ಲಕ್ಷ ಕೋಟಿ ರೂ.) ಮೈಕ್ರೊಸಾಫ್ಟ್‌ ಬಿಂಗ್‌ (Microsoft Bing) ಎಂಬುದು ಮೈಕ್ರೊಸಾಫ್ಟ್‌ನ ವೆಬ್‌ ಸರ್ಚ್‌ ಎಂಜಿನ್.‌ ಓಪನ್‌ ಎಐನ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲು ಮೈಕ್ರೊಸಾಫ್ಟ್‌ ಬಯಸಿದೆ.

ಗೂಗಲ್‌ ಕಂಪನಿ ಕೂಡ ಗೂಗಲ್‌ ಬ್ರೈನ್‌ (Google Brain) ಎಂಬ ಡೀಪ್‌ ಲರ್ನಿಂಗ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಘಟಕವನ್ನು ಹೊಂದಿದೆ. ಈ ಪ್ರಾಜೆಕ್ಟ್‌ 2011ರಲ್ಲೇ ಶುರುವಾಗಿತ್ತು. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕೂಡ ಮೆಟಾ ಎಐ ಎಂಬ ಎಐ ಲ್ಯಾಬೊರೇಟರಿಯನ್ನು ಹೊಂದಿದೆ. ಭಾರತದಲ್ಲೂ ಟಿಸಿಎಸ್‌, ಇನ್ಫೋಸಿಸ್‌, ವಿಪ್ರೊ, ಎಚ್‌ಸಿಎಲ್‌ ಟೆಕ್‌ ಮತ್ತು ಟೆಕ್‌ ಮಹೀಂದ್ರಾ ಮತ್ತು ಇತರ ಕಂಪನಿಗಳು ಆರ್ಟಿಫಿಶಿಯಲ್‌ ಟೆಕ್ನಾಲಜಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಒಟ್ಟಿನಲ್ಲಿ ಎಐ ಕ್ರಾಂತಿಗೆ ಚಾಟ್‌ಜಿಪಿಟಿ ಜನಕ ಓಪನ್‌ ಎಐ ನೀಡಿರುವ ಪುಷ್ಟಿ ಅತ್ಯಂತ ಕುತೂಹಲಕರ. ಇದು ಮನುಕುಲದ ಒಳಿತಿಗೆ ಸಹಕಾರಿಯಾದರೆ ಸಾರ್ಥಕ.

ಇನ್ಫೋಸಿಸ್‌ ಹೂಡಿಕೆ-ಸಂಪರ್ಕ ಮುಂದುವರಿಸುತ್ತಿದ್ದರೆ!? ವಿಶಾಲ್‌ ಸಿಕ್ಕಾ ಅವರು ಸಿಇಒ ಆಗಿದ್ದಾಗ ಮೊದಲ ಬಾರಿಗೆ ಓಪನ್‌ ಎಐನಲ್ಲಿ ಇನ್ಫೋಸಿಸ್‌ ಹೂಡಿಕೆ ಮಾಡಿತ್ತು. ಒಂದು ವೇಳೆ ಬಳಿಕವೂ ಇನ್ಫೋಸಿಸ್‌ ಓಪನ್‌ ಎಐನಲ್ಲಿ ಹೂಡಿಕೆ ಮತ್ತು ಸಹಯೋಗ ಮುಂದುವರಿಸುತ್ತಿದ್ದರೆ ಈಗ ಎಐ ಕ್ಷೇತ್ರದಲ್ಲಿ ಅದು ಗಮನಾರ್ಹ ಮುನ್ನಡೆ ಸಾಧಿಸುತ್ತಿತ್ತೋ ಎನ್ನುತ್ತಾರೆ ಐಟಿ ಕುತೂಹಲಿಗಳು. ಆದರೆ ಸದ್ಯಕ್ಕೆ ಮೈಕ್ರೊಸಾಫ್ಟ್‌ ಓಪನ್‌ ಎಐನಲ್ಲಿ ಭಾರಿ ಹೂಡಿಕೆ ಮಾಡಿದೆ.

ಇದನ್ನೂ ಓದಿ: Brand story : ತಂದೆ ನಡೆಸುತ್ತಿದ್ದ ಸಣ್ಣ ಡಯಾಗ್ನಸ್ಟಿಕ್ಸ್ ಸೇರಿ ದೇಶ-ವಿದೇಶಗಳಲ್ಲಿ 1,500ಕ್ಕೆ ವಿಸ್ತರಿಸಿದ ಮಗಳ ಯಶೋಗಾಥೆ

Exit mobile version