– ಗಿರೀಶ್ ಲಿಂಗಣ್ಣ
ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ಜೈಷ್ ಉಗ್ರಗಾಮಿ ನೆಲೆಗಳ ಮೇಲೆ ದಾಳಿ ನಡೆಸಲು ಭಾರತೀಯ ವಾಯುಪಡೆ ಉಪಯೋಗಿಸಿದ್ದು ಮಿರೇಜ್ 2000 ಯುದ್ಧ ವಿಮಾನ. ಈ ಯುದ್ಧ ವಿಮಾನವನ್ನು ರಫೇಲ್ ನಿರ್ಮಿಸಿದ ಅದೇ ಡಸಾಲ್ಟ್ ಏವಿಯೇಷನ್ ಸಂಸ್ಥೆ ನಿರ್ಮಿಸಿತ್ತು. ಇಂದು ಹೇಗೆ ರಫೇಲ್ ಅತ್ಯುತ್ತಮ ಯುದ್ಧ ವಿಮಾನ ಎನಿಸಿಕೊಂಡಿದೆಯೋ, 1980ರ ದಶಕದಲ್ಲಿ ಹಾರಾಟ ಆರಂಭಿಸಿದಾಗ ಮಿರೇಜ್ 2000 ಜಗತ್ತಿನ ಅತ್ಯುತ್ತಮ ವಿಮಾನಗಳಲ್ಲೊಂದು ಎನಿಸಿತ್ತು.
ಆದರೆ ಅದಾಗಿ ಇಷ್ಟು ವರ್ಷಗಳ ಬಳಿಕ, 2022ರಲ್ಲಿ ಮಿರೇಜ್ ಎಷ್ಟು ಪ್ರಾಮುಖ್ಯತೆ ಪಡೆದಿದೆ?
1984: ಮಿರೇಜ್ ಮೇಲೆ ದೃಷ್ಟಿ ನೆಟ್ಟ ಭಾರತ
ಪಾಕಿಸ್ತಾನ ಅಮೆರಿಕಾದಿಂದ ಎಫ್ – 16 ಯುದ್ಧ ವಿಮಾನಗಳನ್ನು ಖರೀದಿಸಿದಾಗ, 1984ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಭಾರತ ಸರ್ಕಾರ 49 ಮಿರೇಜ್ 2000 ಯುದ್ಧ ವಿಮಾನಗಳನ್ನು ಖರೀದಿಸಲು ತೀರ್ಮಾನಿಸಿತು. ಏಕೆಂದರೆ ಭಾರತದ ಬಳಿ ಇದ್ದ ಮಿಗ್ – 21 ಮತ್ತು ಮಿಗ್ – 23ಗಳು ಎಫ್ – 16ಗೆ ಸಮನಾಗಿರಲಿಲ್ಲ.
ಬದಲಾದ ಪರಿಸ್ಥಿತಿ: ಕಾರ್ಗಿಲ್ ಯುದ್ಧದ ಗೆಲುವಿನ ಹಿಂದೆ ಮಿರೇಜ್ ಬಲ
ಮಿರೇಜ್ 2000ದ ನಿಜವಾದ ಪರೀಕ್ಷೆ ಅದು ಸೇನೆಗೆ ಸೇರಿದ 15 ವರ್ಷಗಳ ಬಳಿಕ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಾಯಿತು. ಮಿಗ್ – 27 ಮತ್ತು ಮಿಗ್ – 21 ವಿಮಾನಗಳ ಬಾಂಬ್ ಮತ್ತು ರಾಕೆಟ್ ದಾಳಿಗಳು ಭಾರತದ ನೆಲದೊಳಗೆ ಬಂಕರ್ ಹೂಡಿ ಕೂತಿದ್ದ ಪಾಕ್ ಸೈನಿಕರನ್ನು ಸೋಲಿಸಲಾಗಲಿಲ್ಲ. ಆಗ ಭಾರತೀಯ ವಾಯುಪಡೆ ತನ್ನ ಪ್ರಬಲ ಅಸ್ತ್ರವಾದ ಮಿರೇಜ್ 2000ವನ್ನು ಬಳಸಿ, ಲೇಸರ್ ನಿರ್ದೇಶಿತ ಬಾಂಬ್‌ಗಳನ್ನು ಪ್ರಯೋಗಿಸಿತು. ಅದು ಶತ್ರು ಸೇನೆಯ ಪೂರೈಕೆ ಜಾಲದ ಬೆನ್ನೆಲುಬು ಮುರಿದಿತ್ತು.
1999ರ ಆಪರೇಷನ್ ಸಫೇದ್ ಸಾಗರ್‌ನಲ್ಲಿ ಭಾರತೀಯ ವಾಯುಪಡೆಯ ಬಳಿ ಕೆಲವೇ ಲೇಸರ್ ಗೈಡೆಡ್ ಬಾಂಬ್‌ಗಳಿದ್ದವು. ಆದರೆ ವಾಯುಸೇನೆ ಅಷ್ಟು ಎತ್ತರದ ಗುರಿಗಳ ಮೇಲೆ ಅತ್ಯಂತ ನಿಖರವಾಗಿ ಬಾಂಬ್ ದಾಳಿ ನಡೆಸಲು ಬೇಕಾದ ಉಪಕರಣಗಳ ಕೊರತೆ ಎದುರಿಸುತ್ತಿತ್ತು. ಆದರೆ ದಾಖಲೆಯ 12 ದಿನಗಳ ಅವಧಿಯಲ್ಲಿ ಮಾರ್ಪಡಿಸಲಾದ ಲೇಸರ್ ನಿರ್ದೇಶಿತ ಬಾಂಬ್‌ಗಳು ಇಸ್ರೇಲ್ ಅತಿವೇಗವಾಗಿ ನಿರ್ಮಿಸಿದ ಲೈಟ್ನಿಂಗ್ ಲೇಸರ್ ಟಾರ್ಗೆಟಿಂಗ್ ಪ್ಯಾಡ್‌ಗಳೊಂದಿಗೆ ಬೆರೆತು ನಿಖರ ದಾಳಿ ಸಂಘಟಿಸಿದವು. ಆ ಮೂಲಕ ಭಾರತೀಯ ವಾಯುಪಡೆಯ ಮಿರೇಜ್‌ಗಳು ಶತ್ರುಗಳನ್ನು ಸದೆಬಡಿದವು.
ಪಾಯಿಂಟ್ 5140, ಟೊಲೊಲಿಂಗ್, ಟೈಗರ್ ಹಿಲ್ ಮತ್ತು ಬಟಾಲಿಕ್ ವಿಭಾಗದಲ್ಲಿನ ಶತ್ರುಗಳ ಮರುಪೂರೈಕೆ ಕೇಂದ್ರಗಳು ಧ್ವಂಸವಾದವು. ಆ ಮೂಲಕ ಮುಂದೊತ್ತಿ ಬಂದಿದ್ದ ಪಾಕ್ ಪಡೆಗಳಿಗೆ ಆಹಾರ ಪೂರೈಕೆ ಸ್ಥಗಿತವಾಗಿ, ಉಪವಾಸ ನರಳುವಂತಾಯಿತು. 1999ರ ಮೇ ತಿಂಗಳಿಂದ ಜುಲೈ ತನಕ ನಡೆದ ಈ ಸಂಪೂರ್ಣ ಕಾರ್ಯಾಚರಣೆಯಲ್ಲಿ ಮಿರೇಜ್ ಯುದ್ಧ ವಿಮಾನಗಳ ಎರಡು ಸ್ಕ್ವಾಡ್ರನ್‌ಗಳು 514 ಸಾರ್ಟೀ ಹಾರಾಟ ನಡೆಸಿದವು. ಸ್ಕ್ವಾಡ್ರನ್ ನಂಬರ್ ಒಂದು 274 ಏರ್ ಡಿಫೆನ್ಸ್ ಹಾರಾಟ ಹಾಗೂ ಸ್ಟ್ರೈಕ್ ಎಸ್ಕಾರ್ಟ್ ಮಿಷನ್ ನಡೆಸಿದರೆ ನಂಬರ್ ಏಳು ಸ್ಕ್ವಾಡ್ರನ್ 55,000 ಕೆಜಿ ಬಾಂಬ್‌ಗಳನ್ನು 240 ದಾಳಿಗಳಲ್ಲಿ ಉದುರಿಸಿದವು.
2004ರಲ್ಲಿ ಜೆಟ್ ವಿಮಾನಗಳ ಯಶಸ್ಸನ್ನು ಗಮನಿಸಿ ಭಾರತೀಯ ವಾಯುಪಡೆ ಇನ್ನೂ ಹತ್ತು ಮಿರೇಜ್ 2000 ವಿಮಾನಗಳನ್ನು ಖರೀದಿಸಿ, ಗ್ವಾಲಿಯರ್‌ನಲ್ಲಿ ಮೂರನೇ ಸ್ಕ್ವಾಡ್ರನ್ ನಿರ್ಮಾಣಗೊಳಿಸಿತು.
ಈ ವಿಮಾನದ ಮೇಲೆ ವಾಯುಪಡೆಗೆ ಅಪಾರ ಭರವಸೆ ಇದ್ದು, ಅದು 126 ಮಿರೇಜ್ 2000-5ಗಳನ್ನು ಖರೀದಿಸುವ ಯೋಚನೆ ಮಾಡಿತ್ತು. ಆದರೆ 2007ರ ವೇಳೆಗೆ ಮಿರೇಜ್ 2000ದ ಅಸೆಂಬ್ಲಿ ಲೈನ್‌ಗಳು ಮುಕ್ತಾಯವಾಗುವ ಹಂತದಲ್ಲಿತ್ತು. ಬಳಿಕ ಈ ಯೋಜನೆ ಎಂಎಂಆರ್‌ಸಿಎ ಆಗಿ ಬದಲಾಗಿ, ಕೊನೆಗೆ ಡಸಾಲ್ಟ್ ರಫೇಲ್ ಗೆದ್ದುಕೊಂಡಿತು.
ಮಿರೇಜ್ 2000: ನಂಬಿಕರ್ಹವಾದ ವಿಧ್ವಂಸಕ
ಮಿರೇಜ್ 2000 ಒಂದು ಬಹುಪಾತ್ರಗಳ ವಿಮಾನವಾಗಿದ್ದು, ಭಾರತೀಯ ಸೇನಾಪಡೆಯ ಆದೇಶ ಬಂದರೆ ಮಿರೇಜ್ 2000 ಹಿರೋಷಿಮಾ ಮೇಲೆ ಸುರಿದ 15 ಕಿಲೋಟನ್ ಬಾಂಬ್‌ಗಿಂತಲೂ ಬಲಶಾಲಿಯಾದ, 20 – ಕಿಲೋಟನ್ ಅಟಾಮಿಕ್ ಬಾಂಬನ್ನೂ ಕೊಂಡೊಯ್ಯಬಲ್ಲದು.
ಮಿರೇಜ್ 2000 ಕಡಿಮೆ ನಿರ್ವಹಣೆ ಬೇಡುವ ವಿಮಾನವಾಗಿದ್ದು, ಸಣ್ಣ ವಾಯುನೆಲೆಗಳಿಂದಲೂ ಕಾರ್ಯ ನಿರ್ವಹಿಸುತ್ತದೆ. ಮಿರೇಜ್ ವಿಮಾನದ ಪಡೆ ಅಪಾರವಾಗಿ ಹಾರಾಟ ಲಭ್ಯವಾಗಿರಲಿದ್ದು, 80% ವಿಮಾನಗಳು ಸದಾ ಹಾರಾಟ ಸಿದ್ಧವಾಗಿರುತ್ತವೆ. ಇದಕ್ಕೆ ಹೋಲಿಸಿದರೆ ಭಾರತೀಯ ವಾಯುಪಡೆಯ ಸು-30ಎಂಕೆಐ ವಿಮಾನದ 60% ಪಡೆ ಮಾತ್ರ ಸದಾ ಹಾರಾಟ ಲಭ್ಯವಿರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಹೆದ್ದಾರಿಗಳ ಮೇಲೆ ಯುದ್ಧ ವಿಮಾನವನ್ನು ಇಳಿಸುವ ಪ್ರಯೋಗ ನಡೆಸಿದಾಗ ಮಿರೇಜ್ 2000 ಯಶಸ್ವಿಯಾಗಿ ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ಇಳಿದಿತ್ತು.
ಮಿರೇಜ್ 2000: ಭವಿಷ್ಯಕ್ಕಾಗಿ ಮರುನಿರ್ಮಾಣ
2011ರಲ್ಲಿ ಭಾರತ ಫ್ರಾನ್ಸ್ ಜೊತೆ 17,547 ಕೋಟಿ ರೂಪಾಯಿ ಬೆಲೆಬಾಳುವ ಒಪ್ಪಂದಕ್ಕೆ ಸಹಿ ಹಾಕಿದ್ದು, ತನ್ನ 49 ಮಿರೇಜ್ 2000 ಯುದ್ಧ ವಿಮಾನಗಳನ್ನು 2000-5 ಎಂಕೆ2 (ಮಿರೇಜ್ 2000 ಐ ಎಂದೂ ಪರಿಚಿತ) ಆಗಿ ಪರಿವರ್ತಿಸಲು ನಿರ್ಧರಿಸಿತು. ಇದರಲ್ಲಿ ಆಧುನಿಕ ಕ್ಷಿಪಣಿಗಳು, ರೇಡಾರ್‌ಗಳು, ಗಾಜಿನ ಕಾಕ್‌ಪಿಟ್‌ಗಳು, ಹಾಗೂ ಸ್ವಯಂ ರಕ್ಷಣಾ ಸೂಟ್‌ಗಳನ್ನು ಅಳವಡಿಸಲಾಯಿತು.
ಇದನ್ನೂ ಓದಿ: ಸಮರಾಂಕಣ | ಏನನ್ನೂ ಧ್ವಂಸಗೊಳಿಸದೆ ಶತ್ರುವಿಗೆ ಸಾವು ತಂದೊಡ್ಡುವ ಅಸ್ತ್ರ Hellfire R9X
ಹೊಸದಾಗಿ ಜೋಡಿಸಲಾದ ಆಧುನಿಕ ಥೇಲ್ಸ್ ಆರ್‌ಡಿವೈ 2 ರೇಡಾರ್ ಗಾಳಿಯಲ್ಲಿ ಅತಿ ದೂರದ ವ್ಯಾಪ್ತಿಯ ತನಕ ಶತ್ರುವಿನೊಡನೆ ಸೆಣಸುವ ಸಾಮರ್ಥ್ಯ, ನೆಲದಲ್ಲಿ ಓಡಾಡುವ ಗುರಿಯನ್ನು ನಾಶಪಡಿಸುವ ಸಾಮರ್ಥ್ಯ ಹಾಗೂ ಡಾಪ್ಲರ್ ಬೀಮ್ ಶಾರ್ಪನಿಂಗ್ ತಂತ್ರಜ್ಞಾನದ ಆಧಾರದಲ್ಲಿ ನೆಲದ ಮೇಲಿನ ಶತ್ರುಗಳ ನಕ್ಷೆ ತಿಳಿಯುವ ಸಾಮರ್ಥ್ಯ ಹೊಂದಿದೆ.
ಪೈಲಟ್‌ನ ಹೆಲ್ಮೆಟ್‌ಗೆ ಅಳವಡಿಸಲಾದ ಆಧುನಿಕ ಡಿಸ್‌ಪ್ಲೇ ಸಹಾಯದಿಂದ ಪೈಲಟ್ ಕಾಕ್‌ಪಿಟ್ ಒಳಗಿನ ಬೇರಾವ ಡಿಸ್‌ಪ್ಲೇ ಕಡೆ ನೋಡದೆ ಸೂಪರ್ ಇಂಪೋಸ್ ಆದ ರೇಡಾರ್ ಮಾಹಿತಿಯನ್ನು ಗಮನಿಸಬಹುದು. ಅಂದರೆ ಪೈಲಟ್ ಪೂರ್ಣ ವಿಮಾನವನ್ನು ಗುರಿಯ ಕಡೆಗೆ ಚಲಾಯಿಸದೆ, ಕೇವಲ ತಾನು ಗುರಿಯೆಡೆಗೆ ಕಣ್ಣು ಹಾಯಿಸಿ ಶತ್ರುವಿನ ಕಡೆ ಆಯುಧ ಪ್ರಯೋಗಿಸಬಹುದು. ಕಾರ್ಯಾಚರಣೆಯ ಸಂದರ್ಭದಲ್ಲಿ ಪೈಲಟ್ ಕೇವಲ ಮೂರು ಹಂತಗಳಲ್ಲಿ ದಾಳಿ ನಡೆಸುತ್ತಾನೆ. ಅವೆಂದರೆ ಗುರಿಯನ್ನ ನೋಡುವುದು, ಗುರಿಯನ್ನು ಲಾಕ್ ಮಾಡುವುದು ಮತ್ತು ದಾಳಿ ನಡೆಸುವುದು.
ಮಿರೇಜ್ 2000 ಐ ಯುದ್ಧ ವಿಮಾನದ ಅತಿಮುಖ್ಯ ಘಟಕವೆಂದರೆ ಅದರ ಅತ್ಯಾಧುನಿಕ ಆಯುಧಗಳು. ಇದರಲ್ಲಿರುವ ಎಂಐಸಿಎ ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿ ಒಂದು ಅತ್ಯಾಧುನಿಕ ಕ್ಷಿಪಣಿಯಾಗಿದ್ದು, ಬಿಯಾಂಡ್ ವಿಷುಯಲ್ ರೇಂಜ್ ಮತ್ತು ಸನಿಹದ ವ್ಯಾಪ್ತಿಗಳಲ್ಲಿ ಶತ್ರುವಿನ ಮೇಲೆ ದಾಳಿ ನಡೆಸಬಲ್ಲದು. ಜನವರಿ 2012ರಲ್ಲಿ ಭಾರತ ಸರ್ಕಾರ ಫ್ರೆಂಚ್ ಸಂಸ್ಥೆಯಾದ ಎಂಬಿಡಿಎ ಜೊತೆ 1.23 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದು, 450 ಎಂಐಸಿಎ ಕ್ಷಿಪಣಿಗಳನ್ನು ಖರೀದಿಸಲಿದೆ.
ಮಿರೇಜ್ 2000-5 ಎಂಕೆ2ರ ಒಟ್ಟಾರೆ ಸಾಮರ್ಥ್ಯ ಎಫ್ – 16 ಐಎನ್ ವೈಪರ್ ಸಾಮರ್ಥ್ಯವನ್ನು ಮೀರುತ್ತದೆ. ಯುದ್ಧ ಸಾಮರ್ಥ್ಯದಲ್ಲಿ ಮತ್ತು ಸಾಬೀತಾದ ಪ್ರದರ್ಶನಗಳಲ್ಲಿ ಮಿರೇಜ್ 2000 ಶತ್ರುಗಳಿಂದ ಹೆಚ್ಚು ಪ್ರಬಲ ಮತ್ತು ನಂಬಿಕಸ್ತ ಯುದ್ಧ ವಿಮಾನವಾಗಿದೆ.
ಮಿರೇಜ್ ಯುದ್ಧ ವಿಮಾನದ ಅಭಿವೃದ್ಧಿ ಕಾರ್ಯ ಮತ್ತು ಸೇವಾವಧಿಯ ವಿಸ್ತರಣೆಯುಂದಾಗಿ ಭಾರತೀಯ ವಾಯುಪಡೆಯ ಮಿರೇಜ್ 2000 ಯುದ್ಧ ವಿಮಾನಗಳು 2040ರ ತನಕ ಸೇವೆ ಸಲ್ಲಿಸಲಿವೆ. ಆ ಮೂಲಕ ಇದು ವಾಯುಪಡೆಯ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇದನ್ನೂ ಓದಿ: ಸಮರಾಂಕಣ ಅಂಕಣ | ರಣಭಯಂಕರ Rafale Jet ಅಪಾರ ಸಾಮರ್ಥ್ಯದ ಗುಟ್ಟೇನು?