Site icon Vistara News

ವಾರದ ವ್ಯಕ್ತಿಚಿತ್ರ | ಫಾಲ್ಗುಣಿ ನಾಯರ್ ದೇಶದ ಶ್ರೀಮಂತ ಮಹಿಳೆ, ನೈಕಾ ಯಶಸ್ಸಿನ ಮುಕುಟಮಣಿ!

Falguni Nayar
`

ಫಾಲ್ಗುಣಿ ನಾಯರ್ (Falguni Nayar). ಸದ್ಯ ಭಾರತೀಯ ಉದ್ಯಮದಲ್ಲಿ ಮಿನುಗುತ್ತಿರುವ ಹೊಸ ನಕ್ಷತ್ರ. ಉದ್ಯಮದ ಯಾವುದೇ ಹಿನ್ನೆಲೆ ಇಲ್ಲದೆ ಪುರುಷರ ಮೇಲುಗೈ ಇರುವ ಕ್ಷೇತ್ರದಲ್ಲಿ ಯಶಸ್ವಿಯಾಗುವುದು ಸುಲಭದ ಮಾತೇನಲ್ಲ. ಅಂಥ ಅಸಮಾನ್ಯ ಗುರಿಯನ್ನು ಈ ಮಹಿಳೆ ದೃಢ ಸಂಕಲ್ಪ, ಸತತ ಪರಿಶ್ರಮಗಳಿಂದಾಗಿ ಸಾಧಿಸಿ ತೋರಿಸಿದ್ದಾರೆ. ಭಾರತದ ಸೆಲ್ಫ್ ಮೇಡ್ ಶ್ರಿಮಂತೆ ಎಂಬ ಕೀರ್ತಿಗೆ ಫಾಲ್ಗುಣಿ ನಾಯರ್ ಈಗ ಭಾಜನರಾಗಿದ್ದಾರೆ. ವಾಸ್ತವದಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರನ್ನು ಹಿಂದಿಕ್ಕಿ ಈ ಸ್ಥಾನಕ್ಕೇರಿದ್ದಾರೆ ಫಾಲ್ಗುಣಿ. ನೈಕಾ(www.nykaa.com) ಎಂಬ ಇ- ಕಾಮರ್ಸ್ ತಾಣವನ್ನು ಸ್ಥಾಪಿಸಿ, ಅದನ್ನೀಗ ಬಹುದೊಡ್ಡ ಕಂಪನಿಯಾಗಿ ಬೆಳೆಸಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಷೇರುಪೇಟೆ ಪ್ರವೇಶಿಸಿದ ಈ ತಾಣ, ಅಲ್ಪ ಕಾಲದ್ಲಲೇ ಯೂನಿಕಾರ್ನ್ ಸ್ಟೇಟಸ್ ಗಳಿಸಿದೆ. ಅಂದರೆ, ಶತಕೋಟಿ ಡಾಲರ್ ಮೌಲ್ಯದ ಉದ್ಯಮವಾಗಿ ಬೆಳೆದಿದೆ.

ಯೂನಿಕಾರ್ನ್ ಸಾಧನೆ ಮೀರಿ ಫಾಲ್ಗುಣಿ ನಾಯರ್ ನೇತೃತ್ವದ ನೈಕಾ ಬೆಳೆದು ನಿಂತಿದೆ. ಸೆಪ್ಟೆಂಬರ್ 21ರಂದು ಐಐಎಫ್ಎಲ್ ಹುರನ್ ಭಾರತದ ಸೆಲ್ಫ್ ಮೇಡ್ ಮಹಿಳಾ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಬ್ಯೂಟಿ ಪ್ರಾಡಕ್ಟ್ ಕ್ವೀನ್ ಎಂದೇ ಉದ್ಯಮದ ಮಂದಿಯಿಂದ ಕರೆಯಿಸಿಕೊಳ್ಳುವ ಫಾಲ್ಗುಣಿ ನಾಯರ್ ಅವರು, ಬಯೋಟೆಕ್ ಕ್ವೀನ್ ಅಭಿದಾನ ಹೊಂದಿರುವ ಕಿರಣ್ ಮಜುಂದಾರ್ ಷಾ ಅವರನ್ನು ಹಿಂದಿಕ್ಕಿದ್ದಾರೆ. ವಿಶೇಷ ಎಂದರೆ, ಈ ವರ್ಷ ಮಹಿಳಾ ಶ್ರೀಮಂತರ ಪಟ್ಟಿ ಉದ್ದವಾಗಿದೆ. ಹತ್ತು ವರ್ಷಗಳ ಹಿಂದೆ ಕೇವಲ 13 ಮಹಿಳೆಯರು ಭಾರತದ ಶ್ರೀಮಂತ ಮಹಿಳೆಯರು ಎನಿಸಿಕೊಂಡಿದ್ದರು. ಪ್ರಸಕ್ತ ಸಾಲಿನ ಈ ಪಟ್ಟಿಯಲ್ಲಿ 55 ಮಹಿಳೆಯರು ಕಾಣಿಸಿಕೊಂಡಿದ್ದಾರೆ. ಈ ಸಂಗತಿ ಯಾಕೆ ಮಹತ್ವದ್ದು ಎಂದರೆ- ಉದ್ಯಮ ಎನ್ನುವುದು ಪುರುಷರಿಗಷ್ಟೇ ಸೂಕ್ತವಾದ ಎಂಬ ನಂಬಿಕೆ ನಮ್ಮಲ್ಲಿದೆ. ಯಾವ ದೃಷ್ಟಿಯಿಂದ ನೋಡಿದರೂ ಮಹಿಳೆ ಸ್ವಂತ ಬಲದ ಮೇಲೆ ಉದ್ಯಮದಲ್ಲಿ ಯಶಸ್ಸು ಕಾಣುವುದು ನಾವು ಅಂದುಕೊಂಡಷ್ಟು ಸರಳವಲ್ಲ. ಹಾಗಾಗಿ, ಈ ಪಟ್ಟಿ ವರ್ಷದಿಂದ ವರ್ಷಕ್ಕೆ ಉದ್ದವಾಗುತ್ತಿರುವುದು ಭಾರತದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು.

50ನೇ ವಯಸ್ಸಿನಲ್ಲಿ ಉದ್ಯಮ ಸ್ಥಾಪಿಸಿದರು!
ಸಾಮಾನ್ಯವಾಗಿ 50 ವರ್ಷ ಎಂದರೆ, ನಿವೃತ್ತಿಯತ್ತ ಜಾರುತ್ತಿರುವ ವರ್ಷ. ಇನ್ನು ಏಳೆಂಟು ವರ್ಷ ಕೆಲಸ ಮಾಡಿದರೆ ನಿವೃತ್ತಿಗೊಳ್ಳಬೇಕಾಗುತ್ತದೆ. ಮನೆಯಲ್ಲಿದ್ದವರಾದರೆ ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಕಾಲ ಕಳೆಯಲು ಮನಸ್ಸನ್ನು ಸಜ್ಜುಗೊಳಿಸುವ ಕಾಲ. ಅಂಥ ಸಂದರ್ಭದಲ್ಲಿ ಉದ್ಯಮ ಸ್ಥಾಪಿಸಿ, ಅದನ್ನು ಲಾಭದ ಹಳಿಗೆ ಕೊಂಡ್ಯೊಯುವುದು ಬೃಹತ್ ಸಾಧನೆಯ ಸರಿ. ಆ ಕೆಲಸವನ್ನು ಫಾಲ್ಗುಣಿ ನಾಯರ್ ಮಾಡಿ ತೋರಿಸಿದ್ದಾರೆ. ಈ ಮೊದಲೇ ಹೇಳಿದಂತೆ, ಇತ್ತೀಚೆಗಷ್ಟೇ ನಾಯ್ಕಾ ಷೇರುಪೇಟೆಯನ್ನು ಪ್ರವೇಶಿಸಿದೆ. ಷೇರುಗಳ ವೌಲ್ಯ ದಿಢೀರ್‌ನೇ ಹೆಚ್ಚಳವಾಗಿ ಫಾಲ್ಗುಣಿ ದೇಶದ ಟಾಪ್ 20 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡರು. ಈಗ ಕಂಪನಿಯ ಒಟ್ಟು ಮಾರುಕಟ್ಟೆ ವೌಲ್ಯವು 1.04 ಲಕ್ಷ ಕೋಟಿ ರೂ. ದಾಟಿದೆ.

ಏನಿದು www.nykaa.com?
ಸಿಂಪಲ್ ಆಗಿ ಹೇಳಬೇಕೆಂದರೆ, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಇದೆಯಲ್ಲ, ಅದೇ ರೀತಿಯ ಇ ಕಾಮರ್ಸ್ ಜಾಲತಾಣವಿದು. ಆದರೆ, ಈ ವೆಬ್‌ಸೈಟ್ ನಿರ್ದಿಷ್ಟ ಉತ್ಪನ್ನಗಳನ್ನು ಮಾತ್ರವೇ ಮಾರಾಟ ಮಾಡುತ್ತದೆ. ಅಂದರೆ, ಶೃಂಗಾರ ಮತ್ತು ಸ್ವಾಸ್ಥ, ಫ್ಯಾಷನ್ ಉತ್ಪನ್ನಗಳು . ನೈಕಾ ವೆಬ್‌ಸೈಟ್‌ನಲ್ಲಿ 400 ಬ್ರ್ಯಾಂಡುಗಳ 35,000ಕ್ಕೂ ಅಧಿಕ ಉತ್ಪನ್ನಗಳಿವೆ. ಫ್ಯಾಷನ್, ಸೌಂದರ್ಯವರ್ಧಕ ದೊಡ್ಡ ಬ್ರ್ಯಾಂಡ್‌ಗಳೆಲ್ಲವೂ ಇಲ್ಲಿ ಲಭ್ಯ. ಜನಪ್ರಿಯ ಲ್ಯಾಕ್ಮೆ, ಕಾಯಾ ಸ್ಕಿನ್ ಕ್ಲಿನಿಕ್, ಲೋರಿಯಲ್ ಪ್ಯಾರಿಸ್ ಇತ್ಯಾದಿ ಬ್ರ್ಯಾಂಡುಗಳ ಉತ್ಪನ್ನಗಳು ಇಲ್ಲಿ ಮಾರಾಟ ಮಾಡಲಾಗುತ್ತದೆ. ನೈಕಾ ವೆಬ್‌ಸೈಟ್ ಪ್ರತಿ ತಿಂಗಳು 4.5 ಕೋಟಿ ವಿಸಿಟರ್ಸ್ ಪಡೆದುಕೊಳ್ಳುತ್ತದೆ. ಅಂದ ಹಾಗೆ, ಫಾಲ್ಗುಣಿ ನಾಯರ್ ಕೇವಲ ಆನ್‌ಲೈನ್ ಸ್ಟೋರ್‌ಗೆ ಮಾತ್ರವೇ ಸೀಮಿತವಾಗಿಲ್ಲ. ಬದಲಿಗೆ, ದೇಶದ ವಿವಿಧ ಭಾಗಗಳಲ್ಲಿ 70ಕ್ಕೂ ಅಧಿಕ ಆಫ್‌ಲೈನ್‌ ಸ್ಟೋರ್‌ಗಳು ಕೂಡ ಇವೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟದಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಉದ್ಯಮದ ಹಿನ್ನೆಲೆ ಇಲ್ಲ!
ಉದ್ಯಮದ ಹಿನ್ನೆಲೆಯಾಗಿಟ್ಟುಕೊಂಡು ಯಶಸ್ವಿಯಾಗುವುದಕ್ಕೂ ಮತ್ತು ಅಂಥ ಯಾವುದೇ ಹಿನ್ನೆಲೆ ಇಲ್ಲದೇ ಸಕ್ಸೆಸ್ ಕಾಣುವುದಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಇದಕ್ಕಾಗಿ ಬಹಳಷ್ಟು ತ್ಯಾಗವನ್ನು ಮಾಡಬೇಕಾಗುತ್ತದೆ. ಈ ಎರಡನೇ ಸಾಲಿಗೆ ಫಾಲ್ಗುಣಿ ಅವರು ಸೇರುತ್ತಾರೆ. ಆದರೆ, 59 ವರ್ಷದ ಫಾಲ್ಗುಣಿ ಅಂಥ ಸಾಧನೆ ಮಾಡಿದ್ದಾರೆ. ಅವರೀಗ ಯಶಸ್ಸಿಗೆ ಮಾದರಿಯಾಗಿದ್ದಾರೆ. ಬಿಸಿನೆಸ್, ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಗುಜರಾತ್ ಮೂಲದವರು
ಫಾಲ್ಗುಣಿ ಅವರು ಗುಜರಾತ್ ಮೂಲದವರು. 1963 ಜನವರಿ 19ರಂದು ಜನಿಸಿದ ಫಾಲ್ಗುಣಿ ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಮುಂಬೈನಲ್ಲಿ ಮುಗಿಸಿ, ಬಿಕಾಂ ಪದವಿ ಪಡೆದುಕೊಂಡರು. ಬಳಿಕ ಐಐಎಂ ಅಹಮದಾಬಾದ್ ಸಂಸ್ಥೆಯಿಂದ ತಮ್ಮ ಸ್ನಾತಕ ಶಿಕ್ಷಣವನ್ನು ಪಡೆದುಕೊಂಡರು. ಶಿಕ್ಷಣ ಪೂರೈಸುತ್ತಿದ್ದಂತೆ ಮದುವೆಯಾದರು. ಸಂಜಯ್ ನಾಯರ್ ಅವರು ಫಾಲ್ಗುಣಿಯನ್ನು ವರಿಸಿದರು. ಅಂಚಿತ್ ಮ್ತತು ಅದ್ವಿತಾ ಮಕ್ಕಳಿದ್ದಾರೆ.

ಭಾರತದ ಮಧ್ಯಮ ವರ್ಗದ ಮಹಿಳೆಯೊಬ್ಬಳು ಉನ್ನತ ಶಿಕ್ಷಣ ಪಡೆದುಕೊಂಡರೆ ಏನು ಮಾಡುತ್ತಾರೆ? ಉತ್ತಮ ಕಂಪನಿಯಲ್ಲಿ ನೌಕರಿ ಮಾಡುವ ಪ್ರಯತ್ನ ಮಾಡುತ್ತಾರೆ. ಇದು ಫಾಲ್ಗುಣಿ ಅವರ ಜೀವನದಲ್ಲೂ ನಡೆಯಿತು. ವಿದ್ಯಾಭ್ಯಾಸ ಪೂರ್ತಿಯಾದ ಬಳಿಕ ಉದ್ಯೋಗಕ್ಕೆ ಸೇರಿಕೊಂಡರು. ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದ ಅವರು 18 ವರ್ಷಗಳ ಕಾಲ ದುಡಿದರು. ಈ ಇನ್ವೆಸ್ಟ್‌ಮೆಂಟ್ ಬ್ಯಾಂಕರ್‌ನಿಂದ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ ಮ್ಯಾನೇಜಿಂಗ್ ಡೈರೆಕ್ಟರ್‌ವರೆಗೂ ತಲುಪಿದರು. ನೌಕರಿಯಲ್ಲಿ ಇದಕ್ಕಿಂತ ಹೆಚ್ಚಿನದ್ದು ಸಾಧಿಸಲು ಇನ್ನೇನು ಇರಲಿಲ್ಲ. ಆದರೆ, ಫಾಲ್ಗುಣಿ ಅವರಿಗೆ ಇನ್ನೂ ಏನಾದರೂ ಮಾಡಬೇಕೆಂಬ ತುಡಿತ ಮಾತ್ರವೇನೂ ಕಡಿಮೆಯಾಗಲಿಲ್ಲ, ಈ ತುಡಿತವೇ ಅವರನ್ನು ಇಂದು ಭಾರತದ ಶ್ರೀಮಂತ ಮಹಿಳೆಯನ್ನಾಗಿಸಿದೆ.

ತನ್ನದೇ ಹೆಗ್ಗುರುತು ಮೂಡಿಸುವ ಹಪಾಹಪಿ ಅವರಲ್ಲಿತ್ತು. ಅದರ ಪರಿಣಾಮವೇ ಹುಟ್ಟಿಕೊಂಡಿದ್ದು ಈ ಕಂಪನಿ. ಆದರೆ, ಬೇಕಾದ ಹಣಕಾಸು ನೆರವು ಆಗಲೀ, ಫ್ಯಾಮಿಲಿ ಹಿನ್ನೆಲೆಯಾಗಲೀ ಏನೂ ಇಲ್ಲ. ಆದರೆ ಧೈರ್ಯ, ಛಲ, ಪ್ರಾಮಾಣಿಕ ಪ್ರಯತ್ನಗಳಿಗೇನೂ ಕೊರತೆ ಇರಲಿಲ್ಲ. ಅಂತಿಮವಾಗಿ ಎಫ್ಎಸ್‌ಎನ್ ಇ ಕಾಮರ್ಸ್ ವೆಂಚರ್ ಪ್ರೈವೆಟ್ ಲಿ. ಆರಂಭಿಸಿದರು. ಈ ಕಂಪನಿಯಡಿ ಸೌಂದರ್ಯ, ವೆಲ್‌ನೆಸ್ ಮತ್ತು ಫ್ಯಾಷನ್ ಸಂಬಂಧಿ ವಸ್ತುಗಳ ಮಾರಾಟ ಇ-ಕಾಮರ್ಸ್ ತಾಣ ‘ನೈಕಾ’ ತೆರೆದರು. ಆನಂತರ ನಡೆದಿದ್ದೆಲ್ಲ ಇತಿಹಾಸ. ತಾವು ಅಂದುಕೊಂಡಂತೆ ತಮ್ಮ ಹೆಗ್ಗುರುತು ಮೂಡಿಸಿಯೇ ಬಿಟ್ಟರು ಫಾಲ್ಗುಣಿ.

ಹೆಮ್ಮರವಾಗಿ ಬೆಳೆದ ನೈಕಾ
ಅಂದು ಚಿಕ್ಕದಾಗಿ ಶುರುವಾದ ಕಂಪನಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಮಾರುಕಟ್ಟೆ ಮೌಲ್ಯ ಲಕ್ಷ ಕೋಟಿ ರೂಪಾಯಿ ಮೀರಿದೆ. 2000ಕ್ಕೂ ಅಧಿಕ ನೌಕರ ಬದುಕನ್ನು ಬೆಳಗಿದೆ. ಕೋಲ್ ಇಂಡಿಯಾ, ಗೋದ್ರೇಜ್ ಕಂಪನಿಗಳನ್ನು ನೈಕಾ ಮೀರಿದೆ. ಟಾಪ್ ಸ್ಟಾರ್ಟ್‌ಅಪ್ ಐಪಿಒಗಳ ಪಟ್ಟಿಯಲ್ಲಿ ಫಾಲ್ಗುಣಿ ಪ್ರಥಮ ಸ್ಥಾನದಲ್ಲಿದ್ದಾರೆ. ಯಾಕೆಂದರೆ, ನೈಕಾದಲ್ಲಿ ಇವರದ್ದೇ ಶೇ.53ರಷ್ಟು ಷೇರಿದೆ. ನೈಕಾ ಕೇವಲ ಸ್ಟಾರ್ಟ್‌ ಅಪ್ ಕಂಪನಿಯಾಗಿ ಉಳಿದಿಲ್ಲ. ತನ್ನ ಮೌಲ್ಯವನ್ನು ಹೆಚ್ಚಿಸಕೊಳ್ಳುವ ಮೂಲಕ ಪ್ರಮುಖ ಕಂಪನಿಗಳ ಪೈಕಿ ಒಂದಾಗಿ ಬೆಳೆದು ನಿಂತಿದೆ. ಮಾರುಕಟ್ಟೆಯಲ್ಲಿ ನೈಕಾ ಷೇರುಗಳೇನೂ ಕುಸಿದಿಲ್ಲ. ಹಾಗಾಗಿ, ಗ್ರಾಹಕರು ಮತ್ತು ಜನರ ನೈಕಾ ಮೇಲೆ ಇಟ್ಟಿರುವ ವಿಶ್ವಾಸದಿಂದ ಹೆಚ್ಚುತ್ತಲೇ ಹೋಗುತ್ತಿದೆ. ಇತ್ತ ಫಾಲ್ಗುಣಿ ಅವರದ್ದೂ!

ಸೋಷಿಯಲ್ ಮೀಡಿಯಾದಿಂದ ದೂರ
ನಾವು ಈಗ ಸೋಷಿಯಲ್ ಮೀಡಿಯಾದ ಜಮಾನದಲ್ಲಿದ್ದೇವೆ. ಇನ್‌ಫ್ಯಾಕ್ಟ್, ಯಾವುದೇ ಉದ್ಯಮ ಯಶಸ್ವಿಯಾಗಲು ಅದರ ನೇತಾರರು ಈ ವೇದಿಕೆಗಳನ್ನು ಸಶಕ್ತವಾಗಿ ಬೆಳೆಸಿಕೊಳ್ಳುತ್ತಾರೆ. ಜನರೊಂದಿಗೆ ನೇರವಾಗಿ ಸಂವಾದಿಸಲು ದಕ್ಷವಾಗಿ ಬಳಸಿಕೊಳ್ಳುತ್ತಾರೆ. ಆದರೆ, ಫಾಲ್ಗುಣಿ ಅವರು ಇದಕ್ಕೆ ಅಪವಾದವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಸಕ್ರಿಯವೇ ಆಗಿಲ್ಲ. 9 ವರ್ಷದಲ್ಲಿ ಒಮ್ಮೆ ಮಾತ್ರವೇ ಟ್ವೀಟ್ ಮಾಡಿದ್ದಾರೆಂದರೆ ನೀವೇ ಊಹಿಸಿಕೊಳ್ಳಬಹುದು. ಈ ವೇದಿಕೆಗಳಲ್ಲಿ ವ್ಯಸ್ತವಾಗುವುದೆಂದರೆ ಸಮಯ ಹಾಳು ಮಾಡಿಕೊಂಡಂತೆ ಎಂಬುದು ಅವರು ಪ್ರಿನ್ಸಿಪಲ್.

ಎಲ್ಲರೂ ‘ನಾಯಕಿ’ಯಾಗಬೇಕು
ಯಾವುದೇ ಉದ್ಯಮಶೀಲತೆಯೊಂದು ಯಶಸ್ಸು ಗಳಿಸಬೇಕಾದರೆ ಸಾಕಷ್ಟು ಉತ್ಸಾಹ, ಕಠಿಣ ಪರಿಶ್ರಮ, ದೃಢತೆ ಮತ್ತು ಸಮಯವನ್ನು ಬೇಡುತ್ತದೆ. ಯಾವುದೇ ಉದ್ಯಮಿಯ ಯಶಸ್ಸಿನ ಮಂತ್ರಗಳಿವು. ಫಾಲ್ಗುಣಿ ಅವರು ಉದ್ಯಮದ ಯಶಸ್ಸಿನ ಹಾದಿಯಲ್ಲಿ ಇದೇ ಮಂತ್ರಗಳು ಅವರನ್ನು ಕೈ ಹಿಡಿದಿವೆ. ಯುವ ಉದ್ಯಮಿಗಳಿಗೂ ಅವರು ಇದೇ ಕಿವಿಮಾತು ಹೇಳುತ್ತಾರೆ. ಯಾವುದೇ ಸಾಹಸಕ್ಕೆ ವಯಸ್ಸು ಅಡ್ಡಿಯಾಗಬಾರದು. ಅವರು ಸಂದರ್ಶನವೊಂದರಲ್ಲಿ ”ನಾನು ನನ್ನ 50ನೇ ವಯಸ್ಸಿನಲ್ಲಿ ನೈಕಾ ಜಾಲತಾಣವನ್ನು ಆರಂಭಿಸಿದೆ. ಈ ನನ್ನ ಉದ್ಯಮದ ಸಾಹಸವು ಪ್ರತಿಯೊಬ್ಬ ಹುಡುಗಿಯ ಜೀವನದಲ್ಲೂ ತಾನೇ ನಾಯಕಿಯಾಗಲು ಪ್ರೇರಣೆ ನೀಡಲಿ ಎಂಬುದೇ ನನ್ನ ಆಶಯ” ಎಂದು ಹೇಳಿದ್ದರು. ಫಾಲ್ಗುಣಿ ಅವರ ಮಾತುಗಳು ಅಕ್ಷರಶಃ ನಿಜ. ಯುವತಿಯಾಗಲಿ, ಯುವಕನಾಗಲೀ, ಯಾರೇ ಆಗಲಿ ತಮ್ಮ ಬದುಕಿನ ಕತೆಯಲ್ಲಿ ತಾವೇ ಹೀರೋ ಎಂದು ಭಾವಿಸಿದರೆ, ಹೊಸದನ್ನು ಏನಾದರೂ ಸಾಧಿಸಲು ಸಾಧ್ಯ. ಅನುಮಾನವೇ ಬೇಡ, ನೈಕಾ ಫಾಲ್ಗುಣಿ ನಾಯರ್ ಅಸಂಖ್ಯ ಯುವತಿಯರಿಗೆ, ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಇದನ್ನೂ ಓದಿ | Brand story | ಕಾಲೇಜು ಡ್ರಾಪ್‌ಔಟ್‌ ಹುಡುಗ ಡಿಮಾರ್ಟ್‌ ಸ್ಟೋರ್ ತೆರೆದು ರಿಟೇಲ್‌ ಕಿಂಗ್‌ ಆಗಿದ್ದು ಹೇಗೆ?!

Exit mobile version